“ಹಿಂದುಳಿದ’ ಹಣೆಪಟ್ಟಿ ಅಳಿಸಲಿ ಸಚಿವರು
Team Udayavani, Jun 8, 2018, 11:07 AM IST
ಬೀದರ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಹುಮನಾಬಾದ ಶಾಸಕ ರಾಜಶೇಖರ ಪಾಟೀಲ, ಬೀದರ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ ಅವರು ಸಂಪುಟ ದರ್ಜೆ ಸಚಿವರಾಗಿದ್ದು, ಈಗ ಜಿಲ್ಲಾ ಉಸ್ತುವಾರಿ ಸಚಿವರು ಯಾರಾಗುತ್ತಾರೆ ಎಂಬುದೇ ಪ್ರಶ್ನೆಯಾಗಿದ್ದು, ಜಿಲ್ಲೆಯ ಹತ್ತಾರು ಸಮಸ್ಯೆ- ಸವಾಲುಗಳು ಅವರ ಮುಂದಿವೆ.
ಬಂಡೆಪ್ಪ ಖಾಶೆಂಪುರ ಅವರು ಎರಡು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಜಶೇಖರ ಪಾಟೀಲ ಅವರು ಪ್ರಥಮ ಬಾರಿಗೆ ಸಚಿವರಾಗಿದ್ದು, ಇವರಲ್ಲಿ ಯಾರು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುತ್ತಾರೊ ಎನ್ನುವ ಚರ್ಚೆಗಳು ನಡೆಯುತ್ತಿವೆ. ಬೀದರ ಜಿಲ್ಲೆಯನ್ನು ಹಿಂದುಳಿದ ಜಿಲ್ಲೆ ಎಂದು ಗುರುತಿಸಲಾಗುತ್ತಿದ್ದು, ಹಿಂದುಳಿದ ಎಂಬ ಹಣೆ ಪಟ್ಟಿಯನ್ನು ಉಸ್ತುವಾರಿ ಸಚಿವರು ಅಳಿಸಬಹುದೇ ಎಂಬ ನಿರೀಕ್ಷೆ ಜಿಲ್ಲೆಯ ಜನತೆಯದಾಗಿದೆ.
ಇಬ್ಬರು ಸಚಿವರು ಹಾಗೂ ಇಬ್ಬರು ವಿಧಾನಪರಿಷತ್ ಸದಸ್ಯರು ಇರುವ ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿ ಪಥದಲ್ಲಿ ಸಾಗಬೇಕಾಗಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಇಂದಿಗೂ ಕೂಡ ಸ್ಪಂದನೆ ಸಿಕ್ಕಿಲ್ಲ. ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳುವ ಸಚಿವರ ಎದುರು ಅನೇಕ ಸವಾಲುಗಳು ಇವೆ. ಬೀದರ ನಗರ ಹಾಗೂ ಹುಮನಾಬಾದ ಪಟ್ಟಣದಲ್ಲಿ ಕೆಲ ವರ್ಷಗಳಿಂದ ನನೆಗುದ್ದಿಗೆ ಬಿದ್ದ ಒಳಚರಂಡಿ ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ. ಅಲ್ಲದೆ ಒಳಚರಂಡಿ ಕಾಮಗಾರಿಗಾಗಿ ಅಗೆದ ರಸ್ತೆಗಳ ದುರಸ್ತಿ ಕಾರ್ಯ ಕೂಡ ಪೂರ್ಣಗೊಂಡಿಲ್ಲ. ಬೀದರ ನಗರದಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ವಿವಿಧ ಬಡಾವಣೆಗಳಲ್ಲಿ ಇಂದಿಗೂ ಸಮರ್ಪಕ ಸಂಪರ್ಕಕ ದೊರೆತಿಲ್ಲ.
ಹುಮನಾಬಾದ ತಾಲೂಕಿನ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಸಾಲದ ಹೊರೆ ಹೆಚ್ಚಾಗಿ ಬಂದ್ ಆಗಿದ್ದು, ಇದರಿಂದ 24 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿದೆ. ಕಳೆದ ವರ್ಷ ಕಬ್ಬು ಬೆಳೆದ ರೈತರು ಅನೇಕ ಸಂಕಷ್ಟ ಎದುರಿಸಿದ್ದು, ರಾಜಕೀಯ ಮುಖಂಡರ ಮನೆಬಾಗಿಲಿಗೆ ತೆರಳಿ ಕಬ್ಬು ಸಾಗಿಸುವಂತೆ ಕೋರಿ ವಿವಿಧ ಕಾರ್ಖಾನೆಗಳಿಗೆ ಕಬ್ಬು ಸಾಗಿಸಿದ್ದರು. ಚುನಾವಣೆ ಇದ್ದ ಕಾರಣ ರಾಜಕಾರಣಿಗಳು ಕೂಡ ರೈತರ ಸಮಸ್ಯೆಗೆ ಸ್ಪಂದಿಸಿದ್ದರು. ಇದೀಗ ಕಬ್ಬು ಬೆಳೆಯುವ ರೈತರಿಗೆ
ದೊಡ್ಡ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಆದ್ದರಿಂದ ಜೆಡಿಎಸ್ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಕೂಡಲೆ ಬಿಎಸ್‌ಎಸ್‌ಕೆ ಕಾರ್ಖಾನೆಗೆ ಸರ್ಕಾರ ವಿಶೇಷ ಅನುದಾನ ನೀಡಬೇಕಾಗಿದೆ. ಸ್ಥಳೀಯ ಸಚಿವರು ಹಾಗೂ ಎಂಎಲ್‌ಸಿಗಳು ಕೂಡ ಸರ್ಕಾರದ ಮೇಲೆ ಒತ್ತಡ ಹಾಕಿ ರೈತರಿಗೆ ಅನುಕೂಲ ಮಾಡಬೇಕಿದೆ.
ನಾಲ್ಕು ದಶಕಗಳ ಹಿಂದೆ ಪ್ರಾರಂಭಗೊಂಡಿದ್ದ ಕಾರಾಂಜಾ ಜಲಾಶಯ ಯೋಜನೆ ಇಂದಿಗೂ ಕೂಡ ಪೂರ್ಣಗೊಂಡಿಲ್ಲ. ಜಲಾಶಕ್ಕೆ ಸಧ್ಯ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ಆಧುನೀಕರಣ ಮಾಡಬೇಕಾದ ಸವಾಲು ಜಿಲ್ಲಾ ಉಸ್ತುವಾರಿ ಸಚಿವ ಮುಂದಿದೆ. ಅಲ್ಲದೇ ಜಿಲ್ಲೆಯ ಯುವಕರು ಉದ್ಯೋಗಕ್ಕಾಗಿ ಬೆಂಗಳೂರು ಸೇರಿದಂತೆ ನೆರೆ ರಾಜ್ಯಗಳಿಗೆ ವಲಸೆ ಹೊಗುತ್ತಿದ್ದು, ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಲು ಮೊದಲ ಆದ್ಯತೆ ನೀಡಬೇಕಾಗಿದೆ. ಬಂಡೆಪ್ಪ ಖಾಶೆಂಪುರ ಅವರು ಚುನಾವಣಾ ಸಂದರ್ಭದಲ್ಲಿ ಯುವಕರಿಗಾಗಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ದೊಡ್ಡ ಕಾರ್ಖಾನೆಗಳನ್ನು ಆಹ್ವಾನಿಸುವುದಾಗಿ ಹೇಳಿದ್ದರು. ಆ ಭರವಸೆಯನ್ನು ಈಡೇರಿಸಬೇಕಾದ ಅನಿವಾರ್ಯತೆ ಕೂಡ ಅವರ ಮುಂದಿದೆ. ಬಸವಕಲ್ಯಾಣದಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸುವ ಕಾರ್ಯಕ್ಕೆ ನಕ್ಷೆ ಸಿದ್ಧವಾಗಿದ್ದು, ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ತರಬೇಕಾಗಿದೆ.
ಬಸವಣ್ಣನ ಕರ್ಮಭೂಮಿ ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆಯಬೇಕಿತ್ತು. ಆದರೆ ಬಸವಕಲ್ಯಾಣದಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಿದೆ. ಪಟ್ಟಣದಲ್ಲಿ ಹದಗೆಟ್ಟ ರಸ್ತೆಗಳು ಪ್ರವಾಸಿಗರನ್ನು ಸ್ವಾಗತಿಸುತ್ತಿವೆ. ಕಾರಣ ಕಲ್ಯಾಣದತ್ತ ಹೆಚ್ಚು ಕಾಳಜಿ ವಹಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕಾಗಿದೆ.
ಬೀದರ ನಗರದಲ್ಲಿ ಜಿಲ್ಲಾಡಳಿತ ವಾರ್ಣಿಜ್ಯ ಸಂಕೀರ್ಣ, ಹಾಳಾದ ಬೀದರ-ಔರಾದ ಮುಖ್ಯ ರಸ್ತೆ, ಕಾರಂಜಾ ಸಂತ್ರಸ್ತರ ಸಮಸ್ಯೆ, ಜಿಲ್ಲೆ ಹಾಗೂ ತಾಲೂಕು ಕೇಂದ್ರದಲ್ಲಿನ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಪ್ರಭಾರಿ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದು, ಆ ಸ್ಥಳಕ್ಕೆ ಖಾಯಂ ಅಧಿಕಾರಿಗಳ ನೇಮಿಸುವ ಕೆಲಸ ಅಗಬೇಕಿದೆ. ಜಿಲ್ಲೆಯಲ್ಲಿ ಇನ್ನೂ ಹತ್ತಾರು ಸಮಸ್ಯೆಗಳಿದ್ದು, ಸಚಿವರು ಹಾಗೂ ವಿಧಾನಪರಿಷತ್ ಸದಸ್ಯರು ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕಾಗಿದೆ.
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.