ಮಹಿಳಾ ಆಕರ್ಷಣೆಗೆ ಸಖೀ ಮತಗಟ್ಟೆ ಸಜ್ಜು
Team Udayavani, May 12, 2018, 12:01 PM IST
ಬೀದರ: ಮಹಿಳೆಯರನ್ನು ಮತದಾನಕ್ಕೆ ಪ್ರೇರೇಪಿಸುವ ಉದ್ದೇದಿಂದ ಚುನಾವಣಾ ಆಯೋಗ ಸಖೀ (ಪಿಂಕ್) ಮತಗಟ್ಟೆಗಳನ್ನು ಸ್ಥಾಪಿಸಿದೆ. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದ 5ರಂತೆ ಒಟ್ಟು 30 ಕೇಂದ್ರಗಳನ್ನು ಸಖೀ ಮತಗಟ್ಟೆಗಳೆಂದು ಸಜ್ಜುಗೊಳಿಸಲಾಗಿದ್ದು, ಈಗ ಮತಗಟ್ಟೆಗಳು ಮದುವೆ ಮನೆಯಂತೆ ಸಿಂಗಾರಗೊಂಡು ಜನರನ್ನು ಆಕರ್ಷಿಸುತ್ತಿವೆ.
ಮಹಿಳಾ ಮತದಾರರ ಸಂಖ್ಯೆ ಶೇ.50ಕ್ಕಿಂತಲೂ ಅಧಿಕವಿರುವ ಮತಗಟ್ಟೆಗಳನ್ನು ಸಖೀ (ಪಿಂಕ್) ಮತಗಟ್ಟೆಗಳೆಂದು ಗುರುತಿಸಲಾಗಿದೆ. ವಿನೂತನ ಮತಗಟ್ಟೆಗಳು ಪಿಂಕ್ ಬಣ್ಣ, ಬಲೂನ್ ತೋರಣ ಹೊಂದಿದ್ದು, ಮಹಿಳಾ ಮತದಾರರನ್ನು ಮತಗಟ್ಟೆಗೆ ಆಹ್ವಾನಿಸುವ ಫ್ಲೆಕ್ಸ್‌ಗಳಿಂದ ಕಂಗೊಳಿಸುತ್ತಿವೆ. ಈ ಕೇಂದ್ರಗಳಲ್ಲಿ ಚುನಾವಣಾಧಿಕಾರಿ ಸೇರಿದಂತೆ ಎಲ್ಲಾ ಸಿಬ್ಬಂದಿ ಮಹಿಳೆಯರೇ ಇರುತ್ತಾರೆ. ಹೆಚ್ಚು ಪೊಲೀಸ್ ಸಿಬ್ಬಂದಿ ಕೂಡ ಮಹಿಳೆಯರೇ ಇರುವುದು ಇದರ ವಿಶೇಷ.
ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಮಹಿಳೆಯರಿಗೆ ಹೆಚ್ಚು ಆದ್ಯತೆ ನೀಡುವ ಉದ್ದೇಶದಿಂದ
ಸಖೀ ಮತಗಟ್ಟೆಗಳನ್ನು ಸ್ಥಾಪಿಸಲು ಸೂಚನೆ ನೀಡಿದ್ದು, ಅದರಂತೆ ಆಯ್ದ ಮತಗಟ್ಟೆಗಳನ್ನು ಪಿಂಕ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಪಿಂಕ್ ಮತಗಟ್ಟೆಗಳಲ್ಲಿಯೇ ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿರುವ ಪುರುಷ ಮತದಾರರು ಸಹ ಮತ ಚಲಾಯಿಸಲು ಅವಕಾಶವಿದೆ.
ಪ್ರತಿಯೊಂದು ಮತಗಟ್ಟೆಗಳಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಇದ್ದು, ಮಹಿಳೆಯರಿಗೆ ವಿಶ್ರಾಂತಿಗೆ ಕೊಠಡಿ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರೊಟ್ಟಿಗೆ 6 ಕ್ಷೇತ್ರಗಳ ಪೈಕಿ ಅಗತ್ಯ ಮೂಲಸೌಕರ್ಯಗಳಿಂದ ಕೂಡಿದ 12 ಮಾದರಿ ಮತಗಟ್ಟೆಗಳನ್ನು ಕೂಡ ಸ್ಥಾಪಿಸಲಾಗಿದೆ. ಜಿಪಂ ಕಚೇರಿ ಕಟ್ಟಡದ ಆವರಣದಲ್ಲಿ ಕೇವಲ ವಿಕಲಚೇತನ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಕರ್ತವ್ಯ ನಿರ್ವಹಿಸುವ ವಿಶೇಷ ಮತಗಟ್ಟೆಯೊಂದನ್ನು ಕೂಡ ತೆರೆಯಲಾಗಿದೆ.
ಎಲ್ಲೆಲ್ಲಿವೆ ಸಖೀ ಮತಗಟ್ಟೆಗಳು ಬಸವಕಲ್ಯಾಣ ಕ್ಷೇತ್ರ: ಬಸವಕಲ್ಯಾಣದ ಶಾಂತಿನಿಕೇತನ ಹಿರಿಯ ಪ್ರಾಥಮಿಕ
ಕಟ್ಟಡ, ಸಿಎಂಸಿ ಕಟ್ಟಡ, ನೀಲಾಂಬಿಕಾ ಸರ್ಕಾರಿ ಬಾಲಕಿಯರ ಕಾಲೇಜು, ಎಪಿಎಂಸಿ ಕಟ್ಟಡ ಹಾಗೂ ಬೇಟಬಾಲಕುಂದಾ ಗ್ರಾಪಂ ಕಟ್ಟಡ. ಹುಮನಾಬಾದ ಕ್ಷೇತ್ರ: ಹುಮನಾಬಾದ ಹಳೆ ತಹಶೀಲ್ದಾರ ಕಚೇರಿ, ಹಳ್ಳಿಖೇಡ(ಬಿ) ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು, ಫತಮಾಪುರ ಸರ್ಕಾರಿ ಶಾಲೆಯ ಕಟ್ಟಡ ಹಾಗೂ ಚಿಟಗುಪ್ಪಾದ ಹಳೆಯ ತಹಶೀಲ್ದಾರ ಕಚೇರಿಯಲ್ಲಿರುವ ಸರ್ಕಾರಿ ಶಾಲೆ ಕಟ್ಟಡ.
ಬೀದರ (ದಕ್ಷಿಣ) ಕ್ಷೇತ್ರ: ಜಮಿಸ್ತಾನಪುರ ಸರ್ಕಾರಿ ಪ್ರಾಥಮಿಕ ಶಾಲೆ, ಅಮಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಟ್ಟಾವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಲ್ಲಿಕ್ ಮಿರ್ಜಾಪುರ ಸರ್ಕಾರಿ ಶಾಲೆ ಹಾಗೂ ನಿರ್ಣಾ ಸರ್ಕಾರಿ ಕಾಲೇಜು ಕಟ್ಟಡ.
ಬೀದರ ಕ್ಷೇತ್ರ: ಬೀದರನ ಕೆಎಚ್‌ಬಿ ಕಾಲೋನಿ ನೀರಾವರಿ ಇಲಾಖೆಯ ಇಇ ಕಚೇರಿ, ಶಿವನಗರದ ನೇತಾಜಿ ಸುಭಾಷ ಚಂದ್ರಬೋಸ್ ಶಾಲೆ, ನ್ಯಾಷನಲ್ ಶಾಲೆ, ನೌಬಾದನ ಡೈಟ್ ಕಾಲೇಜು, ಪನ್ನಾಲಾಲ್ ಹೀರಾಲಾಲ್ ಕಾಲೇಜು.
ಭಾಲ್ಕಿ ಕ್ಷೇತ್ರ: ಕಲವಾಡಿ ಹಿರಿಯ ಪ್ರಾಥಮಿಕ ಶಾಲೆ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕಟ್ಟಡ, ಸಿಬಿ ನಗರದ
ಸರ್ಕಾರಿ ಶಾಲೆ, ಸೆವಂತಡೇ ಅಡ್ವಾಂಟಿಸ್ಟ್ ಪ್ರೌಢಶಾಲೆ ಕಟ್ಟಡ ಹಾಗೂ ಭಾಲ್ಕಿ ತಾಪಂ ಕಟ್ಟಡ (ಹೊಸ).
ಔರಾದ ಕ್ಷೇತ್ರ: ಔರಾದನ ಬಸವನಗಲ್ಲಿಯ ಸರ್ಕಾರಿ ಎಚ್‌ಪಿಎಸ್, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಅಮರೇಶ್ಚರ
ಕಾಲೇಜು, ಬಲ್ಲೂರ (ಜೆ) ಸರ್ಕಾರಿ ಪ್ರಾಥಮಿಕ ಶಾಲೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.