ಕೋವಿಡ್ ಮುಕ್ತವಾಗುವತ್ತ ಹೆಜ್ಜೆ..;ನಿಯಮ ಕಟ್ಟುನಿಟ್ಟಿನ ಪಾಲನೆ
ಕೋವಿಡ್ ಪರೀಕ್ಷೆಯ ಲ್ಯಾಬ್ ಜತೆಗೆ ಬ್ಲಾ ಕ್ ಫಂಗಸ್ ಪರೀಕ್ಷೆಯ ಲ್ಯಾಬ್ ಆರಂಭಿಸಲು ಕ್ರಮ ವಹಿಸಲಾಗಿದೆ
Team Udayavani, Aug 26, 2021, 6:45 PM IST
ಬೀದರ: ಕೋವಿಡ್ ಹಾಟ್‌ಸ್ಪಾಟ್ ಜಿಲ್ಲೆ ಎನಿಸಿಕೊಂಡಿದ್ದ ಬೀದರ ಈಗ ಸೋಂಕು ಮುಕ್ತವಾಗುವತ್ತ ಹೆಜ್ಜೆಯನ್ನಿಟ್ಟಿದೆ. ಆದರೆ, ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿ ಅಂಚಿನಲ್ಲಿರುವ ಜಿಲ್ಲೆಯಲ್ಲಿ ಮೂರನೇ ಅಲೆ ಅಪ್ಪಳಿಸುವ ಆತಂಕ ಮಾತ್ರ ದೂರವಾಗಿಲ್ಲ. ಹೀಗಾಗಿ ಜಿಲ್ಲಾಡಳಿತ ಸಂಭವನೀಯ ಅಲೆ ನಿಯಂತ್ರಣಕ್ಕಾಗಿ ಸಾಕಷ್ಟು ಕಟ್ಟೆಚ್ಚರದ ಜತೆಗೆ ಸಿದ್ಧತೆ ಮಾಡಿಕೊಂಡಿದೆ.
ಗಡಿ ನಾಡು ಬೀದರನಲ್ಲಿ ಎರಡನೇ ಅಲೆ ವೇಳೆ ಅಬ್ಬರಿಸಿ ತಲ್ಲಣ್ಣವನ್ನೇ ಸೃಷ್ಟಿಸಿದ್ದ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಕಳೆದೊಂದು ತಿಂಗಳಿಂದ ನಿತ್ಯ ಶೂನ್ಯ ಅಥವಾ ಒಂದೆರಡು ಪಾಸಿಟಿವ್ ಪ್ರಕರಣ ವರದಿಯಾಗುತ್ತಿವೆ. ಜಿಲ್ಲಾಡಳಿತ, ವೈದ್ಯರ ಸತತ ಪರಿಶ್ರಮದ ಜತೆಗೆ ಲಾಕ್‌ಡೌನ್ ಜಾರಿ, ಜನರ ಮುನ್ನೆಚ್ಚರಿಕೆ ಕ್ರಮದಿಂದ ರಾಜ್ಯದಲ್ಲೇ ಅತಿ ಕಡಿಮೆ ಪಾಸಿಟಿವಿಟಿ ದರ ದಾಖಲಾಗುತ್ತಿರುವ ಜಿಲ್ಲೆಗಳಲ್ಲಿ “ಬೀದರ ಪ್ರಥಮ’ ಹೆಗ್ಗಳಿಕೆಗೆ ಪಾತ್ರವಾಗಿದ್ದು,
ಜಿಲ್ಲೆಯಲ್ಲಿ ಸದ್ಯ 7 ಜನ ಸೋಂಕಿತರು ಮಾತ್ರ ಇರುವುದು ಧರಿನಾಡಿನ ಜನರಲ್ಲಿ ಆತಂಕವನ್ನು ಮತ್ತಷ್ಟು ದೂರಾಗಿಸಿದೆ.
ಕಳೆದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರತಿನಿತ್ಯ 400ರಿಂದ 500ರವರೆಗೆ ಪಾಸಿಟಿವ್ ಕೇಸ್‌ಗಳು ಪತ್ತೆಯಾಗುವ ಮೂಲಕ ಅಬ್ಬರಿಸಿದ್ದ ಸಾಂಕ್ರಾಮಿಕ ರೋಗ ನಂತರ ಹತೋಟಿಗೆ ಬರುತ್ತಾ ಬಂದಿದೆ. ಸೋಂಕಿತರ ಸಂಖ್ಯೆ ಹೆಚ್ಚಳದಿಂದ ಜಿಲ್ಲಾ ಕೋವಿಡ್ ಆಸ್ಪತ್ರೆ (ಬ್ರಿಮ್ಸ್) ಅಷ್ಟೇ ಅಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಬೆಡ್ ಕೊರತೆ ಎದುರಾಗಿ ರೋಗಿ-ಸಂಬಂಧಿಕರ ಆಕ್ರಂದನ ಹೆಚ್ಚಿತ್ತು. 560 ಹಾಸಿಗೆಯ ಆಸ್ಪತ್ರೆ ಈಗ ಬಹುತೇಕ ಖಾಲಿಯಾಗಿದ್ದು, ಕೆಲ ರೋಗಿಗಳು ಹೋಂ ಐಸೋಲೇಷನ್ ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹ ಗಡಿಯಲ್ಲಿ ಕಟ್ಟೆಚ್ಚರ:
ಮಹಾರಾಷ್ಟ್ರದಲ್ಲಿ ಕೋವಿಡ್ 3ನೇ ಅಲೆ ಕಾಣಿಸಿಕೊಂಡಿರುವ ಹಿನ್ನೆಲೆ ನೆರೆ ಜಿಲ್ಲೆ ಬೀದರನಲ್ಲಿ ಸಾಕಷ್ಟು ಕಟ್ಟೆಚ್ಚರ ವಹಿಸಲಾಗುತ್ತಿದೆ. ಸಂಭಾವ್ಯ ಮೂರನೇ ಅಲೆ ನಿರ್ವಹಣೆಗಾಗಿ ಆಡಳಿತ, ಆರೋಗ್ಯ ಇಲಾಖೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸದ್ಯ ಕೋವಿಡ್ ನಿಯಂತ್ರಣದ ನಡುವೆಯೂ ಬ್ರಿಮ್ಸ್ ಆಸ್ಪತ್ರೆಯಲ್ಲಿ 50 ಹಾಸಿಗೆ ಪ್ರತ್ಯೇಕವಾಗಿ ಮೀಸಲಿಡಲಾಗಿದ್ದು, ಇದರಲ್ಲಿ 20 ಐಸಿಯು ವೆಂಟಿಲೇಟರ್ ಸಹಿತ, 20 ಆಕ್ಸಿಜನ್ ಹಾಸಿಗೆಗಳು ಹಾಗೂ 10 ನವಜಾತ ಶಿಶುವಿಗಾಗಿ ಬೆಡ್ ಗಳನ್ನು ತಯಾರಿಸಲಾಗಿದೆ. ಇದರೊಟ್ಟಿಗೆ ಓಲ್ಡ್ ಸಿಟಿಯ ನೂರು ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಅಕ್ಸಿಜನ್ ಬೆಡ್‌ಗಳು ಹಾಗೂ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 10 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಆ ಮೂಲಕ 3ನೇ ಅಲೆ ಎದುರಿಸಲು ಆರೋಗ್ಯ ಇಲಾಖೆ ಕ್ರಮ ವಹಿಸಿದೆ.
ಬ್ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾದ ಸಮಯಕ್ಕೆ ಹಾಜರಾಗಿ ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಬೇಕೆಂಬ ಉದ್ದೇಶದಿಂದ ಆಸ್ಪತ್ರೆಯ ಎಲ್ಲ ಕೋವಿಡ್ ವಾರ್ಡ್ ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಸೇರಿದಂತೆ ಕೋವಿಡ್ ತಡೆಗಾಗಿ ಅಗತ್ಯ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.
ಚಿಕಿತ್ಸೆಗೆ ಸಕಲ ಸೌಲಭ್ಯ
ಬ್ರಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ವೈದ್ಯಕೀಯ ಸೌಲಭ್ಯ ಮೇಲ್ದರ್ಜೆಗೇರಿಸಲಾಗಿದೆ. ಬ್ರಿಮ್ಸ್‌ನಲ್ಲಿ 90 ಬೆಡ್‌ಗಳಿಗೆ ಮಾತ್ರ ಇದ್ದ ಆಕ್ಸಿಜನ್
ವ್ಯವಸ್ಥೆ 490ಕ್ಕೆ ಹಾಗೂ ವೆಂಟಿಲೇಟರ್‌ಗಳನ್ನು 10ರಿಂದ 82ಕ್ಕೆ ಹೆಚ್ಚಿಸಲಾಗಿದೆ. ಮುಖ್ಯವಾಗಿ ಕೋವಿಡ್ 2ನೇ ಅಲೆ ವೇಳೆ ಆಕ್ಸಿಜನ್ ಕೊರತೆ ಆಗಿದ್ದ ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿ ಡಿಆರ್‌ಡಿಒ ಸಹಭಾಗಿತ್ವದಲ್ಲಿ 1 ಸಾವಿರ ಎಲ್‌ಪಿಎಂ ಮತ್ತು ಕೆಎಸ್‌ಎಸ್‌ಐಡಿಸಿ ವತಿಯಿಂದ 660 ಎಲ್‌ಪಿಎಂ ಸಾಮರ್ಥ್ಯದ ಆಕ್ಸಿಜನ್ ಘಟಕ ನಿರ್ಮಿಸುವ ಕಾರ್ಯ ಸಾಗಿದೆ.
ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್‌ನಿಂದ ಸಂತಪೂರನಲ್ಲಿ 3.9 ಕೆಎಲ್ ಆಕ್ಸಿಜನ್ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಜತೆಗೆ ಇದರಂತೆ ಚಿಟಗುಪ್ಪ, ಹುಲಸೂರು ಮತ್ತು ಕಮಲನಗರ ತಾಲೂಕು ಆಸ್ಪತ್ರೆಯಲ್ಲಿಯೂ 390 ಎಲ್‌ಪಿಎಂ ಸಾಮರ್ಥ್ಯದ ಆಕ್ಸಿಜನ್ ಜನರೇಟರ್ ಪ್ಲಾಂಟ್ ಅಳವಡಿಸುವ ಕಾಮಗಾರಿಗೆ ಸರ್ಕಾರದಿಂದ ಮಂಜೂರಾತಿ ಸಿಕ್ಕಿದೆ. ಬೀದರನಲ್ಲಿಯೇ ಕೋವಿಡ್ ಪರೀಕ್ಷೆಯ ಲ್ಯಾಬ್ ಜತೆಗೆ ಬ್ಲಾ ಕ್ ಫಂಗಸ್ ಪರೀಕ್ಷೆಯ ಲ್ಯಾಬ್ ಆರಂಭಿಸಲು ಕ್ರಮ ವಹಿಸಲಾಗಿದೆ. ಇನ್ನೂ ಕೋವಿಡ್ ನಿರ್ವಹಣೆ ಸಂಬಂಧ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಲು ಅಗತ್ಯವಿರುವ ವೈದ್ಯಕೀಯ ಉಪಕರಣಗಳು, ಔಷಧ ಹಾಗೂ ಇತರೆ ಸಾಮಗ್ರಿಗಳನ್ನು ಖರೀದಿಸಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಈಗಾಗಲೇ 21 ಕೋಟಿ ರೂ. ಮಂಜೂರಾಗಿದೆ.
ಬೀದರ ಜಿಲ್ಲೆಯಲ್ಲಿ ಸಂಭವನೀಯ 3ನೇ ಅಲೆ ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳಲ್ಲಿನ ಸಧ್ಯದ ಸ್ಥಿತಿಯನ್ನು ಗಮನಿಸಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮುಖ್ಯವಾಗಿ ಆಕ್ಸಿಜನ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಬೆಡ್‌ಗಳ ಹೆಚ್ಚಳ, ಔಷ ಧ ಸಾಮಗ್ರಿಗಳ ಸಂಗ್ರಹ ಆಗಿದ್ದು, ಇದಕ್ಕಾಗಿ ಕೆಕೆಆರ್‌ಡಿಬಿ ಸೇರಿ ಇತರೆ ಲಭ್ಯ ಅನುದಾನ ಬಳಸಿಕೊಳ್ಳಲಾಗುತ್ತಿದೆ.
ರಾಮಚಂದ್ರನ್ ಆರ್., ಜಿಲ್ಲಾಧಿಕಾರಿ
ಕೋವಿಡ್ ಸೋಂಕು ಹಿನ್ನೆಲೆ ಬ್ರಿಮ್ಸ್ ಮತ್ತು ಸಾರ್ವಜನಿಕ ಆಸ್ಪತ್ರೆಗಳು ಸಾಕಷ್ಟು ಸುಧಾರಣೆ ಕಂಡಿವೆ. ಬ್ರಿಮ್ಸ್‌ನಲ್ಲಿ ವಿಶೇಷವಾಗಿ ಬೆಡ್‌ಗಳಿಗೆ ಆಕ್ಸಿಜನ ವ್ಯವಸ್ಥೆ, ವೆಂಟಿಲೇಟರ್‌ಗಳ ಸಂಖ್ಯೆ ಐದಾರು ಪಟ್ಟು ಹೆಚ್ಚಳವಾಗಿದೆ. ಸಿಸಿ ಕ್ಯಾಮೆರಾ ಅಳವಡಿಕೆಯಿಂದಾಗಿ ವೈದ್ಯರು, ಸಿಬ್ಬಂದಿಗಳಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸೌಲಭ್ಯ ಸಿಗುವಂತಾಗಿದೆ.
ರಾಮಶೆಟ್ಟಿ ಬಿರಾದಾರ, ಗುಣಮುಖರಾದ ರೋಗಿ
ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.