“ಶಾಂತಪ್ಪ ಚಡಚಣನಿಂದ ಭೈರಗೊಂಡನವರೆಗೆ”; ಶರಣನಾಡಿನ ಶಾಂತಿ ಕದಡಿದ ‘ಭೀಮಾ ತೀರ’ದ ಕ್ರೂರ ಕಥಾನಕ
ದಶಕದ ಹಿಂದೆ ಹೆಣ್ಣಿಗಾಗಿ ಹುಟ್ಟಿದ ದ್ವೇಷ ಹರಿಸಿದ್ದು ನೆತ್ತರ ಹೊಳೆಯನ್ನೇ!
Team Udayavani, Nov 8, 2020, 2:35 PM IST
ವಿಜಯಪುರ: ರಾಜ್ಯದ ಮಟ್ಟಿಗೆ ಭೀಮಾ ತೀರ ಎಂದರೆ ನೆನಪಿಗೆ ಬರುವುದು ಶರಣರ ನಾಡು ಎಂದೇ ಪ್ರಸಿದ್ಧಿ ಪಡೆದ ವಿಜಯಪುರ ಜಿಲ್ಲೆ. ಜೀವನದಿ ಭೀಮೆ ಹರಿಯುವ ಈ ಪರಿಸರದ ಎರಡು ಕುಟುಂಬಗಳ ರಕ್ತಚರಿತ್ರೆಯ ದ್ವೇಷದಿಂದ ಭೀಮಾ ತೀರದಲ್ಲಿ ಹರಿಯುತ್ತಿರುವ ನೆತ್ತರಿನಿಂದಾಗಿ ಹಂತಕ ನಾಡು ಎಂಬ ಕುಖ್ಯಾತಿ ತಂದಿದೆ. ವಿಶ್ವಶ್ರೇಷ್ಠ ಶರಣರು, ಸಂತ, ಮಹಾಂತರು, ಮಹಾತ್ಮರು ಜನಿಸಿದ ಈ ನೆಲಕ್ಕೆ ಅಂಟಿದ ರಕ್ತದ ಅಪಕೀರ್ತಿಗೆ ಇದೀಗ ಮತ್ತೊಂದು ನೆತ್ತರ ಓಕುಳಿ ಸಾಕ್ಷಿಯಾಗಿದೆ.
ನವೆಂಬರ್ 1 ರಂದು ರಾಜ್ಯೋತ್ಸವದ ಸಂಭ್ರಮದಲ್ಲಿದ್ದ ಜಿಲ್ಲೆಯ ಜನರಿಗೆ ಮರುದಿನ ನ.2 ರಂದು ಜಿಲ್ಲಾ ಕೇಂದ್ರದಿಂದ ಕೆಲವೇ ಕಿ.ಮೀ. ಅಂತರದಲ್ಲಿ ಹರಿದ ನೆತ್ತರು ವಿಜಯಪುರ ಜಿಲ್ಲೆಯ ಭೀಮಾ ತೀರದ ರಕ್ತ ಚರಿತ್ರೆಯನ್ನು ಮೆಲುಕು ಹಾಕುವಂತೆ ಮಾಡಿದೆ. 20ನೇ ಶತಮಾನದಲ್ಲಿ ಚಡಚಣ ಪರಿಸರದಲ್ಲಿ ಹಲಸಂಗಿ ಗೆಳೆಯರ ಬಳಗದ ಮೂಲಕ ಸಾಹಿತ್ಯ-ಸಂಶೋಧನೆ ಅಂತೆಲ್ಲ ಸಾಂಸ್ಕೃತಿಕ ಶ್ರೀಮಂತಿಕೆಯ ಸುಂದರ ಸುವಾಸನೆ ಬೀರಿದ್ದ ನೆಲಕ್ಕೆ ದೃಷ್ಟಿ ತಾಗಿದಂತಾಗಿದೆ. 3-4 ದಶಕಗಳ ಹಿಂದೆ ಮಹಿಳೆಯೊಬ್ಬಳ ಮೇಲಿನ ದೌರ್ಜನ್ಯ ಹಾಗೂ ರಕ್ಷಣೆ ನೀಡಿದ ವಿಷಯವಾಗಿ ಚಡಚಣ ಹಾಗೂ ಭೈರಗೊಂಡ ಹೆಸರಿನ ಎರಡು ಕುಟುಂಬಗಳ ಮಧ್ಯೆ ಹುಟ್ಟಿಕೊಂಡ ಈ ನೆತ್ತರ ಚರಿತ್ರೆ ಇಂದಿಗೂ ಭೀಮಾ ನದಿಯಲ್ಲಿ ರಕ್ತ ಹರಿಸುವಂತೆ ಮಾಡಿದೆ.
ಶಾಂತಪ್ಪ ಚಡಚಣ ಎಂಬ ವ್ಯಕ್ತಿ ತನ್ನ ಕುಟುಂಬದ ಮಹಿಳೆಯೊಬ್ಬಳಿಗೆ ಕಿರುಕುಳ ನೀಡಿದ ಕಾರಣಕ್ಕೆ ನೊಂದ ಮಹಿಳೆಗೆ ಭೈರಗೊಂಡ ಕುಟುಂಬ ರಕ್ಷಣೆ ನೀಡಿದ್ದೇ ಇಡೀ ಪರಿಸರದಲ್ಲಿ ಸರಣಿ ರಕ್ತಪಾತಗಳಿಗೆ ಸಾಕ್ಷಿಯಾಗುವಂತೆ ಮಾಡಿದೆ. ಮಹಿಳೆಗೆ ರಕ್ಷಣೆ ನೀಡಿದ ಭೀಮಾ ನದಿಗೆ ಹೊಂದಿಕೊಂಡಿರುವ ಉಮರಾಣಿ ಗ್ರಾಮದ ಕಾಶಿನಾಥ ಭೈರಗೊಂಡ ಮನೆಗೆ ಹೊಕ್ಕು ಶಾಂತಪ್ಪ ಚಡಚಣ ಕುಟುಂಬ ಸದಸ್ಯರು ಹಾಗೂ ಬೆಂಬಲಿಗರು ಮಾಡಿದ ದಾಳಿ ಹಾಗೂ ಅಂದು ಚಿಮ್ಮಿದ ರಕ್ತ ಇಂದಿಗೂ ದ್ವೇಷದ ಹೊಳೆಯಲ್ಲಿ ನೆತ್ತರನ್ನೇ ಹರಿಸುತ್ತಿದೆ.
ಇದನ್ನೂ ಓದಿ:ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು: ಓರ್ವ ಸಾವು
ಮೂರು ದಶಕಗಳ ಹಿಂದೆ ಭೈರಗೊಂಡ ಕುಟುಂಬದ ಕಾಶಿನಾಥನನ್ನು ಶಾಂತಪ್ಪ ಚಡಚಣ ಕುಟುಂಬ ಚಡಚಣ ಪಟ್ಟಣದಲ್ಲಿ ಸುಪಾರಿ ಕೊಟ್ಟು ಹತ್ಯೆ ಮಾಡಿಸಿತ್ತು. ಚಡಚಣ ಬಸ್ ನಿಲ್ದಾಣದಲ್ಲಿ ನಡೆದ ಈ ಹತ್ಯೆಗೆ ಪ್ರತಿಕಾರವಾಗಿ ಚಡಚಣ ಕುಟುಂಬದ ಮಲ್ಲಿಕಾರ್ಜುನ ಮಗನನ್ನು ಕಾಶಿನಾಥ ಭೈರಗೊಂಡ ಕುಟುಂಬ ಅರಕೇರಿ ಗುಡ್ಡದಲ್ಲಿ ರಾಜು ಎಂಬವನ ಮೂಲಕ ಕೊಲೆ ಮಾಡಿಸಿ ಮೀಸೆ ತಿರುವಿತು.
ಹೀಗೆ ಭೀಮಾ ತೀರದ ಉಮರಾಣಿ ಗ್ರಾಮದ ಪರಿಸರದಲ್ಲಿ ಆರಂಭಗೊಂಡ ರಕ್ತ ಚರಿತ್ರೆ ಶಾಂತಪ್ಪ ಹಾಗೂ ಕಾಶಿನಾಥನ ಮುಂದಿನ ತಲೆ ಮಾರಿಗೂ ವಿಸ್ತರಣೆ ಆಯ್ತು. ಮಲ್ಲಿಕಾರ್ಜುನ ಚಡಚಣ ಹಾಗೂ ಭೈರಗೊಂಡ ಕುಟುಂಬದ ಪುತ್ರಪ್ಪ ಅವರ ಮಧ್ಯೆ ಆಗಾಗ ದಾಳಿ-ಪ್ರತಿದಾಳಿ ನಡೆಯುವ ಹಂತದಲ್ಲೇ ದಶಕದ ಹಿಂದೆ ಮಲ್ಲಿಕಾರ್ಜುನ ಚಡಚಣ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ.
ಪೊಲೀಸರೂ ಶಾಮೀಲು- ನಕಲಿ ಎನ್ ಕೌಂಟರ್
ಅಲ್ಲಿಗೆ ಭೀಮೆಯ ಒಡಲು ತಣ್ಣಗಾಯಿತು ಎಂದು ಕೊಳ್ಳುವಾಗಲೇ ಮಲ್ಲಿಕಾರ್ಜುನ ಚಡಚಣನ ಮಗ ಧರ್ಮರಾಜ ಚಡಚಣ 2008 ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪುತ್ರಪ್ಪ ಭೈರಗೊಂಡ ಮೇಲೆ ದಾಳಿ ನಡೆಸಿದ. ತೀವ್ರ ಗಾಯಗೊಂಡಿದ್ದ ಪುತ್ರಪ್ಪ ನರಳಿ ನರಳಿ 2011 ರಲ್ಲಿ ಕೊನೆ ಉಸಿರೆಳೆದಿದ್ದ. ತನ್ನ ಅಣ್ಣನನ್ನು ಬಲಿ ಪಡೆದ ಚಡಚಣ ಕುಟುಂಬದ ಮೇಲೆ ಪ್ರತಿಕಾರಕ್ಕೆ ಕಾದಿದ್ದ ಪುತ್ರಪ್ಪ ಭೈರಗೊಂಡನ ತಮ್ಮ ಮಹಾದೇವ ಭೈರಗೊಂಡ 2017 ಆಕ್ಟೋಬರ್ 30 ರಂದು ಪೊಲೀಸರನ್ನು ಬಳಸಿಕೊಂಡು ನಕಲಿ ಎನ್ ಕೌಂಟರ್ ನಲ್ಲಿ ಧರ್ಮರಾಜ ಚಡಚಣನನ್ನು ಮುಗಿಸಿ ಹಾಕಿದ್ದ.
ಧರ್ಮರಾಜ ನಕಲಿ ಎನ್ ಕೌಂಟರ್ ಪ್ರಕರಣದ ತನಿಖೆ ನಡೆದು ಚಡಚಣ ಪೊಲೀಸ್ ಠಾಣೆಯ ಅಂದಿನ ಸಿಪಿಐ ಎಂ.ಬಿ.ಅಸೂಡೆ, ಎಸೈ ಗೋಪಾಲ ಹಳ್ಳೂರು, ಪೊಲೀಸ್ ಸಿಬ್ಬಂದಿಯಾದ ಗದ್ದೆಪ್ಪ ನಾಯ್ಕೋಡಿ, ಚಂದ್ರಶೇಖರ ಜಾಧವ, ಸಿದ್ಧನಾಥ ರೂಗಿ ಇವರೆಲ್ಲ ಖಾಕಿ ಕಳಚಿ ಜೈಲು ಸೇರುವಂತೆ ಮಾಡಿತ್ತು. ಈ ಪ್ರಕರಣದಲ್ಲಿ ಮಹಾದೇವ ಭೈರಗೊಂಡ ಸೇರಿದಂತೆ 15 ಕ್ಕೂ ಹೆಚ್ಚು ಜನರ ವಿರುದ್ಧ ದೂರು ದಾಖಲಾಗಿ ಆರೋಪಿಗಳನ್ನು ಜೈಲು ಕಂಬಿ ಎಣಿಸುವಂತೆ ಮಾಡಿತ್ತು.
ಇದೇ ಹಂತದಲ್ಲಿ ಕಾಣೆಯಾಗಿರುವ ತನ್ನ ಇನ್ನೊಬ್ಬ ಮಗ ಗಂಗಾಧರ ಚಡಚಣನನ್ನು ಪತ್ತೆ ಹಚ್ಚುವಂತೆ ಮಲ್ಲಿಕಾರ್ಜುನ ಚಡಚಣನ ಪತ್ನಿ ವಿಮಲಾಬಾಯಿ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಹಾಕಿದ್ದಳು. ಆಗ ಮಹಾದೇವ ಭೈರಗೊಂಡ ಪೊಲೀಸರೊಂದಿಗೆ ಸೇರಿಕೊಂಡು ಚಡಚಣ ಕುಟುಂಬದ ಗಂಗಾಧರನನ್ನು ವಶಕ್ಕೆ ಪಡೆದು ಹತ್ಯೆ ಮಾಡಿದ್ದ ಎಂಬ ಅಂಶವೂ ಬೆಳಕಿಗೆ ಬಂದಿತ್ತು.
ಅಂತಿಮವಾಗಿ ಧರ್ಮರಾಜ ಚಡಚಣ ಹತ್ಯೆ ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸುವಂತೆ ಅಂದಿನ ಐಜಿಪಿ ಅಲೋಕ್ ಕುಮಾರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಚಡಚಣ ಸಹೋದರರ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹಾದೇವ ಭೈರಗೊಂಡ ಪ್ರಮುಖ ಆರೋಪಿಯಾಗಿ, ಜೈಲಿಗೂ ಹೋಗಿದ್ದ. ಕಳೆದ ವರ್ಷ ಜಾಮೀನ ಮೇಲೆ ಹೊರ ಬಂದಿದ್ದ ಮಹಾದೇವ ಹತ್ಯೆಗೆ ಚಡಚಣ ಕುಟುಂಬ ಮಾತ್ರವಲ್ಲ ಧರ್ಮರಾಜ ಚಡಚಣ ಸಹಚರರು, ಅಭಿಮಾನಿಗಳೂ ಹೊಂಚು ಹಾಕುತ್ತಿದ್ದರು.
ಈ ಮಧ್ಯೆ ಭೀಮಾ ತೀರಕ್ಕೆ ಕುಖ್ಯಾತಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಂದಪ್ಪ ಹರಿಜನನ ಸಹಚರನಾಗಿದ್ದ ಇದೀಗ ಡಾನ್ ಎನಿಸಿಕೊಂಡಿರುವ ಭಾಗಪ್ಪ ಹರಿಜನ ಮಹಾದೇವಗೆ ಜೊತೆಯಾಗಿದ್ದ. ಕೆಲವೇ ತಿಂಗಳ ಹಿಂದೆ ಭಾಗಪ್ಪನ ಮೂಲಕ ಇಂಡಿ ಪಟ್ಟಣದ ನಾಮದೇವ ಡ್ಯಾಂ ಗೆ ಚಿನ್ನದ ವ್ಯಾಪಾರಿಯನ್ನು ಅಪಹರಿಸಿ, ಲಕ್ಷಾಂತರ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ಕೊಲ್ಲುವ ಬೆದರಿಕೆ ಹಾಕಿದ್ದ ಆರೋಪದಲ್ಲಿ ಮಹಾದೇವ ಭೈರಗೊಂಡ ಮತ್ತೆ ಜೈಲಿಗೆ ಹೋಗಿ ಬಂದಿದ್ದ.
ಈ ಹಂತದಲ್ಲೇ ಧರ್ಮರಾಜ ಚಡಚಣ ಹತ್ಯೆಗೆ ಮಹಾದೇವ ಭೈರಗೊಂಡ ಮೇಲೆ ದೊಡ್ಡ ಮಟ್ಟದ ದಾಳಿಗೆ ಸಂಚು ರೂಪಿಸುವ ಕೆಲಸವೂ ನಡೆದಿತ್ತು. ಇದಕ್ಕಾಗಿ ಕೆಲವು ತಿಂಗಳ ಹಿಂದೆ ಕಾತ್ರಾಳ ಹಾಗೂ ಧೂಳಖೇಡ ಬಳಿ ದಾಳಿ ಯೋಜನೆಗಳು ವಿಫಲವಾಗಿದ್ದವು. ಆದರೆ ಧರ್ಮರಾಜ ನಕಲಿ ಎನ್ ಕೌಂಟರ್ ಗೆ ಬಲಿಯಾದ ದಿನದಂದೆ ಆತನ ಸಹಚರರು ಮಹಾದೇವ ಹತ್ಯೆ ಮಾಡಲು ಶಪಥ ಮಾಡಿದ್ದರೂ, ಆ ದಿನ ರಕ್ತ ಹರಿಸುವ ಯೋಜನೆ ಕೈಗೂಡಲಿಲ್ಲ. ಚಡಚಣ ಕುಟುಂಬದ ದ್ವೇಷ ತೀರುವ ಜೊತೆಗೆ ಮಹಾದೇವನನ್ನು ಕೊಂದರೆ ವಿಜಯಪುರ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ‘ಗ್ಯಾಂಗ್’ ಕಟ್ಟುವ ಹುಚ್ಚುತನಕ್ಕೂ ಇಳಿದರು.
ಇದನ್ನೂ ಓದಿ: ಡಾನ್ ಭೈರಗೊಂಡ ಮೇಲೆ ದಾಳಿ ಮಾಡಿ ಹೆಸರು ಮಾಡುವ ಹುಚ್ಚು; ಬಂಧಿತರು ಬಾಯಿ ಬಿಟ್ಟ ರೋಚಕ ಸತ್ಯಗಳು
ಇದರ ಭಾಗವಾಗಿ ಮಡಿವಾಳ ಹಿರೇಮಠ ಸ್ವಾಮಿ ಹಾಗೂ ಧರ್ಮರಾಜ ಕಟ್ಟಾ ಬೆಮಬಲಿಗ ರವಿ ಬಂಡಿ ಇತರರು ನ.2 ರಂದು ಕನ್ನಾಳ ಕ್ರಾಸ್ ಬಳಿ ಮಹಾದೇವ ಬರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದರು. ಟಿಪ್ಪರ್ ಮೂಲಕ ಮಹಾದೇವ ಸಂಚರಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಸಿ ಕೊಲ್ಲುವುದು, ತಪ್ಪಿದಲ್ಲಿ ತಕ್ಷಣ ಕಲ್ಲು ತೂರಿ ಕೊಲೆ ಮಾಡುವುದು, ಈ ಯೋಜನೆಯೂ ಕೈ ಕೊಟ್ಟರೆ ಗುಂಡು ಹಾರಿಸಿ ಗುಂಡಿಗೆಯಿಂದ ರಕ್ತ ಹರಿಸುವುದು, ಅದೂ ಕೈಗೂಡದಿದ್ದರೆ ಕತ್ತಿ ಬೀಸಿ ಕತ್ತು ಕೊಯ್ಯುವುದು, ಇದೂ ವಿಫಲವಾದಲ್ಲಿ ಪೆಟ್ರೋಲ್ ಬಾಂಬ್ ಹಾಕಿ ಮಹಾದೇವ ಭೈರಗೊಂಡ ಕಥೆ ಮುಗಿಸುವ ದೊಡ್ಡ ದಾಳಿ ನಡೆದೇ ಹೋಗಿದೆ.
ಆದರೆ ದಾಳಿಯಲ್ಲಿ ಮಹಾದೇವ ಹೊಟ್ಟೆ ಸೇರಿದ್ದ ಮೂರು ಗುಂಡುಗಳು ಗಂಭೀರ ಗಾಯಗೊಳಿಸಿದ್ದವು. ಆದರೆ ಈ ದಾಳಿಯಲ್ಲಿ ಭೈರಗೊಂಡ ಆಪ್ತ ಬಾಬುರಾಮ್ ಕಂಚನಾಳ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿದ್ದ ಚಾಲಕ ಲಕ್ಷ್ಮಣ ಖೇಗಾಂವ ಚಿಕಿತ್ಸೆ ಫಲಿಸದೇ ಮರುದಿನ ಮೃತಪಟ್ಟಿದ್ದಾನೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ. ಸುರಕ್ಷತೆ ಹಾಗೂ ಹೆಚ್ಚಿನ ಚಿಕಿತ್ಸೆ ಕಾರಣಕ್ಕೆ ಗಾಯಾಳು ಮಹಾದೇವ ಭೈರಗೊಂಡ ಬೇರೆಡೆ ಸ್ಥಳಾಂತರಗೊಂಡು ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.
ಇನ್ನಾದರೂ ಶಾಂತಪ್ಪ ಚಡಚಣ-ಕಾಶಿನಾಥ ಭೈರಗೊಂಡ ಕುಟುಂಬಗಳ ಮಧ್ಯೆ ಭೀಮಾ ತೀರದಲ್ಲಿ ಧ್ವೇಷ ನೆತ್ತರು ಹರಿಯುವುದಕ್ಕೆ ತೆರೆ ಬೀಳಲಿ ಎಂದು ಬಸವನಾಡಿನ ಹಲಸಂಗಿ ಗೆಳೆಯರ ನೆಲದ ಮಕ್ಕಳು ಆಶಿಸುತ್ತಿದ್ದಾರೆ.
ಜಿ.ಎಸ್.ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.