ಧರ್ಮಗುರುಗಳ ವಿರುದ್ಧ ನಿರಾಧಾರ ಆರೋಪ: ಯತ್ನಾಳ ಬೇಷರತ್ ಕ್ಷಮೆಗೆ ಅಹಿಂದ ಮುಖಂಡರ ಆಗ್ರಹ
Team Udayavani, Dec 7, 2023, 5:16 PM IST
ವಿಜಯಪುರ: ತಮಗೆ ಅಧಿಕಾರ ಸಿಗದಿರುವುದರಿಂದ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಧರ್ಮ ಗುರುಗಳ ಬಗ್ಗೆ ಆಧಾರ ರಹಿತ ಆರೋಪ ಮಾಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಡಲೇ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಅಹಿಂದ ನಾಯಕರು ಅಗ್ರಹಿಸಿದ್ದಾರೆ.
ಗುರುವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಹಿಂದ ಮುಖಂಡರಾದ ಎಸ್.ಎಂ.ಪಾಟೀಲ ಗಣಿಹಾರ, ಎಂ.ಸಿ.ಮುಲ್ಲಾ, ಸಾಂವಿಧಾನಿಕವಾಗಿ ಶಾಸಕ ಸ್ಥಾನದಲ್ಲಿರುವ ಬಸನಗೌಡ ಪಾಟೀಲ ಯತ್ನಾಳ, ಸಮಾಜದಲ್ಲಿ ಶಾಂತಿ ಕದಡುವ ಕಾರಣಕ್ಕಾಗಿ ಪದೇ ಪದೇ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆ ಕೊಡುತ್ತಲೇ ಬರುತ್ತಿದ್ದಾರೆ. ಇದೀಗ ಇಸ್ಲಾಂ ಧರ್ಮಗುರುಗಳ ವಿರುದ್ಧ ಐಎಸ್ಐ ನಂಟಿದೆ, ಭಯೋತ್ಪಾದಕರ ಸಂಪರ್ಕ ಇದೆ, ದೇಶದ್ರೋಹದ ಕೆಲಸ ಮಾಡಲು ವಿದೇಶದಿಂದ ಹಣ ಬರುತ್ತಿದೆ ಎಂದೆಲ್ಲ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ತಾವು ಇಸ್ಲಾಂ ಧರ್ಮಗಳ ವಿರುದ್ಧ ಮಾಡಿರುವ ಆರೋಪ ಸಾಬೀತು ಪಡಿಸಬೇಕು. ಇಲ್ಲವೇ ತನ್ವೀರ ಪೀರಾ ಅವರು ನೀಡಿರುವ ಸವಾಲು ಸ್ವೀಕರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶ ತೊರೆಯಬೇಕು ಎಂದು ಎಸ್.ಎಂ.ಪಾಟೀಲ ಆಗ್ರಹಿಸಿದರು.
ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತು ಮಾಡಿದಲ್ಲಿ ನಾನು ದೇಶ ತೊರೆಯುವುದಾಗಿ ನೀಡಿರುವ ತನ್ವೀರ ಪೀರಾ ಅವರ ಸವಾಲು ಸ್ವೀಕರಿಸಬೇಕು ಎಂದು ಆಗ್ರಹಿಸಿದರು.
ಒಂದೊಮ್ಮೆ ಯತ್ನಾಳ ಹೇಳಿಕೆ ಆಧಾರ ರಹಿತವಾಗಿರುವ ಕಾರಣ ಕೂಡಲೇ ಸರ್ಕಾರ ಸಮಗ್ರ ತನಿಖೆ ನಡೆಸಿ, ಯತ್ನಾಳ ಅವರನ್ನು ಭಾರತದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ತನ್ವೀರ ಪೀರಾ ಅವರೊಂದಿ ಯತ್ನಾಳ ವ್ಯವಹಾರಿಕ ಬಾಂಧವ್ಯ ಹೊಂದಿದ್ದಾರೆ. ಈ ಹಿಂದೆ ಮುಸ್ಲಿಮರ ಮತಗಳಿಂದಲೇ ಆಯ್ಕೆ ಆಗಿದ್ದ ಯತ್ನಾಳ, ಜೆಡಿಎಸ್ ಪಕ್ಷಕ್ಕೆ ಹೋಗಿ ಬಂದ ಬಳಿಕ ಮುಸ್ಲಿಮರ ವಿರುದ್ಧ ಧ್ವೇಷದ ಹೇಳಿಕೆ ನೀಡುತ್ತ, ಸಮಾಜ ಒಡೆಯುವ, ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ವೀರ ಪೀರಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ತನ್ವೀರ ಪೀರಾ ಅವರು ಐಎಸ್ಐ ನಂಟು ಹೊಂದಿದ್ದಾರೆ ಎಂದು ಸಾಕ್ಷ ರಹಿತ ಆರೋಪ ಮಾಡಿದ್ದಾರೆ. ಒಂದೊಮ್ಮೆ ತನ್ವೀರ ಪೀರಾ ಅವರು ದೇಶದ್ರೋಹದ ಕೃತ್ಯದಲ್ಲಿ ಪಾಲ್ಗೊಂಡಿದ್ದರೆ ದೇಶದ ಹಲವು ಕಡೆಗಳಲ್ಲಿ ತನ್ವೀರ್ ಪೀರಾ ಸೇರಿದಂತೆ ಮುಸ್ಲೀಂ ಮೌಲ್ವಿ, ಧರ್ಮಗುರುಗಳೇ ಆಯೋಜಿಸಿದ್ದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಹಾ, ನಿತಿನ್ ಗಡ್ಕರಿ, ಹಿಂದೂ ಧರ್ಮದ ಗುರುಗಳೂ ಪಾಲ್ಗೊಂಡಿದ್ದಾರೆ. ಹಾಗಾದರೆ ಇವರೆಲ್ಲ ದೇಶದ್ರೋಹಿಗಳೇ, ಈ ಬಗ್ಗೆ ತನಿಖೆ ನಡೆಸಬಾರದೇಕೆ ಎಂದು ಗಣಿಹಾರ ಪ್ರಶ್ನಿಸಿದರು.
ಯತ್ನಾಳ ಜೆಡಿಎಸ್ ಪಕ್ಷದಲ್ಲಿ ಇದ್ದಾಗ ನನ್ನ ಮನೆಯಲ್ಲಿ ತನ್ವೀರ ಪೀರಾ ಅವರೊಂದಿಗೆ ಊಟ ಮಾಡಿದ್ದಾರೆ. ಸ್ವಯಂ ತನ್ವೀರ್ ಪೀರಾ ಅವರನ್ನು ನಾನೇ ಯತ್ನಾಳ ಅವರ ಮನೆಗೆ ಕರೆದೊಯ್ದಾಗ ಜೊತೆಯಲ್ಲಿ ಕುಳಿತು ಊಟ ಮಾಡಿದ್ದಾರೆ ಇದನ್ನು ಯತ್ನಾಳ ಮರೆತಿದ್ದಾರೆ ಎಂದು ಎಂ.ಸಿ.ಮುಲ್ಲಾ ಕುಟುಕಿದರು.
17 ಪ್ರಕರಣ ಎದುರಿಸುತ್ತಿರುವ ಯತ್ನಾಳ ವಿರುದ್ಧ ಸರ್ಕಾರ ರೌಡಿಶೀಟರ್ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.
ತನ್ವೀರ ಪೀರಾ ಅವರು 13 ವರ್ಷಗಳ ಹಿಂದೆ ತಮ್ಮ ಪೀಠ ಪರಂಪರೆಯ ಬಾಂಧವ್ಯ ಇರುವ ಬಾಗ್ದಾದ್ ಗೆ ಭೇಟಿ ನೀಡಿದ್ದರು. ಆಗ ನಗರಸಭೆ ಅಧ್ಯಕ್ಷರಾಗಿದ್ದ ಇಕ್ಬಾಲ್ ಬೇಪಾರಿ ಸೇರಿದಂತೆ ಹಲವು ಭಕ್ತರು ಬಾಗ್ದಾದ್ ಗೆ ಹೋಗಿದ್ದರು. ಹಾಗಂತ ವಿದೇಶದ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ ಮಾತ್ರಕ್ಕೆ ಐಎಸ್ಐ ನಂಟು, ಭಯೋತ್ಪಾದಕರ ಸಂಪರ್ಕ ಇದೆ ಎಂದು ಯತ್ನಾಳ ಅವರು ಧರ್ಮಗುರು ತನ್ವೀರ ಪೀರಾ ಅವರ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ದಶಕದ ಹಿಂದೆ ಯತ್ನಾಳ ಅವರೇ ಪಾಕಿಸ್ತಾನ ಧ್ವಜ ಹಾರಾಟ ಪ್ರಕರಣ ನಡೆಸಿದ್ದರು. ಆಗ ಬಿಜೆಪಿ ಸರ್ಕಾರ ಪ್ರಕರಣವನ್ನು ಮುಚ್ಚಿಹಾಕಿತ್ತು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಾಕಿಸ್ತಾನ ಧ್ವಜ ಹಾರಾಟ ಪ್ರಕರಣದ ಮರು ತನಿಖೆ ನಡೆಸಬೇಕು ಎಂದು ಎಂ.ಸಿ.ಮುಲ್ಲಾ ಆಗ್ರಹಿಸಿದರು.
ರಾಜಕೀಯ ಅಧಿಕಾರ ಸಿಗದ ಕಾರಣಕ್ಕೆ ಹತಾಶ ಹೇಳಿಕೆ ನೀಡುತ್ತಿರುವ ಯತ್ನಾಳ ಮಾನಸಿಕ ಸ್ಥಿಮಿತ ಇಲ್ಲವಾಗಿದೆ. ಕೂಡಲೇ ಯತ್ನಾಳ ಅವರನ್ನು ಮಂಪರು ಪರೀಕ್ಷೆ ನಡೆಸಬೇಕು ಎಂದು ಅಹಿಂದ ಮುಖಂಡ ಎಂ.ಸಿ.ಮುಲ್ಲಾ ಆಗ್ರಹಿಸಿದರು.
ಕನ್ನಡ ಪರ ಸಂಘಟನೆಗಳು, ಪ್ರಗತಿಪರ ಚಿಂತಕರು, ಸ್ವಾತಂತ್ರ್ಯ ಹೋರಾಟಗಾರರು, ಹಿಂದೂ ಧರ್ಮ ಗುರುಗಳು, ಧಾರ್ಮಿಕ ನಾಯಕರ ವಿರುದ್ಧ ಆಧಾರ ರಹಿತವಾಗಿ ದೇಶದ್ರೋಹದ ಆಪಾದನೆ ಮಾಡುತ್ತಲೇ ಬರುತ್ತಿದ್ದಾರೆ. ಹೀಗಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹೇಳಿಕೆ, ವರ್ತನೆ ತೋರುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಡಲೇ ಬೇಷರತ್ತಾಗಿ ಕ್ಷಮೆ ಕೇಳಬೇಕು. ಸರ್ಕಾರ ಕೂಡ ಕೂಡಲೇ ಯತ್ನಾಳ ಅವರ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.
ಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿ, ನಾಗರಾಜ ಲಂಬು, ರಫೀಕ್ ಅಹ್ಮದ್ ಟಪಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.