ಪ್ರಚಾರದ ಅಬ್ಬರ ಜೋರು: ಸಮಸ್ಯೆಗಳ ಚಿಂತನೆ ಚೂರು
Team Udayavani, Oct 23, 2021, 10:40 AM IST
ವಿಜಯಪುರ: ಮಾಜಿ ಸಚಿವ ಎಂ.ಸಿ. ಮನಗೂಳಿ ಅವರ ನಿಧನದಿಂದ ತೆರವಾಗಿರುವ ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲೀಗ ಉಪ ಚುನಾವಣೆ ಕಾವು ಏರಿದೆ. ಮತದಾನಕ್ಕೆ ಒಂದು ವಾರ ಬಾಕಿ ಇರುವಂತೆ ಪ್ರಚಾರದ ಅಬ್ಬರ ಜೋರಾಗಿದೆ.
ಆರೋಪ, ಪ್ರತ್ಯಾರೋಪಗಳ ಮಧ್ಯೆ ರಾಜಕೀಯ ಪಕ್ಷಗಳ ನಾಯಕರ ಪ್ರಚಾರದ ಅಬ್ಬರ ಜೋರಾಗಿದೆ. ಆದರೆ ಕ್ಷೇತ್ರ ಜ್ವಲಂತ ಸಮಸ್ಯೆಗಳ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂಬ ಆರೋಪವೇ ಗಂಭೀರಾಗಿದೆ. ಬಿಜೆಪಿಯವರು ರಮೇಶ ಭೂಸನೂರ ಅವರ ಗೆಲುವಿನ ಮೂಲಕ ಕ್ಷೇತ್ರವನ್ನು ಮರಳಿ ಪಡೆಯಲು ಅಬ್ಬರ ಪ್ರಚಾರದ ಮೂಲಕ ಹವಣಿಸುತ್ತಿದ್ದಾರೆ.
ಪಕ್ಷ ಬದಲಾದರೂ ಅಪ್ಪನ ಉತ್ತರಾಧಿಕಾರಿ ನಾನೇ ಆಗಬೇಕು ಎನ್ನುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಪ್ರಚಾರವೂ ಜೋರಾಗಿದೆ. ತಮ್ಮ ಪಕ್ಷದ ಮತದಾರರ ಹಿಡಿತದಲ್ಲಿರುವ ಕ್ಷೇತ್ರವಾಗಿರುವ ಸಿಂದಗಿ ಕ್ಷೇತ್ರವನ್ನು ಮತ್ತೂಮ್ಮೆ ಪಡೆಯಬೇಕು ಎಂಬ ಹಂಬಲ ಜೆಡಿಎಸ್ ಪಾಳೆಯದ ನಾಯಕರಿಗೆ ಇದೆ. ಹೀಗಾಗಿ ಶತಾಯ-ಗತಾಯ ಗೆಲ್ಲಲೇಬೇಕು ಎಂಬ ಜಿದ್ದಿಗೆ ಬಿದ್ದಿರುವ ಈ ಮೂರು ರಾಜಕೀಯ ಪಕ್ಷಗಳು ಜಾತಿವಾರು ಮತಗಳನ್ನು ಸೆಳೆಯಲು ಕೂಡ ತಂತ್ರಗಳನ್ನು ರೂಪಿಸುತ್ತಿವೆ. ಇದಕ್ಕಾಗಿ ತಮ್ಮ ಪಕ್ಷಗಳಲ್ಲಿರುವ ವಿವಿಧ ಜಾತಿಗಳ ಪ್ರಭಾವಿ ನಾಯಕರನ್ನು ಕರೆ ತಂದು ಪ್ರಚಾರದಲ್ಲಿ ತೊಡಗಿವೆ.
ಇದರ ಹೊರತಾಗಿ ಜಾತಿಮುಕ್ತ, ಭ್ರಷ್ಟಾಚಾರ ಮುಕ್ತ ಚುನಾವಣೆಗಾಗಿ ಸ್ಪರ್ಧೆಗೆ ಇಳಿದಿದ್ದೇವೆ ಎನ್ನುವ ರವಿಕೃಷ್ಣಾರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಡಾ| ಸುನೀಲಕುಮಾರ ಎಂಬ ವೈದ್ಯನನ್ನು ಕಣಕ್ಕೆ ಇಳಿಸಿ, ಸೀಟಿ ಊದುತ್ತಿದೆ. ಇನ್ನಿಬ್ಬರು ಪಕ್ಷೇತರರೂ ಕಣದಲ್ಲಿ ಇದ್ದಾರೆ.
ಇದನ್ನೂ ಓದಿ: ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ
ಜನತಾ ಪರಿವಾರದ ಹಿನ್ನೆಲೆಯ ಅದರಲ್ಲೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬ ನಿಷ್ಠರಾಗಿದ್ದ ಎಂ.ಸಿ.ಮನಗೂಳಿ ಅವರ ನಿಧನದ ಬಳಿಕ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಆರಂಭಗೊಂಡಿತ್ತು. ಸಹಜವಾಗಿ ಮನಗೂಳಿ ಅವರ ಪುತ್ರ ಅಶೋಕ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿಕೆ ನೀಡುತ್ತಲೇ ಅಶೋಕ ಮನಗೂಳಿ ಸ್ಥಳೀಯ ಕಾಂಗ್ರೆಸ್‌ನತ್ತ ಮುಖ ಮಾಡಿದರು. ಸ್ಥಳೀಯ ನಾಯಕರ ವಿರೋಧದ ಮಧ್ಯೆಯೂ ಕೈ ಪಕ್ಷ ಸೇರ್ಪಡೆಯಾಗಿದ್ದರು. ಅಲ್ಲದೇ ಅಭ್ಯರ್ಥಿಯಾಗಿಯೂ ಘೋಷಣೆಯಾಗಿ, ಸ್ಪರ್ಧೆಯನ್ನೂ ಮಾಡಿದ್ದಾರೆ.
ತಮ್ಮ ಒಂದು ಕಾಲದ ಜೊತೆಗಾರರಾಗಿದ್ದ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಕಾಂಗ್ರೆಸ್ ಸೇರಿದ್ದು, ಅವರನ್ನು ಗೆಲ್ಲಿಸುವ ಪಣ ತೊಟ್ಟಂತೆ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಕ್ಷೇತ್ರದಲ್ಲಿ ಹಲವು ಸುತ್ತಿನಲ್ಲಿ ಪ್ರಚಾರ ನಡೆಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುಜೇìವಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಯು.ಟಿ.ಖಾದರ, ಸ್ಥಳೀಯ ಪ್ರಭಾವಿ ನಾಯಕರಾದ ಎಂ.ಬಿ.ಪಾಟೀಲ, ಶಿವನಂದ ಪಾಟೀಲ ಅವರಂಥ ಘಟಾಘಟಿಗಳು ಅಶೋಕ ಮನಗೂಳಿ ಪರ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತ ಜೆಡಿಎಸ್ ಪಕ್ಷ ಉಪ ಚುನಾವಣೆ ಕಣಕ್ಕೆ ಧುಮುಕಲು ನಿರ್ಧರಿಸಿದ್ದಲ್ಲದೇ ಅಂತಿಮ ಕ್ಷಣದಲ್ಲಿ ಪದವೀಧರೆ ನಾಜಿಯಾ ಅಂಗಡಿ ಎಂಬ ಮಹಿಳೆಯನ್ನು ಕಣಕ್ಕೆ ಇಳಿಸಿದೆ. ನಾಜಿಯಾ ಘೋಷಣೆ ಬಿಜೆಪಿ ಜೊತೆಗಿನ ಒಳ ಒಪ್ಪಂದ ಎಂದು ಕಾಂಗ್ರೆಸ್ ಟೀಕೆ ಮಧ್ಯೆಯೂ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದಂತೆ ಸ್ವಯಂ ಮಾಜಿ ಪ್ರಧಾನಿ ದೇವೇಗೌಡ ಅವರೇ ಕ್ಷೇತ್ರದಲ್ಲಿ ವಾರದಿಂದ ಠಿಕಾಣಿ ಹೂಡಿ, ಹಳ್ಳಿಗಳ ಗಲ್ಲಿಗಳಲ್ಲಿ ಸುತ್ತಿ ಪ್ರಚಾರದಲ್ಲಿ ತೊಡಗಿದ್ದಾರೆ.
ಮಾಜಿ ಸಿ.ಎಂ. ಎಚ್.ಡಿ. ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ಬಂಡೆಪ್ಪ ಕಾಶಂಪುರ ಅವರಂಥ ನಾಯಕರು ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಪರಿಣಾಮ ಬಿಜೆಪಿ-ಕಾಂಗ್ರೆಸ್ ಮಧ್ಯದ ನೇರ ಹಣಾಹಣಿಯನ್ನು ತ್ರಿಕೋನ ಸ್ಪರ್ಧೆಯಾಗಿ ಮಾರ್ಪಡಿಸಲು ಮುಂದಾಗಿದ್ದಾರೆ. ಇತ್ತ ಆಡಳಿತಾರೂಢ ಬಿಜೆಪಿ ಪಕ್ಷ ಹಳೆ ಮುಖವಾದ ರಮೇಶ ಭೂಸನೂರ ಅವರನ್ನೇ ಕಣಕ್ಕಿಳಿಸಿ, ಮೂರನೇ ಬಾರಿಗೆ ಗೆಲ್ಲಿಸುವ ಉಮೇದಿನಲ್ಲಿದೆ. ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ಪಡೆಯುವುದಕ್ಕಾಗಿ ಹಿರಿಯ ಸಚಿವ ಗೋವಿಂದ ಕಾರಜೋಳ ಅವರಿಗೆ ಕ್ಷೇತ್ರದ ಚುನಾವಣೆ ಉಸ್ತುವಾರಿ ನೀಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಜಗದೀಶ ಶಟ್ಟರ, ಸಚಿವರಾದ ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ, ವಿ.ಸೋಮಣ್ಣ, ಶ್ರೀರಾಮುಲು, ನಟಿ, ಶಾಸಕಿ ತಾರಾ ಅನುರಾಧಾ ಅವರಂಥ ನಾಯಕರೆಲ್ಲ ಕ್ಷೇತ್ರದಲ್ಲಿ ಅಬ್ಬರ ಪ್ರಚಾರ ನಡೆಸಿದ್ದಾರೆ.
ಗಮನೀಯ ಅಂಶ ಎಂದರೆ ಸಿಂದಗಿ ಉಪ ಚುನಾವಣೆ ಕಣ ಅಬ್ಬರದ ಪ್ರಚಾರ ವೇದಿಕೆಯಾಗಿದ್ದರೂ ಯಾವೊಬ್ಬ ನಾಯಕರು ಕ್ಷೇತ್ರದ ಜ್ವಲಂತ ಸಮಸ್ಯೆಗಳ ಕುರಿತು ಗಂಭೀರ ಚಿಂತನೆ, ಚರ್ಚೆ ನಡೆಸಿಲ್ಲ. ಬದಲಾಗಿ ಎಲ್ಲ ನಾಯಕರೂ ರಾಜಕೀಯ ಪ್ರೇರಿತವಾದ ಆರೋಪ-ಪ್ರತ್ಯಾರೋಪ ಅದರಲ್ಲೂ, ವ್ಯಕ್ತಿಗತ ಟೀಕೆಗಳಿಗೆ ಸೀಮಿತವಾಗಿದ್ದಾರೆ. ವ್ಯಕ್ತಿಗತ ಟೀಕೆ-ಟಿಪ್ಪಣೆಗಳೇ ಕ್ಷೇತ್ರದಲ್ಲಿ ಪ್ರಚಾರದ ಸರಕುಗಳಾಗಿರುವ ಕಾರಣ ಸಮಸ್ಯೆಗಳ ಸುಳಿಯಲ್ಲಿರುವ ಕ್ಷೇತ್ರದ ಮತದಾರ ಮೌನಕ್ಕೆ ಶರಣಾಗಿದ್ದಾನೆ.
-ಜಿ.ಎಸ್.ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.