ನವ ಕರ್ನಾಟಕಕ್ಕಾಗಿ ಅಭಿವೃದ್ಧಿ ಪರ್ವ:ಸಿಎಂ
Team Udayavani, Dec 14, 2017, 11:10 AM IST
ಬೀದರ್: ಕಳೆದ ನಾಲ್ಕೂವರೆ ವರ್ಷಗಳಿಂದ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ನವ ಕರ್ನಾಟಕ ನಿರ್ಮಾಣಕ್ಕಾಗಿ ಅಭಿವೃದ್ಧಿ ಪರ್ವ ಆರಂಭಿಸಿದ್ದೇವೆ. ನಮಗೆ ನಾವೇ ಮಾದರಿ. ನುಡಿದಂತೆ ನಡೆದ ನಮಗೆ ಮತ್ತೆ ಆಶೀರ್ವಾದ ಮಾಡಿ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಧನಾ ಸಂಭ್ರಮ ಸರ್ಕಾರಿ ಯಾತ್ರೆಗೆ ಚಾಲನೆ ನೀಡಿದರು.
ಬೀದರ್ ಜಿಲ್ಲೆ ಬಸವ ಕಲ್ಯಾಣದಲ್ಲಿ 264 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಪಟ್ಟಣದ ಥೇರ್ ಮೈದಾನದಲ್ಲಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿ ಮಾತನಾಡಿದ ಅವರು, ತಾವು ಅಧಿಕಾರಕ್ಕೆ ಬಂದಾಗಿನಿಂದ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿ ಭಾಗ್ಯದಂತಹ ಜನಪರ ಯೋಜನೆಗಳನ್ನು ನೀಡಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಗೂ ಏಳು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದು, ಹಸಿವುಮುಕ್ತ ಕರ್ನಾಟಕ ಮಾಡಲು ಪಣ ತೊಟ್ಟಿದ್ದೇವೆ. ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕೊಡಿಸಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಿದ್ದೇವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಲು ಬರುವುದಿಲ್ಲ ಎಂದು ಎಲ್.ಕೆ. ಅಡ್ವಾಣಿ ಉಪ ಪ್ರಧಾನಿಯಾಗಿದ್ದಾಗ ಹೇಳಿದ್ದರು. ಆದರೆ, ರಾಹುಲ್‌ಗಾಂಧಿ ಭರವಸೆ ನೀಡಿದಂತೆ ಯುಪಿಎ ಸರ್ಕಾರದ ಅವಧಿಯಲ್ಲಿ ಸಂವಿಧಾನಕ್ಕೆ 371 ಜೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ ಎಂದರು.
ಭಾಷಣದುದ್ದಕ್ಕೂ ಯಡಿಯೂರಪ್ಪ ಅವರ ವಿರುದ್ಧ ವಾಗ್ಧಾಳಿ ನಡೆಸಿದ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸರ್ಕಾರ ಯಾವುದೇ ಕೆಲಸ ಮಾಡಿಲ್ಲ ಎಂದು ಹೇಳುತ್ತ ತಮಟೆ ಬಾರಿಸುತ್ತ ಹೋಗುತ್ತಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ ನಂಜುಂಡಪ್ಪ ವರದಿ ಅನುಷ್ಠಾನಕ್ಕೆ 3 ಸಾವಿರ ರೂ ಕೋಟಿ ಹಣ ನೀಡಿದ್ದೇವೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಪ್ರತಿ ವರ್ಷ 1000 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ ಎಂದು ಹೇಳಿದರು.
ಬಿಜೆಪಿಯವರು ದಲಿತರ ಬಗ್ಗೆ ಪ್ರೀತಿ ತೋರುತ್ತಿದ್ದು, ನಮ್ಮ ಸರ್ಕಾರ ದಲಿತರಿಗಾಗಿಯೇ ವಿಶೇಷ ಕಾಯ್ದೆ ತಂದಿದೆ. ಎಸ್ಸಿ ಎಸ್ಟಿ ಗುತ್ತಿಗೆದಾರರಿಗೆ ಮೀಸಲು, ಬಡ್ತಿಯಲ್ಲಿ ಮೀಸಲು ಕಾಯ್ದೆ ತಂದಿದ್ದೇವೆ. ಬಿಜೆಪಿಯವರು ದಲಿತರ ಮನೆಗೆ ಹೋಗಿ ಹೊಟೆಲ್ ತಿಂಡಿ ತಿಂದು ತಾವು ದಲಿತರ ಪರ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಬಿಜೆಪಿ ನಾಯಕರಿಗೆ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಲು ಏನೂ ವಿಷಯ ಇಲ್ಲದಿರುವುದರಿಂದ ಹತಾಶರಾಗಿ ಕೋಮು ಗಲಭೆ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ. ಮನುಷ್ಯರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನಿಜವಾದ ರಾಕ್ಷಸ ಎಂದು ಹರಿಹಾಯ್ದರು.
ಚುನಾವಣೆ ದೃಷ್ಠಿಯಿಂದ ಬಿಜೆಪಿಯವರು ಸಮಾಜದಲ್ಲಿ ದೊಂಬಿ ಗಲಾಟೆ ನಡೆಸಿ ಜನರನ್ನು ರೊಚ್ಚಿಗೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಮನಷ್ಯತ್ವದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇವೆ. ಪ್ರಧಾನಿ ಸಬ್‌ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಆದರೆ, ಸಮಾಜದಲ್ಲಿ ಧರ್ಮಗಳ ನಡುವೆ ಬಿರುಕು ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಅಚ್ಚೆ ದಿನ್ ಆಯೆಗಾ ಅಂದರು. ಆದರೆ, ಬಡವರಿಗೆ ಅಚ್ಚೆದಿನ್ ಬರಲೇ ಇಲ್ಲ. ಬರುವುದೂ ಇಲ್ಲ. ಅದಾನಿ, ಅಂಬಾನಿ ಹಾಗೂ ಅಮಿತ್ ಷಾ ಪುತ್ರ ಜೈ ಷಾ ಗೆ ಮಾತ್ರ ಅಚ್ಚೆ ದಿನ್ ಬಂದಿದೆ ಎಂದು ಪ್ರಧಾನಿ ವಿರುದ್ಧ ವಾಗ್ಧಾಳಿ ನಡೆಸಿದರು.
ಮಿಷನ್ 150 ಠುಸ್: ಬಿಜೆಪಿಯವರು ರಾಜ್ಯದಲ್ಲಿ 150 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡು ಮಿಷನ್ 150 ಎಂದು ಹೇಳಿಕೊಂಡು ಹೋಗುತ್ತಿದ್ದಾರೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಸೋತ ನಂತರ ಅವರ ಮಿಷನ್ 150 ಠುಸ್ ಅಂದಿದ್ದು, ಮಿಷನ್ 50 ಆಗಿದೆ. ಹೀಗಾಗಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಯಡಿಯೂರಪ್ಪಗೆ ಎರಡು ನಾಲಿಗೆ: ಬಿಜೆಪಿ ರಾಜಾÂಧ್ಯಕ್ಷರಾಗಿರುವ ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಸುಲ್ತಾನನನ್ನು ದೇಶ ಪ್ರೇಮಿ ಎಂದು ಹೊಗಳಿ ಟಿಪ್ಪು ವೇಷ ತೊಟ್ಟುಕೊಂಡಿದ್ದರು. ಈಗ ಟಿಪ್ಪು ದೇಶದ್ರೋಹಿ ಎನ್ನುತ್ತಿದ್ದಾರೆ. ಕೆಜೆಪಿಯಲ್ಲಿದ್ದಾಗ ಸತ್ತರೂ ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿದ್ದರು. ಈಗ ಬಿಜೆಪಿಯಿಂದಲೇ ಎಂಪಿ ಆಗಿದ್ದಾರೆ. ಯಡಿಯೂರಪ್ಪ ಎರಡು ನಾಲಿಗೆ ಮನುಷ್ಯ ಅವರು ಯಾವತ್ತೂ ಸತ್ಯ ಹೇಳುವುದಿಲ್ಲ ಎಂದು ಹೇಳಿದರು.
ಪಕ್ಷದ ಸೋಂಕು ಸುಳಿಯದಂತೆ ಎಚ್ಚರ
ಬೀದರ್: ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷವನ್ನು ದೂರ ಇಟ್ಟು ತಮ್ಮ ಸಾಧನಾ ಸಂಭ್ರಮ ಯಾತ್ರೆ ಆರಂಭಿಸಿದ್ದು, ಬಸವ ಕಲ್ಯಾಣ ಕಾರ್ಯಕ್ರಮದಲ್ಲಿಯೂ ಎದ್ದು ಕಂಡಿತು. ಬಸವ ಕಲ್ಯಾಣ ಪಟ್ಟಣದ ಬೀದಿಯಲ್ಲಿ ಕಾಂಗ್ರೆಸ್ ನಾಯಕರ ಸ್ವಾಗತ ಕೋರುವ ಕಟೌಟ್‌ಗಳಿದ್ದರೂ, ಕಾರ್ಯಕ್ರಮ ನಡೆಯುವ ಮೈದಾನದಲ್ಲಿ ಪಕ್ಷದ ಧ್ವಜಗಳು, ಕಾರ್ಯಕರ್ತರ ಬೃಹತ್ ದಂಡು ಕಾಣದಂತೆ ನೋಡಿಕೊಂಡರು.
ವೇದಿಕೆಯಲ್ಲಿ ಸಚಿವರು, ಜಿಲ್ಲೆಯ ಶಾಸಕರು, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಅಧ್ಯಕ್ಷರು, ನಿಗಮ ಮಂಡಳಿ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರು ಮಾತ್ರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಹುತೇಕ ಮಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ವೇದಿಕೆಯ ಮೇಲೆಯೂ ಜನ ಪ್ರತಿನಿಧಿಗಳ ಹೊರತು ಬೇರೆ ಯಾರೂ ಕಾಣದಂತೆ ಎಚ್ಚರಿಕೆ ವಹಿಸಿದ್ದರು. ಬೀದರ್ ಜಿಲ್ಲಾ ಘಟಕದ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿಗೆ ಮಾಲೆ ಹಾಕಲು ಅವಕಾಶ ಕಲ್ಪಿಸಿದ್ದು ಬಿಟ್ಟರೆ, ಬೇರೆ ಯಾವುದೇ ಪಕ್ಷದ ಮುಖಂಡರುಗಳು ವೇದಿಕೆಯಲ್ಲಿ ಕಾಣಿಸಿಕೊಳ್ಳಲಿಲ್ಲ.
ಅರ್ಥವಾಗದ ಭಾಷೆ:ಚಪ್ಪಾಳೆಗೆ ಬರ: ಬಸವ ಕಲ್ಯಾಣ ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ತಾಲೂಕಾಗಿದ್ದು, ಈ ಭಾಗದಲ್ಲಿ ಮರಾಠಿ ಹಾಗೂ ಉರ್ದು ಭಾಷೆಯ ಪ್ರಭಾವ ಹೆಚ್ಚಿದೆ. ಬಹುತೇಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನ್ನಡ ಭಾಷಣ ಸ್ಪಷ್ಟವಾಗಿ ಅರ್ಥವಾಗದ ಹಿನ್ನೆಲೆಯಲ್ಲಿ ಎಷ್ಟೇ ರೋಷದಿಂದ ಭಾಷಣ ಮಾಡಿದರೂ, ಜೊರಾದ ಚಪ್ಪಾಳೆ ಸದ್ದು ಕೇಳಲಿಲ್ಲ.
ಕಲ್ಯಾಣದಲ್ಲಿ ಬಸವಣ್ಣನ ಧ್ಯಾನ ಮಾಡಿದ ಸಿದ್ದರಾಮಯ್ಯ
ಬೀದರ್: ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿರುವ ಸಾಧನಾ ಸಂಭ್ರಮ ಕಾರ್ಯಕ್ರಮದಲ್ಲಿ ತಾವು ಬಸವಣ್ಣನ ಅನುಯಾಯಿ ಎನ್ನುವ ಮೂಲಕ ಬಸವಣ್ಣ ಮಂತ್ರ ಪಠಿಸಿ, ಪರೋಕ್ಷವಾಗಿ ಮತದಾರರ ಮನ ಮುಟ್ಟುವ ಕೆಲಸ ಆರಂಭಿಸಿದರು.
ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಸಾಧನಾ ಸಂಭ್ರಮದ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡಿದರು. ಭಾಷಣದ ಆರಂಭದಿಂದಲೇ ಬಸವಣ್ಣನ ಬಗ್ಗೆ ಮಾತು ಆರಂಭಿಸಿದ ಮುಖ್ಯಮಂತ್ರಿಗಳು ನಾಲ್ಕು ವರ್ಷ ಏಳು ತಿಂಗಳ ಹಿಂದೆ ಬಸವ ಜಯಂತಿಯ ದಿನ ತಾವು ಅಧಿಕಾರ ಸ್ವೀಕಾರ ಮಾಡಿದಾಗಿನಿಂದ ಬಸವನ ಬಗ್ಗೆ ತಮಗಿರುವ ಬದ್ಧತೆಯ ಬಗ್ಗೆ ಮಾತನಾಡಿದರು. ಸಾಮಾಜಿಕ ನ್ಯಾಯಕ್ಕಾಗಿ ಬಸವಣ್ಣನವರು 850 ವರ್ಷಗಳ ಹಿಂದೆಯೇ ಹೊರಾಟ ಮಾಡಿದರು. ಬಸವಣ್ಣನವರು ಜಾತಿ ರಹಿತ ಸಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದ್ದರು. ನಾನು ಬಸವಣ್ಣನ ಅನುಯಾಯಿ, ಅವರ ಬಗ್ಗೆ ಬದ್ಧತೆ ಇದೆ. ನಾನೂ ಬಸವಾದಿ ಶರಣರಂತೆ ಸಾಮಾಜಿಕ ನ್ಯಾಯ ನೀಡಬೇಕೆಂದು ತೀರ್ಮಾನ ಮಾಡಿದ್ದೆ. ನಾನು ಬಸವಣ್ಣನ ಅನುಯಾಯಿ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಹೇಳಿದರು.
ಪ್ರತಿಯೊಬ್ಬರು ಕಾಯಕ ಮಾಡಿ ಸಂಪತ್ತು ಸೃಷ್ಟಿ ಮಾಡಬೇಕು ಎಂದು ಬಸವಣ್ಣನವರು ಹೇಳಿದರು. ಶ್ರಮಿಕ ವರ್ಗ ಕಾಯಕ ಮಾಡಿದರೆ, ಶ್ರೀàಮಂತ ವರ್ಗ ಅದನ್ನು ಅನುಭವಿಸುತ್ತ ಬಂದಿದೆ. ಆದರೆ, ಸಂಪತ್ತು ಕೇವಲ ಕೆಲವೇ ಜನರ ಸ್ವತ್ತಾಗಿದೆ. ಅದು ಎಲ್ಲರಿಗೂ ಹಂಚಿಕೆಯಾಗಬೇಕು ಎಂದು ಬಸವಣ್ಣ ಹೇಳಿದ್ದರು ಎಂದರು.
ನಾನು 1994 ರಲ್ಲಿ ಉಪ ಮುಖ್ಯಮಂತ್ರಿಯಾಗಿದ್ದಾಗ ಕೂಡಲ ಸಂಗಮ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೆ. 2004 ರಲ್ಲಿ ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಈಗ ಮುಖ್ಯಮಂತ್ರಿಯಾದ ಮೇಲೆ ದೆಹಲಿಯ ಅಕ್ಷರ ಧಾಮ ಮಾದರಿಯಲ್ಲಿ ಕೂಡಲ ಸಂಗಮ ಅಭಿವೃದ್ಧಿ ಮಾಡಲು 250 ಕೋಟಿ ರೂಪಾಯಿ ಯೋಜನೆ ರೂಪಿಸಲಾಗಿದೆ. ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ಮಾಡಲು ಮುಂದಿನ ಬಜೆಟ್‌ನಲ್ಲಿ ಹಣ ಮೀಸಲಿಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಯಡಿಯೂರಪ್ಪ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಬಸವಣ್ಣನ ಬಗ್ಗೆ ಮಾತನಾಡುವವರು ಯಾರೂ ಈ ಬಗ್ಗೆ ಯೋಚನೆ ಮಾಡಿರಲಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೀದರ್‌ಗೆ ಬಂದಾಗ ಬಸವಣ್ಣನ ಹೆಸರು ಪ್ರಸ್ತಾಪ ಮಾಡಿರಲಿಲ್ಲ. ಆದರೆ, ನಾನು ಬಸವಣ್ಣನ ಅನುಯಾಯಿಯಾಗಿ ಬಸವಣ್ಣನ ಪುಣ್ಯ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡುವುದು ನನ್ನ ಕರ್ತವ್ಯ ಎಂದು ಹೇಳಿದರು.
ಬಿಎಸ್‌ವೈ ಅಪಪ್ರಚಾರ ಮಾಡುವುದನ್ನು ಬಿಡಲಿ: ಪಾಟೀಲ
ಬೀದರ(ಬಸವಕಲ್ಯಾಣ): ಕಾಂಗ್ರೆಸ್ ಸರ್ಕಾರ ಯಾವುದೇ ಕೆಲಸ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಪರಿವರ್ತನಾ ರ್ಯಾಲಿ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಅದನ್ನು ಬಿಡಲಿ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಸವಕಲ್ಯಾಣದಲ್ಲಿ ಬುಧವಾರ ನಡೆದ ಸರ್ಕಾರದ ಸಾಧನಾ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಒಳ್ಳೆಯ ದಿನಗಳು ಕೇವಲ ಮನ ಕೀ ಬಾತ್‌ನಲ್ಲಿವೆ. ಆದರೆ, ಸಿದ್ದರಾಮಯ್ಯ ಸರ್ಕಾರದ ಒಳ್ಳೆಯ ದಿನಗಳು ನಾವು ಮಾಡುವ ಕೆಲಸದಲ್ಲಿವೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತ ಬಂದಿದ್ದೇವೆ ಎಂದರು.
ಹಿಂದಿನ ಸರ್ಕಾರದ ಅವ ಧಿಯಲ್ಲಿ ದುರಾಡಳಿತ, ಅಕ್ರಮಕ್ಕೆ ಸಾಕ್ಷಿಯಾಗಿದ್ದ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಪರಿವರ್ತನೆ, ಬದಲಾವಣೆ ಕಾಣುತ್ತಿದ್ದೇವೆ. ದಕ್ಷ, ಹಗರಣ ಮುಕ್ತ ಸರ್ಕಾರ ನಮ್ಮದಾಗಿದೆ.
– ಈಶ್ವರ ಖಂಡ್ರೆ, ಬೀದರ್ ಜಿಲ್ಲಾ ಉಸ್ತುವಾರಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.