ಈರುಳ್ಳಿ-ತೊಗರಿಗೆ ಬೆಂಬಲ ಬೆಲೆ ಘೋಷಿಸಿ
Team Udayavani, Dec 1, 2018, 12:31 PM IST
ಬಸವನಬಾಗೇವಾಡಿ: ಈರುಳ್ಳಿ ಹಾಗೂ ತೊಗರಿಗೆ ಕೇಂದ್ರ ಹಾಗೂ ರಾಜ್ಯಸರಕಾರ ತಕ್ಷಣ ಬೆಂಬಲ ಬೆಲೆ ಘೋಷಣೆ ಮಾಡಿ ಅವುಗಳ ಖರೀದಿಗೆ ಮುಂದಾಗಬೇಕು ಎಂದು ಒತ್ತಾಯಿಸಿ ಶುಕ್ರವಾರ ಮನಗೂಳಿ-ಬಿಜ್ಜಳ, ಬಾರಖೇಡ-ಬೀಳಗಿ ರಾಜ್ಯ ಹೆದ್ದಾರಿ ಮೇಲೆ ಈರುಳ್ಳಿ ಸುರಿದು ಪ್ರತಿಭಟನೆ ನಡೆಸಲಾಯಿತು.
ಶುಕ್ರವಾರ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ತಾಲೂಕಿನಿಂದ ಆಗಮಿಸಿದ್ದ ನೂರಾರು ರೈತರು, ರೈತ ಮಹಿಳೆಯರು ಹಾಗೂ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಮನಗೂಳಿ-ಬಿಜ್ಜಳ ಬಾರಖೇಡ-ಬೀಳಗಿ ರಾಜ್ಯ ಹೆದ್ದಾರಿ ಮಧ್ಯ ಇರುವ ಬಸವೇಶ್ವರ ವೃತ್ತದಲ್ಲಿ ಈರುಳ್ಳಿ ರಸ್ತೆಗೆ ಚೆಲ್ಲಿ ಪ್ರತಿಭಟನೆ ಮಾಡಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.
ನಂತರ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರೈತರು ಬೆಳೆದ ಈರುಳ್ಳಿಗೆ ಶ್ರಮದ ತಕ್ಕ ಬೆಲೆ ಇಲ್ಲ. ಮಾರುಕಟ್ಟೆಗೆ ತೆಗೆದುಕೊಂಡು ಹೋದರು ಪ್ರಯೋಜನವಿಲ್ಲವೆಂದು ಈರುಳ್ಳಿ ಬೆಳೆದ ರೈತರು ಈರುಳ್ಳಿಯನ್ನು ರಸ್ತೆಗೆ ಹಾಕುವ ಪರಿಸ್ಥಿತಿ ನಿರ್ಮಾ ಣವಾಗಿದೆ ಎಂದು ಹೇಳಿದರು.
ಸರಿಯಾದ ಬೆಲೆ ಸಿಗದೆ ರೈತರು ಈರುಳ್ಳಿ ಮುಂದೆ ಕುಳಿತು ಕಣ್ಣೀರಿಡುತ್ತಿದ್ದಾರೆ. ಮೊದಲೇ 3-4 ವರ್ಷಗಳಿಂದ ಭೀಕರ ಬರಗಾಲಕ್ಕೆ ನಲುಗಿದ ರೈತರು ಅಲ್ಪ ಸ್ವಲ್ಪ ಬೆಳೆದ ಈರುಳ್ಳಿಗಾದರೂ ಬೆಲೆ ಸಿಕ್ಕು ನೆಮ್ಮದಿಯಿಂದ ಇರಬೇಕೆಂದರೆ ಅದೂ ಕೂಡ ಸಾಧ್ಯವಿಲ್ಲದಂತಾಗಿದೆ. ಈರುಳ್ಳಿಗೆ ಬೆಂಬಲ ಬೆಲೆ ಬರುವವರೆಗೂ ಬಳತದಲ್ಲಿ ಸಂಗ್ರಹಣೆ ಮಾಡಿಟ್ಟರೆ ಬಂದ ಈರುಳ್ಳಿ ಫಸಲಿನಲ್ಲಿ ಅರ್ಧ ಭಾಗ ಕೊಳೆತು ಹೋಗುತ್ತವೆ.
ಬಂದಷ್ಟು ಹಣ ಬರಲಿ ಎಂದು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಬೇಕು. ಇಲ್ಲವೆ ಈರುಳ್ಳಿ ಬೆಲೆ ಕೇಳಿದರೆ ಮನನೊಂದು ಅಲ್ಲಿಯೇ ರಸ್ತೆಯ ಮೇಲೆ ಹಾಕಿ ಬರಬೇಕು ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ಸರ್ಕಾರ ಕೂಡಲೇ ಈರುಳ್ಳಿಗೆ ಕನಿಷ್ಠ ಕ್ವಿಂಟಾಲ್ ಗೆ 2000ರೂ.ವರೆಗೆ ಬೆಂಬಲ ಬೆಲೆ ಘೋಷಿಸಿ ಸರ್ಕಾರವೇ ಈರುಳ್ಳಿಯನ್ನು ಖರೀದಿಸಬೇಕು.
ಈಗಾಗಲೇ ಸರ್ಕಾರ ಈರುಳ್ಳಿಗೆ ಕೇವಲ 900 ರೂ. ವರೆಗೆ ಬೆಂಬಲ ಬೆಲೆ ಘೋಷಿಸಿದ್ದು ಇದು ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಅಲ್ಲ. ಈರುಳ್ಳಿ ನಾಟಿ ಮಾಡುವ ಪ್ರಾರಂಭದಿಂದಲೂ ಫಸಲು ಕೈ ಸೇರುವವರೆಗೂ ಎಲ್ಲ ರೀತಿಯ ಖರ್ಚು ವೆಚ್ಚಗಳನ್ನು ಲೆಕ್ಕ ಹಾಕಿ ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿದರು.
ತಾಲೂಕಾಧ್ಯಕ್ಷ ಸಿದ್ದರಾಮ ಅಂಗಡಗೇರಿ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲದ ನಡುವೆಯೂ ರೈತರು ಅಲ್ಪ ಸ್ವಲ್ಪ ತೊಗರಿ ಬೆಳೆದಿದ್ದಾರೆ. ಈ ಬಾರಿ ಸಕಾಲಕ್ಕೆ ಮಳೆ ಆಗದೆ ಇದ್ದರೂ ಪ್ರತಿ ಎಕರೆಗೆ 2 ಕ್ವಿಂಟಲ್‌ವರೆಗೆ ತೊಗರಿ ಫಸಲು ಬಂದಿದೆ. ಆದರೆ ಈ ಸದ್ಯ ರೈತರು ತೊಗರಿಯನ್ನು ಕಟಾವು ಮಾಡಿ ಫಸಲು ಕೈ ಸೇರಿದೆ. ಕಳೆದ ವರ್ಷ ಸರ್ಕಾರ ಈ ಸಮಯದಲ್ಲಿ ತೊಗರಿಗೆ ಬೆಂಬಲ ಬೆಲೆ ಘೋಷಿಸಿ ಖರೀದಿ ಪ್ರಾರಂಭಿಸಿತ್ತು. ಆದರೆ ಈ ವರ್ಷ ಇಲ್ಲಿವರೆಗೂ ಬೆಂಬಲ ಬೆಲೆ ಘೋಷಿಸಿ ತೋಗರಿ ಖರೀದಿಸುವ ಕುರಿತು ಯಾವುದೇ ಘೋಷಣೆ ಮಾಡಿಲ್ಲ.
ತೊಗರಿ ಬೆಳೆದು ಅಲ್ಪ ಸ್ವಲ್ಪ ಫಸಲು ಪಡೆದುಕೊಂಡು ರೈತರು ಇಂದು ನಾಳೆ ಸರ್ಕಾರ ಬೆಂಬಲ ಬೆಲೆ ಘೋಷಿಸಿ ತೊಗರಿ ಖರೀದಿಸುತ್ತಾರೆಂದು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಿಸಿ ತೊಗರಿ ಖರೀದಿಯನ್ನು ಪ್ರಾರಂಭಿಸಬೇಕು. ರಾಜ್ಯ ಸರಕಾರ ಹಿಂದೇಟು ಹಾಕಿದಲ್ಲಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಈರಣ್ಣ ದೇವರಗುಡಿ, ಡಾ| ಎಂ.ರಾಮಚಂದ್ರ ಬಮ್ಮನಜೋಗಿ, ಹೊನಕೆರೆಪ್ಪ ತೆಲಗಿ, ಕೃಷ್ಣಪ್ಪ ಬಮರೆಡ್ಡಿ, ಹನುಮಂತ ತೋಟದ, ಚಂದ್ರಾಮ ತೆಗ್ಗಿ, ಶಿವಾನಂದ ಐಗಳಿ, ಶ್ರೀಶೈಲ ತೋಟದ, ಪರಮಾನಂದ ಮಾಳೂರ, ರಂಜಾನ ಹೆಬ್ಟಾಳ, ಸುಭಾಷ್ ಬಿಸಿರೊಟ್ಟಿ, ಶಾಂತಗೌಡ ಬಿರಾದಾರ, ಮೈಬೂಬಸಾಬ ಅವಟಿ, ರೈತ ಮಹಿಳೆಯರಾದ ಶಾರದಾ ಲಮಾಣಿ, ಕಾಳಮ್ಮ ಬಡಿಗೇರ. ಗುರುಬಾಯಿ ಹಾದಿಮನಿ, ಜ್ಯೋತಿ ಹಿರೇಮಠ, ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರ ಗ್ರೇಡ್-2 ತಹಶೀಲ್ದಾರ್ ಪಿ.ಜಿ. ಪವಾರ ಅವರಿಗೆ ಮನವಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.