ಅನುದಾನಕ್ಕೆ ಮಾತು ತಪ್ಪಿದ ಸರ್ಕಾರ
Team Udayavani, Dec 23, 2018, 1:08 PM IST
ಬೀದರ: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ 20 ಕೋಟಿ ಸಾಲದ ಹಣ ಕೊಡಿಸುವ ಭರವಸೆ ನೀಡಿದ ಸರ್ಕಾರ ಇದೀಗ ಒಂದು ಕೋಟಿ ಮಾತ್ರ ಅನುದಾನ ಬಿಡುಗಡೆ ಮಾಡಿದ್ದು, ಸರ್ಕಾರ ಕೊಟ್ಟ ಮಾತು ತಪ್ಪಿತೇ ಎಂಬ ಅನುಮಾನ ರೈತರನ್ನು
ಕಾಡುತ್ತಿದೆ.
ಕಾರ್ಖಾನೆಗೆ 20 ಕೋಟಿ ಅನುದಾನದ ಪೈಕಿ ಕೇವಲ ಒಂದು ಕೋಟಿ ಅನುದಾನ ನೀಡುವ ನಿರೀಕ್ಷೆ ಇದೆ ಎಂದು ಡಿ.18ರಂದು ಉದಯವಾಣಿಯಲ್ಲಿ ಸುದ್ದಿ ಪ್ರಕಟವಾಗಿತ್ತು. ಅದರಂತೆ ಇದೀಗ ಕಾರ್ಖಾನೆಗೆ ಕೇವಲ ಒಂದು ಕೋಟಿ ಮಾತ್ರ ಅನುದಾನ ಬಿಡುಗಡೆಯಾಗಿದ್ದು, ಕಾರ್ಖಾನೆ
ಸುಸೂತ್ರವಾಗಿ ನಡೆಯುವುದು ಬಹುತೇಕ ಅನುಮಾನ ಎನ್ನಲಾಗಿದೆ.
ಜಿಲ್ಲೆಯ ರೈತರ ಜೀವನಾಡಿ ಎಂದೇ ಕರೆಯಲಾಗುವ ಬೀದರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಆರ್ಥಿಕ ಸಂಕಷ್ಟದಿಂದ ಬಾಗಿಲು ಮುಚ್ಚಲಾಗಿತ್ತು. ಜಿಲ್ಲೆಗೆ ಸಹಕಾರ ಇಲಾಖೆ ಸಚಿವರು ಇರುವ ಕಾರಣ ಎಲ್ಲ ಕಾರ್ಖಾನೆಗಳಿಗೆ ಮುನ್ನ ಬಿಎಸ್‌ಎಸ್‌ಕೆ ಪ್ರಾರಂಭಗೊಳ್ಳುತ್ತದೆ ಎಂದು ರೈತರು ನೀರಿಕ್ಷಿಸಿದ್ದರು. ಕಾರ್ಖಾನೆಗೆ 20 ಕೋಟಿ ಅನುದಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಜಿಲ್ಲೆಯ ಇಬ್ಬರು ಸಚಿವರು ಕೂಡ ನೀಡಿದ್ದರು.
ಸದ್ಯ ಜಿಲ್ಲೆಯ ಎಲ್ಲ ಕಾರ್ಖಾನೆಗಳು ಕಬ್ಬು ನುರಿಸಲು ಪ್ರಾರಂಭಿಸಿ ತಿಂಗಳು ಕಳೆದಿವೆ. ಆದರೆ, ಬಿಎಸ್‌ಎಸ್‌ಕೆಗೆ 20 ಕೋಟಿ ಸಾಲದ ಹಣ ಬಂದಿಲ್ಲ. ಬದಲಾಗಿ ಕಾರ್ಖಾನೆ ಪ್ರಾರಂಭಕ್ಕೆ ಒಂದು ಕೋಟಿ ಅನುದಾನ ನೀಡಿ ಕೈ ತೊಳೆದುಕೊಳ್ಳುತ್ತಾ ಸರ್ಕಾರ ಎಂಬ ಅನುಮಾನಗಳು ರೈತರನ್ನು ಕಾಡುತ್ತಿದೆ. ಸದ್ಯ ಗ್ರಾಮೀಣ ಭಾಗದ ಕಬ್ಬು ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಬೆಲೆ ಎಷ್ಟಾದರೂ ನೀಡಲಿ, ಮೊದಲು ಹೊಲದಲ್ಲಿನ ಕಬ್ಬು ಸಾಗಿಸಿ ಎಂದು ಕಾರ್ಖಾನೆಗಳ ಕಡೆಗೆ ರೈತರು ಮುಖ ಮಾಡಿದ್ದಾರೆ.
ಮುಂದಿನ ಬಾಗಿಲಿನಿಂದ ಆಡಳಿತ ಮಂಡಳಿಗೆ ಮನೆಗೆ ಕಳುಹಿಸಲಾಗಿತ್ತು. ಇದೀಗ ಕಾರ್ಖಾನೆಗೆ 20 ಕೋಟಿ ಅನುದಾನ ಬರುತ್ತಿದೆ ಎಂದು ಹಿಂದಿನ ಬಾಗಿಲಿನಿಂದ ಮತ್ತೆ ಕಾರ್ಖಾನೆಗೆ ಬಂದಿದ್ದಾರೆ. ಸರ್ಕಾರ ಯಾವ ಆಧಾರದಲ್ಲಿ ಒಂದು ಕೋಟಿ ಅನುದಾನ ನೀಡಿದೆ ಎಂಬುದು ಗೊತ್ತಾಗಿಲ್ಲ. 20 ಕೋಟಿ ಒಂದೇ ಬಾರಿಗೆ ಅನುದಾನ ನೀಡಿದರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯ ನಡೆಯುತ್ತಿತ್ತು. ಒಂದು ಕೋಟಿಯಲ್ಲಿ ಕಾರ್ಖಾನೆಯ ಒಂದು ಸಣ್ಣಪುಟ್ಟ ಕೆಲಸಗಳನ್ನು ಕೂಡ ಮಾಡಲು ಸಾಧ್ಯವಿಲ್ಲ. ಸಹಕಾರ ಸಚಿವರು ಜಿಲ್ಲೆಗೆ ಮುಖ್ಯಮಂತ್ರಿಗಳಿದ್ದಂತೆ. ಅಲ್ಲದೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಪ್ತರು ಆಗಿದ್ದಾರೆ. ಜಿಲ್ಲೆಯ ಎಲ್ಲ ರಾಜಕಾರಣಿಗಳು ಆತ್ಮಾವಲೋಕ ಮಾಡಿಕೊಳ್ಳಬೇಕು. ಅವರು ಮನಸ್ಸು ಮಾಡಿದರೆ ಕಾರ್ಖಾನೆ
ಪ್ರಾರಂಭಗೊಂಡು ಕಬ್ಬು ನುರಿಸುವ ಕಾರ್ಯ ಆರಂಭವಾಗುತ್ತಿತ್ತು.
ಚುನಾಯಿತ ರಾಜಕಾರಣಿಗಳು ಕಾರ್ಖಾನೆ ಮುಚ್ಚುವ ಹುನ್ನಾರು ಮಾಡುತ್ತಿದ್ದಾರೆ. ಎಲ್ಲ ಶಾಸಕರಿಗೆ ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಬೆಳಗಾರರ ಸಮಸ್ಯೆ ಗೊತ್ತಿದೆ. ಆದರೂ ಬಿಎಸ್ ಎಸ್‌ಕೆ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ರೈತರ ನೋವಿಗೆ ರಾಜಕಾರಣಿಗಳೆ ಕಾರಣರಾಗಿದ್ದಾರೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದ್ದಾರೆ.
ಕಳೆದ ಸಾಲಿನಲ್ಲಿ ಕೂಡ ಸರ್ಕಾರ ಕಾರ್ಖಾನೆ ಮುಚ್ಚಿದ ಮೇಲೆ ಸಾಲದ ಹಣ ಬಿಡುಗಡೆ ಮಾಡಿತ್ತು. ಇದೀಗ ಅದೇ ಸ್ಥಿತಿ ಎದುರಾಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದ್ದು, ಒಂದು ಕೋಟಿ ವೆಚ್ಚದಲ್ಲಿ ಕಾರ್ಖಾನೆಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಕಷ್ಟ ಎಂದು ಕಾರ್ಖಾನೆ ಸಿಬ್ಬಂದಿ ತಿಳಿಸಿದ್ದಾರೆ. ಬಾಕಿ ಸಂಬಳ ಪಾವತಿ ಮಾಡುವಂತೆ ಕೂಡ ಸಿಬ್ಬಂದಿ ಅಧಿಕಾರಿಗಳಿಗೆ ಕೇಳುತ್ತಿದ್ದಾರೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಹಾಗೂ ಸಚಿವ ರಾಜಶೇಖರ ಪಾಟೀಲ ಅವರನ್ನು ಕೂಡ ಭೇಟಿ ಮಾಡಿ ಹಲವು ಬಾರಿ ಕಾರ್ಮಿಕ ಮುಖಂಡರು ಸಂಬಳ ನೀಡುವಂತೆ, ಕಾರ್ಖಾನೆ ಪ್ರಾರಂಭಿಸುವಂತೆ ಮನವಿ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಪ್ರಸಕ್ತ ವರ್ಷ ಕಾರ್ಖಾನೆ ಶುರು ಮಾಡಲು ಸರ್ಕಾರ 20 ಕೋಟಿ ಅನುದಾನ ಒದಗಿಸುವುದಾಗಿ ಒಪ್ಪಿಗೆ ಸೂಚಿಸಿದೆ. ಇದೀಗ ಡಿ.21ರಂದು ಕಾರ್ಖಾನೆಗೆ 1 ಕೋಟಿ ಅನುದಾನ ಜಮಾ ಆಗಿದೆ. ಕಾರ್ಖಾನೆ ಪ್ರಾರಂಭಿಸುವ ಕೆಲಸಗಳು ನಡೆಯುತ್ತಿದ್ದು, ಸೂಕ್ತವಾಗಿ ಹಣ ಖರ್ಚು ಮಾಡಿದಂತೆ ಇನ್ನುಳಿದ ಹಣ ಕೂಡ ಕಾರ್ಖಾನೆ ಖಾತೆಗೆ ಜಮಾಗೊಳ್ಳುತ್ತದೆ. ಕೂಡಲೇ ಕಬ್ಬು ನುರಿಸುವ ಕಾರ್ಯ ಆರಂಭವಾಗಲಿದೆ.
ಕಲ್ಲಪ್ಪ , ಬಿಎಸ್‌ಎಸ್‌ಕೆ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕ
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.