ಖೂಬಾ-ಸಲಗರ ಮಧ್ಯೆ ವರ್ಗಾವಣೆ ದಂಗಲ್!
ಬಸವಕಲ್ಯಾಣದಲ್ಲಿ ಪತಿ ಶಾಸಕ, ಪತ್ನಿ ತಹಶೀಲ್ದಾರ್ ; ಸಲಗರ ಪತ್ನಿ ವರ್ಗಾವಣೆ ಮಾಡಿಸಿದ್ದ ಖೂಬಾ
Team Udayavani, Aug 24, 2022, 4:33 PM IST
ಬೀದರ: ಆಡಳಿತಾರೂಢ ಬಿಜೆಪಿ ಶಾಸಕ ಶರಣು ಸಲಗರ ಮತ್ತು ಕೇಂದ್ರ ಸಚಿವ ಭಗವಂತ ಖೂಬಾ ನಡುವಿನ ಬೀದಿ ಕಾಳಗ ದಿನ ಕಳೆದಂತೆ ತಾರಕಕ್ಕೇರುತ್ತಿದೆ. ಶಾಸಕ ಶರಣು ಪತ್ನಿಯಾಗಿರುವ ಬಸವಕಲ್ಯಾಣ ತಹಶೀಲ್ದಾರ್ ಸಾವಿತ್ರಿ ಸಲಗರ ಅವರನ್ನು ಸೋಮವಾರ ವರ್ಗಾವಣೆಗೊಳಿಸಿ ಆದೇಶಿಸಿದ್ದ ಸರ್ಕಾರ ಮರು ದಿನವೇ ತಡೆ ಹಿಡಿದಿರುವುದು ಚರ್ಚೆಗೆ ಗ್ರಾಸವಾಗಿದೆ.
ಒಂದೇ ತಾಲೂಕಿನಲ್ಲಿ ಪತಿ ಶಾಸಕರಾಗಿ ಮತ್ತು ಪತ್ನಿ ತಾಲೂಕು ದಂಡಾಧಿ ಕಾರಿಯಾಗಿದ್ದು, ರಾಜ್ಯ ದಲ್ಲೇ ಇದು ಅಪರೂಪದ ಎನಿಸಿತ್ತು. ಮೇ 2ರಿಂದ ಶರಣು ಸಲಗರ ಬಸವಕಲ್ಯಾಣದ ಶಾಸಕರಾಗಿದ್ದರೆ, ಪತ್ನಿ ಸಾವಿತ್ರಿ ಸಲಗರ 2019ರ ಜನವರಿಯಿಂದ ತಹಶೀಲ್ದಾರ್ ಆಗಿದ್ದಾರೆ. ಉಪ ಚುನಾವಣೆಯಲ್ಲಿ ಬೇರೆಡೆ ವರ್ಗವಾಗಿದ್ದ ಸಾವಿತ್ರಿ ಅವರು, ಪತಿ ಶಾಸಕರಾಗಿರುವ ಬಸವಕಲ್ಯಾಣದ ತಹಶೀಲ್ದಾರರಾಗಿ ಮತ್ತೆ ನಿಯೋಜನೆಗೊಂಡಿದ್ದರು. ಕಳೆದ ಒಂದೂವರೆ ವರ್ಷಗಳಿಂದ ಪತಿ-ಪತ್ನಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಆದರೆ, ಇದೀಗ ರಾಜಕೀಯ, ಬಿಜೆಪಿಯಲ್ಲಿನ ಆಂತರಿಕ ಗುದ್ದಾಟ ತಹಶೀಲ್ದಾರ್ ಸಾವಿತ್ರಿ ಅವರ ವರ್ಗಾ ವರ್ಗಿಗೆ ಕಾರಣವಾಗಿದೆ. ಕೇಂದ್ರ ಸಚಿವ ಖೂಬಾ ಮತ್ತು ಶಾಸಕ ಸಲಗರ ಮಧ್ಯದ ಮುಸುಕಿನ ಗುದ್ದಾಟ ತಾರಕಕ್ಕೇರಿತ್ತಲ್ಲದೇ ಬಿಜೆಪಿ ವರಿಷ್ಠರ ಕಣ್ಣು ಕೆಂಪಾಗಿಸಿತ್ತು. ಈ ನಡುವೆ ತಹಶೀಲ್ದಾರ್ ಸಾವಿತ್ರಿ ಅವರನ್ನು ಸೋಮವಾರ ಬಸವಕಲ್ಯಾಣದಿಂದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಶಿಷ್ಟಾಚಾರ ತಹಶೀಲ್ದಾರ್ ಹುದ್ದೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದು ಆಡಳಿತಾರೂಢ ಬಿಜೆಪಿ ಶಾಸಕ ಸಲಗರಗೆ ಮೊದಲ ಹಿನ್ನಡೆ ಎಂದೇ ವಿಶ್ಲೇಷಿಸಲಾಗಿತ್ತು.
ಈಗ ಒಂದೇ ದಿನದಲ್ಲಿ ತಹಶೀಲ್ದಾರ್ ವರ್ಗಾವಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆ ಹಿಡಿದು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಶಾಸಕರು ತಮ್ಮ ಪ್ರಭಾವ ಬಳಿಸಿಕೊಂಡು ಪತ್ನಿಯ ವರ್ಗಾವಡೆ ತಡೆ ಹಿಡಿಯುವಲ್ಲಿ ಯಶಸ್ವಿಯಾಗುವ ಮೂಲಕ ವಿರೋಧಿಗಳಿಗೆ ಸೆಡ್ಡು ಹೊಡೆದಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.
ಏನಿದು ಸಚಿವ- ಶಾಸಕರ ಗುದ್ದಾಟ? ಬಸವಕಲ್ಯಾಣದಲ್ಲಿ ಆ.13ರಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ಬೃಹತ್ ತಿರಂಗಾ ಕಾರ್ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ಸಚಿವ ಖೂಬಾ ಹಾಗೂ ಸ್ಥಳೀಯ ಶಾಸಕ ಶರಣು ಸಲಗರ ನಡುವೆ ವಾಗ್ಯುದ್ಧ ನಡೆದು ಸಚಿವರ ಕಾರಿನ ಮೇಲೆ ಹಲ್ಲೆಯೂ ಆಗಿತ್ತು.
ಜತೆಗೆ ಇಬ್ಬರು ಜನಪ್ರತಿನಿಧಿಗಳ ಬೆಂಬಲಿಗರ ನಡುವೆ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿ, ದೂರು-ಪ್ರತಿ ದೂರುಗಳು ದಾಖಲಾಗಿದ್ದವು. ಈ ಘಟನೆ ಕಮಲ ಪಾಳಯದಲ್ಲಿ ಶಾಂತವಾಗಿದೆ ಎನ್ನುವಷ್ಟರಲ್ಲೇ ತಹಶೀಲ್ದಾರ್ ವರ್ಗಾವಣೆ ಪ್ರಹಸನ ಜಿಲ್ಲಾ ಬಿಜೆಪಿಯಲ್ಲಿ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿಸಿದೆ.
-ಶಶಿಕಾಂತ ಬಂಬುಳಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.