ಕೃಷಿ ಹೊಂಡಕ್ಕೆ ಬೇಲಿ ಹಾಕಲು ಹಿಂದೇಟು
ರೈತರ ನಿರಾಸಕ್ತಿಯಿಂದ ಜನ-ಜಾನುವಾರು ಪ್ರಾಣಕ್ಕೆ ಕುತ್ತು ಹೊಂಡದಲ್ಲಿ ಬಿದ್ದು ಸಾವು ಪ್ರಕರಣ ಹೆಚ್ಚಳ
Team Udayavani, Nov 22, 2019, 10:43 AM IST
ಶಶಿಕಾಂತ ಬಂಬುಳಗೆ
ಬೀದರ: ಕೃಷಿ ಹೊಂಡಗಳಲ್ಲಿ ಬಿದ್ದು ಜನ- ಜಾನುವಾರುಗಳ ಸಾವು ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿದ್ದರೂ ಹೊಂಡಗಳ ಸುತ್ತ ತಂತಿ ಬೇಲಿ ಹಾಕಿಸಿಕೊಳ್ಳಲು ರೈತರು ಆಸಕ್ತಿ ತೋರುತ್ತಿಲ್ಲ. ಸರ್ಕಾರ ಬೇಲಿಗಾಗಿ ಸಬ್ಸಿಡಿ ಸೌಲಭ್ಯ ನೀಡುತ್ತಿದ್ದರೂ ಫಲಾನುಭವಿಗಳು ನಿರಾಸಕ್ತಿ ತೋರುತ್ತಿರುವುದು ಜನರ ಪ್ರಾಣಕ್ಕೆ ಕಂಟಕವಾಗಿದೆ. ಹಾಗಾಗಿ ಅನ್ನದಾತರಿಗೆ ಜೀವ ಜಲ ಆಗಿರುವ ಕೃಷಿ ಹೊಂಡಗಳೇ ಕೆಲವೆಡೆ ಜೀವಕ್ಕೆ ಕಂಟಕವಾಗುತ್ತಿವೆ. ಇದಕ್ಕೆ ಬೀದರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕಾಲು ಜಾರಿ, ಈಜಾಡಲು ಹೋಗಿ ಸಾವನ್ನಪ್ಪಿರುವ ಘಟನೆಗಳೇ ಸಾಕ್ಷಿ.
ಹೊಂಡಗಳ ಸುತ್ತ ಸುರಕ್ಷತೆ ದೃಷ್ಟಿಯಿಂದ ತಂತಿಬೇಲಿ, ನೆರಳು ಪರದೆ ನಿರ್ಮಿಸಲು ಸರ್ಕಾರ ಸಬ್ಸಿಡಿ ಸೌಲಭ್ಯ ಜಾರಿಗೊಳಿಸಿದ್ದರೂ ಕೃಷಿ ಇಲಾಖೆಯಿಂದ ಅಗತ್ಯ ಜಾಗೃತಿ ಕೊರತೆ ಮತ್ತು ರೈತರ ನಿರಾಸಕ್ತಿ ಪರಿಣಾಮ ಯೋಜನೆ ನನೆಗುದಿಗೆ ಬೀಳುವಂತಾಗಿದೆ. ಅಂತರ್ಜಲ ಮಟ್ಟ ಕಾಪಾಡಿಕೊಳ್ಳಲು ಮತ್ತು ಸಂದಿಗ್ಧ ಸ್ಥಿತಿಯಲ್ಲಿ ಕೃಷಿಗೆ ನೀರು ಬಳಕೆಗೆ ಅನೂಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಮಹತ್ವಕಾಂಕ್ಷಿ ಯೋಜನೆ ಕೃಷಿ ಭಾಗ್ಯದಡಿ 2014-15ನೇ ಸಾಲಿನಲ್ಲಿ ರೈತರ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಕೃಷಿ ಹೊಂಡದಲ್ಲಿ ಸಾವು- ನೋವು ಘಟನೆಗಳು ವರದಿಯಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ ಹೊಂಡಗಳ ಸುತ್ತಮುತ್ತ ತಂತಿ ಬೇಲಿ ಮತ್ತು ನೆರಳು ಪರದೆ (ಶಾಡ್‌ನೆಟ್) ಅಳವಡಿಕೆಗೆ ಅವಕಾಶ ಮಾಡಿಕೊಟ್ಟಿದೆ. ಇದಕ್ಕಾಗಿ ರೈತರಿಗೆ ಶೇ.50ರಷ್ಟು ಸಹಾಯಧನ ಸೌಲಭ್ಯವನ್ನೂ ಒದಗಿಸಿದ್ದು, ಮೊದಲು ರೈತರು ಮಾರುಕಟ್ಟೆಯಲ್ಲಿ ಖರೀದಿಸುವುದು ಕಡ್ಡಾಯವಾಗಿದೆ.
ಹೆಚ್ಚಿದ ಬೇಡಿಕೆ: ಕೃಷಿ ಹೊಂಡಗಳಿಗೆ ಎಲ್ಲೆಡೆ ಬೇಡಿಕೆ ಹೆಚ್ಚುತ್ತಿದ್ದು, ನೀರಿನ ಅಭಾವದ ಪರಿಸ್ಥಿತಿಯಲ್ಲಿ ಸಸ್ಯ ಮತ್ತು ಪ್ರಾಣಿಗಳ ನೀರಿನ ದಾಹವನ್ನು ನೀಗಿಸಿಕೊಳ್ಳುತ್ತಿದ್ದಾರೆ. ಆದರೆ, ಕೃಷಿ ಹೊಂಡದಲ್ಲಿ ಆಕಸ್ಮಿಕ ಸಾವು ಪ್ರಕರಣಗಳು ವರದಿಯಾಗಿದ್ದವು. ಕಳೆದ ಮೂರ್‍ನಾಲ್ಕು ವರ್ಷದಲ್ಲಿ ರಂಗಾಪುರದಲ್ಲಿ, ಬಿಜ್ಜರಗಿಯಲ್ಲಿ ತಲಾ 3, ಬಳ್ಳಾರಿ, ಕೋಲಾರ, ಬಾಗಲಕೋಟೆ, ದೇವನಳ್ಳಿಯಲ್ಲಿ ತಲಾ 2 ಹೀಗೆ ಹಲವೆಡೆ ಜನರ ಸಾವು ಸೇರಿದಂತೆ ಹಲವು ಸಂಖ್ಯೆಯ ಜಾನುವಾರುಗಳ ಸಾವು-ನೋವು ಪ್ರಕರಣಗಳು ನಡೆದಿವೆ.
ಗುರುವಾರವಷ್ಟೇ ಗದಗ ಜಿಲ್ಲೆಯ ಮದಗುಣಕಿ ಗ್ರಾಮದಲ್ಲಿ ವೃದ್ಧ ದಂಪತಿ ಹೊಂಡದ ಪಾಲಾಗಿದ್ದಾರೆ. ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೃಷಿ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡು ಹೊಂಡದಲ್ಲಿ ಕಡ್ಡಾಯವಾಗಿ ಪಾಲಿಥಿನ್ ಹೊದಿಕೆ ಅಳವಡಿಸಿಕೊಂಡಿರುವ ಎಲ್ಲ ವರ್ಗದ ರೈತರಿಗೆ ಸೌಲತ್ತು ಕಲ್ಪಿಸಲಾಗಿದೆ. ಆದರೆ, ಸುತ್ತೋಲೆ ಹೊರಡಿಸಿ ಎರಡು ವರ್ಷ ಕಳೆದರೂ ರಾಜ್ಯದಲ್ಲಿ ಹೆಚ್ಚು ರೈತರು ಇದರ ಪ್ರಯೋಜನ ಪಡೆಯುತ್ತಿಲ್ಲ. ಇನ್ನೂ ಬೀದರ ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿರುವ ರೈತರು ಈವರೆಗೆ ಕೇವಲ 50 ಜನ ಬೇಲಿ ಹಾಕಿಸಿಕೊಂಡಿದ್ದಾರೆ. ಹೊಂಡಗಳ ಸುತ್ತ ಬೇಲಿ ಮತ್ತು ಪರದೆ ಅಳವಡಿಸಿಕೊಳ್ಳುವ ಕುರಿತು ಕೃಷಿ ಇಲಾಖೆ ರೈತರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಕಡ್ಡಾಯವಾಗಿಸಬೇಕು. ಆಗ ಮಾತ್ರ ರೈತರು ಇದರ ಪ್ರಯೋಜನ ಪಡೆದು ಸಾವು ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.