ವರದಿ ವಾಚನಕ್ಕು ಮುನ್ನವೇ ಸಭೆ ರದ್ದು
Team Udayavani, Sep 27, 2018, 9:54 AM IST
ಹುಮನಾಬಾದ: ರೈತರ ತೋಟಗಾರಿಕೆ ಉತ್ಪನ್ನಗಳಿಗೆ ಅಧಿಕ ಲಾಭ ದೊರಕಿಸುವ ಉದ್ದೇಶದಿಂದ ಕಳೆದ 3 ವರ್ಷಗಳ ಹಿಂದೆ
ಅಸ್ತಿತ್ವಕ್ಕೆ ಬಂದ ಕಾಯಕಲ್ಪ ತೋಟಗಾರಿಕೆ ರೈತ ಉತ್ಪಾದಕ ಕಂಪೆನಿ ತಾಲೂಕು ಘಟಕದ ಮೂರನೇ ವಾರ್ಷಿಕ ಮಹಾಸಭೆ
ಉದ್ಘಾಟನೆಯಾದ ಕೆಲವೇ ನಿಮಿಷಗಳಲ್ಲಿ ಸರ್ವ ಸದಸ್ಯರ ಆಕ್ಷೇಪದ ಹಿನ್ನೆಲೆಯಲ್ಲಿ ಮುಂದೂಡಲಾದ ಪ್ರಸಂಗ ಪಟ್ಟಣದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಬುಧವಾರ ನಡೆಯಿತು.
ಸಭೆ ಉದ್ಘಾಟಿಸಿದ ನಂತರ ಪ್ರಾಸ್ತಾವಿಕವಾಗಿ ಮಾಡತನಾಡಿದ ಕಂಪೆನಿ ಕಾರ್ಯನಿರ್ವಾಹಕ ಅಧಿಕಾರಿ ತಾನಾಜಿ ಕಿಟ್ಟಾ, ಕಂಪೆನಿ ಚಟುವಟಿಕೆಗಳ ಕುರಿತು ವಿವರಿಸಲು ಮುಂದಾದಾಗ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಜ್ಞಾನೇಶ್ವರ ಭೋಸ್ಲೆ, ಕಂಪೆನಿ ಚಟುವಟಿಕೆ ಮತ್ತು ಉದ್ದೇಶ ಎಲ್ಲರಿಗೂ ಗೊತ್ತಿವೆ. ಮೊದಲಿಗೆ ಲೆಕ್ಕಪತ್ರದ ಮಾಹಿತಿ ನೀಡಿ. ನಂತರ ಉಳಿದ ವಿಷಯ ಚರ್ಚೆಯಾಗಲಿ ಎಂದು ಪಟ್ಟುಹಿಡಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಇತರ ಸದಸ್ಯರು ಭೋಸ್ಲೆ ಅವರಿಗೆ ಬೆಂಬಲವಾಗಿ ನಿಂತರು.
ಸದಸ್ಯ ರಾಮರಾವ ದೇಶಪಾಂಡೆ ಮಾತನಾಡಿ, ನನ್ನನ್ನು 2016-17ನೇ ಸಾಲಿನಲ್ಲಿ ನಿರ್ದೇಶಕನ್ನಾಗಿ ಆಯ್ಕೆ ಮಾಡಲಾಗಿತ್ತು. ತದ ನಂತರ ವರ್ಷಗಳಿಂದ ನನ್ನ ಹೆಸರು ಪಟ್ಟಿಯಿಂದ ಏಕೆ ಮತ್ತು ಯಾವ ಕಾಯ್ದೆ ಆಧಾರದ ಮೇಲೆ ಕೈ ಬಿಡಲಾಗಿದೆ ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಒತ್ತಾಯಿಸಿದರು.
ಕಂಪೆನಿ ಆರಂಭವಾಗಿ ಮೂರು ವರ್ಷ ಗತಿಸಿದೆ. ಇದರಿಂದ ಯಾವ ರೈತರಿಗೆ ಏನು, ಎಷ್ಟು ಲಾಭವಾಗಿದೆ? ಒಟ್ಟು 1000 ರೈತರ ಸದಸ್ಯತ್ವ ನೋಂದಣಿ ಮಾಡಿಕೊಂಡಿದ್ದಿರಿ. ಕಂಪೆನಿ ಹೆಸರಲ್ಲಿ ತರಲಾದ ಟ್ರ್ಯಾಕ್ಟರ್ ಯಾರೂ ಬಳಿಸಿದ್ದಾರೆ. ತಂದದ್ದು ಮೂರು ಟ್ರ್ಯಾಕ್ಟರ್. ಆ ಪೈಕಿ 2 ಮಾತ್ರ ಕಾಣುತ್ತಿವೆ. ಇನ್ನೊಂದು ಎಲ್ಲಿ ಕಣ್ಮರೆಯಾಯಿತು ಎಂಬುದರ ಬಗ್ಗೆ ಸಭೆಗೆ ಮಾಹಿತಿ ನೀಡಿ ಎಂದು ಸದಸ್ಯ ಶಿವಕುಮಾರ ಪಾಟೀಲ ಒತ್ತಾಯಿಸಿದರು.
ಸದಸ್ಯ ತುಕಾರಾಮ ಉಳ್ಳಾಗಡ್ಡೆ ಮಾತನಾಡಿ, ದಾಸ್ತಾನು ಮಾಡಲಾದ ಗೊಬ್ಬರ ಯಾರಿಗೆ, ಎಷ್ಟು ಕೊಟ್ಟಿದ್ದರ ಬಗ್ಗೆ ಮಾಹಿತಿ ನೀಡಿ. ಕಾರ್ಯನಿರ್ವಾಹಕ ಅಧಿಕಾರಿ ಕಂಪೆನಿಯನ್ನು ಸ್ವಂತ ಆಸ್ತಿಯಂತೆ ಬಳಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು.
ಕಂಪೆನಿ ಕಾರ್ಯನಿರ್ವಾಹಕ ಅಧಿಕಾರಿ ಮೇಲೆ ನಮಗೆ ಸಂಶಯವಿದೆ. ಅವರನ್ನು ಯಾವುದೇ ಕಾರಣಕ್ಕೂ ಮುಂದುವರಿಸದೇ ಮೊದಲು ಹುದ್ದೆಯಿಂದ ಕೆಳಗಿಳಿಸಿ. ನಿಷ್ಪಕ್ಷಪಾತ ಅಧಿಕಾರಿ ನಿಯೋಜಿಸಿ ಕಂಪೆನಿ ರೈತ ಸದಸ್ಯರಿಗೆ ಅನುಕೂಲ ಆಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು. ನಿರ್ದೇಶಕ ಪರಮೇಶ್ವರ ಪಾಟೀಲ ಅವರು ಕಂಪೆನಿ ಕಾರ್ಯನಿರ್ವಾಹಕ ಅಧಿಕಾರಿ ಬೇಜವಾಬ್ದಾರಿ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆಕ್ರೋಶರಾದ ಸದಸ್ಯರನ್ನು ಸಮಾಧಾನ ಮಾಡಲು ಕಂಪೆನಿ ಹುಮನಾಬಾದ ತಾಲೂಕು ಘಟಕದ ಅಧ್ಯಕ್ಷ ಗುರುಶಾಂತ
ಹಿರೇಮಠ ನಡೆಸಿದ ಯತ್ನ ಸಫಲವಾಯಿತು. ಸಮಗ್ರ ಮಾಹಿತಿ ಸಮೇತ ವಿಶೇಷ ಸಭೆ ನಡೆಸಲಾಗುವುದು. ಆದಿನಾಂಕ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಸಭೆ ಮುಂದೂಡಿ ಅಧಿಕೃತವಾಗಿ ಘೋಷಿಸಿದರು.
1000 ರೈತ ಸದಸ್ಯರ ಪೈಕಿ ಮೂರು ವರ್ಷ ಗತಿಸಿದರೂ ಈಗಲೂ 250 ಸದಸ್ಯರಿಗೆ ಸದಸ್ಯತ್ವ ಪ್ರಮಾಣ ಪತ್ರ ನೀಡಿಲ್ಲ. ಸಕಾಲಕ್ಕೆ ಯಾವುದೇ ಮಾಹಿತಿ ನೀಡುವುದಿಲ್ಲ. ಏನೇ ಕೇಳಿದರೂ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಾರೆ. ಈ ವ್ಯಕ್ತಿಯನ್ನು ಕೇವಲ ಬದಲಾವಣೆ ಮಾಡಿದರೆ ಸಾಲದು. ಅವ್ಯವಹಾರ ತನಿಖೆ ಮಾಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು.
ಜ್ಞಾನೇಶ್ವರ ಭೋಸ್ಲೆ, ಸದಸ್ಯ ರೈತ
ನನ್ನಿಂದ ಯಾವುದೇ ತಪ್ಪಾಗಿಲ್ಲ. ಕಂಪೆನಿ ಕ್ಷೇತ್ರಾ ಧಿಕಾರಿ ಮಚೇಂದ್ರ ಮತ್ತು ರಾಹುಲ್ ಅವರ ಬೇಜವಾಬ್ದಾರಿ ಕಾರಣ ಸಮಸ್ಯೆ ಉದ್ಭವವಾಗಿದೆ. ಕಂಪೆನಿ ನಿಯಮ ಅನುಸಾರ ಕೆಲವರನ್ನು ಕೈ ಬಿಡಲಾಗಿದೆ. ಅದರಲ್ಲಿ ದುರುದ್ದೇಶವಿಲ್ಲ. ಆಗಿರುವ ಸಣ್ಣಪುಟ್ಟ ತಪ್ಪು ಸರಿಪಡಿಸಿಕೊಂಡು ರೈತರಿಗೆ ಅನುಕೂಲ ಕಲ್ಪಿಸುವುದಕ್ಕೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ.
ತಾನಾಜಿ ಕಿಟ್ಟಾ ಕಂಪೆನಿ ಕಾರ್ಯನಿರ್ವಾಹಕ ಅಧಿಕಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.