ಮೂಕ ವಿದ್ಯಾರ್ಥಿ ಪಾಂಡುರಂಗನ ಮೌನ ರೋದನ
• 8ನೇ ತರಗತಿ ತನಕ ಸಾಮಾನ್ಯ ಶಾಲೆಯಲ್ಲಿ ಓದು •9ನೇ ತರಗತಿಗೆ ಸಿಗುತ್ತಿಲ್ಲ ಶಾಲೆಯಲ್ಲಿ ದಾಖಲಾತಿ
Team Udayavani, Jun 18, 2019, 9:11 AM IST
ಔರಾದ: ವಿದ್ಯಾರ್ಥಿ ಪಾಂಡುರಂಗ ತಾಯಿಯೊಂದಿಗೆ.
ಔರಾದ: ಮಾತು ಬಾರದಿರುವುದೇ ಬೋರಾಳ ಗ್ರಾಮದ ಪಾಂಡುರಂಗ ಸುಭಾಷ್ ಎನ್ನುವ ಬಡ ವಿದ್ಯಾರ್ಥಿಯ ಶಿಕ್ಷಣಕ್ಕೆ ಅಡ್ಡಿಯಾಗಿ ಪರಿಣಮಿಸಿದೆ.
ಎಂಟನೇ ತರಗತಿ ತನಕ ಸಾಮಾನ್ಯ ಶಾಲೆಯಲ್ಲಿ ಓದಿದ ಪಾಂಡುರಂಗ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪಟ್ಟಣದ ಎಲ್ಲ ಶಾಲೆಗಳಿಗೆ, ಶಿಕ್ಷಣ ಇಲಾಖೆ ಕಚೇರಿಗೆ ಅಲೆದರೂ ಯಾರೂ ಶಿಕ್ಷಣಕ್ಕೆ ಅವಕಾಶ ನೀಡದಿರುವುದರಿಂದ ದಾರಿ ತೋಚದೆ ಆತಂಕದಲ್ಲಿದ್ದಾನೆ. ವಿದ್ಯಾರ್ಥಿಯ ಪಾಲಕರು ಕೂಡ ನಿತ್ಯ ಶಾಲೆಯಿಂದ ಶಾಲೆಗೆ ಅಲೆಯುತ್ತಿದ್ದಾರೆ.
ಪಾಂಡುರಂಗ ಹುಟ್ಟಿನಿಂದಲೇ ಮೂಕ ನಾಗಿದ್ದಾನೆ. ಅವನಿಗೆ ಮಾತನಾಡಲು ಬಾರದಿದ್ದರೂ ಶಿಕ್ಷಕರು ನಿತ್ಯ ಶಾಲೆಯಲ್ಲಿ ಪಠ್ಯ ಬೋಧನೆ ಮಾಡುವಾಗ ಸಂಜ್ಞೆ ಮೂಲಕವೇ ಅರಿತು ಇನ್ನಿತರ ವಿದ್ಯಾರ್ಥಿಗಳಿಗಿಂತ ಪ್ರತಿಭಾವಂತನಾಗಿದ್ದಾನೆ ಎನ್ನುವುದು ಈ ಹಿಂದೆ ವಿದ್ಯಾಭ್ಯಾಸ ನೀಡಿದ ಶಾಲೆಯ ಶಿಕ್ಷಕರ ಅಭಿಪ್ರಾಯ.
ಮಾತಾಡಲು ಬಾರದಿದ್ದರೂ ಅವನ ಬುದ್ಧಿವಂತಿಕೆ ನೋಡಿ ಪಟ್ಟಣದ ಅಮರೇಶ್ವರ ಗುರುಕುಲ ಶಾಲೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರು ಶಾಲೆಯಲ್ಲಿ ದಾಖಲಿಸಿಕೊಂಡು 11 ವರ್ಷಗಳ ಕಾಲ ಶಿಕ್ಷಣ ನೀಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಒಂಭತ್ತನೇ ತರಗತಿಯಲ್ಲಿ ಶಿಕ್ಷಣ ಪಡೆಯಲು ಪಟ್ಟಣದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳಿಗೆ ಅಲೆದರೂ ಒಂದೂ ಶಾಲೆಯ ಶಿಕ್ಷಕರು ವಿದ್ಯಾರ್ಥಿಯನ್ನು ಶಾಲೆಗೆ ಸೇರಿಸಿಕೊಳ್ಳುತ್ತಿಲ್ಲ. ಇದರಿಂದ ವಿದ್ಯಾರ್ಥಿ ಹಾಗೂ ಪಾಲಕರಲ್ಲಿ ಆಂತಕ ಮೂಡಿದೆ.
ಸರ್ಕಾರ ಪ್ರತಿ ವರ್ಷ ಶಿಕ್ಷಣ ಇಲಾಖೆಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಲು ಹಾಗೂ ಗುಡಿಸಲು ವಾಸಿಗಳನ್ನು ಶಾಲೆಗೆ ಕರೆ ತರಲು ಪ್ರಯತ್ನ ಮಾಡುತ್ತಿದೆ. ಆದರೆ ಶಾಲೆಯ ಬಾಗಿಲಿಗೆ ಹೋಗಿ ಶಿಕ್ಷಣ ಕೊಡುವಂತೆ ಕುಟುಂಬ ಸದಸ್ಯರು ಮನವಿ ಮಾಡಿಕೊಂಡರೂ, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂಬುದು ಅವರ ಅಳಲು.
ಎಲ್ಲ ಪಾಲಕರ ಮಕ್ಕಳಂತೆ ನಮ್ಮ ಮಗ ಕೂಡ ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಹೊಂದುತ್ತಾನೆ ಎಂದು ಕನಸು ಕಂಡಿದ್ದೆವು. ಆದರೆ ಪಾಡುರಂಗನಿಗೆ ದಾಖಲಿಸಿಕೊಳ್ಳುವಂತೆ ಪಟ್ಟಣದ ಎಲ್ಲ ಶಾಲೆಗಳಲ್ಲಿ ಮನವಿ ಮಾಡಿದರೂ, ಮೂಗನನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರಿ ಶಾಲೆಯ ಶಿಕ್ಷಕರು ಹೇಳಿದ್ದಾರೆ. ಖಾಸಗಿ ಶಾಲೆಯ ಶಿಕ್ಷಕರ 10ನೇ ತರಗತಿ ಫಲಿತಾಂಶದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹಿಗಾಗಿ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ವಾರದಿಂದ ನಮ್ಮ ದುಃಖ ಕೇಳುವವರಾರೂ ಇಲ್ಲದಾಗಿದೆ ಎಂದು ಪಾಲಕರು ಅಳಲು ತೋಡಿಕೊಂಡಿದ್ದಾರೆ.
ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆ ಶಿಕ್ಷಕರು ಬಾಲಕನ ಬಗ್ಗೆ ನಿರ್ಲಕ್ಷ್ಯ ಮಾಡದೇ ಅಕ್ಷರ ಜ್ಞಾನ ನೀಡಲು ಮುಂದಾಗಬೇಕು. ಸಂಸ್ಥೆಗಳನ್ನು ಆರಂಭಿಸಿರುವುದೇ ಮಕ್ಕಳಿಗೆ ಅಕ್ಷರದ ಜ್ಞಾನ ನೀಡಲು ಎಂಬುದನ್ನು ಯಾರೂ ಮರೆಯಬಾರದು ಎಂದು ಅಮರೇಶ್ವರ ಗುರುಕುಲ ಶಾಲೆಯ ಮುಖ್ಯಶಿಕ್ಷಕ ಶಿಲ್ಪಾ ಶೆಟಕಾರ ಹೇಳುತ್ತಾರೆ.
ಪಾಂಡುರಂಗ ತುಂಬಾ ಬುದ್ಧಿವಂತನಾಗಿದ್ದಾನೆ. 11 ವರ್ಷದಿಂದ ನಮ್ಮ ಸಂಸ್ಥೆಯಲ್ಲಿ ಓದುತ್ತಿದ್ದಾನೆ. ನಮ್ಮ ಸಂಸ್ಥೆಯಂತೆ ಇನ್ನುಳಿದ ಸಂಸ್ಥೆಯ ಅಧ್ಯಕ್ಷರು ಮಗುವಿನ ಬಗ್ಗೆ ಕಾಳಜಿ ವಹಿಸಿ ಅಕ್ಷರದ ಜ್ಞಾನ ನೀಡಲು ಮುಂದಾಗಲಿ. ನಮ್ಮಲಿ ಕಲಿತ ವಿದ್ಯಾರ್ಥಿಯ ಜೀವನ ರೂಪಿಸುವುದು ನಮ್ಮ ಕರ್ತವ್ಯ.•ಬಸವರಾಜ ಶೆಟಕಾರ, ಅಮರೇಶ್ವರ ಗುರುಕುಲ ಸಂಸ್ಥೆ ಅಧ್ಯಕ್ಷ
ವಿದ್ಯಾರ್ಥಿಗೆ ಶಿಕ್ಷಣ ನೀಡುವಂತೆ ಸರ್ಕಾರಿ ಶಾಲೆ ಶಿಕ್ಷಕರಿಗೆ ಮನವಿ ಮಾಡಿಕೊಳ್ಳಲಾಗುತ್ತದೆ. ಇಲ್ಲವಾದಲ್ಲಿ. ಮೂಕ ಮಕ್ಕಳಿಗಾಗಿಯೇ ವಿಶೇಷ ಶಾಲೆಗಳಿವೆ. ಅಲ್ಲಿ ವಿದ್ಯಾರ್ಥಿ ಪಾಂಡುರಂಗನನ್ನು ದಾಖಲಿಸಲಾಗುತ್ತದೆ.•ಸುನೀಲಕುಮಾರ ವಾಘಮಾರೆ, ಮಕ್ಕಳ ಸಹಾಯವಾಣಿ ಕೇಂದ್ರದವರು
•ರವೀಂದ್ರ ಮುಕ್ತೇದಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.