ವರ್ತಮಾನಕ್ಕೆ ಸ್ಪಂದಿಸುವ ಗುಣ ಕಾವ್ಯದಲ್ಲಿರಲಿ : ರೇವಣಸಿದ್ದಪ್ಪ
Team Udayavani, Jan 5, 2019, 9:17 AM IST
ಬಸವಕಲ್ಯಾಣ: ಕವಿಯಾದವನು ವರ್ತಮಾನ ವಿದ್ಯಮಾನದ ಕುರಿತು ಚಿಂತಿಸಬೇಕು. ಕವಿಯ ಕಾವ್ಯ ವರ್ತಮಾನಕ್ಕೆ ಸ್ಪಂದಿಸುವ ಗುಣ ಹೊಂದಿರಬೇಕು ಎಂದು ಉಪನ್ಯಾಸಕ ರೇವಣಸಿದ್ದಪ್ಪ ದೊರೆಗಳು ಅಭಿಪ್ರಾಯಪಟ್ಟರು.
ಬಿಕೆಡಿಬಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಪ್ರತಿಮಾ ಪ್ರಕಾಶನ ಸಹಯೋಗದಲ್ಲಿ ನಡೆದ ಕವಿ ವೀರಶೆಟ್ಟಿ ಪಾಟೀಲರ ಸಾತ್ವಿಕ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿ, ಸಾತ್ವಿಕ ಹನಿಗವನ ಸಂಕಲನದಲ್ಲಿ ವ್ಯಂಗ್ಯ, ವಿಡಂಬನೆ, ದಾಂಪತ್ಯ, ಮುನಿಸು, ಜೀವನದ ಕಟು ಸತ್ಯದ ವಿಮರ್ಶೆ, ರಾಜಕೀಯ, ಆಧ್ಯಾತ್ಮಿಕ ಸಂದೇಶಗಳು, ಕೃಷಿ ಕ್ಷೇತ್ರದ ಸಮಸ್ಯೆಗಳು, ಮನುಷ್ಯ ದ್ವೇಷಗಳ ಕುರಿತು ಹನಿಗವನಗಳು ಮೂಡಿ ಬಂದಿವೆ ಎಂದರು.
ಬೀದರನ ಸರ್ಕಾರಿ ಐಟಿಐ ಕಾಲೇಜು ಪ್ರಾಚಾರ್ಯ ಶಿವಶಂಕರ ಟೋಕ್ರೆ ಮಾತನಾಡಿ, ಸಂಕೇತಗಳ ಮೂಲಕ ಸಂಭಾಷಿಸುತ್ತಿದ್ದೇವೆ. ಒಂದು ರೀತಿಯಲ್ಲಿ ಸಮಾಜದಲ್ಲಿ ಮೌನ ಆವರಿಸಿದೆ. ತಾಲೂಕು ಕಸಾಪ ಸಕ್ರಿಯವಾಗಿ ಸರಣಿ ಕಾರ್ಯಕ್ರಮ ಆಯೋಜಿಸುವ ಮೂಲಕ ಉತ್ತಮ ಕಾರ್ಯದಲ್ಲಿ ತೊಡಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶಟ್ಟಿ ಮಾತನಾಡಿ, ಕನ್ನಡ ಭಾಷೆ ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಕನ್ನಡ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳಬೇಕಾಗಿದೆ. ಕನ್ನಡ ವಿಭಿನ್ನ ಭಾಷೆಯಾಗಬೇಕು. ಮುಂದಿನ ದಿನಗಳಲ್ಲಿ ಸಮ್ಮೇಳನ ಆಯೋಜಿಸುವ ಮೂಲಕ ಕನ್ನಡ ನಾಡು-ನುಡಿ, ಸಾಹಿತಿಗಳನ್ನು ಬೆಳಕಿಗೆ ತರುವ ಕಾರ್ಯ ಪರಿಷತ್ತು ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹನಮಂತರಾವ ವಿಸಾಜಿ, ನಾಗೇಂದ್ರ ಬಿರಾದರ, ವೀರಣ್ಣ ಮಂಠಾಳ್ಕರ್, ಮಲ್ಲಿಕಾರ್ಜುನ ಕಾಡಾದಿ, ನಿತಿನ್ ನೀಲಕಂಠೆ
ಕವನ ವಾಚನ ಮಾಡಿದರು.
ಸಾನ್ನಿಧ್ಯವಹಿಸಿ ತ್ರಿಪೂರಾಂತನ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಮಕ್ಕಳ ಹುಟ್ಟುಹಬ್ಬ ದೀಪ ಆರಿಸುವ ಬದಲು ದೀಪ ಹಚ್ಚುವ ಮೂಲಕ ಆಚರಿಸಬೇಕು. ಹುಟ್ಟುಹಬ್ಬದ ಆಚರಣೆಯಲ್ಲಿ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನಾರ್ಹ ಎಂದರು.
ದೇವೇಂದ್ರ ಬರಗಾಲೆ ಪ್ರಾಸ್ತವಿಕ ಮಾತನಾಡಿದರು. ವೀರಶೆಟ್ಟಿ ಪಾಟೀಲ ದಂಪತಿ ಹಾಗೂ ಸಂಚಾರಿ ಪಿಎಸ್‌ಐ, ತಾಲೂಕು ಕಸಾಪ ಅಧ್ಯಕ್ಷ ಡಾ| ರುದ್ರಮಣಿ ಮಠಪತಿ ಸೇರಿದಂತೆ ಇತರರು ಇದ್ದರು. ಚನ್ನಬಸಪ್ಪ ಶೆಟ್ಟೆಪ್ಪಾ ನಿರೂಪಿಸಿದರು. ರಮೇಶ ಉಮಾಪೂರೆ ಸ್ವಾಗತಿಸಿದರು. ಶಂಕರ ಕುಕ್ಕಾ ಪಾಟೀಲ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.