ಕಾವಿಧಾರಿ ಕಟ್ಟಿದ ಮಾದರಿ ಗೋ ಶಾಲೆ: 70ಕ್ಕೂ ಹೆಚ್ಚು ದೇಸಿ ಗೋವು ಪೋಷಣೆ
Team Udayavani, Jun 7, 2022, 3:42 PM IST
ಬೀದರ: ಧಾರ್ಮಿಕ, ಅಧ್ಯಾತ್ಮಿಕ ಚಟುವಟಿಕೆಗಳ ಮೂಲಕ “ವಿವೇಕ’ ಚಿಂತನೆಗಳನ್ನು ಜನಮಾನಸಕ್ಕೆ ಮುಟ್ಟಿಸುವುದರ ಜತೆಗೆ ಗೋ ಸೇವೆಯಲ್ಲೂ ಸಮರ್ಪಿಸಿಕೊಳ್ಳುವ ಮೂಲಕ ಕಾವಿಧಾರಿ ಸ್ವಾಮೀಜಿಯೊಬ್ಬರು ಮಾದರಿ ಹೆಜ್ಜೆಯನ್ನಿಟ್ಟಿದ್ದಾರೆ. ಆ ಮೂಲಕ ದೇಸಿ ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆ ಕಾರ್ಯದಲ್ಲಿ ತೊಡಗಿಸಿಕೊಂಡು ಯುವ ಸಮೂಹಕ್ಕೆ ಪ್ರೇರಣೆಯಾಗಿದ್ದಾರೆ.
ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಅಪರೂಪದ ಗೋ ಪಾಲಕರು. ಕಳೆದೆರಡು ದಶಕಗಳಿಂದ ಅಧ್ಯಾತ್ಮದ ಉಣಬಡಿಸುತ್ತಿರುವ ಸ್ವಾಮೀಜಿ ಈಗ ಯುವಕರನ್ನು ಗೋ ಆಧಾರಿತ ಕೃಷಿಯತ್ತ ಸೆಳೆಯುವ ದಿಸೆಯಲ್ಲಿ ಮಾದರಿ ಗೋ ಶಾಲೆಯನ್ನು ಆರಂಭಿಸಿದ್ದಾರೆ.
ಶಿವನಗರದಲ್ಲಿರುವ ಆಶ್ರಮದ ಪರಿಸರ ಇದೀಗ ದೇಸಿ ಗೋವುಗಳಿಂದ ತುಂಬಿ ಹೋಗಿದ್ದು, ಬಿಡುವಿನ ಬಹುತೇಕ ಸಮಯವನ್ನು ಗೋವುಗಳ ಪಾಲನೆ ಮತ್ತು ಪೋಷಣೆಗೆ ಮೀಸಲಿಟ್ಟಿದ್ದಾರೆ. ಗೋ ಶಾಲೆ ನಡೆಸುವುದು ಅತ್ಯಂತ ಕಷ್ಟಕರ ಮತ್ತು ಕಠಿಣ ಕೆಲಸ. ಆದರೆ, ಗೋ ಆಧಾರಿತ ಕೃಷಿ ಮೂಲಕವೇ ಪ್ರತಿಯೊಬ್ಬರೂ ಸ್ವಾವಲಂಬಿ ಬದುಕು ಸಾಗಿಸಲು ಸಾಧ್ಯ. ಹೀಗಾಗಿ ಗೋವಿನ ಮಹತ್ವವನ್ನು ತಿಳಿಸುವುದು ಅಷ್ಟೇ ಮುಖ್ಯವಾಗಿರುವ ಹಿನ್ನೆಲೆ ಆರ್ಥಿಕ ನಷ್ಟದ ನಡುವೆಯೂ, ಸರ್ಕಾರದ ನಯಾಪೈಸೆ ನೆರವಿಲ್ಲದೇ ಅತ್ಯಾಧುನಿಕ, ಸಕಲ ವ್ಯವಸ್ಥೆಯನ್ನು ಒಳಗೊಂಡ ಶಾಲೆಯನ್ನು ಕಟ್ಟಿ ಗೋ ಪ್ರೇಮ ಮೆರೆಯುತ್ತಿದ್ದಾರೆ.
ಮೂರು ಎಕರೆ ಪ್ರದೇಶದಲ್ಲಿರುವ ಗೋ ಶಾಲೆಯಲ್ಲಿ ಸ್ಥಳೀಯ ದೇವಣಿ, ಗುಜರಾತ್‌ನ ಗಿರ್ ಮತ್ತು ಕಾಂಕ್ರೆಸ್ ತಳಿ ಸೇರಿ 70ಕ್ಕೂ ಹೆಚ್ಚು ಗೋವುಗಳಿವೆ. 2019ರಲ್ಲಿ ಕೇವಲ 2 ಗೋವುಗಳಿಂದ ಶುರುವಾದ ಗೋ ಪಾಲನೆ ಇಂದು ದಾನಿಗಳ ನೆರವಿನಿಂದ 70ಕ್ಕೆ ಹೆಚ್ಚಿದೆ.
ವರ್ಲಿ ಆರ್ಟ್ ಪೇಂಟಿಂಗ್‌ನಿಂದ ಕಂಗೊಳಿಸುತ್ತಿರುವ ಸುತ್ತುಗೋಡೆವುಳ್ಳ ಶೆಡ್, ಗಿಡ ಮರಗಳು ಶಾಲೆಯ ಅಂದವನ್ನು ಹೆಚ್ಚಿಸಿದೆ. ಮೇವು, ಹುಲ್ಲು ಸೇರಿ ಅಗತ್ಯ ಪೌಷ್ಠಿಕ ಪದಾರ್ಥಗಳನ್ನು ನೀಡುತ್ತಿದ್ದಾರೆ. ಇದಕ್ಕಾಗಿ 10 ಎಕರೆ ಜಮೀನನ್ನು ಲೀಸ್ ಪಡೆದು ಮೇವು ಬೆಳೆಯುತ್ತಿದ್ದಾರೆ. ಪೌಷ್ಠಿಕಾಂಶಗಳನ್ನು ಒಳಗೊಂಡ ದೇಶಿ ಹಾಲು ಉತ್ತಮ ಆರೋಗ್ಯಕ್ಕೆ ಔಷಧಿಯಾಗಿದ್ದು, ಬೇಡಿಕೆಯೂ ಹೆಚ್ಚಿದೆ.
ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ತಲಾ 20 ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, 100 ರೂ. ಲೀ.ನಂತೆ ಹಾಲು ಮತ್ತು 3 ಸಾವಿರ ರೂ. ಕೆ.ಜಿಯಂತೆ ತುಪ್ಪವನ್ನು ಮಾರಾಟ ಮಾಡುತ್ತಾರೆ. ಗೋ ಶಾಲೆ ನಿರ್ವಹಣೆಗೆ ಪ್ರತಿ ತಿಂಗಳು 1.5 ಲಕ್ಷ ರೂ. ಖರ್ಚಿದ್ದು, ಹಾಲು ಮತ್ತು ತುಪ್ಪದಿಂದ ಸಿಗುವ ಅಲ್ಪ ಆದಾಯದ ಜತೆಗೆ ಆಶ್ರಮದ ಭಕ್ತರ ನೆರವಿನಿಂದ ಗೋ ಶಾಲೆಯನ್ನು ನಡೆಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಕಲಬೆರಕೆ ಹಾಲು ಬಿಳಿ ಬಣ್ಣದ ವಿಷಯವಾಗಿ ಪರಿಣಮಿಸುತ್ತಿದೆ. ಹಣ ಕೊಟ್ಟು ವಿಷವನ್ನು ಖರೀದಿಸುವಂತಾಗಿದೆ. ಗೋವು ಉಳಿದರೆ ಕೃಷಿ ಪ್ರಧಾನ ದೇಶ ಉಳಿಯುತ್ತದೆ. ಕೃಷಿ ಅಭಿವೃದ್ಧಿ ಜತೆಗೆ ಜನರ ಆರೋಗ್ಯ ಕಾಪಾಡಬೇಕಾದ ದೇಸಿ ಹಸುಗಳ ಸಂರಕ್ಷಣೆಯ ಅವಶ್ಯಕತೆ ಇದೆ. ವ್ಯವಹಾರಿಕ ದೃಷ್ಟಿಯಿಂದ ಗೋಶಾಲೆ ನಡೆಸುತ್ತಿಲ್ಲ. ಗೋ ಆಧಾರಿತ ಕೃಷಿ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶ. ಬರವ ದಿನಗಳಲ್ಲಿ ಗೋ ಮೂತ್ರ, ಸಗಣಿಯಿಂದ ವಿವಿಧ ಉತ್ಪನ್ನ ತಯಾರಿಸುವ ಯೋಜನೆ ಇದೆ. ಸರ್ಕಾರಕ್ಕೆ 10 ಎಕರೆ ಜಮೀನು ಕೇಳಲಾಗಿದ್ದು, ಭೂಮಿ ಕೊಟ್ಟರೆ ಮಾದರಿ ಶಾಲೆಯಾಗಿ ಪರಿವರ್ತಿಸಲಾಗುವುದು. -ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ, ಅಧ್ಯಕ್ಷರು, ರಾಮಕೃಷ್ಣ ವಿವೇಕಾನಂದ ಆಶ್ರಮ, ಬೀದರ
-ಶಶಿಕಾಂತ ಬಂಬುಳಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.