ಟೈಯರ್ ಕಾರ್ಖಾನೆಗಳಿಂದ ಅತೀ ಹೆಚ್ಚು ದುರ್ವಾಸನೆ, ಹೊಗೆ; ಬಂದ್‌ಗೆ ವಿವಿಧ ಸಂಘಟನೆಗಳ ತಯಾರಿ
ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಡಾ| ಸಿದ್ದು ಪಾಟೀಲ ಚರ್ಚೆ
Team Udayavani, Jul 6, 2023, 12:38 PM IST
ಹುಮನಾಬಾದ: ಕಳೆದ ಕೆಲ ದಿನಗಳಿಂದ ಹುಮನಾಬಾದ ಪಟ್ಟಣ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳಲ್ಲಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳಿಂದ ಗಬ್ಬು ವಾಸನೆ ಹರಡುತ್ತಿದ್ದು, ಇಲ್ಲಿನ ಜನರು ಪ್ರತಿನಿತ್ಯ ಉಸಿರುಗಟ್ಟುವ ಆತಂಕದಲ್ಲಿ ಬದುಕುತ್ತಿರುವ ಹಿನ್ನೆಲೆ ಜು.10ರಂದು ಹುಮನಾಬಾದ ಪಟ್ಟಣ ಬಂದ್ ಮಾಡಲು ಕೆಲ ಸಂಘಟನೆಗಳು ತಯಾರಿ ನಡಸಿವೆ.
ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಇಲ್ಲಿನ ಪರಿಸರ ಸುಧಾರಿಸುವ ನಿಟ್ಟಿನಲ್ಲಿ ಅನೇಕ ಭರವಸೆಗಳು ನೀಡಿದರು.
ಕಾನೂನು ಉಲ್ಲಂಘನೆ ಮಾಡುವ ಕಾರ್ಖಾನೆಗಳು ಯಾವುದೇ ಮುಲಾಜಿಲ್ಲದೆ ಬಂದ್ ಮಾಡಿಸುವ ಭರವಸೆಗಳು ಕೂಡ ನೀಡಿದರು. ಜನರ ಜೀವದ ಜತೆಗೆ ಕೈಗಾರಿಕಾ ಘಟಕಗಳು ಚೆಲ್ಲಾಟ ಆಡುತ್ತಿದ್ದರೂ ಕೂಡ ವಾಯು ಮಾಲಿನ್ಯ ಹಾಗೂ ಜಲ ಮಾಲಿನ್ಯ ನಿಂಯತ್ರಣ ಮಾಡುವಲ್ಲಿ ಪರಿಸರ ಇಲಾಖೆ ಅಧಿಕಾರಿಗಳು, ಬೀದರ್ ಜಿಲ್ಲಾಡಳಿತದ ಜತೆಗೆ ಮೂರು ಪಕ್ಷದ ರಾಜಕಾರಣಿಗಳು ಸಂಪೂರ್ಣ ವಿಫಲರಾಗಿದ್ದಾರೆ.
ಇಲ್ಲಿನ ಶಾಸಕ ಡಾ| ಸಿದ್ದು ಪಾಟೀಲ ಚುನಾವಣೆಯ ನಂತರ ಮೂರು ತಿಂಗಳಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡುವ ಭರವಸೆ ನೀಡಿದರು. ಕಳೆದ ತಿಂಗಳು ಕೈಗಾರಿಕಾ ಪ್ರದೇಶಕ್ಕೆ ಭೇಟಿನೀಡಿ ಪರಿಶೀಲನೆ ಕೂಡ ನಡೆಸಿದರು.
ಪರಿಸರ ಇಲಾಖೆ ಅಧಿಕಾರಿಗಳು ವಾಯು ಮಾಲಿನ್ಯದ ವಾಹನ ತಂದು ತಪಾಸಣೆ ಕೂಡ ನಡೆಸಿದರು. ಆದರೂ ಕೂಡ ಟೈಯರ್ ಕಂಪನಿಗಳು ರಾಜಾರೋಷವಾಗಿ ಹಗಲು ರಾತ್ರಿ ಎನ್ನದೆ ಪ್ರತಿನಿತ್ಯ ವಾಯು ಮಾಲಿನ್ಯ ಉಂಟುಮಾಡುತ್ತಿವೆ.
ಗಬ್ಬು ದುರ್ವಾಸನೆಯಿಂದ ಜನರು ಉಸಿರು ಗಟ್ಟುವ ರೀತಿಯಲ್ಲಿ ಅನುಭವ ಆಗುತ್ತಿದೆ. ಅನೇಕ ಜನರು ಮನೆಗಳಲ್ಲಿ ವಾಂತಿ ಮಾಡಿಕೊಂಡ ಘಟನೆಗಳು ಕೂಡ ನಡೆದಿವೆ. ಮಧ್ಯ ರಾತ್ರೆಯಲ್ಲಿ ಹೆಚ್ಚಿನ ಪ್ರಮಾಣದ ವಾಸನೆ ಬರುತ್ತಿದ್ದು, ಮನೆಗಳಲ್ಲಿ ಜನರು ಮಲಗುವುದು ಕೂಡ ಕಷ್ಟಕರವಾಗಿದೆ ಎಂದು ಪಟ್ಟಣದ ಜನರು ಹೇಳುತ್ತಿದ್ದಾರೆ.
ಬುಧವಾರ ಬೆಂಗಳೂರಿನ ವಿಧಾನಸಭೆ ಅಧಿವೇಶನದಲ್ಲಿ ಕೈಗಾರಿಕೆಗಳಿಂದ ಉಂಟಾಗುತ್ತಿರುವ ಪರಿಸರ ಹಾನಿ ಕುರಿತು ಪ್ರಸ್ತಾಪಿಸಿದ್ದ ಶಾಸಕ ಡಾ| ಸಿದ್ದು ಪಾಟೀಲ ಹುಮನಾಬಾದ ಪಟ್ಟಣದಿಂದ ಮೂರು ಕಿ.ಮೀ ದೂರದಲ್ಲಿ ಇರುವ ಟೈಯರ್ ಹಾಗೂ ರಾಸಾಯನಿಕ ಕಾರ್ಖಾನೆಗಳಿಂದ ಜನ-ಜಾನುವಾರುಗಳ ಜೀವಕ್ಕೆ ಆತಂಕ ಉಂಟಾಗುತ್ತಿದೆ. ವಾಯು ಮಾಲಿನ್ಯ ಜತೆಗೆ ಜಲ ಮಾಲಿನ್ಯ ಉಂಟಾಗುತ್ತಿದ್ದು, ಕಾನೂನು ಉಲ್ಲಂಘಟನೆ ಮಾಡುವ ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಚಿವ ಎಚ್.ಕೆ ಪಾಟೀಲ, 1983ರಲ್ಲಿ ಕೈಗಾರಿಕ ಘಟಕ ಆರಂಭಗೊಂಡಿದ್ದು, ಸುಮಾರು 42 ಎಕರೆ ಪ್ರದೇಶದಲ್ಲಿ 102 ವಿವಿಧ ಕಾರ್ಖಾನೆಗಳು ಮಂಜೂರಾತಿ ಪಡೆದುಕೊಂಡಿವೆ. ಈ ಪೈಕಿ 46 ಕೈಗಾರಿಕಾ ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಖಾನೆಗಳ ತ್ಯಾಜ್ಯವನ್ನು ನೇರವಾಗಿ ಹೊರ ಬಿಡುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕೂಡ ಮಾಜಿ ಶಾಸಕ ರಾಜಶೇಖರ ಪಾಟೀಲ ಕೂಡ ಕೈಗಾರಿಕಾ ಘಟಕಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಧ್ವನಿ ಎತ್ತಿದ್ದು, ಅಲ್ಲದೆ, ರಾಜ್ಯ ಪರಿಸರ ಮಂಡಳಿ ಅಧ್ಯಕ್ಷರು ಕೂಡ ಇಲ್ಲಿಗೆ ಭೇಟಿ ನೀಡಿರುವುದು ಇಲ್ಲಿ ಸ್ಮರಿಸಬಹುದಾಗಿದೆ.
ಪಟ್ಟಣದ ಬಂದ್: ಇದೇ ತಿಂಗಳ 10ರಂದು ಹುಮನಾಬಾದ ಪಟ್ಟಣ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಕೈಗಾರಿಕಾ ಘಟಕಗಳ ವಿರುದ್ಧ ಧ್ವನಿ ಎತ್ತಲ್ಲು ವಿವಿಧ ಸಂಘಟನೆಗಳು ಸಜ್ಜಾಗುತ್ತಿವೆ. ಈಗಾಗಲೇ ರಾಷ್ಟೀಯ ಸಾಮಾಜಿಕ ಕಾರ್ಯಕರ್ತರ ಸಂಘದ ಸೈಯದ್ ಯಾಸೀನ್ ತಹಶೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು, ಸ್ವಯಂ ಪ್ರೇರಿತವಾಗಿ ಬಂದ್ ಮಾಡಲು ಮನವಿ ಮಾಡಿದ್ದಾರೆ.
ಕೈಗಾರಿಕೆಗಳು ಕಾನೂನು ಮೀರಿ ಹಣ ಗಳಿಸುತ್ತಿವೆ. ಆದರೆ, ಇಲ್ಲಿನ ಜನರ ಜೀವಕ್ಕೆ ಬೆಲೆ ನೀಡುತ್ತಿಲ್ಲ. ಜನರ ಜೀವಕ್ಕೆ ಆಪತ್ತು ಬರುವ ಕಾರ್ಖಾನೆಗಳು ಯಾಕೆ ಬೇಕು ಎಂದು ಯಾಸಿನ್ ಪ್ರಶ್ನಿಸಿದ್ದಾರೆ. ಅಲ್ಲದೆ, ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದರು.
ಕೈಗಾರಿಕಾ ಪ್ರದೇಶದಲ್ಲಿನ ಟೈರ್ ಕಂಪನಿಗಳಿಂದ ಹಾಗೂ ರಾಸಾಯನಿಕ ಕಾರ್ಖಾನೆಗಳು ಸರ್ಕಾರದ ಮಾನದಂಡ ಮೀರಿ ಕೆಲಸ ಮಾಡುತ್ತಿವೆ. ಪ್ರತಿನಿತ್ಯ ಹುಮನಾಬಾದ, ಮಾಣಿಕನಗರ, ಗಡವಂತಿ ಹಾಗೂ ಸುತ್ತಲ್ಲಿನ ಪ್ರದೇಶಗಳಲ್ಲಿ ಗಬ್ಬು ವಾಸನೆ ಹರಡುತ್ತಿದೆ. ಆ ಗಬ್ಬು ವಾಸನೆ ಜನರಿಗೆ ವಾಕರಿಕೆ ಬರುವ ರೀತಿಯಲ್ಲಿದ್ದು, ಇದೇ ರೀತಿ ಮುಂದು ವರೆದರೆ ಇಲ್ಲಿನ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇಲ್ಲಿನ ಪರಿಸರ ಸಂರಕ್ಷಣೆ ಮಾಡುವಂತೆ ಕಾರ್ಖಾನೆಗಳ ವಿರುದ್ಧ ಕ್ರಮ ವಹಿಸುವಂತೆ ಒತಾಯಿಸಿ ಕೇಂದ್ರ ಪರಿಸರ ಇಲಾಖೆ ದೆಹಲಿಗೆ ಪತ್ರ ಬರೆದಿದ್ದು, ಅಲ್ಲಿಂದ ರಾಜ್ಯದ ಪರಿಸರ ಇಲಾಖೆ ಅಧಿಕಾರಿಗಳಿಗೆ ಪತ್ರ ಬಂದಿದ್ದು, ಈಗಲಾದರು ಅಧಿಕಾರಿಗಳು ಜನರ ಜೀವ ಉಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. –ಭಜರಂಗ ತಿವಾರಿ, ಮಾನವ ಹಕ್ಕುಗಳ ಹೋರಾಟಗಾರ
ನಮ್ಮ ಆರೋಗ್ಯ ಹಾಗೂ ನಮ್ಮ ಭವಿಷ್ಯದ ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹುಮನಾಬಾದ ಪಟ್ಟಣ ಸೇರಿದಂತೆ ಸುತ್ತಲ್ಲಿನ ಹಳ್ಳಿಗಳ ಜನರು ಹೋರಾಟಕ್ಕೆ ಇಳಿಯಬೇಕಾಗಿದೆ. ಬೇರೆಯವರಿಗಾಗಿ ಅಲ್ಲ, ನಮ್ಮ ಬದುಕಿಗಾಗಿ ನಾವು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಕಳೆದ ಕೆಲ ದಿನಗಳಿಂದ ದೂರದ ಊರುಗಳಿಗೂ ಕಾರ್ಖಾನೆಗಳ ಬಗ್ಗು ವಾಸನೆ ಹಬ್ಬುತ್ತಿದೆ. ನಿರಂತರ ಗಬ್ಬು ವಾಸನೆ ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುತ್ತದೆ. – ನವೀನ ಬತಲಿ, ರಾಜ್ಯ ಕಾರ್ಯದರ್ಶಿಗಳು, ಜಯ ಕರ್ನಾಟಕ ಜನಪರ ವೇದಿಕೆ
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.