ನಯಾಪೈಸೆ ಖರ್ಚಾಗಿಲ್ಲ ಶಾಸಕರ ಅನುದಾನ
Team Udayavani, Sep 16, 2018, 12:16 PM IST
ಬೀದರ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ 6.62 ಕೋಟಿ ರೂ. ಅನುದಾನ ಒಂದು ತಿಂಗಳಿಂದ ನಯಾಪೈಸೆ ಕೂಡ ಖರ್ಚಾಗಿಲ್ಲ.
ರಾಜ್ಯ ಸರ್ಕಾರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಗೆ ನೀಡುವ ಅನುದಾನ ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ ಖಾತೆಗೆ ಆಗಸ್ಟ್ 13ರಂದು ಜಮಾ ಆಗಿದ್ದು, ಇಂದಿಗೂ ಯಾವುದೇ ಕಾಮಗಾರಿಗೆ ಬಳಕೆಯಾಗಿಲ್ಲ ಎಂಬುದು ತಿಳಿದುಬಂದಿದೆ. ಮೈತ್ರಿ ಸರ್ಕಾರದಲ್ಲಿ ಆಡಳಿತ ಚುರುಕಾಗಿಲ್ಲ ಎಂಬುದಕ್ಕೆ ಅನುದಾನ ಬಳಕೆ ಆಗದಿರುವುದು ಪುಷ್ಟಿ ನೀಡುವಂತಾಗಿದೆ.
ಜಿಲ್ಲೆಯ ಆರು ಜನ ಶಾಸಕರು ಹಾಗೂ ನಾಲ್ಕು ಜನ ವಿಧಾನಪರಿಷತ್ ಸದಸ್ಯರಿಗೆ ವಾರ್ಷಿಕ ತಲಾ ಎರಡು ಕೋಟಿ ಅನುದಾನವನ್ನು ಪ್ರದೇಶಾಭಿವೃದ್ಧಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತದೆ. ಮೂರು ಕಂತುಗಳಲ್ಲಿ ಬಿಡುಗಡೆಯಾಗುವ ಈ ಅನುದಾನ ಆಯಾ ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಆಗುತ್ತದೆ. ಶಾಸಕರು ನಿಧಿಯನ್ನು ನಿರ್ದಿಷ್ಟ ಉದ್ದೇಶಗಳಿಗೆ ಬಳಕೆ ಮಾಡಬೇಕೆಂದು ರಾಜ್ಯ ಸರ್ಕಾರ ನಿಯಮಾವಳಿ ರೂಪಿಸಿದೆ. ಅದರ ಅನ್ವಯ ಮಾತ್ರ ಹಣ ವೆಚ್ಚ ಮಾಡಲು ಅವಕಾಶ ಇದೆ. ನಿಯಮಗಳ ವ್ಯಾಪ್ತಿಗೆ ಒಳಪಡದ ಶಾಸಕರ ಶಿಫಾರಸುಗಳನ್ನು ಜಿಲ್ಲಾಧಿಕಾರಿಗಳು ತಿರಸ್ಕಿರಿಸುವ ಹಕ್ಕು ಕೂಡ ಹೊಂದಿದ್ದಾರೆ.
ಯಾರಿಗೆ ಎಷ್ಟು ಅನುದಾನ?: ವಿಧಾನಪರಿಷತ್ ಸದಸ್ಯರಾದ ರಘುನಾಥ ಮಲ್ಕಾಪೂರೆ, ವಿಜಯಸಿಂಗ್, ಅರವಿಂದಕುಮಾರ ಅರಳಿ, ಡಾ| ಚಂದ್ರಶೇಖರ ಪಾಟೀಲ ಅವರಿಗೆ ತಲಾ 5,01,625 ರೂ. ಅನುದಾನ ಬಿಡುಗಡೆಯಾಗಿದೆ. ಅದೇ ರೀತಿ ಬೀದರ್ ಶಾಸಕ ರಹೀಮ್ ಖಾನ್, ಔರಾದ ಶಾಸಕ ಪ್ರಭು ಚವ್ಹಾಣ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ, ಹುಮನಾಬಾದ ಶಾಸಕ ರಾಜಶೇಖರ ಪಾಟೀಲ, ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪೂರ್ ಅವರಿಗೆ ತಲಾ 5,01,625 ರೂ. ಅನುದಾನ ಬಿಡುಗಡೆಯಾಗಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಳಕೆ ಮಾಡಬಹುದಾಗಿದೆ.
ಮೈತ್ರಿ ಸರ್ಕಾರದ ಪ್ರಸಕ್ತ ಸಾಲಿನ ಮೊದಲನೇ ಕಂತಿನ ಅನುದಾನ ಬಿಡುಗಡೆಯಾಗಿದ್ದು, ಸರ್ಕಾರದ ನಿಯಮಾವಳಿ ಪ್ರಕಾರ ಶಾಸಕರು ಸಲ್ಲಿಸುವ ಕೆಲಸಗಳಿಗೆ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನ ಖರ್ಚು ಮಾಡಬಹುದಾಗಿದೆ. ಸದ್ಯ ಯಾವುದೇ ಪ್ರಸ್ತಾವನೆಗಳು ಬಂದಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಅನುದಾನದ ಪ್ರಮಾಣ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಗೆ 2001-02ರಲ್ಲಿ ಪ್ರತಿ ಕ್ಷೇತ್ರಕಕ್ಕೆ ತಲಾ 25 ಲಕ್ಷ ರೂ. ನಿಗದಿಪಡಿಸಿ ಯೋಜನೇತರ ಬಾಬತ್ತಿನಲ್ಲಿ ಪ್ರಾರಂಭಿಸಲಾಗಿತ್ತು. 2006-07ನೇ ಸಾಲಿನಲ್ಲಿ ಅನುದಾನ ಹೆಚ್ಚಿ ಒಂದು ಕೋಟಿಗೆ ನಿಗದಿ ಪಡಿಸಲಾಯಿತು. 2013-14ನೇ ಸಾಲಿನಲ್ಲಿ ಈ ಯೋಜನೆ ಅಡಿಯಲ್ಲಿ ಅನುದಾನದಲ್ಲಿ ಎರಡು
ಪಟ್ಟುಮಾಡಿದ್ದು. ಸದ್ಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೆ ತಲಾ ಎರಡು ಕೋಟಿ ಅನುದಾನ ನೀಡಲಾಗುತ್ತಿದೆ. ಅಗತ್ಯ ಕಾರ್ಯಗಳಿಗೆ ಶಾಸಕರು ಸರ್ಕಾರದ ಕಡೆಗೆ ಮುಖ ಮಾಡದೆ ಅವರ ಅನುದಾನದಲ್ಲಿ ಕೂಡ ಅಗತ್ಯ ಕೆಲಸಗಳನ್ನು ಮಾಡಬಹುದಾಗಿದೆ.
ವೆಚ್ಚ ಹೇಗೆ: ಪ್ರತಿ ಶಾಸಕರು ತಮ್ಮ ಕ್ಷೇತ್ರದಲ್ಲಿ ಈ ಮೊತ್ತಕ್ಕೆ ಆಯಾ ವರ್ಷದಲ್ಲಿ ಕೈಗೊಳ್ಳಬಹುದಾದ ಮಗಾರಿಗಳನ್ನು ಆಯ್ಕೆ ಮಾಡಿ, ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಬಹುದಾಗಿದೆ. ಅಲ್ಲದೇ ಸ್ಥಳೀಯ ಮೂಲಸೌಕರ್ಯ ಅಭಿವೃದ್ಧಿ ಹೆಚ್ಚು ಮಹತ್ವ ಇದ್ದು, ಅಗತ್ಯತೆಗಳನ್ನು ಈಡೇರಿಸಲು ಸಹ ಅವಕಾಶ ಇದೆ.
ಪ್ರಕೃತಿ ವಿಪತ್ತು ಮತ್ತು ವಿಕೋಪ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಿಂದ ಪ್ರಕೃತಿ ವಿಕೋಪಕ್ಕೊಳಗಾದ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಲು ಹಾಗೂ ಪ್ರಕೃತಿ ವಿಕೋಪಕ್ಕೊಳಗಾದ ಕ್ಷೇತ್ರಗಳ ಶಾಸಕರು ತಮ್ಮ ಅನುದಾನದಲ್ಲಿ ಗರಿಷ್ಟ 25 ಲಕ್ಷ ರೂ. ಮೊತ್ತದ ಕಾಮಗಾರಿಗಳನ್ನು ಶಿಫಾರಸು ಮಾಡಬಹುದಾಗಿದೆ. ವಿಪತ್ತಿಗೊಳಪಡದ ಕ್ಷೇತ್ರದ ಶಾಸಕರು ಸಹ ತಮ್ಮ ಅನುದಾನದಿಂದ 10 ಲಕ್ಷ ರೂ. ಮಿತಿಗೊಳಪಟ್ಟು ಕಾಮಗಾರಿಗಳಿಗೆ ಶಿಫಾರಸು ಮಾಡಬಹುದಾಗಿದೆ.
ಅಂಗವಿಕಲರಿಗೆ: ಈ ಯೋಜನೆ ಅಡಿಯಲ್ಲಿ ಅಂಗವಿಕಲರಿಗಾಗಿ ಪ್ರತಿ ವರ್ಷ ಗರಿಷ್ಟ 10 ಲಕ್ಷ ರೂ. ಅನುದಾನದಲ್ಲಿ ಅಂಗವಿಲಕರಿಗೆ ತ್ರಿಚಕ್ರ ವಾಹನ ಮತ್ತು ಕೃತಕ ಕಾಲುಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾಧಿಕಾರಿಗಳನ್ನು ಒಳಗೊಂಡ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿಗಳು ಅಂಗವಿಕಲರ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಅರ್ಹತೆಯನ್ನು ದೃಢೀಕರಿಸಿ ಈ ಯೋಜನೆಯ ಸವಲತ್ತು ಒದಗಿಸಲು ಅವಕಾಶವಿದೆ. ಅಲ್ಲದೆ, ಇತರೆ ವಿವಿಧ ಯೋಜನೆಗಳಿಗಾಗಿ ಈ ಯೋಜನೆಯ ಅನುದಾನ ಬಳಸಲು ಸರ್ಕಾರ ಸೂಕ್ತ ಮಾರ್ಗದರ್ಶನಗಳನ್ನು ನೀಡಿದೆ.
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.