ನೇತ್ರ ಸಮಸ್ಯೆ ಲಘುವಾಗಿ ಪರಿಗಣಿಸದಿರಿ
ಸಾಲಿನ್ಸ್ ಆಸ್ಪತ್ರೆಯಲ್ಲಿ 105 ಜನರ ನೇತ್ರ ತಪಾಸಣೆ 53 ಜನರಿಗೆ ಉಚಿತ ಕನ್ನಡಕ ವಿತರಣೆ
Team Udayavani, Mar 15, 2020, 4:09 PM IST
ಬೀದರ: ವಿಶ್ವ ಗ್ಲುಕೊಮಾ ದಿನಾಚರಣೆ ಅಂಗವಾಗಿ ನಗರದ ಸಾಲಿನ್ಸ್ ನೇತ್ರ ಆಸ್ಪತ್ರೆಯಲ್ಲಿ ಸಾಮಾಜಿಕ ಕಾರ್ಯಕರ್ತರಿಗೆ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 53 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು.
ಶಿಬಿರದಲ್ಲಿ 105 ಜನರ ನೇತ್ರ ತಪಾಸಣೆ ಮಾಡಲಾಯಿತು. ಈ ಪೈಕಿ ದೃಷ್ಟಿ ದೋಷ ಕಂಡು ಬಂದ 53 ಜನರಿಗೆ ಕನ್ನಡಕ ವಿತರಿಸಲಾಯಿತು. ಅವರಲ್ಲಿ 10 ಜನರಿಗೆ ನೇತ್ರ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಯಿತು. ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ವೆಲ್ ಮೆಗ್ನಾ ಗುಡ್ ನ್ಯೂಸ್ ಸಂಸ್ಥೆಯ ನಿರ್ದೇಶಕಿ ಡಾ|ಸಿಬಿಲ್ ಸಾಲಿನ್ಸ್ ಮಾತನಾಡಿ, ಗ್ಲುಕೊಮಾ ವ್ಯಕ್ತಿಗೆ ಅರಿವಿಲ್ಲದಂತೆ ದೃಷ್ಟಿ ಕಸಿದುಕೊಳ್ಳುವ ಮಾರಕ ಕಾಯಿಲೆಯಾಗಿದೆ. ಹೀಗಾಗಿ 40 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು. ನೇತ್ರ ಸಮಸ್ಯೆಗಳನ್ನು ಲಘುವಾಗಿ ಪರಿಗಣಿಸಬಾರದು. ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ಮಾಂಸ ಬೆಳೆಯುವುದು ಮೊದಲಾದ ಸಮಸ್ಯೆಗಳು ಕಂಡು ಬಂದರೆ ನೇತ್ರ ತಜ್ಞರನ್ನು ಕಾಣಬೇಕು ಎಂದು ಹೇಳಿದರು. ಕಣ್ಣು ಮಾನವನ ಪ್ರಮುಖ ಅಂಗವಾಗಿದೆ. ಕಣ್ಣಿದ್ದರೆ ಮಾತ್ರ ಜಗತ್ತಿನ ಸೌಂದರ್ಯವನ್ನು ನೋಡಬಹುದು.
ಕಣ್ಣಿನ ಆರೋಗ್ಯ ಕಾಪಾಡಲು ಗಜ್ಜರಿ, ತರಕಾರಿ ಸೇರಿ ವಿಟಮಿನ್ “ಎ’ ಇರುವ ಆಹಾರವನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು. ಸಕ್ಕರೆ ಕಾಯಿಲೆ ಇರುವವರು ಆಹಾರ ಸೇವನೆಯಲ್ಲಿ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆಯ ಆಡಳಿತಾಧಿಕಾರಿ ಫಿಲೋಮನ್‌ರಾಜ್ ಪ್ರಸಾದ್ ಮಾತನಾಡಿ, ಡಾ| ಸಾಲಿನ್ಸ್ ನೇತ್ರ ಆಸ್ಪತ್ರೆಯು ಐದು ದಶಕಗಳಿಂದ ಜಿಲ್ಲೆಯ ಜನರಿಗೆ ನೇತ್ರಕ್ಕೆ ಸಂಬಂಧಿಸಿದ ವೈದ್ಯಕೀಯ ಸೇವೆ ಒದಗಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಶಿಬಿರ ಹಮ್ಮಿಕೊಂಡು ನೇತ್ರ ತಪಾಸಣೆ ಮಾಡುತ್ತಿದೆ. ಶಿಬಿರದಲ್ಲಿ ನೇತ್ರ ಸಮಸ್ಯೆ ಕಂಡು ಬಂದವರ ಪೈಕಿ 70ರಷ್ಟು ಜನರ ನೇತ್ರ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನಡೆಸುತ್ತಿದೆ. ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಲ್ಲಿ ಕಣ್ಣಿನ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದೆ ಎಂದು ತಿಳಿಸಿದರು.
ಆಸ್ಪತ್ರೆಯು ವೈದ್ಯಕೀಯ ಸೇವೆ ಜತೆಗೆ ಕುಷ್ಠರೋಗಿಗಳ ಪುನರ್‌ವಸತಿ ಕೇಂದ್ರವೊಂದನ್ನೂ ನಡೆಸುತ್ತಿದೆ. 30 ಮಂದಿ ಬಡ ಹಾಗೂ ಅನಾಥ ಮಕ್ಕಳಿಗೆ ಆಸರೆ ಒದಗಿಸಿದೆ. ಅವರ ಊಟ, ವಸತಿ, ಶಿಕ್ಷಣದ ಸಂಪೂರ್ಣ ಖರ್ಚನ್ನು ನೋಡಿಕೊಳ್ಳುತ್ತಿದೆ ಎಂದು ಹೇಳಿದರು.
ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ ಡಾ| ರಾಜಶೇಖರ ಪಾಟೀಲ ಮಾತನಾಡಿ, ಅಂಧತ್ವ ನಿಯಂತ್ರಣ ಇಲಾಖೆಯು ಸಾಲಿನ್ಸ್ ಆಸ್ಪತ್ರೆಯ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಅಂಧತ್ವ ನಿವಾರಣೆಗೆ ಶ್ರಮಿಸುತ್ತಿದೆ. ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಮೂಲಕ ಅಂಧತ್ವ ದೂರ ಮಾಡಲು ಪ್ರಯತ್ನಿಸಲಾಗುತ್ತಿದೆ. ವಿವಿಧ ಕಾರ್ಯಕ್ರಮಗಳ ಮೂಲಕ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದರು. ರೇ. ಕ್ರಿಸ್ಟೋಫರ್, ಫಾ. ಡಿಸೋಜಾ, ಜಿಲ್ಲಾ ಅಂಧತ್ವ ನಿಯಂತ್ರಣ ಇಲಾಖೆಯ ಸಂಜು, ಆಸ್ಪತ್ರೆಯ ಡಾ| ವೀರೇಂದ್ರ ಪಾಟೀಲ ಉಪಸ್ಥಿತರಿದ್ದರು. ಪುಟ್ಟರಾಜ ಬಲ್ಲೂರಕರ್ ನಿರೂಪಿಸಿದರು. ಸುದೇಶ ಕಾರ್ಯಕ್ರಮ ಸಂಘಟಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.