ರೈಲ್ವೆ ಇಲಾಖೆಯಿಂದ ಶಿಷ್ಟಾಚಾರ ಉಲ್ಲಂಘನೆ
Team Udayavani, Oct 30, 2017, 10:36 AM IST
ಬೀದರ: ಬೀದರ-ಕಲಬುರಗಿ ಹೊಸ ರೈಲು ಮಾರ್ಗ ಲೋಕಾರ್ಪಣೆ ಸಮಾರಂಭ ಕುರಿತಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ಸಮಯದಲ್ಲಿ ಮಾಹಿತಿ ನೀಡದೇ ಸಿಕಿಂದ್ರಾಬಾದ್ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕರು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ಆರೋಪಿಸಿದರು.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರವೂ ಶೇ.50ರಷ್ಟು ಅನುದಾನ ಒದಗಿಸಿದ್ದಲ್ಲದೆ ಇತರೆ ರೈಲ್ವೆ ಯೋಜನೆಗಳಲ್ಲಿ ಸಂಪೂರ್ಣ ಭೂಸ್ವಾಧೀನ ಹಣವನ್ನು ರಾಜ್ಯ ಸರ್ಕಾರವೇ ಭರಿಸಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಕೊನೆ ಘಳಿಗೆಯಲ್ಲಿ ಆಮಂತ್ರಣ ನೀಡಿ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದರು. ರೈಲ್ವೆ ಇಲಾಖೆಯ ಪ್ರಧಾನ ವ್ಯವಸ್ಥಾಪಕರು ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗಾಗಲಿ ಸಚಿವ ಸಂಪುಟದ ಸಹೋದ್ಯೋಗಿಗಳಿಗಾಗಲಿ ಆಮಂತ್ರಣ ಕುರಿತಂತೆ ಮಾಹಿತಿ ನೀಡದೇ ತಪ್ಪೆಸಗಿದ್ದಾರೆ. ಕೊನೆ ಕ್ಷಣದಲ್ಲಿ ಆಮಂತ್ರಣ ಪತ್ರ ನೀಡಿ ಕಾರ್ಯಕ್ರಮಕ್ಕೆ ಬನ್ನಿ ಎಂದರೆ ಹೇಗೆ. ಅಷ್ಟಕ್ಕೂ ಪ್ರಧಾನ ಮಂತ್ರಿಗಳ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಸರ್ಕಾರದ ಕರ್ತವ್ಯವಾಗಿದ್ದರಿಂದ ನಾವು ಅವರನ್ನು ಸ್ವಾಗತಿಸಿ ಅಭಿನಂದಿಸುತ್ತೇವೆ ಎಂದರು.
ಸುಮಾರು 386 ಕೋಟಿ ರೂ. ಅಂದಾಜು ವೆಚ್ಚದ ಈ ರೈಲ್ವೆ ಮಾರ್ಗಕ್ಕೆ 2001-02ರಲ್ಲಿಯೇ ರೈಲ್ವೆ ಇಲಾಖೆ ತನ್ನ ವೆಚ್ಚದಲ್ಲಿ ನಿರ್ಮಿಸುವ ಬಗ್ಗೆ ಅನುಮತಿ ನೀಡಿತ್ತು. ಈ ಯೋಜನೆಯ ಮಹತ್ವ ಮನಗಂಡ ರಾಜ್ಯ ಸರ್ಕಾರ ಈ ಯೋಜನೆಯ ತ್ವರಿತ ಅನುಷ್ಟಾನಕ್ಕಾಗಿ ಒಟ್ಟು ಯೋಜನಾ ವೆಚ್ಚದಲ್ಲಿ ಶೇ.50ರಷ್ಟು ವೆಚ್ಚ ಭರಿಸಲು ಒಪ್ಪಿಕೊಂಡು ಅದರಂತೆ ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರವು ಭರಿಸಬೇಕಾದ 771.205 ಕೋಟಿ ರೂ.ಗಳ ಪೈಕಿ ಈಗಾಗಲೇ 589.01 ಕೋಟಿ ರೂ. ಯೋಜನಾ ಮೊತ್ತವನ್ನು ಬಿಡುಗಡೆ ಮಾಡಿದ್ದು, ಬೀದರ ಕಲಬುರಗಿ ರೈಲು ಮಾರ್ಗಕ್ಕೆ ತನ್ನದೆಯಾದ ಕೊಡುಗೆ ನೀಡಿದೆ. ಹೀಗಾಗಿ ರೈಲ್ವೆ ಇಲಾಖೆ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಿತ್ತು. ಇಲ್ಲಿ ಹಾಗಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.