ಮೃತ್ಯುಕೂಪವಾದ ರಾಂಪೂರ-ತೋರಣಾವಾಡಿ ರಸ್ತೆ!
Team Udayavani, Oct 11, 2021, 11:07 AM IST
ಕಮಲನಗರ: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ತಾಲೂಕಿನ ರಾಂಪೂರ ಕ್ರಾಸ್-ತೋರಣಾವಾಡಿ ಗ್ರಾಮದ ಮುಖ್ಯ ರಸ್ತೆ ದುರಸ್ತಿ ಭಾಗ್ಯ ಕಾಣದಂತಾಗಿದೆ.
ರಸ್ತೆಯುದ್ದಕ್ಕೂ ಗುಂಡಿಗಳಲ್ಲಿ ಮಳೆ ನೀರು ನಿಂತಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ದುಸ್ಥಿತಿ ಇದೆ. ರಸ್ತೆ ಸಂಪೂರ್ಣ ಹದಗೆಟ್ಟು ಮೊಣಕಾಲುದ್ದ ತಗ್ಗು, ದಿನ್ನೆಗಳು ಬಿದ್ದಿವೆ. ಇದರ ನಡುವೆ ಮಳೆ ನೀರು ಕೂಡಾ ನಿಂತಿರುವ ಪರಿಣಾಮ ವಾಹನ ಸವಾರರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ತಗ್ಗಿನ ಆಳ ಅರಿಯದೇ ಕೆಲವರು ಆಯತಪ್ಪಿ ಬಿದ್ದು ಗಾಯಗಳಾದ ಉದಾಹರಣೆಗಳು ಸಾಕಷ್ಟಿವೆ. ದಿನೇ-ದಿನೆ ರಸ್ತೆಯಲ್ಲಿನ ಡಾಂಬರು ಕಿತ್ತು ಬರುತ್ತಿದೆ. ಜಲ್ಲಿ ಕಲ್ಲುಗಳು ಸ್ಪರ್ಧೆಯಂತೆ ಮೇಲೇಳುತ್ತಿವೆ. ಆಗಾಗ ಮಳೆ ಬೀಳುತ್ತಿರುವುದರಿಂದ ಗುಂಡಿಗಳಲ್ಲಿ ನೀರು ನಿಂತಿರುವುದರಿಂದ ನಿತ್ಯ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ. ಆದರೂ ಸಂಬಂಧಿತ ಅಧಿಕಾರಿಗಳು ರಸ್ತೆ ದುರುಸ್ತಿಗೆ ಮುಂದಾಗದಿರುವುದಕ್ಕೆ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ತೊಗರಿ ಬೆಳೆಗೆ ಹುಳ-ಕೀಟ, ಫಂಗಸ್ ಕಾಟ
ಈ ರಸ್ತೆಗೆ ಹೊಂದಿಕೊಂಡಿರುವ ಗ್ರಾಮದ ಜನರು ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಿಗಾಗಿ ತಾಲೂಕು ಕೇಂದ್ರಕ್ಕೆ, ಪಟ್ಟಣಗಳಿಗೆ ಸಂಚರಿಸಲು ಇದೇ ರಸ್ತೆ ಮೂಲಕ ಹೋಗಬೇಕಿದೆ. ಬೇರೆ ಮಾರ್ಗವಿಲ್ಲದೇ ಅನಿವಾರ್ಯವಾಗಿ ಎಲ್ಲರೂ ಇದೇ ರಸ್ತೆ ಮೂಲಕ ಪ್ರಯಾಣ ಮಾಡಬೇಕು. ಮಕ್ಕಳು, ವೃದ್ಧರು ಸೇರಿದಂತೆ ಗರ್ಭಿಣಿಯರು ಕೂಡಾ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ರಸ್ತೆ ದುರುಸ್ತಿ ಮಾಡುವಂತೆ ಸಂಬಂಧಿತ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತೋರಣಾವಾಡಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಸಂಬಂಧಿತ ಅಧಿಕಾರಿಗಳು ಕೂಡಲೇ ರಸ್ತೆ ದುರುಸ್ತಿ ಕಾರ್ಯ ಮಾಡಿಸಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲಕ ಮಾಡಿಕೊಡುವಂತೆ ತೊರಣಾವಾಡಿ ಗ್ರಾಮದ ದೇವಿದಾಸ ಹೋನ್ನಾಳೆ, ಲಖನ, ಸೋಮನಾಥ, ವಿನೋದ, ರಾಮ, ಅಂಕುಶ ಆಗ್ರಹಿಸಿದ್ದಾರೆ.
ರಾಂಪೂರ ಕ್ರಾಸನಿಂದ ತೋರಣಾವಾಡಿ ಗ್ರಾಮದವರೆಗಿನ ರಸ್ತೆ ಹಾಳಾಗಿದ್ದು, ವಾಹನ ಸವಾರರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಂಬಂಧಿತ ಅಧಿಕಾರಿಗಳು ಶೀಘ್ರ ರಸ್ತೆ ದುರುಸ್ತಿ ಮಾಡಿಸಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು
ಸೋಮನಾಥ ಕಸ್ತೂರೆ, ವಾಹನ ಸವಾರ
ರಸ್ತೆ ಹಾಳಾಗಿರುವ ಬಗ್ಗೆ ಗೊತ್ತಾಗಿದೆ. ಮಳೆ ಇದ್ದ ಕಾರಣ ರಸ್ತೆ ದುರುಸ್ತಿ ಮಾಡಲು ಆಗಲಿಲ್ಲ. ಶೀಘ್ರದಲ್ಲಿ ರಸ್ತೆ ದುರುಸ್ತಿ ಕಾರ್ಯ ಮಾಡಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು.
ವೀರಶೇಟ್ಟಿ ರಾಠೊಡ, ಎಇಇ ಲೋಕೋಪಯೋಗಿ ಇಲಾಖೆ ಔರಾದ
ಮಹಾದೇವ ಬಿರಾದಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.