ಸೀಮಿನಾಗನಾಥ ದೇವರ ಜಾತ್ರೆ-ವೈಭವದ ರಥೋತ್ಸವ
Team Udayavani, Nov 26, 2018, 1:00 PM IST
ಹುಮನಾಬಾದ: ಹೈದ್ರಾಬಾದ್ ಕರ್ನಾಟಕ ಭಾಗದ ಇತಿಹಾಸ ಪ್ರಸಿದ್ಧ ಹಳ್ಳಿಖೇಡ(ಬಿ) ಪಟ್ಟಣದ ಸೀಮಿನಾಗನಾಥ ಜಾತ್ರೆ ನಿಮಿತ್ತ ದೇವರ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ರವಿವಾರ ಬೆಳಗಿನ ಜಾವ ಸಡಗರ ಸಂಭ್ರಮದಿಂದ ನಡೆಯಿತು.
ಪರಂಪರೆಯಂತೆ ಶನಿವಾರ ತಡರಾತ್ರಿ ನಡೆದ ಕಾರ್ಯಕ್ರಮದಲ್ಲಿ ಸಚಿವ ರಾಜಶೇಖರ ಪಾಟೀಲ ವಿಶೇಷ ಪೂಜೆ ಸಲ್ಲಿಸಿದ ನಂತರ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ವೈವಿಧ್ಯಮಯ ದೇಸಿ ವಾದ್ಯಮೇಳದೊಂದಿಗೆ ನಾಗನಾಥ ದೇವರ ಪಲ್ಲಕ್ಕಿ ಉತ್ಸವ ದೇವಸ್ಥಾನಕ್ಕೆ ಐದು ಪ್ರದಕ್ಷಿಣೆ ಹಾಕುವ ಹೊತ್ತಿಗೆ ನಸುಕಿನ ಜಾವವಾಗಿತ್ತು. ನಂತರ ಪಲ್ಲಕ್ಕಿ ರಥ ಮೈದಾನಕ್ಕೆ ಹೊರಟಿತು. ರಥದಲ್ಲಿ ಚಿಕ್ಕಮಠದ ಪಂಡಿತಾರಾಧ್ಯ ಸ್ವಾಮೀಜಿ ಆಸೀನರಾದ ನಂತರ ನೆರೆದ ಸಾವಿರಾರು ಭಕ್ತರಿಂದ ಜೈಘೋಷಗಳು ಕೇಳಿ ಬರುತ್ತಿದ್ದಂತೆ ರಥೋತ್ಸವ ಆರಂಭಗೊಂಡಿತು.
ರಥೋತ್ಸವ ಆರಂಭಗೊಳ್ಳುತ್ತಿದ್ದ ಹಾಗೆ ಹರಕೆ ಹೊತ್ತ ಭಕ್ತರು ಸಿಹಿ ತಿನಿಸು, ಬಾಳೆ ಹಣ್ಣು, ಉತ್ತತ್ತಿ, ಬಾದಾಮ, ಕಲ್ಲು ಸಕ್ಕರೆ ರಥಕ್ಕೆ ಸಮರ್ಪಿಸುವ ಮೂಲಕ ಭಕ್ತಿಸೇವೆ ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತೀಬಾಯಿ ಶೇರಿಕಾರ, ತಹಶೀಲ್ದಾರ್ ಡಿ.ಎಂ.ಪಾಣಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರೂ ಆದ ಹಾಲಿ ಪುರಸಭೆ ಸದಸ್ಯ ಮಹಾಂತಯ್ಯ ತೀರ್ಥ, ದೇವಸ್ಥಾನ ಪ್ರಧಾನ ಅರ್ಚಕ ಡಾ| ಅಶೋಕಸ್ವಾಮಿ ಹಾಲಾ, ಖ್ಯಾತ ಉದ್ಯಮಿ ದತ್ತಕುಮಾರ ಆರ್.ಚಿದ್ರಿ, ಖ್ಯಾತ ಸಂಗೀತ ಕಲಾವಿದ ಗುರುಲಿಂಗಯ್ಯಸ್ವಾಮಿ ಸೇರಿದಂತೆ ದೇವಸ್ಥಾನ ಸದ್ಭಕ್ತ ಮಂಡಳಿ ಪ್ರಮುಖರು ಇದ್ದರು.
ಜಂಗಿ ಕುಸ್ತಿ: ಜಾತ್ರೆ ನಿಮಿತ್ತ ಆಯೋಜಿಸಿದ್ದ ಜಂಗಿಕುಸ್ತಿಯಲ್ಲಿ ರಾಜ್ಯದ ಬೆಳಗಾವಿ, ವಿಜಯಪುರ, ರಾಯಚೂರು ಮಾತ್ರವಲ್ಲದೇ, ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ, ಕೊಲ್ಲಾಪುರ, ಪುಣೆ, ತೆಲಂಗಾಣ ಹೈದ್ರಾಬಾದ, ಆಂಧ್ರ ಪ್ರದೇಶದ ಪ್ರಸಿದ್ದ ಕುಸ್ತಿ ಪಟುಗಳು ಸಾಹಸ ಪ್ರದರ್ಶನ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.