ನರೇಗಾದಲ್ಲಿ ಹೆಚ್ಚು ಕೆಲಸ ನೀಡಲು ಮನವಿ
Team Udayavani, Feb 10, 2019, 9:51 AM IST
ಬೀದರ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಶನಿವಾರ ವಿವಿಧೆಡೆ ಸಂಚರಿಸಿ ನರೇಗಾ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಇನ್ನೂ ಹೆಚ್ಚು ದುಡಿಮೆ ನೀಡುವಂತೆ ಒತ್ತಾಯಿಸಿದರು.
ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಒಂದು ಹಾಜರಿಗೆ ಈಗ ನೀಡುತ್ತಿರುವ ಕೆಲಸದ ಪ್ರಮಾಣ ತೀರ ಕಡಿಮೆಯಾಗಿದೆ. ನಾವು ದುಡಿದು ಉಣ್ಣುವ ಜನರು. ದುಡಿಮೆಗೆ ತಕ್ಕಂತೆ ಕೂಲಿ ನೀಡಿ ಎಂದು ಹೇಳಿದರು. ಉದ್ದ, ಅಗಲ ಏಳು ಅಡಿ ಹಾಗೂ ಆಳ ಒಂದು ಅಡಿ ನಿಗದಿಪಡಿಸಿ ಹೂಳು ತೆಗೆಯಲು ತ್ರಾಸು ಆಗುತ್ತಿದೆ. ಕೈಯಲ್ಲಿ ಗುಳ್ಳೆಗಳೆದ್ದಿವೆ. ತ್ರಾಸದಾಯಕ ಕೆಲಸ ಕೊಡಬೇಡಿ. ಕೂಲಿಯನ್ನು ಸರಿಯಾಗಿ ನೀಡಿರಿ ಎಂದು ಇನ್ನುಳಿದ ಫಲಾನುಭವಿಗಳು ಮನವಿ ಮಾಡಿದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಇವರ ಸಮಸ್ಯೆಗೆ ಸ್ಪಂದಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಡಾ| ಎಚ್.ಆರ್.ಮಹಾದೇವ ಅವರು, ಜಿಲ್ಲೆಯ ಒಟ್ಟು 18 ಕೆರೆಗಳಲ್ಲಿ ಹೂಳು ತೆಗೆಯಲಾಗುತ್ತಿದೆ. ಕೆರೆ ಹೂಳೆತ್ತುವ ಕಾಮಗಾರಿ ಬದಲು ಬೇರೆ ಕೆಲಸ ನೀಡಿದರೆ ಉತ್ತಮ ಎಂದು ಸಲಹೆ ನೀಡಿದರು. ಗೋಕಟ್ಟೆ ಸೇರಿದಂತೆ ಬೇರೆ ರೀತಿಯ ಕಾಮಗಾರಿಗಳನ್ನು ನರೇಗಾದಡಿ ಕೈಗೆತ್ತಿಕೊಳ್ಳಿರಿ ಎಂದು ಕಾರ್ಯದರ್ಶಿಗಳು ಸೂಚಿಸಿದರು.
ಅಹವಾಲು ಆಲಿಕೆ: ನರೇಗಾ ಯೋಜನೆಯಡಿ ಮರಖಲ್ ಕೆರೆಯಲ್ಲಿ ಹೂಳು ತೆಗೆಯುತಿದ್ದ ಕಾಮಗಾರಿ ಸ್ಥಳಕ್ಕೆ ಕಾರ್ಯದರ್ಶಿಗಳು ಭೇಟಿ ನೀಡಿದರು. ಈ ವೇಳೆ ನಮಗೆ ಕೂಲಿ ಸರಿಯಾಗಿ ಸಿಗುತ್ತಿಲ್ಲ ಎಂದು ಕೆಲವರು ದೂರಿದರು. ಸರ್ಕಾರದಿಂದ ಮನೆಗಳು ಸಿಕ್ಕಿವೆಯಾ? ಎಂದು ಅಲ್ಲಿನ ಫಲಾನುಭವಿಗಳಿಗೂ ಕೂಡ ಕೇಳಿದರು. ನೂರಾರು ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದ ಅಲ್ಲಿನ ಗ್ರಾಮಸ್ಥರಿಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಕಾರ್ಯದರ್ಶಿಗಳು ಪಿಡಿಒಗೆ ಸೂಚಿಸಿದರು. ಕೆಲವೇ ದಿನಗಳಲ್ಲಿ ತಮಗೆ ಕೂಲಿ ನೀಡುವ ವ್ಯವಸ್ಥೆ ಮಾಡುವುದಾಗಿ ಕೂಲಿಕಾರರಿಗೆ ಅಭಯ ನೀಡಿದರು.
ಬಾವಿ ವೀಕ್ಷಣೆ: ಅಷ್ಟೂರ ಮಾರ್ಗದಲ್ಲಿರುವ ಸಾರ್ವಜನಿಕ ಬಾವಿಯೊಂದನ್ನು ವೀಕ್ಷಿಸಿದ ಕಾರ್ಯದರ್ಶಿಗಳು, ಬಾವಿಯಲ್ಲಿನ ಕಲ್ಮಷ ಹೊರಗೆ ತೆಗೆದು, ನರೇಗಾದಡಿ ಕೆಲಸ ಕೈಗೆತ್ತಿಕೊಂಡು ನೀರು ತುಂಬಿಸಿ ಎಂದು ಅಲ್ಲಿನ ಪಿಡಿಒ ಅವರಿಗೆ ಸೂಚಿಸಿದರು.
ಕಾಮಗಾರಿಗೆ ಮೆಚ್ಚುಗೆ: ಬಸವಕಲ್ಯಾಣ ತಾಲೂಕಿನ ಪರ್ತಾಪೂರ ಗ್ರಾಮಕ್ಕೆ ಭೇಟಿ ನೀಡಿದ ಕಾರ್ಯದರ್ಶಿಗಳು, ನರೇಗಾ ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಮಗೆ ಇನ್ನೂ ಹೆಚ್ಚು ದಿನಗಳ ಕಾಲ ಕೆಲಸ ನೀಡಬೇಕು ಎಂದು ಕೆಲವು ಮಹಿಳೆಯರು ಬೇಡಿಕೆ ಇಟ್ಟರು. ನೂರು ದಿನಗಳ ಬದಲಾಗಿ 150 ದಿನಗಳ ಕೆಲಸ ನೀಡುತ್ತಿದ್ದು, ಎಲ್ಲರಿಗೂ ಉದ್ಯೋಗ ಸಿಗಲಿದೆ ಎಂದು ಕಾರ್ಯದರ್ಶಿಗಳು ತಿಳಿಸಿದರು.
ಮೋರ್ಖಂಡಿ ಕೆರೆಗೆ ಭೇಟಿ: ಬಸವಕಲ್ಯಾಣ ತಾಲೂಕಿನ ಮೋರ್ಖಂಡಿಗೆ ಭೇಟಿ ನೀಡಿದ ಕಾರ್ಯದರ್ಶಿಗಳು, ಅಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿದ್ದ ಕಾಮಗಾರಿ ಕಂಡು ಬಸವಕಲ್ಯಾಣ ತಾಲೂಕು ಪಂಚಾಯತ್ ಇಒ ಅವರನ್ನು ಅಭಿನಂದಿಸಿದರು. ಈ ವೇಳೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.