ವಸತಿ ಯೋಜನೆಗಳಿಗೆ ಅನುದಾನ ನಿಲ್ಲಿಸಿದ ಸರ್ಕಾರ: ಕಾಂಗ್ರೆಸ್ ಪ್ರತಿಭಟನೆ
Team Udayavani, Jan 12, 2020, 4:06 PM IST
ಬೀದರ್: ಕಾಂಗ್ರೆಸ್‌ಗೆ ಕ್ರೆಡಿಟ್ ಹೋಗುತ್ತದೆಂಬ ಉದ್ದೇಶದಿಂದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಹಿಂದೆ ಮಂಜೂರಾಗಿರುವ ವಸತಿ ಯೋಜನೆ ಮನೆಗಳ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿ, ಹಣ ಬಿಡುಗಡೆಯೂ ನಿಲ್ಲಿಸಿದೆ. ಈ ವಿಷಯವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 16.38 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಇದ್ದು, 13 ಲಕ್ಷ ಮನೆಗಳಿಗೆ ಮಂಜೂರಾತಿ ನೀಡಲಾಗಿದೆ. ಅಕ್ರಮದ ಹೆಸರಿನಲ್ಲಿ 7 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿ, ಹಣ ಬಿಡುಗಡೆಯನ್ನೂ ನಿಲ್ಲಿಸಲಾಗಿದೆ. ಆ ಮೂಲಕ ರದ್ದುಗೊಳಿಸಿದ ಮನೆಗಳಿಗೆ ಮತ್ತೊಮ್ಮೆ ಮಂಜೂರು ಮಾಡಲು ಸರ್ಕಾರ ಮುಂದಾಗಿದೆ. ಯೋಗ್ಯ ಮನೆಗಳಿಗೂ ಹಣ ಬಿಡುಗಡೆಗೆ ವಿಳಂಬ ಮಾಡಲಾಗುತ್ತಿದೆ. ಸಾಲ ಮಾಡಿ ಮನೆ ಕಟ್ಟಿಸಿಕೊಂಡಿರುವ ಫಲಾನುಭವಿಗಳು ಆತ್ಮಹತ್ಯೆ ಮಾಡಿಕೊಳ್ಳುವಂಥ ಪರಿಸ್ಥಿತಿ ತಂದೊಡ್ಡಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದ ಅಕ್ರಮ, ಸುಳ್ಳುಗಳನ್ನು ಬಯಲಿಗೆ ಎಳೆಯುತ್ತೇನೆಂಬ ಕಾರಣಕ್ಕೆ ನನ್ನ ಕ್ಷೇತ್ರ ಭಾಲ್ಕಿ ಮೇಲೆ ಟಾರ್ಗೆಟ್ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ವಸತಿ ಯೋಜನೆ ಫಲಾನುಭವಿಗಳಿಗೆ ಬೋಗಸ್ ಹಕ್ಕು ಪತ್ರ ನೀಡಲಾಗಿದೆ ಎಂದು ತನಿಖೆಗೆ ಸೂಚಿಸಲಾಗಿದೆ. ತನಿಖೆ ಮಾಡುವುದು ತಪ್ಪಲ್ಲ, ಇದಕ್ಕೆ ಹೆದರುವುದಿಲ್ಲ. ತನಿಖೆ ನಡೆಸುವುದಾದರೇ ಇಡೀ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ನಡೆಸಲಿ ಎಂದು ಹೇಳಿದರು.
ನನ್ನ ಕ್ಷೇತ್ರದಲ್ಲಿ 5 ವರ್ಷದಲ್ಲಿ 23,900 ಮನೆಗಳಿಗೆ ಮಂಜೂರಾತಿ ಸಿಕ್ಕಿದೆ. ಫಲಾನುಭವಿಗಳನ್ನು ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ ಹೊರತು ಶಾಸಕರಲ್ಲ, ಮಂಜೂರಾತಿ ಆದೇಶವನ್ನು ರಾಜೀವಗಾಂಧಿ ವಸತಿ ನಿಗಮ ನೀಡಿದೆ. ಗ್ರಾ.ಪಂ ಮಟ್ಟದಲ್ಲಿ ಫಲಾನುಭವಿಗಳಿಂದ ಹಣದ ದುರುಪಯೋಗ ಆಗದಂತೆ ಜಾಗೃತಿ ಮೂಡಿಸಲು ನನ್ನ ಭಾವಚಿತ್ರ ಇರುವ ಕರಪತ್ರ ಹೊರಡಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.