ಶಿಕ್ಷಕರ ಕೊರತೆ ನೀಗಿಸಲು ಆಗ್ರಹ
Team Udayavani, Apr 9, 2022, 4:54 PM IST
ಭಾಲ್ಕಿ: ಜ್ಯಾಂತಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸುವಂತೆ ಕರವೇ ತಾಲೂಕು ಅಧ್ಯಕ್ಷ ಗಣೇಶ ಪಾಟೀಲ ನೇತೃತ್ವದ ತಂಡದವರು ಆಗ್ರಹಿಸಿದ್ದಾರೆ.
ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಬಸವಂತರಾಯ ಜಿಡ್ಡೆ ಅವರಿಗೆ ಮನವಿ ಸಲ್ಲಿಸಿದ ಕರವೇ ಮುಖಂಡರು, ಜ್ಯಾಂತಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಸುಮಾರು 220 ವಿದ್ಯಾರ್ಥಿಗಳಿದ್ದು, ಗ್ರಾಮದಲ್ಲಿ ಎಲ್ಲ ಸವಲತ್ತುಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ಕೃಷಿ ಪತ್ತಿನ ಸೌಹಾರ್ದ ಸಹಕಾರ ಸಂಘ, ಗ್ರಾಪಂ ಕಾರ್ಯಾಲಯವಿದೆ. ಆದರೆ ಶಾಲೆಯಲ್ಲಿ ಕೇವಲ ಇಬ್ಬರೇ ಶಿಕ್ಷರಿದ್ದಾರೆ. ಶಿಕ್ಷಕರ ಕೊರತೆ ಮಕ್ಕಳಿಗೆ ಕಾಡುತ್ತಿದ್ದು, ಕೂಡಲೇ ಶಿಕ್ಷಕರನ್ನು ನೇಮಿಸಿ ಎಂದು ಒತ್ತಾಯಿಸಿದರು.
ಕರವೇ ಗೌರವ ಸಲಹೆಗಾರ ರಮೇಶ ಚಿದ್ರಿ ಮಾತನಾಡಿ, ಪ್ರತಿ 40 ಮಕ್ಕಳಿಗೆ ಒಬ್ಬ ಶಿಕ್ಷಕರನ್ನು ನೇಮಿಸಬೇಕೆಂಬುದು ಸರ್ಕಾರದ ನಿಯಮವಿದೆ. ಸುಮಾರು 200ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಯಲ್ಲಿ ಕೇವಲ 2 ಶಿಕ್ಷಕರಿಂದ ಶಾಲೆ ನಡೆಸುವುದು ಪ್ರಾಯೋಗಿಕವಾಗಿ ಸಮಂಜಸವೇ? ಎಂದು ಪ್ರಶ್ನಿಸಿದ ಅವರು, ಬರುವ ಶೈಕ್ಷಣಿಕ ವರ್ಷದ ಆರಂಭದ ಮುಂಚೆ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವಂತರಾಯ ಜಿಡ್ಡೆ ಮನವಿ ಸ್ವೀಕರಿಸಿ ಮಾತನಾಡಿ, ಬರುವ ದಿನಗಳಲ್ಲಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ದಶರಥ ಡೊಳ್ಳೆ, ವಿನೋದ ಮೇತ್ರೆ, ನಾಗನಾಥ ಮರ್ಜಾಪೂರೆ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.