ಪ್ರಶೆಪತ್ರಿಕೆ ಪೂರೈಕೆ ವಿಳಂಬ ಗುಲ್ಬರ್ಗ ವಿವಿ ಅವಾಂತರ
Team Udayavani, Jun 20, 2018, 3:17 PM IST
ರಾಯಚೂರು: ಸ್ನಾತಕೋತ್ತರ ಪದವಿ ಪರೀಕ್ಷೆಗಾಗಿ ಗುಲ್ಬರ್ಗ ವಿಶ್ವವಿದ್ಯಾಲಯವು ನಿಗದಿತ ವಿಷಯಗಳ ಪ್ರಶ್ನೆಪತ್ರಿಕೆಗಳನ್ನು ನಿಗದಿತ ವೇಳೆಗೆ ತಲುಪಿಸದ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಜಿಲ್ಲೆಯ ಮೂರು ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಒಂದು ಗಂಟೆ ತಡವಾಗಿ ಪರೀಕ್ಷೆ ಆರಂಭಗೊಂಡಿತು.
ಗುಲ್ಬರ್ಗ ವಿಶ್ವವಿದ್ಯಾಲಯದ ಪರೀಕ್ಷಾ ಎಡವಟ್ಟುಗಳ ಸರಣಿ ಮುಂದುವರಿದಿದೆ. ಕಳೆದ ತಿಂಗಳು ಪದವಿ ಪರೀಕ್ಷೆಗಳಲ್ಲಿ ಮೇಲಿಂದ ಮೇಲೆ ಎಡವಟ್ಟುಗಳನ್ನು ಮಾಡಿದ್ದ ವಿವಿ ಇದೀಗ ಸ್ನಾತಕೋತ್ತರ ಪರೀಕ್ಷೆ ಯಲ್ಲಿಯೂ ಅದೇ ತಪ್ಪುಗಳನ್ನು ಪುನರಾವರ್ತನೆ ಮಾಡಿದ್ದು, ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಗಿದೆ.
ಜಿಲ್ಲೆಯಲ್ಲಿರುವ ಮೂರು ಸ್ನಾತಕೋತ್ತರ ಕಾಲೇಜುಗಳಲ್ಲಿ ಮಂಗಳವಾರ ನಡೆದ ವಿವಿಧ ವಿಷಯಗಳ ಪರೀಕ್ಷೆಗಳು ಒಂದು ತಾಸು ತಡವಾಗಿ ಆರಂಭಗೊಂಡಿತು. ನಿಗದಿತ ಸಮಯ 10 ಗಂಟೆಗೆ ಪರೀಕ್ಷಾ ಕೊಠಡಿ ಪ್ರವೇಶಿಸಿದ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಬಾರದ ಕಾರಣಕ್ಕೆ ಉತ್ತರ ಪತ್ರಿಕೆಯನ್ನು ಹಿಡಿದು ಒಂದು ಗಂಟೆ ಹಾಗೇ
ಕುಳಿತಿರುವುದು ಕಂಡುಬಂದಿತು.
ವಿವಿ ಹೊಸ ನಿಯಮದಂತೆ ಸ್ನಾತಕೋತ್ತರ ಪದವಿ ಮಾಡುವ ವಿದ್ಯಾರ್ಥಿಗಳು ಅನ್ಯ ವಿಭಾಗದ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆಯಬೇಕು. ಅದ್ದರಿಂದ ಎಂ.ಎ., ಎಂ.ಕಾಂ, ಎಂ.ಎಸ್ಸಿ. ವಿಭಾಗದವರು ಐಚ್ಛಿಕ ವಿಷಯವನ್ನು ಆಯ್ಕೆ ಮಾಡಿಕೊಂಡಂತೆ ಪ್ರಶ್ನೆ ಪತ್ರಿಕೆಗಳು ಪರೀಕ್ಷಾ ಕೇಂದ್ರಕ್ಕೆ ಬಾರದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿತ್ತು.
ಎಂ.ಎ, ಎಂ.ಕಾಂನ ಎರಡನೇ ಸೆಮಿಸ್ಟರ್‌ಗೆ ಪರೀಕ್ಷೆಗಳು ನಡೆದವು. ಎಂ.ಎ. ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು
ಇತಿಹಾಸವನ್ನು, ಎಂ.ಕಾಂ.ನವರು ಸಾರ್ವಜನಿಕ ಸಂಪರ್ಕ ವಿಷಯಕ್ಕೆ ಪರೀಕ್ಷೆ ಬರೆಯಬೇಕಿತ್ತು. ಆದರೆ ಪ್ರಶ್ನೆ ಪತ್ರಿಕೆಗಳ ಬಂಡಲ್‌ನಲ್ಲಿ ಬೇರೆ ಬಂದಿದ್ದರಿಂದ ಕೂಡಲೇ ವಿವಿ ಮೇಲ್ ಮೂಲಕ ಪ್ರಶ್ನೆ ಪತ್ರಿಕೆ ಕಳುಹಿಸಿಕೊಟ್ಟಿದ್ದು, ಅದನ್ನು ನಕಲು ಮಾಡಿ ವಿದ್ಯಾರ್ಥಿಗಳಿಗೆ ವಿತರಿಸುವ ವೇಳೆಗೆ ಒಂದು ತಾಸು ತಡವಾಗಿತ್ತು. ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಪರೀಕ್ಷೆ ಆರಂಭಗೊಂಡಿದ್ದರಿಂದ ವಿದ್ಯಾರ್ಥಿಗಳಿಗೆ ಒಂದು ತಾಸು ಹೆಚ್ಚುವರಿ ಸಮಯ ನೀಡಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.