ತೋಟಗಾರಿಕೆ ಸೌಲಭ್ಯ ರೈತರಿಗೆ ತಲುಪಿಸಿ
•ತಿಳಿವಳಿಕೆ ಮೂಡಿಸಲು ಜಾಗೃತಿ ಕಾರ್ಯಕ್ರಮ ಆಯೋಜಿಸಿ •ತೋಟಗಾರಿಕೆಯತ್ತ ಹೆಚ್ಚಿದ ಕೃಷಿಕರ ಒಲವು
Team Udayavani, Aug 20, 2019, 3:04 PM IST
ಬೀದರ: ಅಂಬೇಡ್ಕರ್ ವೃತ್ತದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ನಡೆದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ ಕಾರ್ಯಕ್ರಮವನ್ನು ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಉದ್ಘಾಟಿಸಿದರು.
ಬೀದರ: ತೋಟಗಾರಿಕೆ ಗಿಡಗಳನ್ನು ಬೆಳೆಯುವ ರೈತರಿಗೆ ಇಲಾಖೆಯಿಂದ ಅನೇಕ ಸೌಲಭ್ಯಗಳಿವೆ. ಇವುಗಳ ಬಗ್ಗೆ ಎಲ್ಲರಲ್ಲಿ ತಿಳಿವಳಿಕೆ ಮೂಡಿಸಲು ತಾಲೂಕುವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಗೀತಾ ಪಂಡಿತರಾವ್ ಚಿದ್ರಿ ಹೇಳಿದರು.
ನಗರದ ಅಂಬೇಡ್ಕರ್ ವೃತ್ತದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಸೋಮವಾರ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ತೋಟಗಾರಿಕೆ ಇಲಾಖೆಯಿಂದ ನೀಡಲಾಗುವ ಸೌಲಭ್ಯಗಳನ್ನು ಎಲ್ಲಾ ರೈತರಿಗೂ ತಲುಪಿಸಬೇಕು. ಇತ್ತೀಚಿನ ದಿನಗಳಲ್ಲಿ ಹೆಚ್ಚು ಕೃಷಿಕರು ತೋಟಗಾರಿಕೆಯತ್ತ ಒಲವು ತೋರುತ್ತಿದ್ದಾರೆ. ಮಹಿಳೆಯರು ಸಹ ಮನೆಗೆಲಸದೊಂದಿಗೆ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರಿಗೆ ಇನ್ನಷ್ಟು ಉತ್ತೇಜನ ನೀಡಬೇಕಿದೆ. ಉನ್ನತ ವ್ಯಾಸಂಗ ಮಾಡಿದವರು ಸಹ ಕೃಷಿ ರಂಗದತ್ತ ಒಲವು ತೋರಿಸುತ್ತಿದ್ದಾರೆ. ಕೃಷಿಯನ್ನು ತಾತ್ಸಾರದಿಂದ ಕಾಣುವುದು ನಿಲ್ಲಬೇಕು. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಲು ತೋಟಗಾರಿಕೆ ಬೆಳೆಗಳು ಸೂಕ್ತವಾಗಿದ್ದು, ರೈತರು ಈ ಬಗ್ಗೆ ಆಸಕ್ತಿ ತೋರಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ಕೇವಲ ಕೃಷಿಯನ್ನು ಮಾತ್ರ ಅವಲಂಬಿಸುವುದರಿಂದ ನಷ್ಟ ಅನುಭವಿಸುವ ಸಾಧ್ಯತೆ ಇರುತ್ತದೆ. ಕೃಷಿಯೊಂದಿಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಸುವುದರಿಂದ ರೈತರು ಆರ್ಥಿಕವಾಗಿ ಸದೃಢರಾಗಬಹುದು ಎಂದು ಹೇಳಿದರು. ತೋಟಗಾರಿಕೆ ಇಲಾಖೆಯು ರೈತರಿಗೆ ಕಡಿಮೆ ಬೆಲೆಯಲ್ಲಿ ಸಸಿಗಳನ್ನು ನೀಡುತ್ತಿದೆ. ಉತ್ತಮ ತಳಿಗಳು ಇಲ್ಲಿ ಲಭಿಸುವುದರಿಂದ ರೈತರು ಇದರ ಸದುಪಯೋಗ ಪಡೆಯಬೇಕು. ಜಿಲ್ಲೆಯಲ್ಲಿ ಶೇ.5ರಷ್ಟು ಮಾತ್ರ ತೋಟಗಾರಿಕಾ ಬೆಳೆಯ ಕ್ಷೇತ್ರವಿದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾವುಗೆ ಪ್ರಾಸ್ತಾವಿಕ ಮಾತನಾಡಿ, ಇಲಾಖೆಯ ನರ್ಸರಿಗಳಲ್ಲಿ ತಯಾರಿಸಿದ ಹಣ್ಣು, ತರಕಾರಿ ಸಸ್ಯಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ 82,000 ಸಸಿಗಳು ಲಭ್ಯವಿವೆ. ರೈತರು ಮುಂಚಿತವಾಗಿ ತಿಳಿಸಿದಲ್ಲಿ ಉತ್ತಮ ಗುಣಮಟ್ಟದ ತಳಿಯ ಸಸಿಗಳನ್ನು ನೀಡಲಾಗುತ್ತದೆ. ರೈತರು ಖಾಸಗಿ ಸಂಸ್ಥೆಗಳಿಂದ ಮೋಸ ಹೋಗದೇ ನೇರವಾಗಿ ಇಲಾಖೆಗೆ ಭೇಟಿ ನೀಡಿ ತೋಟಗಾರಿಕೆ ಸಸಿಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ರವೀಂದ್ರ ಮೂಲಗೆ ಮಾತನಾಡಿ, ರೈತರು ಹೆಚ್ಚು ಲಾಭ ಗಳಿಸಲು ತೋಟಗಾರಿಕೆ ಬೆಳೆಗಳನ್ನು ಬೆಳೆಸುವ ಮುನ್ನ ಉತ್ತಮ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮಣ್ಣು ಪರೀಕ್ಷೆ ಮಾಡಿಸಿ ತಮ್ಮ ಜಮೀನಿನಲ್ಲಿ ಯಾವ ಬೆಳೆ ಸೂಕ್ತ ಎನ್ನುವುದನ್ನು ತಿಳಿದುಕೊಂಡು ಅದರಂತೆ ಬೆಳೆಗಳನ್ನು ನಾಟಿ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು. ತೋಟಗಾರಿಕೆ ಬೆಳೆಗಳಿಗೆ ತಾಂತ್ರಿಕ ವಿಧಾನಗಳನ್ನು ಅನುಸರಿಸಿ ಬೆಳೆದಲ್ಲಿ ಹೆಚ್ಚು ಲಾಭ ಗಳಿಸಲು ಸಾಧ್ಯವಿದೆ. ಈ ಬೆಳೆಗಳಿಗೆ ಹೆಚ್ಚು ನೀರಿನ ಅಗತ್ಯತೆ ಇರುತ್ತದೆ. ಹಾಗಾಗಿ ತಪ್ಪದೇ ತುಂತುರು ಅಥವಾ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಬೇಕು. ಮಣ್ಣಿನ ಹೊದಿಕೆ ಮಾಡುವುದರಿಂದ ಹೆಚ್ಚು ನೀರು ಆವಿಯಾಗುವುದನ್ನು ತಡೆಯುವುದಲ್ಲದೇ ಕೀಟ ಬಾಧೆಯನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಹೇಳಿದರು.
ಬೀದರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ರವಿ ದೇಶಮುಖ, ತೋಟಗಾರಿಕೆ ಮಹಾವಿದ್ಯಾಲಯದ ಉಪನ್ಯಾಸಕ ಶ್ರೀನಿವಾಸ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಜಯಶ್ರೀ, ವಿವಿಧ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈತರು ಉಪಸ್ಥಿತರಿದ್ದರು. ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಶಿವಪುತ್ರ ಶಂಭು ನಿರೂಪಿಸಿದರು. ಇದೇ ವೇಳೆ ರೈತರಿಗೆ ಸಸಿಗಳನ್ನು ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.