ಕಡಿಮೆ ಫಲಿತಾಂಶ ಪಡೆದ ಕಾಲೇಜಿಗೆ ನೋಟಿಸ್!
ಜಿಲ್ಲಾಡಳಿತ ವಿರುದ್ಧ ಪಾಲಕರ ಆಕ್ರೋಶ •ಬೇಜವಾಬ್ದಾರಿ ತೋರುವ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯ
Team Udayavani, Apr 27, 2019, 11:15 AM IST
ಬೀದರ: ಪ್ರಸಕ್ತ ಸಾಲಿನ ಪಿಯುಸಿ ಪರೀಕ್ಷೆ ಫಲಿತಾಂಶ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದ್ದು, ಶೇ.40ಕ್ಕೂ ಕಡಿಮೆ ಫಲಿತಾಂಶ ಪಡೆದುಕೊಂಡ ಜಿಲ್ಲೆಯ ಸುಮಾರು 51 ಕಾಲೇಜುಗಳಿಗೆ ಪ.ಪೂ ಶಿಕ್ಷಣ ಇಲಾಖೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ನಿರ್ಧರಿಸಿದೆ.
ಶೇ.40ಕ್ಕೂ ಕಡಿಮೆ ಫಲಿತಾಂಶ ಪಡೆದ ಸರ್ಕಾರಿ 8 ಕಾಲೇಜುಗಳು, ಅನುದಾನಿತ 22 ಹಾಗೂ ಅನುದಾನ ರಹಿತ 21 ಒಟ್ಟಾರೆ, 51 ಕಾಲೇಜುಗಳಿಗೆ ಪ.ಪೂ ಇಲಾಖೆ ನೋಟಿಸ್ ಜಾರಿ ಮಾಡಲಿದೆ ಎಂದು ತಿಳಿದುಬಂದಿದ್ದು, ಯಾವ ಕಾರಣಕ್ಕೆ ಫಲಿತಾಂಶದಲ್ಲಿ ಕುಸಿತ ಕಂಡಿದೆ? ವಿದ್ಯಾರ್ಥಿಗಳು ಪಾಸ್ ಆಗದಿರಲು ಮುಖ್ಯ ಕಾರಣ ಏನು? ಆಯಾ ವಿಷಯಗಳ ಉಪನ್ಯಾಸಕರ ಜವಾಬ್ದಾರಿ ಸೇರಿದಂತೆ ಹತ್ತಾರು ಪ್ರಶ್ನೆಗಳು ನೋಟಿಸ್‌ನಲ್ಲಿ ಕೇಳಲಾಗುತ್ತಿದೆ ಎಂದು ತಿಳಿದು ಬಂದಿದ್ದು, ಕಡಿಮೆ ಫಲಿತಾಂಶ ಬಂದ ಕಾಲೇಜುಗಳ ಮುಖ್ಯಸ್ಥರು ಪ.ಪೂ ಶಿಕ್ಷಣ ಇಲಾಖೆ ಅಧಿಕಾರಿಗೆ ಸೂಕ್ತ ಉತ್ತರ ನೋಟಿಸ್ ಮುಟ್ಟಿದ ನಂತರ ನೀಡಬೇಕಾಗಿದೆ.
ಫಲಿತಾಂಶ ಕಡಿಮೆಗೆ ಸರ್ಕಾರ ಕಾರಣ?: ಸದ್ಯ ಎಲ್ಲ ಕಡೆಗಳಲ್ಲಿ ಫಲಿತಾಂಶ ಚರ್ಚೆಗಳು ನಡೆಯುತ್ತಿದ್ದು, ಅನೇಕ ಪಾಲಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 10ನೇ ತರಗತಿಯಲ್ಲಿ ಶೇ.75 ಅಂಕ ಪಡೆದ ವಿದ್ಯಾರ್ಥಿಗಳು ಇಂದು ಪಿಯುಸಿ ಪರೀಕ್ಷೆಯಲ್ಲಿ ಏಕೆ ಫೇಲಾಗುತ್ತಿದ್ದಾರೆ ಎಂಬ ಬಗ್ಗೆ ದೂರುಗಳಿವೆ. ಬಡತನ ಹಿನ್ನೆಲೆಯಲ್ಲಿ ಸರ್ಕಾರಿ ಕಾಲೇಜು ಹಾಗೂ ಅನುದಾನಿತ ಕಾಲೇಜುಗಳಲ್ಲಿ ಮಕ್ಕಳನ್ನು ದಾಖಲು ಮಾಡುತ್ತಿದ್ದು, ಜಿಲ್ಲಾಡಳಿತ ಶಿಕ್ಷಣದ ಗುಣಮಟ್ಟದ ಕಡೆ ಹೆಚ್ಚಿನ ಗಮನ ಹರಿಸದಿರುವುದು ಫಲಿತಾಂಶ ಕಡಿಮೆಗೆ ಕಾರಣ ಎಂದು ಮಕ್ಕಳ ಪಾಲಕರು ಆರೋಪಿಸುತ್ತಿದ್ದಾರೆ. ಪ್ರತಿವರ್ಷ ಫಲಿತಾಂಶ ಕಡಿಮೆ ಬಂದಾಗ ಅಧಿಕಾರಿಗಳು ಕಾಲೇಜಿಗೆ ನೋಟಿಸ್ ಜಾರಿ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಗಳೂ ಕೇಳಿ ಬರುತ್ತಿವೆ.
ಸಂಬಳಕ್ಕೆ ಕತ್ತರಿ ಹಾಕಿ: ಸರ್ಕಾರಿ ನೌಕರಿ ಪಡೆಯುವರು ಅನೇಕ ಪರೀಕ್ಷೆಗಳು ಎದುರಿಸಿ ಹುದ್ದೆ ಪಡೆದುಕೊಂಡಿರುತ್ತಾರೆ. ಸರ್ಕಾರಿ ಕೆಲಸವೆಂದರೆ ಅಸಡ್ಡೆ ತೋರುವ ಸಿಬ್ಬಂದಿಗಳ ವಿರುದ್ಧ ಜಿಲ್ಲಾಡಳಿತ, ರಾಜ್ಯ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂಬುವುದು ಅನೇಕ ವಿದ್ಯಾರ್ಥಿ ಹಾಗೂ ಪಾಲಕರ ಆಗ್ರಹವಾಗಿದೆ. ಶಿಕ್ಷಣಕ್ಕೆ ಸರ್ಕಾರ ಅನುದಾನ ನೀಡುತ್ತಿದೆ, ಹೊರತಾಗಿ ಉಪನ್ಯಾಸಕರು ನೀಡುತ್ತಿರುವ ಶಿಕ್ಷಣದ ಗುಣಮಟ್ಟ ಪರಿಶೀಲಿಸುತ್ತಿಲ್ಲ. ಪರೀಕ್ಷೆಯಲ್ಲಿ ವಿದ್ಯಾರ್ಥಿ ಫೇಲ್ ಆದರೆ, ಅವನ ಸಮಯ ಹಾಗೂ ಸಾಮರ್ಥ್ಯ ಹಾಳಾಗುತ್ತದೆ. ಅದೇ ರೀತಿ ಯಾವ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಫೇಲಾಗಿದ್ದಾರೆ ಎಂದು ತಿಳಿದುಕೊಂಡು ಆ ಉಪನ್ಯಾಸಕರ ಸಂಬಳಕ್ಕೆ ಹಾಗೂ ಬಡ್ತಿಗೆ ಕತ್ತರಿ ಹಾಕುವ ಕೆಲಸ ಸರ್ಕಾರ ಮಾಡಿದರೆ ಮಾತ್ರ ಜಿಲ್ಲೆಯಲ್ಲಿ ಶಿಕ್ಷಣ ಸುಧಾರಣೆ ಆಗುತ್ತದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಆದರೆ, ಈ ಕುರಿತು ಡಿಡಿಪಿಯು ಮಲ್ಲಿಕಾರ್ಜುನ ಅವರನ್ನು ಸಂಪರ್ಕಿಸಿದ ಸಂದರ್ಭದಲ್ಲಿ, ಫಲಿತಾಂಶ ಕಡಿಮೆ ಬಂದ ಕಾಲೇಜುಗಳ ಸಿಬ್ಬಂದಿ ಸಂಬಳ ತಡೆಯುವುದು ಹಾಗೂ ಬಡ್ತಿ ನೀಡದಿರುವ ಕುರಿತು ಯಾವುದೇ ಆದೇಶ ಹಾಗೂ ನಿಯಮಗಳು ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಶಿಕ್ಷಕ ವೃತ್ತಿ ಪ್ರೀತಿಸಬೇಕು: ಪಿಯುಸಿ ಫಲಿತಾಂಶ ಸುಧಾರಣೆ ಕಾಣದಿರುವುದು ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳೇ ಮುಖ್ಯ ಕಾರಣ ಎಂದು ಖಾಸಗಿ ಕಾಲೇಜುಗಳು ಆರೋಪಿಸುತ್ತಿವೆ. ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಫಲಿತಾಂಶ ಹೆಚ್ಚಿದರೆ ಜಿಲ್ಲೆಯ ಫಲಿತಾಂಶ ಹೆಚ್ಚಾಗುತ್ತದೆ. ರಾಜ್ಯದಲ್ಲಿ ಉತ್ತಮ ಸ್ಥಾನ ಬರುತ್ತದೆ ಅಲ್ಲದೆ, ಮೊದಲು ಸರ್ಕಾರಿ ಸಂಬಳ ಪಡೆಯುವ ಸಿಬ್ಬಂದಿಗಳು ಶಿಕ್ಷಕ ವೃತ್ತಿ ಪ್ರೀತಿಸಬೇಕು. ಆಗ ಮಾತ್ರ ಶಿಕ್ಷಣದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಅನೇಕ ಖಾಸಗಿ ಕಾಲೇಜು ಮುಖ್ಯಸ್ಥರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಮನಸ್ಥಿತಿ ಬದಲಾಗಬೇಕು: ಸರ್ಕಾರಿ ಉಪನ್ಯಾಸಕರು ಹೊರಗಿನ ಎಲ್ಲ ಜಂಜಡ ಬದಿಗೊತ್ತಿ ಕಾಲೇಜಿನಲ್ಲಿ ಪ್ರವೇಶಿಸಿದ ನಂತರ ಬೋಧನೆಗೆ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಕ ಹೇಳುವ ಬೋಧನಾ ಕ್ರಮ ಕಾಲೇಜಿನ ವಿದ್ಯಾರ್ಥಿಗಳ ಮೆದುಳಿನೊಳಗೆ ದಾಖಲೆಯಾಗುವಂತೆ ಮಾಡಬೇಕು. ಉಪನ್ಯಾಸಕರು ಹಾಕಿಕೊಂಡಿರುವ ಇತಿ-ಮಿತಿಗಳಿಂದ ಎದ್ದು ಹೊರಬರಬೇಕು. ಎಲ್ಲಿಯೂ ಸ್ವಾರ್ಥ ಭಾವನೆ ಬರಬಾರದು. ಯಾರು ಜವಾಬ್ದಾರಿಗಳಿಗೆ ಹೆಗಲು ಕೊಡುತ್ತಾರೋ ಅವರು ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ ಎಂಬುವುದನ್ನು ಶಿಕ್ಷರು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಾಣಬೇಕು. ನಮ್ಮ ಮಕ್ಕಳಿಗೆ ಒದಗಿಸುವ ನ್ಯಾಯ ಆ ಮಕ್ಕಳಿಗೂ ಸಿಗುವಂತಾಗಬೇಕು. ತಾರತಮ್ಯ ಮನೋಭಾವನೆಗಳು ಬರಬಾರದು. ಬೋಧಿಸುವ ಸಂದರ್ಭದಲ್ಲಿ ಯಾವ ಕಲ್ಮಶಗಳು ಶಿಕ್ಷಕನಲ್ಲಿ ಇರಬಾರದು. ಶಿಕ್ಷಕ ಬೋಧನೆ ಜೊತೆ ಓದುವ ಗೀಳನ್ನು ಬೆಳೆಸಿಕೊಳ್ಳಬೇಕು ಎಂಬ ಅಭಿಪ್ರಾಯಗಳು ಜಿಲ್ಲೆಯ ಅನೇಕ ಬುದ್ಧಿಜೀವಿಗಳು, ಸಾಹಿತಿಗಳ ಅಭಿಪ್ರಾಯವಾಗಿದೆ.
ಅನುದಾನಿತ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರಿಗೆ ಕೆಲಸ ಮಾಡಿದರೂ ಸಂಬಳ ಸಿಗುತ್ತೆ; ಮಾಡದಿದ್ದರೂ ಸಂಬಳ ಸಿಗುತ್ತಿದೆ. ಹೀಗಾಗಿ ಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸುತ್ತಿಲ್ಲ. ಜೊತೆಗೆ ಮೂಲ ಸೌಲಭ್ಯ ಕೊರತೆ ಕೂಡ ಇದೆ. ಆದರೆ ಖಾಸಗಿ ಅನುದಾನ ರಹಿತ ಸಂಸ್ಥೆಗಳಲ್ಲಿ ಆಡಳಿತ ಮಂಡಳಿ ಮೇಲುಸ್ತುವಾರಿ ಮಾಡುವ ಕಾರಣ ಫಲಿತಾಂಶ ಉತ್ತಮವಾಗಿ ಬರುತ್ತಿದೆ.
•ಅವಿನಾಶ ಭಂಡಾರಿ, ವಿದ್ಯಾರ್ಥಿ
ಕಳಪೆ ಸಾಧನೆ ಪ್ರದರ್ಶಿಸಿದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳಿಗೆ ಪ.ಪೂ ಶಿಕ್ಷಣ ಇಲಾಖೆಯಿಂದ ಕಾರಣ ಕೇಳಿ ನೋಟಿಸ್ ಜಾರಿಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಶೇ.40ಕ್ಕೂ ಕಡಿಮೆ ಫಲಿತಾಂಶ ಪಡೆದ ಕಾಲೇಜುಗಳಿಗೆ ಮಾತ್ರ ನೋಟಿಸ್ ನೀಡಲಾಗುತ್ತಿದೆ. ಕಾಲೇಜು ಮುಖ್ಯಸ್ಥರ ಉತ್ತರ ಬಂದ ನಂತರ ಎಲ್ಲ ಕಾಲೇಜುಗಳ ಪ್ರಾಚಾರ್ಯರ ಸಭೆ ನಡೆಸಿ, ಹೇಗೆ ಸುಧಾರಣೆ ಮಾಡಬೇಕು ಎಂಬ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಹೆಚ್ಚಿನ ಫಲಿತಾಂಶಕ್ಕೆ ಎಲ್ಲ ಕಾಲೇಜುಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುವುದು.
•ಮಲ್ಲಿಕಾರ್ಜುನ,
ಡಿಡಿಪಿಯು ಬೀದರ
ಇರುವ ಉಪನ್ಯಾಸಕರಿಗೆ ಕಲಿಸುವ ಇಚ್ಛಾಶಕ್ತಿಯಿಲ್ಲ. ಅನುದಾನ ರಹಿತ ಶಾಲಾ-ಕಾಲೇಜು ಉಪನ್ಯಾಸಕರಿಗೆ ಕಾಯಂ ಕೆಲಸದ ಭರವಸೆ ಇಲ್ಲದ ಕಾರಣ ಅವರು ಕಷ್ಟಪಟ್ಟು ಪಾಠ ಕಲಿಸುತ್ತಾರೆ. ಕಡಿಮೆ ಸಂಬಳ ಪಡೆದು ಉತ್ತಮ ಫಲಿತಾಂಶ ಬರುವುದಾದರೆ ಹೆಚ್ಚಿನ ಸಂಬಳ ಪಡೆದು ಏಕೆ ಹೆಚ್ಚಿನ ಫಲಿತಾಂಶ ಬರಬಾರದು. ಕಡಿಮೆ ಫಲಿತಾಂಶ ಬರುವ ಕಾಲೇಜುಗಳಿಗೆ ಸರ್ಕಾರ ಶಿಕ್ಷಿಸುವ ಕಾರ್ಯ ನಡೆಯಬೇಕು.
•ಮಲ್ಲಿಕಾರ್ಜುನ ಹಲಮಂಡಗೆ,
ಶಿಕ್ಷಣ ತಜ್ಞ, ಭಾಲ್ಕಿ
ಬಹುತೇಕ ಸರ್ಕಾರಿ ಹಾಗೂ ಖಾಸಗಿ ಪ.ಪೂ ಕಾಲೇಜುಗಳಲ್ಲಿ ಸಮಪರ್ಕ ಮೂಲಭೂತ ಹಾಗೂ ಉಪನ್ಯಾಸಕ ಕೊರತೆ ಮತ್ತು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ಶಿಕ್ಷಣ ವ್ಯಾಪಾರೀಕರಣ ಮಾಡಿಕೊಂಡಿವೆ. ಇದರಿಂದ ಪಿಯುಸಿ ಫಲಿತಾಂಶ ಕಡಿಮೆ ಬರಲು ಪ್ರಮುಖ ಕಾರಣವಾಗಿದ್ದು, ಇದನ್ನು ಸರಿಪಡಿಸಬೇಕು.
•ಲೋಕೇಶ ಮೋಳಕೇರೆ,
ವಿದ್ಯಾರ್ಥಿ, ಬಸವಕಲ್ಯಾಣ
ಇರುವ ವ್ಯವಸ್ಥೆ ಸರಿಪಡಿಸಿ ಗುಣಮಟ್ಟದ ಶಿಕ್ಷಣ ನೀಡಬಹುದು. ಕಳೆದೆರಡು ವರ್ಷಗಳಿಂದ ರಾಮ ಮತ್ತು ರಾಜ ಕಾಲೇಜು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುತ್ತಿದೆ. ಐದು ಜನ ಕಾಯಂ ಸಿಬ್ಬಂದಿ ಇದ್ದು, ಉಳಿದಂತೆ ಇತರೆ ಎಲ್ಲ ವಿಷಯ ಉಪನ್ಯಾಸಕರನ್ನು ಸಂಸ್ಥೆಯವರು ನೇಮಕಗೊಳಿಸಿ ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಮುಂದಾಗಿರುವುದು ಕಾಲೇಜು ಸಾಧನೆಗೆ ಕಾರಣವಾಗಿದೆ.
•ಮಲ್ಲಿನಾಥ ಚಿಂಚೋಳಿ,
ಅನುದಾನಿತ ಕಾಲೇಜು ಪ್ರಾಚಾರ್ಯ, ಹುಮನಾಬಾದ
ಸರ್ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿ ವಿಷಯವಾರು ಉಪನ್ಯಾಸಕರ ಕೊರತೆ ಫಲಿತಾಂಶಕ್ಕೆ ಮುಖ್ಯ ಕಾರಣವಾಗಿದೆ. ಫಲಿತಾಂಶ ಸುಧಾರಣೆ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ ಸೌಲಭ್ಯ ಕಲ್ಪಿಸಿದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.
•ಬಸವರಾಜ ಸ್ವಾಮಿ,
ಪ್ರಾಚಾರ್ಯರು, ಭಾಲ್ಕಿ ಸರ್ಕಾರಿ ಪ.ಪೂ ಕಾಲೇಜು
ಎಸ್ಸೆಸ್ಸೆಲ್ಸಿವರೆಗೆ ಉರ್ದು, ಮರಾಠಿ ಸೇರಿದಂತೆ ಬಹುಭಾಷೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಲಾಗುತ್ತದೆ. ಆದರೆ ಪಿಯುಸಿಯಲ್ಲಿ ಪ್ರವೇಶ ಪಡೆದುಕೊಂಡ ನಂತರ ಕೇವಲ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ವಿಷಯವಾರು ಉಪನ್ಯಾಸಕರ ಕೊರತೆ ಇರುವುದು ಹಾಗೂ ಶೇ.70 ಪ್ರತಿಭಾವಂತ ವಿದ್ಯಾರ್ಥಿಗಳು ಬೇರೆ ಜಿಲ್ಲೆಯ ಕಾಲೇಜುಗಳಲ್ಲಿ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವುದೇ ತಾಲೂಕಿನ ಒಟ್ಟಾರೆ ಪಿಯುಸಿ ಫಲಿತಾಂಶ ಕಡಿಮೆ ಬರಲು ಮುಖ್ಯ ಕಾರಣ.
•ಸುರೇಶ ಅಕ್ಕಣ್ಣ,
ಪ್ರಾಚಾರ್ಯ, ನೀಲಾಂಬಿಕಾ ಪ.ಪೂ ಕಾಲೇಜು, ಬಸವಕಲ್ಯಾಣ
ಗುಣಮಟ್ಟದ ಫಲಿತಾಂಶ ಇರುವ ಮಕ್ಕಳೆಲ್ಲರೂ ಹೆಸರಾಂತ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಕಾರಣ ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಸಾಮಾನ್ಯ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆಯುತ್ತಿರುವುದು ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ವಿಷಯ ಉಪನ್ಯಾಸಕರ ಕೊರತೆ ಇರುವ ಕಾರಣ ಅತಿಥಿ ಉಪನ್ಯಾಸಕರೇ ಪಾಠ ಮಾಡುವುದು ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಮೂಲಸೌಲಭ್ಯಗಳಿಲ್ಲದಿರುವದರಿಂದ ಫಲಿತಾಂಶ ಕುಸಿಯುತ್ತಿದೆ. ಅನುದಾನಿತ ಕಾಲೇಜುಗಳಲ್ಲಿನ ಉಪನ್ಯಾಸಕರು ನಿವೃತ್ತರಾದ ನಂತರ ಹೊಸ ಉಪನ್ಯಾಸಕರ ನಿಯೋಜನೆ ಪ್ರಕ್ರಿಯೆ ನಡೆಯದೇ ಅತಿಥಿ, ಅರೆ ಕಾಲಿಕ ಉಪನ್ಯಾಸಕರು ವರ್ಗ ತೆಗೆದುಕೊಳ್ಳುವುದರಿಂದ ಫಲಿತಾಂಶ ಗಣನೀಯ ಕುಸಿತಕ್ಕೆ ಕಾರಣ ಇರಬಹುದು.
•ಶಾಂತವೀರ ಯಲಾಲ್,
ಅನುದಾನಿತ ಕಾಲೇಜು ಪ್ರಾಚಾರ್ಯ
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ಅಡಿಕೆ ವ್ಯಾಪಾರಿಯ ಬ್ಯಾಗಿನಲ್ಲಿದ್ದ 2 ಲಕ್ಷ ರೂ. ಕಳವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Mangaluru: ಎಂಜಿನಿಯರಿಂಗ್ ವಿದ್ಯಾರ್ಥಿನಿ ನಾಪತ್ತೆ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆಮಿಷ; 21 ಲ.ರೂ. ವಂಚನೆ
Shirva: ಹಿಂದೂ ಜೂನಿಯರ್ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ
MUST WATCH
ಹೊಸ ಸೇರ್ಪಡೆ
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Belthangady: ಅಡಿಕೆ ವ್ಯಾಪಾರಿಯ ಬ್ಯಾಗಿನಲ್ಲಿದ್ದ 2 ಲಕ್ಷ ರೂ. ಕಳವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Mangaluru: ಎಂಜಿನಿಯರಿಂಗ್ ವಿದ್ಯಾರ್ಥಿನಿ ನಾಪತ್ತೆ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆಮಿಷ; 21 ಲ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.