ರೈತರಿಗೆ “ಸಿಹಿ’ತರದ ಸಕ್ಕರೆ ಕಾರ್ಖಾನೆಗಳು!
Team Udayavani, Nov 20, 2018, 12:33 PM IST
ಬೀದರ: ಸಕ್ಕರೆ ಕಾರ್ಖಾನೆಗಳನ್ನೇ ನೆಚ್ಚಿಕೊಂಡು ತಪ್ಪದೇ ಕಬ್ಬು ಪೂರೈಸುತ್ತಿರುವ ರೈತರಿಗೆ ಸಿಹಿಯಾಗಬೇಕಾದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಹಿಯಾಗಿ ಪರಿಣಮಿಸಿವೆ. ಜಿಲ್ಲೆಯ ಆರು ಸಕ್ಕರೆ ಕಾರ್ಖಾನೆಗಳ ಪೈಕಿ ಮೂರು ಕಾರ್ಖಾನೆಗಳು ರೈತರ ಬಾಕಿ ಹಣವನ್ನು ಹಾಗೇ ಉಳಿಸಿಕೊಂಡಿವೆ. ಕಾರ್ಖಾನೆಗಳು ನಿಗದಿ ಪಡಿಸಿದ 1,900 ರೂ. ದರವನ್ನೂ ಕೂಡ ಪಾವತಿಸಿಲ್ಲ.
ರೈತರು ಮಾತ್ರ ಸಕ್ಕರೆ ಕಾರ್ಖಾನೆಗಳಿಗೆ ಸೂಕ್ತ ಸಮಯದಲ್ಲಿ ಕಬ್ಬು ಪೂರೈಸುತ್ತಿದ್ದು, ಕಾರ್ಖಾನೆಗಳು ಮಾತ್ರ ರೈತರಿಗೆ ಸೂಕ್ತ ಸಮಯಕ್ಕೆ ಹಣ ಪಾವತಿಸುತ್ತಿಲ್ಲ ಎಂಬ ಗೋಳು ಪ್ರತಿವರ್ಷ ಇದ್ದದ್ದೇ. ಪ್ರಸಕ್ತ ವರ್ಷ ರೈತರಿಗೆ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಕಳೆದ ಜುಲೈ ತಿಂಗಳಲ್ಲಿ ವಿವಿಧ ಕಾರ್ಖಾನೆಗಳ ಸಕ್ಕರೆ ಜಪ್ತಿ ಮಾಡಲಾಗಿತ್ತು. ನಾರಂಜಾ ಸಕ್ಕರೆ ಕಾರ್ಖಾನೆಯಲ್ಲಿನ 36,941 ಕ್ಷಿಂಟಲ್ ಸಕ್ಕರೆ ಹಾಗೂ 8,219 ಮೆಟ್ರಿಕ್ ಟನ್ ಮೊಲಾಸಿಸ್, ಬೀದರ ಕಿಸಾನ್ ಸಕ್ಕರೆ ಕಾರ್ಖಾನೆಯಲ್ಲಿ 2,357 ಕ್ವಿಂಟಲ್ ಸಕ್ಕರೆ ಹಾಗೂ 1,432 ಮೆಟ್ರಿಕ್ ಟನ್ ಮೊಲಾಸಿಸ್, ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆಯಲ್ಲಿನ 5,286 ಕ್ವಿಂಟಲ್ ಸಕ್ಕರೆಯನ್ನು ಜಿಲ್ಲಾಡಳಿತ ಆದೇಶದ ಮೇರೆಗೆ ಅಧಿಕಾರಿಗಳು ಜಪ್ತಿ ಮಾಡಿದ್ದರು.
ಅದೂ ಅಲ್ಲದೆ, ಜು.16ರಂದು ಕೃಷಿ ಖಾತೆ ಸಚಿವ ಶಿವಶಂಕರೆಡ್ಡಿ ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ರೈತರೊಂದಿಗೆ ಮಾತನಾಡಿ, ಕಬ್ಬು ಪೂರೈಕೆ ಮಾಡಿದ ರೈತರಿಗೆ ಬಾಕಿ ಹಣ ಪಾವತಿಗೆ ಒಂದು ವಾರ ಗಡುವು ನೀಡಿದ್ದರು. ಈ ನಡುವೆ ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಅವರ ಆದೇಶದ ಮೇರೆಗೆ ಕಾರ್ಖಾನೆಗಳಲ್ಲಿರುವ ಸಕ್ಕರೆ ಜಪ್ತಿ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಬೀದರ ಕಿಸಾನ್ ಸಕ್ಕರೆ ಕಾರ್ಖಾನೆ ಸುಮಾರು 20.77 ಕೋಟಿ, ಭಾಲ್ಕೇಶ್ವರ ಕಾರ್ಖಾನೆ ಸುಮಾರು 21.42 ಕೋಟಿ, ನಾರಂಜಾ ಸಕ್ಕರೆ ಕಾರ್ಖಾನೆ ಸುಮಾರು 21.24 ಕೋಟಿ, ಭವಾನಿ ಕಾರ್ಖಾನೆ 1.86 ಕೋಟಿ ಬಾಕಿ ಉಳಿಸಿಕೊಂಡಿತ್ತು. ನಂತರದ ದಿನಗಳಲ್ಲಿ ಜಿಲ್ಲಾಡಳಿತ
ಜಪ್ತಿ ಮಾಡಿದ ಸಕ್ಕರೆಯನ್ನು ಹಂತಹಂತವಾಗಿ ಮಾರಾಟ ಮಾಡಿ ಸುಮಾರು 15 ಕೋಟಿಗೂ ಅಧಿಕ ಹಣ ರೈತರ ಖಾತೆಗೆ ಹಾಕುವ ಕೆಲಸ ಮಾಡಿತ್ತು.
ಕಳೆದ ವರ್ಷ ಚುನಾವಣೆಗೂ ಮುನ್ನ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪ್ರತಿ ಟನ್ ಕಬ್ಬಿಗೆ 2,200 ರೂ. ಪಾವತಿಸುವಂತೆ ಕಾರ್ಖಾನೆಗಳಿಗೆ ಸೂಚಿಸಿದ್ದರು. ಆದರೆ, ಕಾರ್ಖಾನೆಗಳು 1900 ರೂ. ಕೂಡ ಪಾವತಿಸದಿರುವುದು ಜಿಲ್ಲೆಯ ಕಬ್ಬು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯ ಕಾರ್ಖಾನೆಗಳು ಕಡಿಮೆ ಹಣ ಪಾವತಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆಗಳು ಕೂಡ ರೈತರಿಗೆ 1,900 ರಿಂದ 2,200 ರೂ. ಪ್ರತಿ ಟನ್‌ಗೆ ಹಣ ಪಾವತಿಸಿದ್ದಾರೆ ಎಂದು ರೈತರು ತಿಳಿಸಿದ್ದಾರೆ.
ಪೂರೈಕೆ ಕಷ್ಟ: ಎಲ್ಲ ಸಕ್ಕರೆ ಕಾರ್ಖಾನೆಗಳು ಸುಮಾರು ನಾಲ್ಕು ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಕ್ರಿಯಾ ಯೋಜನೆ ಹಾಕಿಕೊಂಡಿದ್ದು, ಎಲ್ಲ ಕಾರ್ಖಾನೆಗಳಿಗೆ ಪೂರ್ಣ ಪ್ರಮಾಣದ ಕಬ್ಬು ಪೂರೈಸುವುದು ಬಹುತೇಕ ಅನುಮಾನ ಎಂಬಂತಿದೆ. ಕಾರಣ ಯಾದಗಿರಿ ಜಿಲ್ಲೆಯ ಸಕ್ಕರೆ ಕಾರ್ಖಾನೆಯವರು ಈಗಾಗಲೇ ಬಸವಕಲ್ಯಾಣ ತಾಲೂಕಿನಲ್ಲಿ ರೈತರ ಕಬ್ಬು ಕಟಾವು ಶುರು ಮಾಡಿದ್ದಾರೆ. ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಕೂಡ ರೈತರ ಕಬ್ಬು ಸಾಗಿಸುವ ಪ್ರಕ್ರಿಯೆ ಶುರು ಮಾಡಲಿವೆ. ಯಾದಗಿರಿ ಮೂಲದ ಕಾರ್ಖಾನೆಯವರು 2,200 ಬೆಲೆ ನೀಡುವುದಾಗಿ ಹೇಳಿದ್ದರಿಂದ ಕಬ್ಬು ಸಾಗಿಸಲಾಗುತ್ತಿದೆ ಎಂದು ಅಲ್ಲಿನ ರೈತರು ಮಾಹಿತಿ ನೀಡಿದ್ದಾರೆ.
ನಷ್ಟದಲ್ಲಿ ಕಾರ್ಖಾನೆಗಳು: ನಿಗದಿತ ಎಫ್‌ಆರ್‌ಪಿ ನೀಡದ ಸಕ್ಕರೆ ಕಾರ್ಖಾನೆಗಳು ಪ್ರತಿವರ್ಷ ನಷ್ಟ ಅನುಭವಿಸುತ್ತಿವೆ. ಜಿಲ್ಲೆಯ ಮೂರು ಸಹಕಾರ ಸಕ್ಕರೆ ಕಾರ್ಖಾನೆಗಳು ಸಾಲದ ಸುಳಿಯಲ್ಲಿ ನರಳುತ್ತಿವೆ. ಅನುದಾನ ಕೊರತೆ ಹಿನ್ನೆಲೆಯಲ್ಲಿ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಅರ್ಧದಲ್ಲಿ ಬಂದ್ ಆಗಿ ನಷ್ಟ ಅನುಭವಿಸಿತ್ತು. ಎರಡು ವರ್ಷದಲ್ಲಿ ಬಿಎಸ್‌ಎಸ್‌ಕೆಯಲ್ಲಿ ಸುಮಾರು 75 ಕೋಟಿಗೂ ಅಧಿಕ ಹಾನಿಯಾಗಿತ್ತು. ಇತರೆ ಕಾರ್ಖಾನೆಗಳು ಕೂಡ ಪ್ರತಿ ವರ್ಷ ನಷ್ಟ ಅನುಭವಿಸಿ ಸಾಲದ ಹಣಕ್ಕಾಗಿ ಎದುರು ನೋಡುವ ಸ್ಥಿತಿ ನಿರ್ಮಾಣಗೊಂಡಿದೆ.
ಒಣಗುತ್ತಿದೆ ಕಬ್ಬು: ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದ ಕಬ್ಬು ಒಣಗುತ್ತಿದ್ದು, ರೈತರು ತಮ್ಮ ಹೊಲದಲ್ಲಿನ ಕಬ್ಬು ಖಾಲಿ ಮಾಡುವ ಚಿಂತೆಯಲ್ಲಿದ್ದಾರೆ. ಕಾರ್ಖಾನೆಗಳು ಎಷ್ಟೇ ಬೆಲೆ ನೀಡಿದರೂ ಪರವಾಗಿಲ್ಲ. ಮೊದಲು ನಮ್ಮ ಹೊಲದಲ್ಲಿನ ಕಬ್ಬು ಸಾಗಿಸಬೇಕೆಂಬ ಚಿಂತನೆಯಲ್ಲಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸಕ್ಕರೆ ಕಾರ್ಖಾನೆಗಳು ರೈತರ ಹೊಲದಲ್ಲಿನ ಕಬ್ಬು ಕಟಾವಿಗೆ ಮುಂದಾಗಿದ್ದಾರೆ. ಕಬ್ಬು ಕಟಾವು ಮಾಡುವ ಕಾರ್ಮಿಕರು ಕೂಡ ಹಣದ ಬೇಡಿಕೆ ಇಡುತ್ತಿರುವುದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.
ಕಳೆದ ವರ್ಷ ಜಿಲ್ಲಾ ಉಸ್ತುವಾರಿ ಸಚಿವರು 2,200 ಪ್ರತಿ ಟನ್ ಕಬ್ಬಿಗೆ ಹಣ ಕೊಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಕಾರ್ಖಾನೆಗಳು 1900 ಕೂಡ ಪಾವತಿಸಿಲ್ಲ. ಕೆಲ ಕಾರ್ಖಾನೆಗಳು 1500 ರಿಂದ 1800 ರೂ.ಪಾವತಿಸಿದ್ದು, ಇನ್ನೂ ರೈತರಿಗೆ ಬಾಕಿ ಹಣ ನೀಡಬೇಕಿದೆ. ಪ್ರಸಕ್ತ ಸಾಲಿನಲ್ಲಿ ಕೂಡ ಯಾವುದೇ ಬೆಲೆ ನಿಗದಿ ಮಾಡದೆ ಕಬ್ಬು ಕಟಾವು ಶುರು ಮಾಡಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕು. ಬೆಳಗಾವಿಯಲ್ಲಿ ನಡೆಯುತ್ತಿರುವಂತೆ ಜಿಲ್ಲೆಯಲ್ಲೂ ಪ್ರತಿಭಟನೆ ಆರಂಭವಾಗಬಹುದು. ಕಳೆದ ಸಾಲಿನ ಪ್ರತಿಟನ್ ಕಬ್ಬಿಗೆ 2,200 ರೂ. ಪಾವತಿಸಲು ಜಿಲ್ಲಾಡಳಿತ ಕೂಡಲೇ ಮುಂದಾಗಬೇಕು. ಅಲ್ಲದೆ, ಪ್ರಕಸ್ತ ಸಾಲಿನಲ್ಲಿ ಎಫ್‌ಆರ್‌ಪಿ ದರ ಪಾವತಿಸಬೇಕು ಎಂದು ಕಾರ್ಖಾನೆಗೆಳಿಗೆ ಸೂಚಿಸಬೇಕು. ಕಬ್ಬು ಕಟಾವ್ ಮಾಡಲು ಬರುವ ಗ್ಯಾಂಗ್‌ಗಳು ಕೂಡ ರೈತರನ್ನು ಶೋಷಿಸುತ್ತಿದ್ದು, ಸಕ್ಕರೆ ಕಾರ್ಖಾನೆಗಳು ಕಟಾವು ಗ್ಯಾಂಗ್‌ಗಳ ಬೇಡಿಕೆಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು.
ಚಂದ್ರಶೇಖರ ಜಮಖಂಡಿ,ರೈತ ಮುಖಂಡ
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad Landslide: ನಾಪತ್ತೆ ಆದವರು ಮೃತರೆಂದು ಘೋಷಣೆಗೆ ಕೇರಳ ತೀರ್ಮಾನ
Dharwad: ಕಟಾವಿವೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ… ಕಂಗಾಲಾದ ರೈತರು
ಗುಜರಾತ್‌ಗೆ ತಲುಪಿಸಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆಯ ವಂಚಿಸಿದ ಖದೀಮರ ಸೆರೆ
Los Angeles Wildfires: ಇನ್ನೂ 60 ಲಕ್ಷ ಜನರಿಗೆ ಸಂಕಷ್ಟ, ಸಾವಿನ ಸಂಖ್ಯೆ 25ಕ್ಕೇರಿಕೆ
Bidar: ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ: ಐವರು ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.