ನೀರುಣಿಸಿ.. ಕಾಡು ಪ್ರಾಣಿ ಜೀವ ಉಳಿಸಿ
Team Udayavani, Dec 9, 2018, 11:17 AM IST
ಬೀದರ: ಬೇಸಿಗೆ ಬಂದರೆ ಬಿಸಿ ತಾಳಲಾರದೆ ವನ್ಯ ಜೀವಿಗಳು ನೀರಿಗಾಗಿ ಕಾಡಿನಿಂದ ನಾಡಿನಕಡೆಗೆ ಬರುವುದು ಸಾಮಾನ್ಯ. ಆದರೆ, ಚಳಿಗಾಲದಲ್ಲಿಯೇ ಕುಡಿಯಲು ನೀರು ಸಿಗದೇ ಕಾಡುಪ್ರಾಣಿಗಳು ನಾಡಿನ ಕಡೆಗೆ ಮುಖ ಮಾಡಿದ್ದು, ಬರಗಾಲದ ಭೀಕರತೆಯನ್ನು ತೋರುವಂತಿದೆ.
ಬೀದರ್ ತಾಲೂಕಿನ ವಿವಿಧ ಅರಣ್ಯ ಪ್ರದೇಶ, ಹುಮನಾಬಾದ, ಬಸವಕಲ್ಯಾಣ, ಔರಾದ ತಾಲೂಕು ಸೇರಿದಂತೆ ವಿವಿಧೆಡೆ ಇರುವ ಅರಣ್ಯ ಪ್ರದೇಶದ ವನ್ಯ ಜೀವಿಗಳು ಕುಡಿಯಲು ನೀರು ಸಿಗದೆ ನಾಡಿನ ಕಡೆಗೆ ಮುಖ ಮಾಡುತ್ತಿವೆ. ಕಾಡು ಪ್ರಾಣಿಗಳು ಹಾಡುಹಗಲೆ ರಸ್ತೆಗೆ ಬರುತ್ತಿದ್ದು, ಎಲ್ಲಿ ಅಪಘಾತಕ್ಕೆ ತುತ್ತಾಗುತ್ತವೆಯೋ ಎಂಬ ಭಯ ವಾಹನ ಸವಾರರಿಗೆ ಕಾಡುತ್ತಿದೆ. ಕಾಡಿನಲ್ಲಿ ಸ್ವತ್ಛಂದವಾಗಿ ಕುಣಿಯುತ್ತಿರುವ ಕಾಡು ಪ್ರಾಣಿಗಳು ಈಗ ಆಹಾರ, ನೀರಿಗಾಗಿ ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ.
ಕಾಡಿನಲ್ಲಿರುವ ಕೆರೆ, ಕುಂಟೆಗಳು ಬತ್ತಿ ಹೋಗಿವೆ. ಹನಿ ನೀರು ಹುಡುಕಿಕೊಂಡು ಅನೇಕ ಜಿಂಕೆ, ಕೃಷ್ಣಮೃಗ, ನವಿಲು ರಸ್ತೆಗಳಲ್ಲಿ ಕಂಡುಬರುತ್ತಿವೆ. ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಿಂಕೆ, ಕೃಷ್ಣಮೃಗ, ನವಿಲು ಸೇರಿದಂತೆ ಇತರೆ ಕಾಡು ಪ್ರಾಣಿಗಳು ಇವೆ. ಸದ್ಯದ ಸ್ಥಿತಿಯಲ್ಲಿ ಅವುಗಳ
ರಕ್ಷಣೆ ಮಾಡುವುದು ಅತಿ ಅವಶ್ಯಕವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಬೀದರ್ ತಾಲೂಕಿನ ಬೆಳೂರ್ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿರುವುದಾಗಿ ಹೇಳಲಾಗುತ್ತಿದೆ. ಆದರೆ, ಕಾಡು ಪ್ರಾಣಿಗಳು ಮಾತ್ರ ನಾಡಿನ ಕಡೆಗೆ ಮುಖಮಾಡುತ್ತಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ.
ಬೇಕಿದೆ ನೀರು: ಬರದಿಂದ ಪರಿತಪಿಸುತ್ತಿರುವ ಕಾಡು ಪ್ರಾಣಿಗಳಿಗೆ ಬೇಸಿಗೆ ಮುಗಿಯುವವರೆಗೂ ನೀರು ಒದಗಿಸುವ ಕೆಲಸ ಆಗಬೇಕಾಗಿದೆ. ಈ ಮೂಲಕ ಪ್ರಾಣಿ, ಪಕ್ಷಿಗಳು ನಾಡಿನತ್ತ ಮುಖ ಮಾಡುವುದನ್ನು ತಪ್ಪಿಸಬೇಕಾಗಿದೆ. ಅಲ್ಲದೆ, ಪ್ರಾಣಿಗಳು ರಸ್ತೆಗೆ ಬಂದು ಪ್ರಾಣ ಕಳೆದುಕೊಳ್ಳುವುದನ್ನು ಕೂಡ ಅಧಿಕಾರಿಗಳು ತಪ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.
ಇಲ್ಲದಿದ್ದರೆ ನೀರು ಹುಡುಕಿಕೊಂಡು ಬಂದು ನಾಯಿಗಳ ದಾಳಿಯಿಂದ ಅಥವಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವುದು ನಿಶ್ಚಿತವಾಗಿದೆ. ಅರಣ್ಯ ಪ್ರದೇಶಗಳಲ್ಲಿ ಕೃತಕವಾಗಿ ಕೆರೆ, ಚೆಕ್‌ಡ್ಯಾಂ ಹಾಗೂ ಹೊಂಡಗಳನ್ನು ನಿರ್ಮಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಬೇಕಾಗಿದೆ. ಹೊಂಡಗಳಲ್ಲಿ ಟ್ಯಾಂಕರ್ ಮೂಲಕ ನೀರು ಹರಿಸಿ ಪ್ರಾಣಿಗಳ ದಾಹ ಇಂಗಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕಿದೆ. ಬರುವ ಬೇಸಿಗೆಯ ತೀವ್ರತೆ ಅರಿತು ಆ ದಿನಗಳಲ್ಲಿ ವನ್ಯಜೀವಿಗಳ ರಕ್ಷಣೆಯ ಹೊಣೆ ಹೊರಬೇಕಾಗಿದೆ. ಅತಿ ಅಮೂಲ್ಯದ ಪ್ರಾಣಿಗಳು ಜಿಲ್ಲೆಯಲ್ಲಿದ್ದು, ಸಂಬಂಧಿಸಿದ ಅಧಿಕಾರಿಗಳು ಅವುಗಳ ಸಂರಕ್ಷಣೆಗೆ ಸೂಕ್ತ ಕ್ರಮಗಳು ಕೈಗೊಳ್ಳಬೇಕಾಗಿದೆ.
ಕೆಲ ವರ್ಷಗಳ ಹಿಂದೆ ಎದುರಾದ ಬರಕ್ಕಿಂತ ಇದೀಗ ಬರದ ಭೀಕರತೆ ಹೆಚ್ಚಿದ್ದು, ಪ್ರಾಣಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡವ ಕಾರ್ಯಕ್ಕೆ ವಿವಿಧ ಸಂಘ, ಸಂಸ್ಥೆಗಳು ಕೂಡ ಶ್ರಮಿಸಬೇಕಾಗಿದೆ. ಮಾನವೀಯತೆ ಆಧಾರದಲ್ಲಾದರೂ ಕೂಡ ಪ್ರಾಣಿಗಳ ಪ್ರಾಣ ಉಳಿಸುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕು ಎಂಬುದು ಪ್ರಾಣಿ ಪ್ರಿಯರ ಅಳಲು.
ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಬೀದರ ತಾಲೂಕಿನ ಬೆಳೂರ್ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ಕುಡಿಯು ನೀರು ಪೂರೈಕೆ ಮಾಡಲುವ ಕೆಲಸ ನಡೆಯುತ್ತಿದೆ. ಜಿಲ್ಲೆಯ ವಿವಿಧೆಡೆ ಕೂಡ ನೀರು ಪೂರೈಸುವ ಕೆಲಸ ನಡೆಯಲಿದೆ. ಸಿಮೆಂಟ್ ಟ್ಯಾಂಕ್‌ಗಳನ್ನು ನಿರ್ಮಿಸಿದ್ದು, ಅವುಗಳಲ್ಲಿ ನೀರು ಹರಿಸುವ ಕೆಲಸ ನಡೆಯಲಿದೆ.
ಎಂ.ಡಿ. ತೊಡುಲಕರ್, ಜಿಲ್ಲಾ ಅರಣ್ಯಾಧಿಕಾರಿ
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.