ಮಳೆಗಾಗಿ ಜೋಕುಮಾರಸ್ವಾಮಿ ಮೊರೆ
Team Udayavani, Sep 22, 2018, 4:36 PM IST
ಬೀದರ: ನಾಲ್ಕುದಿನಗಳಿಂದ ಜಿಲ್ಲಾದ್ಯಂತ ಜೋಕುಮಾರಸ್ವಾಮಿ ಆರಾಧನಾ ಹಬ್ಬ ಸಡಗರದಿಂದ ನಡೆಯುತ್ತಿದ್ದು, ಆಧುನಿಕತೆಯ ಭರಾಟೆಯಲ್ಲೂ ಕೂಡ ಪುರಾತನ ಸಂಸ್ಕೃತಿಯನ್ನು ಮುಂದುವರಿಸಿ ಕೊಂಡು ಹೋಗಲಾಗುತ್ತಿದೆ.
ಜೋಕುಮಾರಸ್ವಾಮಿ ಜನಪದೀಯ ಸಂಸ್ಕೃತಿಯ ವಿಶಿಷ್ಟ ಹಬ್ಬವಾಗಿದೆ. ಜೋಕುಮಾರನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ, ಮಳೆ-ಬೆಳೆ ಸಮೃದ್ಧವಾಗಿ ಮನುಕುಲಕ್ಕೆ ಒಳ್ಳೆಯದು ಆಗುತ್ತದೆ ಎಂಬ ನಂಬಿಕೆ ಪುರಾತನ ಕಾಲದಿಂದಲ್ಲೂ ಇದೆ. ಇಂದಿಗೂ ಕೂಡ ಕೋಲಿ, ಕಬ್ಬಲಿಗ, ಗಂಗಾಮತ, ಬೆಸ್ತ, ತಳವಾರ, ಟೋಕರೆ ಕೋಲಿ ಸೇರಿದಂತೆ ಇತರೆ ಒಳ ಜಾತಿಯ ಸಮುದಾಯದವರು ಈ ಹಬ್ಬವನ್ನು ವೀಶೇಷವಾಗಿ ಆಚರಿಸಿಸುತ್ತಿದ್ದು, ಮನೆ-ಮನೆಗಳಿಗೆ ತೆರಳಿ ಜೋಕುಮಾರನ ದರ್ಶನ ಮಾಡಿಸುತ್ತಾರೆ.
ಮನೆಗಳಿಗೆ ತೆರಳಿದ ಸಂದರ್ಭದಲ್ಲಿ ಜಾನಪದ ಹಾಡುಗಳನ್ನು ಹಾಡಿ ಮನೆಯ ಜನರಿಗೆ ಶುಭ ಹಾರೈಸುತ್ತಾರೆ. ಅಲ್ಲದೆ, “ಜೋಕುಮಾರ ಬಂದಾನ್ ಖುಷಿಯಿಂದ, ಭಕ್ತಿಯಿಂದ ಸೇವೆ ಮಾಡಿ’ ಎಂದು ಹೇಳಿ ಧವಸ ಧಾನ್ಯ ಅಥವಾ ಹಣ ಪಡೆದು ಮುಂದಿನ ಮನೆಗೆ ಸಾಗುವ ಪದ್ದತಿ ಇಂದಿಗೂ ಆಚರಣೆಯಲ್ಲಿದೆ.
“ಅಡ್ಡಡ್ಡ ಮಳೆ ಬಂದು, ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡಗಳೆಲ್ಲ ಹೈನಾಗಿ ಜೋಕುಮಾರ, ಜೋಕುಮಾರ…
ಜೋಕುಮಾರ…. ಮಡಿವಾಳ ಕೇರಿ ಹೊಕ್ಕಾನ ಜೋಕುಮಾರ ಮುಡಿತುಂಬಾ ಹೂವ ಮುಡಿದಂತ ಚೆಲುವಿನ ತನ್ನ ಮಡಿಯಂದಾ ಜೋಕಮಾರ’ ಎಂದು ಮಹಿಳೆಯರು ಒಂದೇ ಧಾಟಿಯಲ್ಲಿ ಹಾಡುವ ಮೂಲಕ ಜನರನ್ನು ಆರ್ಕಷಿಸುತ್ತಿದ್ದಾರೆ.
ಪೌರಾಣಿಕ ಮಹತ್ವ: ಗಣೇಶ ಶಿಷ್ಟ ಸಂಸ್ಕೃತಿ ವಾರಸುದಾರನಾದರೆ, ಜೋಕುಮಾರಸ್ವಾಮಿ ಜಾನಪದ
ಸಂಸ್ಕೃತಿಯ ಪ್ರತೀಕ ಎಂದು ಗುರುತಿಸಲಾಗಿದೆ. ಗಣೇಶ ಹಾಗೂ ಜೋಕುಮಾರ ಇಬ್ಬರೂ ಭೂ ಲೋಕಸುತ್ತಿದ ಕತೆ ಇದಾಗಿದೆ. ಒಂದು ವಾರ ಕಾಲ, ಕಾಯಿ-ಕಡುಬಿನ ಭರ್ಜರಿ ಭೂರಿಭೋಜನ ಸವಿದ ಗಣೇಶ, ಭೂಲೋಕದಲ್ಲಿ ಎಲ್ಲವೂ ಸೌಖ್ಯವಾಗಿದೆ ಎಂದು ತನ್ನ ತಂದೆ-ತಾಯಿ (ಶಿವ-ಪಾರ್ವತಿಗೆ) ವರದಿ ನೀಡುತ್ತಾನೆ. ಜಾನಪದ ಸಂಸ್ಕೃತಿಯ ವಾರಸುದಾರನಾದ ಜೋಕುಮಾರ ಭೂಲೋಕದಲ್ಲಿ ಮಳೆ ಇಲ್ಲದೆ ಮನುಷ್ಯರು ಸಂಕಷ್ಟದಲ್ಲಿದ್ದಾರೆ.
ಹನಿ ನೀರಿಗಾಗಿ ಪ್ರಾಣಿ-ಪಕ್ಷಿಗಳು ಪರಿತಪಿಸುತ್ತಿವೆ. ಮಳೆ ಸುರಿಯದೇ ಹೋದರೆ ಭೂಲೋಕ ನರಕ ಕೂಪವಾಗುತ್ತದೆ ಎಂದು ಜನರ ಕಷ್ಟಕಾರ್ಪಣ್ಯಗಳ ವರದಿ ಒಪ್ಪಿಸುತ್ತಾನೆ. ಇದರ ಪ್ರತೀಕವಾಗಿ ಗಣೇಶ ಹಬ್ಬದ ನಂತರ ಜೋಕುಮಾರನ ಹಬ್ಬ ಆಚರಣೆ ಮಾಡಲಾಗುತ್ತದೆ. ಅಲ್ಲದೆ ಜೋಕುಮಾರ ಮಳೆಗಾಗಿ ವಿನಂತಿಸಿದ ಹಿನ್ನೆಲೆಯಲ್ಲಿ ಜೋಕುಮಾರನ ಸೇವೆಯಿಂದ ಉತ್ತಮ ಮಳೆ ಬರುವ ನಿರೀಕ್ಷೆ ಇದೆ ಎಂಬುದು ಸಮುದಾಯದ ಮಹಿಳೆರ ಮಾತು.
ವಾರಸುದಾರರು: ಜೋಕುಮಾರ ಗಂಗಾಮತ ಸಮುದಾಯದ ಮನೆಯಲ್ಲಿಯೇ ಜನ್ಮ ತಾಳಿದ ಹಿನ್ನೆಲೆಯಲ್ಲಿ ಗಂಗಾಮತ ಸಮುದಾಯದವರೆ ಜೋಕುಮಾರನ ವಾರಸುದಾರರು ಎಂದು ಹೇಳಲಾಗುತ್ತದೆ. ಈ ಸಮುದಾಯದ ಮಹಿಳೆಯರು ಗಣೇಶ ಹಬ್ಬದ ನಂತರ ಜೋಕುಮಾರನನ್ನು ತಲೆ ಮೇಲೆ ಹೊತ್ತು ಹಾಡು ಹಾಡುತ್ತ ಪಟ್ಟಣದ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ, ಮನೆ ಮನೆಗಳಿಗೆ ಭೇಟಿನೀಡಿ ಜೋಕುಮಾರನ ದರ್ಶನ ಕಲ್ಪಿಸುತ್ತಾರೆ, ಭಕ್ತರಿಂದ ಧವಸ ಧಾನ್ಯಗಳನ್ನು ಸಂಗ್ರಹಿಸುತ್ತಾರೆ.
ವಿಶೇಷ ಆಚರಣೆ: ಭಾದ್ರಪದ ಮಾಸದ ಅಷ್ಟಮಿ ದಿನದಂದು ಜೋಕುಮಾರ ಹುಟ್ಟುತ್ತಾನೆ. ಮಣ್ಣಿನಿಂದ ತಯಾರಿಸಲಾದ
ಮೂರ್ತಿಗೆ ಬೇವಿನ ಎಸಳುಗಳ ಉಡುಗೆಯೊಂದಿಗೆ ವಿವಿಧ ಪುಷ್ಪಗಳಿಂದ ಅಲಂಕರ ಮಾಡಲಾಗುತ್ತದೆ. ಅಲಂಕೃತ
ಮೂರ್ತಿಯನ್ನು ಮಹಿಳೆಯರು ಬುಟ್ಟಿಯಲ್ಲಿಟ್ಟುಕೊಂಡು ಆತನಿಗೆ ಸಂಬಂಧಿಸಿದ ಕತೆ-ಹಾಡುಗಳನ್ನು ಹಾಡುತ್ತ ಸಂಚರಿಸುತ್ತಾರೆ.
8 ದಿನಗಳ ಕಾಲ ವಿವಿಧೆಡೆ ಸಂಚರಿಸಿದ ಜೋಕುಮಾರನಿಗೆ ಒಂಭತ್ತನೆ ದಿನ ಹಣ್ಣಿಮೆ ದಿನದಂದು ಹೋಳಿಗೆ, ತುಪ್ಪದ ನೈವೇದ್ಯ ತೋರಿಸಿ, ಬಟ್ಟೆ ತೊಳೆಯುವ ಅಗಸರ ಬಂಡೆಯ ಕೆಳಗೆ ಮೂರ್ತಿ ಇರಿಸಲಾಗುತ್ತದೆ. ಎರಡು ದಿನಗಳ ನಂತರ ಜೋಕುಮಾರ ಸ್ವಾಮಿಯನ್ನು ನೋಡಲು ಮಹಿಳೆಯರು ಹೋಗುತ್ತಾರೆ. ಆತನ ಸುತ್ತಲೂ ಹುಳಗಳು ಇದ್ದರೆ ದೇಶಕ್ಕೆ ಗ್ರಾಮಕ್ಕೆ ಒಳ್ಳೆದಾಗುತ್ತದೆ ಎಂಬ ನಂಬಿಕೆ ಇದೆ ಎಂಬುದು ಕಲ್ಲಮ್ಮ ಕೋಲಿ, ತೆಜಮ್ಮಾ ಭಾವಿದೊಡ್ಡಿ, ಕಲ್ಲಮ್ಮ ಕೋಲಿ, ತೆಜಮ್ಮಾ ಭಾವಿದೊಡ್ಡಿ ಹೇಳಿತ್ತಾರೆ.
ಸದ್ಯ ಜಿಲ್ಲೆಯಲ್ಲಿ ಮಳೆ ಕೊರತೆ ಪ್ರಮಾಣ ಹೆಚ್ಚಿದ್ದು, ಈ ಪುರಾತನ ಜೋಕುಮಾರ ಹಬ್ಬ ಆಚರಣೆ ಮೂಲಕವಾದರೂ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯಲಿ ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.