ಸಮಾಜ ಸುಧಾರಣೆಯ ಹರಿಕಾರ ಅರಸು
Team Udayavani, Aug 21, 2017, 11:46 AM IST
ಬೀದರ: ಮಾಜಿ ಮುಖ್ಯಮಂತ್ರಿ, ಮುತ್ಸದ್ಧಿ ರಾಜಕಾರಣಿ ಡಿ. ದೇವರಾಜ ಅರಸು ಅವರದು ಅಪರೂಪದ ವ್ಯಕ್ತಿತ್ವ. ಸಮಾಜದಲ್ಲಿ ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ ಸಮಾಜ ಸುಧಾರಣೆಯ ಹರಿಕಾರರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಬಣ್ಣಿಸಿದರು. ನಗರದ ರಂಗ ಮಂದಿರದಲ್ಲಿ ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ದೇವರಾಜ ಅರಸು ಅವರ 102ನೇ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇಡೀ ವಿಶ್ವದಲ್ಲಿಯೇ ಪರಿಣಾಮಕಾರಿ
ಭೂಸುಧಾರಣೆ ಕಾಯ್ದೆ ಜಾರಿಯಾಗಿದ್ದು ಕರ್ನಾಟಕದಲ್ಲಿ ಮಾತ್ರ. ಇದರ ಶ್ರೇಯಸ್ಸು ಅರಸು ಅವರಿಗೆ ಸಲ್ಲುತ್ತದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಿ ಈ ಮೂಲಕ ಎಲ್ಲ ವರ್ಗದ ಜನತೆಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನ ಸಿಗುವಂತೆ ಮಾಡಿದವರು ಅರಸು ಅವರು ಎಂದು ಸ್ಮರಿಸಿದರು. ರಾಜ್ಯ ಸರ್ಕಾರವು ಎಲ್ಲ ಹಿಂದುಳಿದ ವರ್ಗಗಳ ಏಳ್ಗೆಗೆ ಹತ್ತು ಹಲವು ಯೋಜನೆಗಳನ್ನು ನೀಡಿ ಅನುಷ್ಠಾನಗೊಳಿಸಿದೆ. ಸಾಮಾಜಿಕ ನ್ಯಾಯಕ್ಕೆ ಬದ್ಧವಿರುವ ಸರ್ಕಾರ ಇದಾಗಿದೆ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮೂಲಕ ನಾನಾ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ, ವಸತಿ ನಿಲಯ, ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ ಕಲ್ಪಿಸುವುದು ಸೇರಿದಂತೆ ವಿವಿಧ
ಸೌಕರ್ಯಗಳಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಸಾವಿರಾರು ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ ಎಂದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ಈಗಾಗಲೇ ಹಲವಾರು ವಸತಿ ಶಾಲೆಗಳ ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮತ್ತೀಗ ಹೊಸ ವಸತಿ ಶಾಲೆಗಳು ಮಂಜೂರಾಗಿವೆ. ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ವಿಶೇಷ ಅನುದಾನ ಸಿಗುತ್ತಿದೆ. ಈ ಅನುದಾನದಿಂದ ಎಲ್ಲ ವಸತಿ ನಿಲಯಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು. 20ನೇ ಶತಮಾನ ಭಾರತೀಯರ ಶತಮಾನವಾಗಿದೆ. ಇಡೀ ವಿಶ್ವದಲ್ಲಿ ಭಾರತಿಯರೇ ಅತಿ ಹೆಚ್ಚು ಸಂಖ್ಯೆಯಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಹೀಗೆ ದೇಶವು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ತೋರಿದೆ. ಇದರ ಶ್ರೇಯಸ್ಸು ರಾಜೀವ ಗಾಂಧಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ತೋರಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಗುಲಬರ್ಗಾ ವಿವಿ ನಿರ್ದೇಶಕ ಪ್ರೊ| ಎಚ್.ಟಿ. ಪೋತೆ ಉಪನ್ಯಾಸ ನೀಡಿದರು. ಶಾಸಕ ರಹೀಮ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಸಂಸದ ಭಗವಂತ ಖೂಬಾ, ನಗರ ಸಭೆ ಉಪಾಧ್ಯಕ್ಷೆ ಶಾಲಿನಿ ಚಿಂತಾಮಣಿ, ಬುಡಾ ಅಧ್ಯಕ್ಷ ಸಂಜಯ ಜಾಗೀರದಾರ, ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ, ಸದಸ್ಯರಾದ ಅಂಬಾದಾಸ ಕೋರೆ, ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿ ಡಾ| ಆರ್. ಸೆಲ್ವಮಣಿ, ಸಹಾಯಕ ಆಯುಕ್ತ ಶರಣಬಸಪ್ಪ ಕೊಟಪ್ಪಗೋಳ ಉಪಸ್ಥಿತರಿದ್ದರು. ಬಿಸಿಎಂ ಜಿಲ್ಲಾ ಅಧಿಕಾರಿ ಹೊಗಿಬಂಡಿ ವೆಂಕಟೇಶ ಸ್ವಾಗತಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.