ಮಹಾರಾಷ್ಟ ಚುನಾವಣೆ ಕಾರಣಕ್ಕೆ ಬಿಜೆಪಿಯಿಂದ ಗೊಂದಲ ಸೃಷ್ಟಿ: ಕಾಂಗ್ರೆಸ್ ನಾಯಕರ ತಿರುಗೇಟು
ಬಿಜೆಪಿ ಅವಧಿಯಲ್ಲೂ ಹಿಂದೂಗಳಿಗೆ ವಕ್ಫ್ ನೋಟಿಸ್ ಜಾರಿ
Team Udayavani, Oct 29, 2024, 2:39 PM IST
ವಿಜಯಪುರ: ನೆರೆಯ ಮಹಾರಾಷ್ಟ್ರದ ಚುನಾವಣೆ ಕಾರಣಕ್ಕಾಗಿ ವಕ್ಫ್ ವಿಚಾರದಲ್ಲಿ ಬಿಜೆಪಿ ನಾಯಕರು ಅನಗತ್ಯ ಗೊಂದಲ ಸೃಷ್ಠಿಸಿ, ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಇದೀಗ ವಕ್ಫ್ ರಾಜಕೀಯ ಮಾಡುತ್ತಾ ವಿಜಯಪುರಕ್ಕೆ ಬಂದಿದ್ದಾರೆ. ಬಿಜೆಪಿ ಅವಧಿಯಲ್ಲೂ ಹಿಂದೂಗಳಿಗೆ ವಕ್ಫ್ ನೋಟಿಸ್ ಜಾರಿ ಮಾಡಲಾಗಿತ್ತು. ಜಿಲ್ಲೆಯೊಂದರಲ್ಲೇ 2022ರಲ್ಲಿ 25 ಜನ ಹಿಂದೂಗಳಿಗೆ ನೋಟಿಸ್ ನೀಡಲಾಗಿತ್ತು. ಈ ಬಗ್ಗೆ ಬಿಜೆಪಿ ನಾಯಕರು ಮೊದಲು ಉತ್ತರಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಂಗಳವಾರ ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹಾಗೂ ಮತ್ತಿತರ ನಾಯಕರು ಸುದ್ದಿಗೋಷ್ಠಿ ನಡೆಸಿ, ಬಿಜೆಪಿಯ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರದಲ್ಲೇ ರೈತರಿಗೆ ಹೆಚ್ಚು ಅನ್ಯಾಯವಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಕೇವಲ ಒಂದು ಘಟನೆ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ರೈತರ ದಿಕ್ಕು ತಪ್ಪಿಸುತ್ತಿದ್ದಾರೆ. ಹಾಗಾದರೆ, ಬಿಜೆಪಿ ಅವಧಿಯಲ್ಲಿ ಎಷ್ಟು ವಕ್ಫ್ ಆಸ್ತಿ ಮರಳಿ ಪಡೆಯಲಾಗಿತ್ತು ಎಂಬ ಬಗ್ಗೆ ಮಾಹಿತಿ ನೀಡಲಿ. ಅಲ್ಲದೇ, ವಕ್ಫ್ ವಿಚಾರವಾಗಿ ಹಿಂದೂಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ನಾಯಕರು ಆಗ ಯಾಕೆ ಸುಮ್ಮನಿಸಿದ್ದರು ಎಂದು ತಿರುಗೇಟು ನೀಡಿದರು.
ಜಿಲ್ಲೆಯಲ್ಲಿ 2022ರ ಸೆ.14ರಂದು ಆನಂದ ಚಂದ್ರಶೇಖರ ಹಡಪದ, ನ.18ರಂದು ಅಶೋಕ ಶಂಕ್ರಪ್ಪ ಬಣ್ಣದ, ಬಡಿಯಾಲ ಜಮನ ಲಾಹೋರಿ, ಗೋವಿಂದ ತಮ್ಮಣ್ಣಪ್ಪ ಲಿಂಗಸಾ, ಗಿರಿಮಲ್ಲಪ್ಪ ಶಿವಲಿಂಗಪ್ಪ ಚನ್ನಾಳ, ಎ.ಸಂಜಯಕುಮಾರ ಶಶಿಮಲ್ಲ ಜೈನ, ಮಹಾವೀರ ಶಂಕರಲಾಲ ಒಸ್ವಾಲ, ರವಿ ರಾಮಣ್ಣ ಮಾದರ, ಬಸಪ್ಪ ಶಿದಪ್ಪ ಬಂಗಾರಿ, ಮಹಾಲಿಂಗಯ್ಯ ನಾಗಯ್ಯ ಹಿರೇಮಠ ಅವರಿಗೆ ನೋಟಿಸ್ ನೀಡಲಾಗಿತ್ತು. ಇವರು ಯಾವ ಸಮುದಾಯಕ್ಕೆ ಸೇರಿದವರು?, ಇವರಿಗೆ ನೋಟಿಸ್ ನೀಡಿದ ಅವಧಿಯಲ್ಲಿ ಯಾವ ಸರ್ಕಾರ ಆಡಳಿತದಲ್ಲಿ ಇತ್ತು?, ಜಿಲ್ಲೆಗೆ ಅಹವಾಲು ಆಲಿಸಲು ಬಂದ ಬಿಜೆಪಿ ತಂಡದಲ್ಲಿರುವ ಸದಸ್ಯರು ಆ ಅವಧಿಯಲ್ಲಿ ಯಾವ ಯಾವ ಹುದ್ದೆಯಲ್ಲಿದ್ದರು?, ಆಗ ಅಧಿಕಾರ ಅನುಭವಿಸುತ್ತಿದ್ದ ಇವರುಗಳು ರೈತರು, ಸಾರ್ವಜನಿಕರಿಗೆ ನೋಟಿಸ್ ನೀಡಿ, ಅವರ ಆಸ್ತಿಯನ್ನು ವಕ್ಫ ಆಸ್ತಿ ಎಂದು ಮರಳಿ ಪಡೆದ ಸಂದರ್ಭದಲ್ಲಿ ವಿಷಯ ತಿಳಿದಿರಲಿಲ್ಲವೇ?, ಅಧಿಕಾರದಲ್ಲಿದ್ದಾಗ ಒಂದು ಕಾಯ್ದೆ?, ಅಧಿಕಾರ ಇಲ್ಲದಿದ್ದಾಗ ಇನ್ನೊಂದು ಕಾಯ್ದೆಯೇ ಎಂದು ಪ್ರಶ್ನಿಸಿದರು.
ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಯಾರ ಮಾತನಾಡಿ, ವಕ್ಫ್ ಕಾನೂನು ಬಗ್ಗೆ ಹಿಂದೆ ಬಿಜೆಪಿಯವರು ವಿರೋಧಿ ಮಾಡಿರಲಿಲ್ಲ. ವಾಜಪೇಯಿ, ಅಡ್ವಾಣಿ ಅವರಂತಹ ನಾಯಕರು ಒಪ್ಪಿದ್ದರು. ಮುಜುರಾಯಿ ಕಾಯ್ದೆ ಮಾದರಿಯಲ್ಲೇ ಸಾವಿರಾರು ಎಕರೆ ವಕ್ಫ್ ಆಸ್ತಿ ಇದೆ. ನಂತರದಲ್ಲಿ ಸಾಕಷ್ಟು ಭೂಮಿ ಭೂ ಸುಧಾರಣೆ ಕಾಯ್ದೆಯಡಿ ಹೋಗಿದೆ. ವಕ್ಫ್ ಆಸ್ತಿ ಎಂದರೆ ಕೇವಲ ಜಮೀನು ಮಾತ್ರವಲ್ಲ. ಮಸೀದಿ, ದರ್ಗಾದ ಆಸ್ತಿಯೂ ಸೇರುತ್ತದೆ. ಈಗ ಪಹಣಿಯ ಕಲಂ 11ರಲ್ಲಿ ವಕ್ಫ್ ಎಂದು ನಮೂದಾಗಿದ್ದರೂ, ನೋಟೀಸ್‌ನಿಂದ ಅದನ್ನು ತೆಗೆದು ಹಾಕಲು ಅವಕಾಶ ಇದೆ. ತಮ್ಮ ಜಮೀನಿನ ಬಗ್ಗೆ ತಮ್ಮಲ್ಲಿರುವ ದಾಖಲೆ ಕೊಟ್ಟರೆ ವಕ್ಫ್ ಹೆಸರು ತೆಗೆಯಲು ಸಾಧ್ಯ ಇದೆ. ಅಲ್ಲದೇ, ವಕ್ಫ್ ನ್ಯಾಯಾಧಿಕಾರಣದಲ್ಲಿ ಮುಸ್ಲಿಮರಿಗೆ ಮಾತ್ರ ಅವಕಾಶ ಇಲ್ಲ. ಯಾರು ನ್ಯಾಯಾಧೀಶರು ಇರುತ್ತಾರೋ, ಅವರೇ ಅದರ ಅಧ್ಯಕ್ಷರು. ಬರೀ ಮುಸ್ಲಿಮರು ಆಗಿರುವುದಿಲ್ಲ. ನೋಟಿಸ್ ಪಡೆದಿರುವವರನ್ನು ರೈತರು ಅಂತಾ ಹೇಳಿ. ಅದು ಬಿಟ್ಟು ಹಿಂದೂಗಳು ಮಾತ್ರ ಎಂದು ಯಾಕೆ ಹೇಳುತ್ತೀರಿ?. ಇದು ಹಿಂದೂ-ಮುಸ್ಲಿಂ ವಿಷಯವಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರಿಫ್, ಡಾ.ಗಂಗಾಧರ ಸಂಬಣ್ಣಿ, ವಸಂತ ಹೊನಮೊಡೆ ಉಪಸ್ಥಿತರಿದ್ದರು.
ಇದನ್ನೂ ಓದಿ: Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.