ರಸ್ತೆ ನಿರ್ಮಿಸದಿದ್ದರೆ ಮತದಾನ ಬಹಿಷ್ಕಾರ
Team Udayavani, Aug 3, 2022, 6:12 PM IST
ಮುದ್ದೇಬಿಹಾಳ: ಸ್ವಾತಂತ್ರ್ಯ ದೊರೆತು 75 ವರ್ಷವಾದರೂ ನಾಲತವಾಡ ಹೋಬಳಿ ನಾಗರಬೆಟ್ಟ ಗ್ರಾಪಂ ವ್ಯಾಪ್ತಿಯ ಬೂದಿಹಾಳ ಪಿಎನ್ ಮತ್ತು ಮಲಗಲದಿನ್ನಿ ಗ್ರಾಮಗಳ ನಡುವೆ ರಸ್ತೆ ಸಂಪರ್ಕ ಕಲ್ಪಿಸಿಲ್ಲ. ಈಗಲೂ ನಿರ್ಲಕ್ಷ್ಯ ಮುಂದುವರಿದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯ ಮತದಾನವನ್ನೇ ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಸಿ ಎರಡೂ ಗ್ರಾಮಗಳ ಗ್ರಾಮಸ್ಥರು ಹಿರಿಯ ವಕೀಲ ಆರ್.ಬಿ.ಪಾಟೀಲ ನೇತೃತ್ವದಲ್ಲಿ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದರು.
ಎರಡೂ ಗ್ರಾಮಗಳ ನಡುವೆ 1.5 ಕಿ.ಮೀ. ಅಂತರ ಇದ್ದರೂ ಸಹಿತ ಸಾರ್ವಜನಿಕ ಸಂಪರ್ಕ ರಸ್ತೆ ಇಲ್ಲದ ಕಾರಣ ಹಲವಾರು ಸಮಸ್ಯೆಗಳು ತಲೆದೋರಿವೆ. ಮಲಗಲದಿನ್ನಿಯಲ್ಲಿ ಪಿಕೆಪಿಎಸ್ ಬ್ಯಾಂಕ್ ಇದೆ. ಬೂದಿಹಾಳ ಗ್ರಾಮದ ಈ ಪಿಕೆಪಿಎಸ್ ವ್ಯಾಪ್ತಿಗೆ ಒಳಪಡುತ್ತದೆ. ಈ ಮೊದಲು ನೂರಾರು ವರ್ಷಗಳಿಂದ ಇದ್ದ ವಹಿವಾಟು ರಸ್ತೆಯನ್ನು ಜಮೀನು ಮಾಲೀಕರು ಬಂದ್ ಮಾಡಿದ್ದರಿಂದ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ ಗಾಡಿ, ಟ್ರ್ಯಾಕ್ಟರ್, ಕಾರು ಮೂಲಕ ಹೋಗಿ ಬರಲು ರಸ್ತೆ ಇಲ್ಲದಂತಾಗಿ ತೊಂದರೆ ಆಗಿದೆ. ಎರಡೂ ಗ್ರಾಮಗಳ ಮಧ್ಯೆ ಸರ್ವಋತು ರಸ್ತೆ ನಿರ್ಮಿಸಲು ಹಲವಾರು ವರ್ಷಗಳಿಂದ ವಿನಂತಿಸುತ್ತಿದ್ದರೂ ಇಲ್ಲಿವರೆಗೂ ರಸ್ತೆ ನಿರ್ಮಾಣಗೊಂಡಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಮುಂಬರುವ ವಿಧಾನಸಭಾ ಚುನಾವಣೆಯ ಒಳಗೆ ಸರ್ವಕಾಲಿಕ ರಸ್ತೆ ನಿರ್ಮಿಸಬೇಕು. ಇಲ್ಲವಾದಲ್ಲಿ ಮತದಾನ ಬಹಿಷ್ಕರಿಸುವ ಅನಿವಾರ್ಯತೆ ಬರಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶಾಂತಗೌಡ ಪಾಟೀಲ ನಡಹಳ್ಳಿ, ಎಚ್.ಬಿ.ದೋರನಹಳ್ಳಿ, ಹನುಮಂತ್ರಾಯ ಹದ್ದೂರ, ಎಂ.ಎಸ್.ಪಾಟೀಲ, ಎಸ್.ಬಿ.ಹದ್ದೂರ, ಕೆ.ಎಲ್.ಮಣ್ಣೂರ, ಜಿ.ಜಿ.ಹಿರೇಮಠ, ಎ.ಎಸ್.ಶಿವಗೋಗಿಮಠ ಸೇರಿದಂತೆ ಬೂದಿಹಾಳ ಪಿಎನ್ ಮತ್ತು ಮಲಗಲದಿನ್ನಿ ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.