ದೇವಸ್ಥಾನದ ಗೋವುಗಳ ಅನಾಥ ಸಾವು!
Team Udayavani, Oct 21, 2017, 10:11 AM IST
ಔರಾದ: ಪಟ್ಟಣದ ಅಮರೇಶ್ವರ ಗೋ ರಕ್ಷಣಾ ಸಮಿತಿ ಹಾಗೂ ಗ್ರಾಮ ದೇವರು ಅಮರೇಶ್ವರ ಮಂದಿರಕ್ಕೆ ಭಕ್ತರು ದೇಣಿಗೆ ರೂಪದಲ್ಲಿ ಬಿಟ್ಟ ಐದು ಗೋವುಗಳು ಮೂರು ದಿನಗಳಿಂದ ಪಟ್ಟಣದ ರಸ್ತೆಯಲ್ಲಿ ಬಿದ್ದು ಮೃತಪಟ್ಟಿದ್ದು, ಹಲವು ಸಂಶಯಗಳಿಗೆ ಎಡೆ ಮಾಡಿದೆ.
ಅಮರೇಶ್ವರ ಅಗ್ನಿಕುಂಡ, ತರಕಾರಿ ಮಾರುಕಟ್ಟೆ, ಅಮರೇಶ್ವರ ದೇವಸ್ಥಾನ, ಅಮರೇಶ್ವರ ಗೋ ಶಾಲೆ ಹಾಗೂ ಮುಖ್ಯರಸ್ತೆಯ ನವಚೇತನ ಶಾಲೆಯ ಮುಂಭಾಗದಲ್ಲಿ ಗೋವುಗಳು ಮೃತಪಟ್ಟಿದ್ದರೂ ಸಬಂಧ ಪಟ್ಟವರು ಇದಕ್ಕೆ ಸ್ಪಂದಿಸದಿರುವುದು ನಾಗರಿಕರನ್ನು ಕೆರಳಿಸುವಂತೆ ಮಾಡಿದೆ.
ದೇವಸ್ಥಾನಕ್ಕೆ ಬಿಟ್ಟ ಗೋವುಗಳು ದೇವರ ಸ್ವರೂಪವಾಗಿದ್ದು, ರಸ್ತೆಯಲ್ಲಿ ಬಿದ್ದು ಸಾಯುತ್ತಿವೆ. ಅವುಗಳಿಗೆ ಚಿಕಿತ್ಸೆ ನೀಡಿ ಎಂದು ಪಟ್ಟಣದ ಯುವಕರ ತಂಡ ಅಮರೇಶ್ವರ ಗೋ ರಕ್ಷಣಾ ಮಂಡಳಿ ಅಧ್ಯಕ್ಷ ಹಾಗೂ ತಾಲೂಕು ವನ್ಯ ಜೀವಿ ಸಂರಕ್ಷಣಾ ಮಂಡಳಿ ಸದಸ್ಯ ಶಿವರಾಜ ಅಲ್ಮಾಜೆ ಅವರ ಮನಗೆ ಹೋಗಿ ಮನವಿ ಮಾಡಡಿದೂ ಪ್ರಯೋಜನವಾಗಿಲ್ಲ ಎಂದು ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸೇರಿದಂತೆ ಇನ್ನಿತರ ಹಿಂದೂಪರ ಸಂಘಟನೆ ಸದಸ್ಯರು “ಗೋವು ನಮ್ಮ ತಾಯಿಗೆ ಸಮಾನ. ಅವುಗಳ ರಕ್ಷಣೆ ಮಾಡುವುದೇ ನಮ್ಮ ಪರಮಗುರಿಯಾಗಿದೆ’ ಎಂದು ವೇದಿಕೆಯಲ್ಲಿ ಗಂಟೆಗಟ್ಟಲೆ ಭಾಷಣ ಮಾಡಿ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವುದನ್ನು ಬಿಟ್ಟು ಪಟ್ಟಣದಲ್ಲಿ ಸಾಯುತ್ತಿರುವ ಜಾನುವಾರುಗಳ ರಕ್ಷಣೆಗೆ ಮುಂದಾಗಲಿ. ಅಲ್ಲದೇ ಅವುಗಳ ಸಾವಿಗೆ ಮೂಲಕ ಕಾರಣ ಏನೆಂಬುದನ್ನು ತಿಳಿದುಕೊಳ್ಳಲು ಮುಂದಾಗಬೇಕಾಗಿದೆ.
ಪಟ್ಟಣದ ನವ ಚೇತನ ಶಾಲೆಯ ಮುಂಭಾಗದಲ್ಲಿ ಗೋವು ನೆಲಕ್ಕೆ ಬಿದ್ದು ಸಾಯುತ್ತಿರುವುದನ್ನು ನೋಡಲಾಗದೇ ವ್ಯಾಪಾರಿ ನಾಗರಾಜ ಮಜಿಗೆ ಹಾಗೂ ಜಗದೀಶ ಠಾಕುರ ಅವರು ಪಶು ಆಸ್ಪತ್ರೆಗೆ ತೆರಳಿ ಘಟನೆ ಕುರಿತು ತಿಳಿಸಿದ್ದಾರೆ. ಆದರೆ ಒಬ್ಬ ವೈದ್ಯರೂ ಚಿಕಿತ್ಸೆ ನೀಡಲು ಮುಂದೆ ಬಾರದೇ ಇರುವುದು ದುರಾದೃಷ್ಟದ ಸಂಗತಿಯಾಗಿದೆ.
ವನ್ಯಜೀವಿ ಸಂರಕ್ಷಣಾ ಮಂಡಳಿಯ ರಾಷ್ಟ್ರೀಯ ಸದಸ್ಯ ಮಲ್ಲೇಶ ಅವರಿಗೆ ಘಟನೆ ಕುರಿತು ಮಾಧ್ಯಮದವರು ಮಾಹಿತಿ ನೀಡಿದಾಗ, ಪಶು ವೈದ್ಯರು ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ಆಕಳು ಮೃತಪಟ್ಟಿತ್ತು. ಇದೆಲ್ಲ ಮುಗಿದ ಬಳಿಕ ಕಾಟಚಾರಕ್ಕೆ ಘಟನಾ ಸ್ಥಳಕ್ಕೆ ಬಂದ ಗೋ ರಕ್ಷಣಾ ಸಮಿತಿ ಅಧ್ಯಕ್ಷ ನಾಗರಿಕರಿಗೆ ಹಾರಿಕೆ ಉತ್ತರ ನೀಡಿದ ಪ್ರಸಂಗ ನಡೆಯಿತು.
ಐದು ಗೋವುಗಳು ಮೃತಪಟ್ಟಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿದೆ. ವೈದ್ಯಕೀಯ ಪರಿಕ್ಷೆಯಿಂದ ಸತ್ಯಾಂಶ ಹೊರ ಬರಲು ಸಾಧ್ಯ. ಎರಡು ದಿನಗಳಲ್ಲಿ ವರದಿ ನೀಡಲಾಗುವುದು ಎಂದು ಪಶು ವೈದ್ಯಾಧಿಕಾರಿ ಡಾ| ಗಂಗಾರೆಡ್ಡಿ ತಿಳಿಸಿದ್ದಾರೆ.
ರವೀಂದ್ರ ಮುಕ್ತೇದಾರ
ಗಮನಕ್ಕೆ ತನ್ನಿ : ಮಂದಿರದ ಜಾನುವಾರುಗಳು ರಸ್ತೆಯಲ್ಲಿ ಬಿದ್ದು ಸಾಯುತ್ತಿರುವುದು ದುರಾದೃಷ್ಟದ ಸಂಗತಿ. ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಇಂತಹ ಘಟನೆಗಳು ನಡೆದರೆ ತಕ್ಷಣ ನಮ್ಮ (ಮೊ:95385400000) ಗಮನಕ್ಕೆ ತನ್ನಿ. ಅವುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಒದಗಿಸಿ ಸಂರಕ್ಷಣೆ ಮಾಡಲು ಪ್ರಯತ್ನ ಮಾಡುತ್ತೇನೆ. ಮಲ್ಲೇಶ, ರಾಷ್ಟ್ರೀಯ ವನ್ಯ ಜೀವಿ ಸಂರಕ್ಷಣಾ ಮಂಡಳಿ ಸದಸ್ಯ
ಆಹಾರ ಒದಗಿಸಿ : ಜಾನುವಾರುಗಳಿಗೆ ತಿನ್ನಲು ಆಹಾರವಿಲ್ಲದೇ ರಸ್ತೆಯಲ್ಲಿ ಬಿದ್ದು ಸಾಯುತ್ತಿವೆ. ಅವುಗಳಿಗೆ ಮೊದಲು ಆಹಾರ, ನೀರು ಒದಗಿಸಿ ಪ್ರಾಣ ಉಳಿಸಲು ಗೋ ರಕ್ಷಣಾ ಸಮಿತಿ ಸದಸ್ಯರು ಮುಂದಾಗಲಿ. ಎರಡು ದಿನಗಳಲ್ಲಿ ವರದಿ ನೀಡಲಾಗುವುದು.
ಡಾ| ಗಂಗಾರೆಡ್ಡಿ, ಪಶು ವೈದ
ಜಾನುವಾರುಗಳು ಉತ್ತಮವಾಗಿ ಇದ್ದಾಗ ಅವುಗಳನ್ನು ಮಾರಾಟ ಮಾಡಲು ಸರ್ಕಾರಕ್ಕೆ ವರದಿ ಸಲ್ಲಿಸಲು ದೇವಸ್ಥಾನದ ಗೋವುಗಳೆಂದು ಹೇಳಿ, ಸತ್ತಾಗ ಅವು ದೇವಸ್ಥಾನದ ಗೋವುಗಳಲ್ಲ ಎಂದು ಗೋ ರಕ್ಷಣಾ ಸಮಿತಿ ಅಧ್ಯಕ್ಷರು ಹೇಳಿಕೆ ನೀಡುತ್ತಿರುವುದು ಒಳ್ಳೆಯದಲ್ಲ. ಪಟ್ಟಣದಲ್ಲಿ 70 ವರ್ಷಗಳಿಂದ ವಾಸವಾಗಿದ್ದೇನೆ. ಇವು ದೇವಸ್ಥಾನದ ಗೋವುಗಳಾಗಿವೆ.
ಬಸವರಾಜ ದೇಶಮುಖ, ಅಮರೇಶ್ವರ ದೇವಸ್ಥಾನದ ಕಮಿಟಿ ಅಧ್ಯಕ್ಷ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.