2 ಸಾವಿರ ರೈತರಿಗೆ ಕಿಸಾನ್ ಸಮ್ಮಾನ್ ಲಾಭ
Team Udayavani, Mar 8, 2019, 10:30 AM IST
ಬೀದರ: ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್‌ನಲ್ಲಿ ರೈತರಿಗೆ ವಾರ್ಷಿಕ ರೂ. 6,000 ಸಹಾಯ ಧನ ನೀಡುವುದಾಗಿ ಘೋಷಿಣೆ ಮಾಡಿ ಫೆ.24ರಂದು ಮೊದಲ ಹಂತದ ಯೋಜನೆಗೆ ಚಾಲನೆ ನೀಡಿದ್ದು, ಈ ಪೈಕಿ ಜಿಲ್ಲೆಯ ಸುಮಾರು ಎರಡು ಸಾವಿರ ರೈತರು ಕೂಡ ಲಾಭ ಪಡೆದಿದ್ದಾರೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ ಸುಮಾರು 1,07,584 ರೈತರು ಲಾಭ ಪಡೆಯಲು ಅರ್ಹರಿದ್ದಾರೆ. ಈ ಪೈಕಿ ಈಗಾಗಲೇ 36 ಸಾವಿರ ರೈತರ ಅರ್ಜಿಗಳನ್ನು ಆನ್ ಲೈನ್‌ಗೆ ಅಳವಡಿಸಲಾಗಿದೆ. ಇನ್ನೂ 15ರಿಂದ 20 ಸಾವಿರ ಅರ್ಜಿಗಳು ಆನ್‌ಲೈನ್‌ಲ್ಲಿ ಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ, ಮೊದಲ ಹಂತದ ಯೋಜನೆಯಲ್ಲಿ ಜಿಲ್ಲೆಯ ಎರಡು ಸಾವಿರ ರೈತರ ಖಾತೆಗೆ ತಲಾ ಎರಡು ಸಾವಿರ ರೂ. ಜಮಾಗೊಂಡಿದೆ ಎಂದು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅರ್ಹ ಫಲಾನುಭವಿಗಳ ರಾಜ್ಯ ಸರ್ಕಾರದ ಪಟ್ಟಿ ಕೇಂದ್ರ ಸರ್ಕಾರಕ್ಕೆ ಸಿಕ್ಕಿಲ್ಲ. ವಿವಿಧ ರಾಜ್ಯಗಳ ರೈತರ ಖಾತೆಗೆ ಯೋಜನೆಯ ಹಣ ತಲುಪಿದ್ದು, ರಾಜ್ಯದ ರೈತರಿಗೆ ದೊರೆಯದಿರುವ ಕುರಿತು ಪ್ರಧಾನ ಮಂತ್ರಿ ಮೋದಿ ಅವರು ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದ್ದು, ಇದೀಗ ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗೊಂದಲ ಸೃಷ್ಟಿ: ಐದು ಎಕರೆ ಒಳಗೆ ಭೂಮಿ ಹೊಂದಿದ ರೈತರು ಸರಳವಾಗಿ ಯೋಜನೆಯ ಲಾಭ ಪಡೆಯಬಹುದಾಗಿದ್ದು, ಒಂದು ಕುಟುಂಬದಲ್ಲಿ ಗಂಡ-ಹೆಂಡತಿ ಹಾಗೂ ಮಕ್ಕಳ ಹೆಸರಲ್ಲಿ ಭೂಮಿ ಐದು ಎಕರೆಗೂ ಅಧಿಕ ಭೂಮಿ ಹೊಂದಿದ್ದರೆ ಆ ಕುಟುಂಬಕ್ಕೆ ಯೋಜನೆಯ ಲಾಭ
ಸಿಗುತ್ತಿಲ್ಲ ಎಂದು ಅನೇಕ ರೈತರು ದೂರುತ್ತಿದ್ದಾರೆ. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ಅವರ ಪ್ರಕಾರ ಒಂದು ಒಂದು ಕುಟುಂಬದಲ್ಲಿನ ಸದಸ್ಯರ ಹೆಸರಲ್ಲಿ ಒಟ್ಟಾರೆ ಐದು ಎಕರೆಗೂ ಅಧಿಕ ಭೂಮಿ ಇದ್ದರೆ ಯೋಜನೆಯ ಲಾಭ ಸಿಗುವುದಿಲ್ಲ. ಎರಡು ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿದ ರೈತರು ಮಾತ್ರ ಲಾಭ ಪಡೆಯಲಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.
ದಾಖಲೆ ಸಲ್ಲಿಕೆ: ಕೇಂದ್ರ ಸರ್ಕಾರದ ಯೋಜನೆಯ ಲಾಭ ಪಡೆಯಲು ರೈತರು ಆಯಾ ಭಾಗದ ರೈತ ಸಂಪರ್ಕ ಕೇಂದ್ರಗಳು, ಬಾಪೂಜಿ ಸೇವಾ ಕೇಂದ್ರಗಳು, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ವ್ಯಾಪ್ತಿಯ ಕಚೇರಿಗಳಲ್ಲಿ ಕೂಡ ರೈತರು ದಾಖಲೆಗಳನ್ನು ಸಲ್ಲಿಸಬಹುದಾಗಿದ್ದು, ಬಿಸಿಲಿನ ತಾಪದಲ್ಲಿ ಕೂಡ ರೈತರು ಕೇಂದ್ರಗಳಿಗೆ ಸಾಗಿ ದಾಖಲೆಗಳನ್ನು ಸಲ್ಲಿಸುತ್ತಿದ್ದಾರೆ.
ಎಲ್ಲ ರೈತರಿಗೆ ಸಿಗಲಿ ಪ್ರಯೋಜನ: ಬೇರೆ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಕಿಸಾನ ಸಮ್ಮಾನ್ ಯೋಜನೆಯ ಲಾಭ ದೊರೆತ್ತಿದ್ದು, ರಾಜ್ಯದ ರೈತರಿಗೂ ಕೂಡಲೆ ಯೋಜನೆಯ ಲಾಭ ದೊರೆಯುವಂತೆ ರಾಜ್ಯ ಸರ್ಕಾರ ಮಾಡಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ವಿಷಯದಲ್ಲಿ ರಾಜಕೀಯ ಮಾಡುವುದು ಬಿಟ್ಟು ಯೋಜನೆ ಲಾಭ ಸಿಗುವಂತೆ ಮಾಡಬೇಕು.
ಕೇಂದ್ರ ಸರ್ಕಾರ ಜಾರಿ ಮಾಡಿರುವ ಯೋಜನೆ ಉತ್ತಮವಾಗಿದೆ. ಆದರೆ, ಎಲ್ಲಾ ರೈತರಿಗೂ ಇದರ ಪ್ರಯೋಜನ ದೊರೆಯಬೇಕು. ರೈತರ ಮಧ್ಯ ಗೊಂದಲ ಸೃಷ್ಟಿಸುವ ಕಾರ್ಯವನ್ನು ಸರ್ಕಾರಗಳು ಮಾಡಬಾರದು. ಒಂದು ಕುಟುಂದಲ್ಲಿ ಒಟ್ಟಾರೆ ಐದು ಎಕರೆಗೂ ಅಧಿಕ ಭೂಮಿ ಇದ್ದರೆ ಯೋಜನೆಯ ಲಾಭ ಸಿಗುತ್ತಿಲ್ಲ. ಕೂಡಲೆ ಸರ್ಕಾರ ಯೋಜನೆಯಲ್ಲಿ ತಿದ್ದುಪಡಿ ಮಾಡಿ ಎಲ್ಲಾ ರೈತರಿಗೆ ಲಾಭ ದೊರೆಯುವಂತೆ ಮಾಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಒತ್ತಾಯಿಸಿದರು.
ನಮಗೆ ಯಾರ ಹಣವೂ ಬೇಕಿಲ್ಲ. ನಮ್ಮ ಪಾಡಿಗೆ ನಾವು ಹೊಲದಲ್ಲಿ ಕೆಲಸ ಮಾಡಿಕೊಂಡು ಬದುಕುತ್ತೇವೆ. ಚೆನ್ನಾಗಿ ಮಳೆಯಾಗಿ ಉತ್ತಮ ಬೆಳೆ ಬಂದರೆ ಅದೇ ನಮಗೆ ದೇವರು ಕೊಡುವ ಕಿಸಾನ ಸಮ್ಮಾನ್ ಯೋಜನೆಯಾಗಿದೆ. ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡಿದರೆ ಸಾಕು.
ವೈಜಿನಾಥಪ್ಪ ಕನಕಟ್ಟೆ, ನಾವದಗಿ ಗ್ರಾಮದ ರೈತ
ಕೇಂದ್ರ ಸರ್ಕಾರದ ಹೊಸ ಯೋಜನೆಯಿಂದ ಸಣ್ಣ, ಅತಿ ಸಣ್ಣ ರೈತರಿಗೆ ಮುಂಗಾರು-ಹಿಂಗಾರು ಬಿತ್ತನೆಯ ಸಂದರ್ಭದಲ್ಲಿ ಅನುಕೂಲವಾಗುತ್ತದೆ. ಬಿತ್ತನೆ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಗಳಿಂದ ಸಾಲ ಮಾಡುವುದು ತಪ್ಪುತ್ತದೆ. ಆದರೆ, ಯಾವುದೇ ರೈತರ ಯೋಜನೆ ಇದ್ದರೂ ಕೂಡ ಎಲ್ಲಾ ರೈತರಿಗೆ ದೊರೆಯುವಂತೆ ಆಗಬೇಕು. ರೈತರ ಮಧ್ಯೆ ಗೊಂದಲ ಸೃಷ್ಟಿಯಾಗುವಂತೆ ಆಗಬಾರದು.
ಗೋವಿಂದ ಇಂಗಳೆ, ಮುಂಗನಾಳ ಗ್ರಾಮದ ರೈತ
ಕಿಸಾನ ಸಮ್ಮಾನ್ ಯೋಜನೆಯಿಂದ ಯಾವ ರೈತರಿಗೂ ಹೇಳಿಕೊಳ್ಳುವಂಥ ಪ್ರಯೋಜನ ಆಗುವುದಿಲ್ಲ. ಇದೊಂದು ರಾಜಕೀಯ ತಂತ್ರವಾಗಿದೆ. ಬರುವ ಲೋಕ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯುವ ತಂತ್ರಗಾರಿಕೆ ಇದಾಗಿದೆ.
ಪರಮೇಶ್ವರ ಪಾಟೀಲ, ಚಂದನಹಳ್ಳಿ ರೈತ
ಪ್ರಧಾನಮಂತ್ರಿಗಳು ರೈತರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಆದರೆ ಆ ಯೋಜನೆಗಳು ನಿಜವಾದ ರೈತರಿಗೆ ತಲುಪುತ್ತಿಲ್ಲ. ಸರ್ಕಾರದ ಯೋಜನೆಗಳನ್ನು ಯಾವುದೇ ದಾಖಲೆಗಳನ್ನು ಕೇಳದೆ ಅನುಷ್ಠಾನಕ್ಕೆ ಮುಂದಾಗಬೇಕು. ಸರ್ಕಾರದ ಇಲಾಖೆಯಲ್ಲಿ
ರೈತರ ಕುರಿತು ಸಂಪೂರ್ಣ ಮಾಹಿತಿ ಇರುತ್ತದೆ. ಯೋಜನೆಗಳು ಎಲ್ಲಾ ರೈತರಿಗೂ ಅನ್ವಯವಾಗುವಂತೆ ಇರಬೇಕು.
ಶಿವರಾಜ ಬುಸಗುಂಡೆ, ಕುಂಟೆ ಸಿರ್ಸಿ ಗ್ರಾಮದ ರೈತ
ಕಿಸಾನ್ ಸಮ್ಮಾನ್ ಯೋಜನೆಯಡಿ ಮೂರು ಕಂತಿನಲ್ಲಿ ರೈತರ ಖಾತೆಗೆ ಎರಡು ಸಾವಿರ ಹಣ ಹಾಕುವುದು ಸಂತಸದ ವಿಷಯ. ಆದರೆ, ಮೂರು ಕಂತುಗಳ ಬದಲಿಗೆ ಒಂದೇ ಕಂತಿನಲ್ಲಿ ಹಣ ವರ್ಗಾವಣೆ ಮಾಡಿದರೆ, ಕೃಷಿ ಚಟುವಟಿಕೆಗೆ ಸಹಾಯವಾಗುತ್ತದೆ. ಅಲ್ಲದೆ, ಈ ಮೊತ್ತವನ್ನು 25 ಸಾವಿರಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಂಡರೆ ರೈತರು ಹರ್ಷದಿಂದ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಾರೆ.
ಸತೀಶ ನನ್ನೂರೆ, ಚೀನಕೇರಾ ರೈತ
ಕೇಂದ್ರ ಸರ್ಕಾರದ ಹೊಸ ಯೋಜನೆ ರೈತರಿಗೆ ಲಾಭದಾಯಕ ಆಗಿಲ್ಲ. ಸರ್ಕಾರ ನೀಡುವ ಹಣ ಕೃಷಿ ಕ್ಷೇತ್ರದಲ್ಲಿ ದಿನ ಕೂಲಿ ಮಾಡುವ ವ್ಯಕ್ತಿಗೂ ಸಾಕಾಗುವುದಿಲ್ಲ. ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡಿ ಪ್ರತಿ ರೈತರಿಗೆ ವರ್ಷಕ್ಕೆ 20 ಸಾವಿರ ಹಣವನ್ನು ಖಾತೆಗೆ ಹಾಕಿದರೆ ಮಾತ್ರ ರೈತರಿಗೆ ಅನೂಕುಲ ಆಗುತ್ತದೆ.
ಸುಭಾಷ ರಗಟೆ, ರೈತ ಸಂಘದ ಕಾರ್ಯದರ್ಶಿ
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.