ರೈತರ ಬದುಕು ನುಂಗಿದ ಕಾರಂಜಾ ಹಿನ್ನೀರು; 2 ಸಾವಿರ ಎಕರೆ ನೀರು ಪಾಲು
ಮರಖಲ, ಬೋತಗಿ, ಮರಕುಂದಾ ಮತ್ತು ಮೊಗದಾಳ್ ಗ್ರಾಮದ ರೈತರು ಸಂಕಷ್ಟಕ್ಕೀಡಾಗಿದ್ದಾರೆ
Team Udayavani, Jan 25, 2021, 4:05 PM IST
ಬೀದರ: ಹುಲುಸಾಗಿ ಕಡಲೆ, ಕಬ್ಬು ಬೆಳೆದು ಕೈತುಂಬ ದುಡ್ಡು ಕಾಣುತ್ತಿದ್ದ ನೂರಾರು ರೈತರು ಹಿನ್ನೀರಿನ ಸಂಕಟದಿಂದ ದಿಗಿಲುಗೊಂಡಿದ್ದಾರೆ. ವರ್ಷ ಪೂರ್ತಿ ಹೊಟ್ಟೆ ತುಂಬಿಸುತ್ತಿದ್ದ ಫಲವತ್ತಾದ ಭೂಮಿ ಹಿನ್ನೀರಿನಲ್ಲಿ ಮುಳುಗಿ ಅನ್ನದಾತರನ್ನು ಅಕ್ಷರಶಃ ಸಂತ್ರಸ್ತರನ್ನಾಗಿಸಿದೆ. ಇದು ನೆಲ ನುಂಗಿ-ರೈತರ ಬದುಕು ಕಿತ್ತುಕೊಂಡ ಕಾರಂಜಾ ಜಲಾಶಯದ ಹಿನ್ನೀರಿನ ಕರುಣಾಜನಕ ಕಥೆ.
ಜಿಲ್ಲೆಯ ರೈತರಿಗೆ ಜೀವನಾಡಿ ಆಗಿರುವ “ಕಾರಂಜಾ’ ಈ ಭಾಗದ ಸಣ್ಣ ಮತ್ತು ಮಧ್ಯಮ ವರ್ಗದ ರೈತ ಕುಟುಂಬಗಳನ್ನು ಮಾತ್ರ ಕಣ್ಣೀರಲ್ಲೇ ಕೈತೊಳೆಯುವಂತೆ ಮಾಡಿದೆ. ಜಲಾಶಯದ ಹಿನ್ನೀರಿನಿಂದ 10ಕ್ಕೂ ಹೆಚ್ಚು ಗ್ರಾಮಗಳ ಸ್ವಾಧೀನವಲ್ಲದ ಎರಡು ಸಾವಿರಕ್ಕೂ ಅ ಧಿಕ ಜಮೀನು ನೀರು ಪಾಲಾಗಿದ್ದು, ಕೃಷಿಕರ ನೆಮ್ಮದಿಯನ್ನೇ ಕಸಿದುಕೊಂಡಿದೆ. ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸ್ವಂತ ಜಮೀನಿನಲ್ಲಿ ಉಳುಮೆ ಮಾಡಿ ಬದುಕು ಕಟ್ಟಿಕೊಂಡಿದ್ದ ರೈತರು ಈಗ ಬೇರೆಡೆ ಕೂಲಿ ಮಾಡಬೇಕಾದ ಸ್ಥಿತಿ ಇದೆ.
ಕೆಲ ತಿಂಗಳ ಹಿಂದೆ ಸುರಿದ ಭಾರೀ ಮಳೆಯಿಂದ ಕಾರಂಜಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ನಾಲ್ಕು ವರ್ಷಗಳ ಬಳಿಕ ಕಾರಂಜಾ ಒಡಲು ಮೈದುಂಬಿಕೊಂಡಿದ್ದರಿಂದ ಮೊದಲು ಸಂತಸಪಟ್ಟಿದ್ದ ರೈತರು ಇದೀಗ ದಿಕ್ಕು ತೋಚದವರಂತಾಗಿದ್ದಾರೆ. ಜಲಾಶಯದ ನೀರು ಹೊರಬಿಟ್ಟರೂ ಒಳಹರಿವು
ಜಾಸ್ತಿಯಾಗಿರುವುದರಿಂದ ನೀರಿನ ಸಂಗ್ರಹ 7.56 ಟಿಎಂಸಿ ಮಟ್ಟಕ್ಕೇರಿದ್ದು, (ಆ.24ಕ್ಕೆ (6.73) ಲೈವ್ ಗ್ರಹ ಇದೆ) ಇದರಿಂದ ನೂರಾರು ರೈತರ ಜಮೀನಿಗೆ
ನೀರು ನುಗ್ಗಿ ಸಾಕಷ್ಟು ಬೆಳೆ ಹಾನಿಯಾಗಿದೆ.
ಬೀದರ ದಕ್ಷಿಣ ಮತ್ತು ಹುಮನಾಬಾದ ಕ್ಷೇತ್ರದ ಬಗದಲ್, ಬಾಪುರ್, ನಿಡವಂಚಾ, ಬಂಬುಳಗಿ, ರೇಕುಳಗಿ, ಹೊಚಕನಳ್ಳಿ, ಖೇಣಿ ರಂಜೋಳ, ಹಿಲಾಲಪುರ, ಮರಖಲ, ಬೋತಗಿ, ಮರಕುಂದಾ ಮತ್ತು ಮೊಗದಾಳ್ ಗ್ರಾಮದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಜಮೀನಿನಲ್ಲಿ ಬೆಳೆದಿದ್ದ ಸೊಯಾ, ಹೆಸರು ನೀರು ಪಾಲಾಗಿದ್ದರೆ, ಈಗ ಕಡಲೆ, ಕಬ್ಬು ಮತ್ತು ತೋಟಗಾರಿಕೆ ಬೆಳೆ ನೀರಿನಿಂದ ಜಲಾವೃತವಾಗಿ ಕೊಳೆತು ಹೋಗುತ್ತಿವೆ. ಕೆಲವೆಡೆ ನೀರಿನಿಂದ ದಾರಿ ಇಲ್ಲದೇ
ಕಟಾವಿಗೆ ಬಂದ ಕಬ್ಬು ಕಾರ್ಖಾನೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಅತಿವೃಷ್ಟಿ, ಹಿನ್ನೀರಿನಿಂದಾಗಿ ಅಂದಾಜು 100 ಕೋಟಿ ರೂ.ಗಳಿಗೂ ಅಧಿಕ ಹಾನಿ ಸಂಭವಿಸಿದೆ. ಆದರೆ, ಬೆಳೆ ಪರಿಹಾರ ಮಾತ್ರ ರೈತರ ಕೈಸೇರಿಲ್ಲ. ಕೆಲವರಿಗೆ ಬಂದರೂ ಮೂರ್‍ನಾಲ್ಕು ಸಾವಿರ ರೂ. ಬಂದಿದೆ.
ಇನ್ನು ಹೆಚ್ಚುವರಿ ಜಮೀನಿನಲ್ಲಿ ಹಿನ್ನೀರು ಆವರಿಸಿ ಸಂಕಷ್ಟ ಎದುರಿಸುತ್ತಿರುವ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. ಆಡಳಿತ ಕೂಡಲೇ ಎಚ್ಚೆತ್ತುಕೊಂಡು ಸಂತ್ರಸ್ತ ರೈತರ ಸಂಕಷ್ಟಕ್ಕೆ ನೆರವಾಗಬೇಕಿದೆ.
ಸಂತ್ರಸ್ತರ ಪರಿಹಾರ ಕಗ್ಗಂಟು ಜಿಲ್ಲೆಯ ಏಕೈಕ ಜಲಾಶಯ ಕಾರಂಜಾಗೆ ಜಮೀನು ನೀಡಿದ ಸಂತ್ರಸ್ತ ರೈತರಿಗೆ ವೈಜ್ಞಾನಿಕ ಪರಿಹಾರ ವಿಷಯ ಕಗ್ಗಂಟಾಗಿಯೇ ಉಳಿದಿದ್ದು, ಎಲ್ಲ ಸರ್ಕಾರಗಳು ಕೇವಲ ಭರವಸೆಯನ್ನೇ ನೀಡುತ್ತ ಬಂದಿವೆ. 1981-82ರಲ್ಲಿ ಕೇವಲ ಮೂರು ಸಾವಿರ ರೂ.ಗೆ ಎಕರೆಯಂತೆ 15 ಸಾವಿರ ಎಕರೆ ಭೂಮಿ ಸ್ವಾ ಧೀನಪಡಿಸಿಕೊಂಡಿದ್ದ ಸರ್ಕಾರ ನಂತರ ಕೋರ್ಟ್ ಮೆಟ್ಟಿಲೇರಿದ ಕೆಲ ರೈತರಿಗೆ ಎಕರೆಗೆ 7-8 ಲಕ್ಷ ರೂ. ಪರಿಹಾರ ಒದಗಿಸಿದೆ. ಇನ್ನುಳಿದ ರೈತರ ಭೂಮಿಗೂ ಅದೇ ಮಾದರಿ ಪರಿಹಾರ ನೀಡಬೇಕೆಂಬ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ನಂತರ 2015ರಲ್ಲಿ ಹಿನ್ನೀರಿಗಾಗಿ 1200 ಎಕರೆ ಭೂಮಿ ಸ್ವಾ ಧೀನಪಡಿಸಿಕೊಂಡ ಸರ್ಕಾರ 3 ರಿಂದ 12 ಲಕ್ಷ ರೂ. ಪರಿಹಾರ ಕೊಟ್ಟು ರೈತರಲ್ಲೇ ತಾರತಮ್ಯ ಮಾಡಿದೆ. ಈ ಒತ್ತುವರಿ ಜಮೀನಿಗೂ ಎಕರೆಗೆ 25 ಲಕ್ಷ ರೂ. ಪರಿಹಾರ ನೀಡಬೇಕೆಂಬ ಒತ್ತಾಯ ಇದೆ.
ಅನುಭವ ಮಂಟಪಕ್ಕೆ ನೂರಾರು ಕೋಟಿ ರೂ. ನೀಡುವ ಸರ್ಕಾರಕ್ಕೆ ರೈತರ ಗೋಳು ಕೇಳುತ್ತಿಲ್ಲ. ಕಾರಂಜಾ ಹಿನ್ನೀರಿನಿಂದಾಗಿ ಸ್ವಾಧೀನವಲ್ಲದ ಎರಡು ಸಾವಿರ ಎಕರೆ ಜಮೀನು ಸರ್ಕಾರ ಸ್ವಾಧೀನಪಡಿಸಿಕೊಂಡು ಎಕರೆಗೆ 25 ರಿಂದ 30 ಲಕ್ಷ ರೂ. ಪರಿಹಾರ ನೀಡಲಿ, ಇಲ್ಲವೇ ಹಿನ್ನೀರು ನಿಲ್ಲದಂತೆ ವೈಜ್ಞಾನಿಕ ಕ್ರಮ ಕೈಗೊಳ್ಳಲಿ. ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಜ.25ರಿಂದ ಡಿಸಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಯಲಿದೆ.
ಚಂದ್ರಶೇಖರ ಪಾಟೀಲ ಹೊಚಕನಳ್ಳಿ,
ಅಧ್ಯಕ್ಷರು, ಕಾರಂಜಾ ಮುಳುಗಡೆ
ಸಂತ್ರಸ್ತರ ಹಿತರಕ್ಷಣಾ ಸಮಿತಿ
*ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.