ಸಚಿವ ರಾಯರೆಡ್ಡಿ ಕಮೀಷನ್ ಏಜೆಂಟ್: ಬಿಎಸ್‌ವೈ ಆರೋಪ
Team Udayavani, Dec 9, 2017, 12:09 PM IST
ಬೀದರ: ವಿಶ್ವವಿದ್ಯಾಲಯಗಳ ಅಂಕಪಟ್ಟಿ ಮುದ್ರಣ ಕಾಗದ ಪ್ರಕರಣದಲ್ಲಿ ಬೇಲಿಯೇ ಎದ್ದು ಹೊಲ ಮೇಯುವ ಸ್ಥಿತಿ ಕಾಂಗ್ರೆಸ್ ಸರ್ಕಾರದಲ್ಲಿದೆ. ಉನ್ನತ ಶಿಕ್ಷಣ ಸಚಿವರು ಕಮೀಷನ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಗಾಗಿ ಶ್ರಮಿಸಬೇಕಿದ್ದವರೇ ಅಕ್ರಮಗಳಲ್ಲಿ ತೊಡಗಿದ್ದಾರೆ. ಸಚಿವ ರಾಯರೆಡ್ಡಿ ರಾಜೀನಾಮೆ ನೀಡದಿದ್ದಲ್ಲಿ ಮುಖ್ಯಮಂತ್ರಿಯವರೇ ಅವರನ್ನು ಸಂಪುಟದಿಂದ ಕೈ ಬಿಡಬೇಕು. ಕಾಂಗ್ರೆಸ್ ಸರ್ಕಾರ ತೊಲಗಿದಾಗ ಮಾತ್ರ ರಾಜ್ಯದ ಜನ ನೆಮ್ಮದಿಯಿಂದ ಉಸಿರಾಡಲು ಸಾಧ್ಯ
ಎಂದರು.
ರಾಜ್ಯದಲ್ಲಿ ಸಾಕಷ್ಟು ಮರಳು ಇದೆ. ಸಚಿವರ ಪ್ರಭಾವಿಗಳ ಮಕ್ಕಳು, ಸಂಬಂಧಿಕರು ಮರಳು ದಂಧೆಯಲ್ಲಿ ತೊಡಗಿದ್ದು,
ಎಫ್‌ಐಆರ್ ಸಹ ದಾಖಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಕಾನೂನು ಕ್ರಮ ಕೈಗೊಳ್ಳುವ ಬದಲು ಮಲೇಶಿಯಾ ದಿಂದ ಮರಳು ಆಮದು ಮಾಡಿಕೊಳ್ಳಲು ಹೊರಟಿದ್ದಾರೆ.
ಈ ತೀರ್ಮಾನದ ಹಿಂದೆ ದುಡ್ಡು ಹೊಡೆಯುವ ದುರಾಲೋಚನೆ ಇದೆ ಎಂದು ಆರೋಪಿಸಿದ ಅವರು, ವಿಧಾನಸಭೆಯಲ್ಲಿ ಈ ಕುರಿತಂತೆ ಚರ್ಚಿಸಬೇಕು. ಆಮದು ಕುರಿತ ತೀರ್ಮಾನವನ್ನು ಮುಂದಿನ ಸರ್ಕಾರಕ್ಕೆ ಬಿಟ್ಟು ಕೊಡಬೇಕು ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಸತ್ಯದ ಕಡೆಗೆ ನಡಿಗೆ’ ಆರಂಭಿಸುವುದಾಗಿ ಹೇಳಿದ್ದಾರೆ. ಅವರು ಯಾವ ಸತ್ಯದ ಕಡೆಗೆ ಹೋಗುತ್ತಾರೋ ಎನ್ನುವುದು ತಿಳಿಯುತ್ತಿಲ್ಲ ಎಂದ ಅವರು, ಕೃಷಿ ಉತ್ಪನ್ನಗಳಿಗೆ ಕೇಂದ್ರ ಸರಕಾರ ಬೆಂಬಲ ಬೆಲೆ ನಿಗದಿಪಡಿಸಿದೆ.
ರಾಜ್ಯ ಸರ್ಕಾರವೂ ತನ್ನ ಪಾಲಿನ ಮೊತ್ತ ಸೇರಿಸಿ, ರೈತರಿಗೆ ಅನುಕೂಲವಾಗುವಂತೆ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು. ಸಂಸದ ಭಗವಂತ ಖೂಬಾ, ಮಾಜಿ ಸಚಿವ ಗೋವಿಂದ ಕಾರಜೋಳ, ಶಾಸಕ ಪ್ರಭು ಚವ್ಹಾಣ, ಪ್ರಮುಖರಾದ ಕೆ.ಪಿ. ನಂಜುಂಡಿ, ಸೂರ್ಯಕಾಂತ ನಾಗಮಾರಪಳ್ಳಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ಶ್ವೇತಪತ್ರ ಹೊರಡಿಸಲಿ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಕುರಿತಂತೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌ಕೆಆರ್‌ಡಿಬಿ ಅನುದಾನ ಸದ್ಬಳಕೆಯಾಗುತ್ತಿಲ್ಲ.
ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಾಗ 40,000 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಭರವಸೆ ಏನಾಯಿತು ಎಂದು ಪ್ರಶ್ನಿಸಿದರು. ಸಂವಿಧಾನದ 371ನೇ ಕಲಂ (ಜೆ) ತಿದ್ದುಪಡಿಯಿಂದ ಈ ಭಾಗದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಸಿಕ್ಕ ಸೌಲಭ್ಯದ ಮಾಹಿತಿಯನ್ನು ಜನತೆಯ ಮುಂದಿಡಬೇಕು ಎಂದು ಆಗ್ರಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.