ಜಾನಪದ ದಿಂದ ಭಾಷಾ ಬಾಂಧವ್ಯ ಬಲಿಷ್ಠ: ಪ್ರೊ| ರೈ
Team Udayavani, Nov 11, 2017, 2:16 PM IST
ಬೀದರ: ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಿಂದ ಭಾಷೆ ಬಾಂಧವ್ಯ ಬಲಿಷ್ಠಗೊಳ್ಳಲು ಸಾಧ್ಯವಾಗಿದೆ ಎಂದು ಜರ್ಮನಿಯ ವುರ್ಜ್ ಬುರ್ಗ್ ವಿವಿ ನಿಕಟಪೂರ್ವ ಪ್ರಾಧ್ಯಾಪಕ ಪ್ರೊ| ವಿವೇಕ ರೈ ಹೇಳಿದರು.
ನಗರದ ಕರ್ನಾಟಕ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನಿಗೆ ಸೃಜನಶೀಲತೆ ಹಾಗೂ ಪ್ರತಿಷ್ಠೆ ಸಿಗಲು ಹಣ ಬಲದಿಂದ ಸಾಧ್ಯವಿಲ್ಲ, ಬದಲಿಗೆ ಅವರಲ್ಲಿನ ಉದಾತ್ತ ವ್ಯಕ್ತಿತ್ವ ಹಾಗೂ ಪ್ರತಿಭೆಯಿಂದ ಮಾತ್ರ ಸಾಧ್ಯವಾಗಿದೆ. ಅಂತಹ ಪ್ರತಿಭೆ ಅಡುಗೆ ಮನೆಯನ್ನು ನೋಡಿಕೊಳ್ಳುವ ಹೆಣ್ಣು ಮಕ್ಕಳಲ್ಲಿರುತ್ತದೆ. ಆಕೆ ಹಾಡುವ ಮಧುರ ಹಾಡುಗಳು ಯಾವ ಚರಿತ್ರೆಗೂ ಸಮಾನವಾಗದು ಎಂದರು.
ನಿಜವಾದ ಜಾನಪದ ಕಲಾವಿದನಾಗಲು ವೇಷ ಭೂಷಣ ಅಗತ್ಯ, ಕಾಲಕ್ಕೆ ತಕ್ಕಂತೆ ಪ್ರದರ್ಶನ ನೀಡಬೇಕು. ಜಾನಪದ ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಕಮ್ಮಟಗಳು ಹಾಗೂ ಚರ್ಚಾ ಕೂಟಗಳನ್ನು ಏರ್ಪಡಿಸಿದಲ್ಲಿ ಜಾನಪದ ಸಂಶೋಧನೆಗೆ ನಾಂದಿ ಹಾಡಲು ಸಾಧ್ಯವಾಗಿದ್ದು, ಇದರಿಂದ ಹೊಸ ಜಾನಪದ ಆಯಾಮ ರೂಪುಗೊಳ್ಳುತ್ತದೆ ಎಂದರು.
ಸಿಪಿಐ ಮಲ್ಲಮ್ಮ ಚೌಬೆ ಮಾತನಾಡಿ, ಜಾನಪದ ಸಂಸ್ಕೃತಿಯಲ್ಲಿ ಮಹಿಳೆಗೆ ಉತ್ಕೃಷ್ಟ ಸ್ಥಾನವಿದ್ದು, ಇಂದಿನ ಅಂತರ್ಜಾಲ ಜಗತ್ತಿನಲ್ಲಿ ಆಕೆ ದಿನಕ್ಕೊಂದು ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಿದ್ದಾಳೆ. ಆಕೆ ಇಂದು ವಿದ್ಯಾವಂತಳಾದರೂ, ಸಾಕಷ್ಟು ಅವಕಾಶಗಳಿದ್ದರೂ ಅವನ್ನು ಸಮರ್ಥವಾಗಿ ಬಳಿಸಿಕೊಳ್ಳುವಲ್ಲಿ ವಂಚಿತಳಾಗುತ್ತಿರುವಳು. ಪುರುಷ ಪ್ರಧಾನಕ್ಕೆ ಹೆದರಿ, ತನ್ನತನ ಮರೆ ಮಾಚಿಕೊಳ್ಳುತ್ತಿರುವ ಮಹಿಳೆ ಅಂತಹ ಭವ ಪಾಶದಿದ ಹೊರಬಂದು ಕಾನೂನಿನ ಆಸರೆಯಿಂದ ನ್ಯಾಯಯುತ ಸೌಕರ್ಯಗಳನ್ನು ಅನುಭವಿಸುವಂತಾಗಬೇಕು. ಇದಕ್ಕಾಗಿಯೇ ಬೀದರನಲ್ಲಿ ವಿಶೇಷ ಮಹಿಳಾ ಪೊಲೀಸ್ ಠಾಣೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.
ಕನ್ನಡ ಅಧ್ಯಯನ ಮತ್ತು ಸಂಶೋಧನೆ ಕೇಂದ್ರದ ನಿರ್ದೆಶಕ ಡಾ| ಜಗನ್ನಾಥ ಹೆಬ್ಟಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ನಮ್ಮ ಭಾಗದ ಪ್ರಧಾನ ಸಾಹಿತ್ಯವಾಗಿದ್ದು, ಅದನ್ನು ಪ್ರೀತಿಸಿ, ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಜಾನಪದವನ್ನು ಅಧ್ಯಯನ ಮಾಡಿ, ಅದನ್ನು ಅರ್ಥಮಾಡಿಕೊಂಡು ಹಳ್ಳಿಗಾಡಿನ ಕಲಾವಿದರಿಗೆ ಉತ್ತಮ ಮಾರ್ಗದರ್ಶನ ಮಾಡಬೇಕು. ಕಲೆ ಹಾಗೂ ಕಲಾವಿದರನ್ನು ಆರಾಧಿಸುವ ಸಂಸ್ಕೃತಿ ಬೆಳೆಸಿಕೊಂಡಲ್ಲಿ ಉದಾತ್ತ ವ್ಯಕ್ತಿತ್ವ ನಮ್ಮದಾಗುತ್ತದೆ. ಇದು ಮಹಿಳಾ ಜಾನಪದ ಘಟಕ ಕರಗತ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಜಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಡಾ|ಧನಲಕ್ಷ್ಮೀ ಪಾಟೀಲ ಮಾತನಾಡಿದರು. ಮಲ್ಕಾಪುರ ಮಠದ ಶ್ರೀ ಬಸವಾಂಜಲಿ ತಾಯಿ ಸಾನ್ನಿಧ್ಯ ವಹಿಸಿದ್ದರು. ಪ್ರಾಚಾರ್ಯ ಡಾ| ಎಂ.ಎಸ್. ಪಾಟೀಲ ವೇದಿಕೆಯಲ್ಲಿದ್ದರು. ಮಾಣಿಕಾದೇವಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಕುಮಾರ ಹೆಬ್ಟಾಳೆ, ಶಿವಯ್ಯ ಸ್ವಾಮಿ, ಎಸ್.ಬಿ.ಕುಚಬಾಳ್, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪೂರ, ಸಾವಿತ್ರಿಬಾಯಿ ಹೆಬ್ಟಾಳೆ, ಮಹಾನಂದಾ ಮಡಕಿ, ಸುನೀತಾ ಕೂಡ್ಲಿಕರ್ ಮತ್ತಿತರರು ಇದ್ದರು. ಸವಿತಾ ಸಾಕುಳೆ ಸ್ವಾಗತಿಸಿದರು. ಶ್ರೀದೇವಿ ಹೂಗಾರ ನಿರೂಪಿಸಿದರು. ಕೃಷ್ಣಾಬಾಯಿ ಪವಾರ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.