ಲಿಂಗಾಯತ ಧರ್ಮ ಹೋರಾಟದಿಂದ ಕಾಂಗ್ರೆಸ್ ಸೋತಿಲ್ಲ: ಎಂ.ಬಿ.ಪಾಟೀಲ್
Team Udayavani, Aug 24, 2021, 4:20 PM IST
ವಿಜಯಪುರ: ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಿಂದ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿಲ್ಲ. ಈ ಹೋರಾಟವೂ ನನ್ನಿಂದ ಆರಂಭಗೊಂಡಿಲ್ಲ. ವೀರಶೈವ ಮಹಾಸಭೆ ಆರಂಭಿಸಿದ್ದ ಹೋರಾಟವನ್ನು ನಾವು ಮುಂದುವರೆಸಿದ್ದು ಎಂದು ಮಾಜಿ ಸಚಿವ, ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ನಮ್ಮದೇ ಪಕ್ಷದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ನಾನು ಮಾಡಿದ ನೀರಾವರಿ ಯೋಜನೆ ಸಾಧನೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಹೊಟ್ಟೆಕಿಚ್ಚಿನಿಂದ ಅನಗತ್ಯವಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯ ಸಿ.ಎಂ. ಆಗಿದ್ದಾಗ ಅವರನ್ನು ಸನ್ಮಾನಿಸಿದ್ದ ವೀರಶೈವ ಮಹಾಸಭೆ ಪ್ರತ್ಯೇಕ ಧರ್ಮಕ್ಕೆ ಮನವಿ ನೀಡಿತ್ತು. ಸಿದ್ದರಾಮಯ್ಯ ಅವರು ನಾಗಮೋಹನ ದಾಸ ಸಮಿತಿ ವರದಿ ಆಧರಿಸಿ, ಸಂಪುಟ ನೀಡಿದ ಸರ್ವಾನುಮತದ ಒಪ್ಪಿಗೆ ಪಡೆದು, ಕೇಂದ್ರಕ್ಕೆ ಒಪ್ಪಿಗೆಗೆ ಕಳಿಸಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮದಿಂದ ಕಾಂಗ್ರೆಸ್ ಗೆ ಹಿನ್ನೆಡೆ ಆಗಿಲ್ಲ. ಸಿದ್ದರಾಮಯ್ಯ ಅವರೇ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಲಿಂಗಾಯತ ಹೋರಾಟಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧ ಇಲ್ಲ. ನಮ್ಮ ಸರ್ಕಾರದಲ್ಲಿ ಐದು ಮಂದಿ ಸಚಿವರ ಕಮಿಟಿ ರಚಿಸಿದಾಗ ನಾನು ಅದರಲ್ಲಿ ಇರಲಿಲ್ಲ. ಮುಂದೆ ಹುಬ್ಬಳ್ಳಿ, ಕಲಬುರಗಿ ಸೇರಿ ಇತರೆಡೆ ನಡೆದ ಸಭೆಗಳಲ್ಲಿ ನಾನು ಭಾಗವಹಿಸಿದೆ. ಹೀಗಾಗಿ ಲಿಂಗಾಯತ ಧರ್ಮದ ಹೋರಾಟ ನಾನು ಹುಟ್ಟುಹಾಕಿದ್ದಲ್ಲ ಎಂದರು.
ನಾವು 99 ಜಾತಿಗಳನ್ನು ಒಗ್ಗೂಡಿಸಿ ಅಲ್ಪಸಂಖ್ಯಾತ ಸ್ಥಾನಮಾಕ್ಕೆ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮಾಡುತ್ತಿದ್ದೇವೆ. ಇದರಿಂದಾಗಿ ಇದೀಗ ಲಿಂಗಾಯತ ಒಳ ಪಂಗಡಳು ಮೀಸಲಾತಿ ಕೇಳುತ್ತಿದ್ದು, ನಮ್ಮ ಹೋರಾಟದಿಂದಲೇ ಜನರಲ್ಲಿ ಮೀಸಲು ಅಗತ್ಯದ ಮನವರಿಕೆ ಆಗಿದೆ ಎಂದರು.
ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ ನನ್ನ ವಿರುದ್ಧ ರಣಕಹಳೆ ಊದುವುದಾಗಿ ಹೇಳಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವಯಂ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸೇರಿದಂತೆ ಅನೇಕರು ಬಬಲೇಶ್ವರ ಕ್ಷೇತ್ರಕ್ಕೆ ಬಂದು ನನ್ನ ವಿರುದ್ದ ರಣಕಹಳೆ ಊದಿದರೂ ಏನೂ ಮಾಡಲಾಗಿಲ್ಲ. ಕ್ಷೇತ್ರದ ಜನರು 30 ಸಾವಿರ ಮತಗಳಿಂದ ನನ್ನನ್ನು ಗೆಲ್ಲಿಸಿದ್ದಾರೆ. ಈಗ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ರಣಕಹಳೆ ಮೊಳಗಿಸುವುದಾಗಿ ಹೇಳಿದ್ದಾರೆ. ಮೊದಲು ಇಂಡಿ ಕ್ಷೇತ್ರದಲ್ಲಿ ಬ್ಯಾಂಡ್ ಬಾಜಾ ಬಾರಿಸುವುದು ಕಲಿಯಲಿ ಎಂದು ಕುಟುಕಿದರು.
ಈ ಹಿಂದೆ ಇದೇ ವ್ಯಕ್ತಿಗಾಗಿ ಹಲವು ಆಕಾಂಕ್ಷಿಗಳನ್ನು ಎದುರು ಹಾಕಿಕೊಂಡು ಇವರಿಗೆ ಜಿಪಂ ಟಿಕೆಟ್ ಕೊಡಿಸಿದೆ. ನಂತರ ಈತನನ್ನು ಅಧ್ಯಕ್ಷನನ್ನಾಗಿ ಮಾಡಲು 31 ಸದಸ್ಯರಲ್ಲಿ 30 ಸದಸ್ಯರು ವಿರೋಧ ವ್ಯಕ್ತಪಡಿಸಿದರೂ ಯಶವಂತರಾಯಗೌಡ ಅಧ್ಯಕ್ಷ ಆಗಲೇಬೇಕೆಂದು ಪಟ್ಟು ಹಿಡಿದೆ. ತನ್ನದೊಂದೇ ಮತ ಬಿಟ್ಟು ಉಳಿದ ಎಲ್ಲ ಸದಸ್ಯರ ವಿರೋಧ ಇತ್ತು. ಆದರೆ ಅಪ್ಪಟ ಕಾಂಗ್ರೆಸ್ಸಿಗ ಬಸವರಾಜ ದೇಸಾಯಿ ಅವರನ್ನು ಬೆದರಿಸಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಈ ವ್ಯಕ್ತಿಯನ್ನು ಅಧ್ಯಕ್ಷನನ್ನಾಗಿ ಮಾಡಿದ್ದೇ ನಾನು ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಎಚ್.ಡಿ.ಕುಮಾರಸ್ವಾಮಿ ಇಲ್ಲದಿದ್ದರೆ ಸಾರಾ ಮಹೇಶ್ ಜೀರೋ: ಜಿ.ಟಿ ದೇವೇಗೌಡ ಟೀಕೆ
1999 ರಲ್ಲಿ ಯಶವಂತರಾಯ ಗೌಡಗೆ ವಿಧಾನಸಭೆ ಟಿಕೆಟ್ ಸಿಗಲಿಲ್ಲ. ಇದರಿಂದಾಗಿ ತಿಕೋಟಾ ಮತಕ್ಷೇತ್ರದಲ್ಲಿ ಏನೇನೆಲ್ಲಾ ಚಟುವಟಿಕೆ ಮಾಡಿದ್ದಾರೆಂದು ನನಗೆ ಗೊತ್ತಿದೆ. ಇವರ ರಾಜಕೀಯ ಒಳ ಒಪ್ಪಂದ ಯಾರ ಜೊತೆ ಇದೆ ಎಂದು ಎಲ್ಲರಿಗೂ ಗೊತ್ತಿದೆ. ಅದನ್ನು ಹೇಳಲು ನಾನು ಹೋಗಲ್ಲ ಎಂದರು.
ಇನ್ನು ಜಿಲ್ಲೆಯ ನೀರಾವರಿ ವಿಷಯದಲ್ಲಿ ನಾನು ಮಾಡಿದ ಸಾಧನೆಗೆ ಸಿದ್ದೇಶ್ವರ ಶ್ರೀಗಳು ಹಾಗೂ ಜನರೇ ನನಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಪಶು, ಪಕ್ಷಿಗಳೂ ನಾನು ಮಾಡಿದ್ದನ್ನು ಹೇಳುತ್ತವೆ. ಹೀಗಾಗಿ ಶಾಸಕ ಯಶವಂತರಾಯಗೌಡ ಸರ್ಟಿಫಿಕೇಟ್ ನನಗೆ ಬೇಡ ಎಂದು ತಿರುಗೇಟು ನೀಡಿದರು. ಇಂಡಿ ಭಾಗದ 16 ನೀರಾವರಿ ಕೆರೆ ತುಂಬುವ ಯೋಜನೆ ಇಲಾಖೆಯಲ್ಲಿ ಇರಲಿಲ್ಲ. ಅಧಿಕಾರಿಗಳಿಗೆ ಹೇಳಿ ನಾನೇ ಸದರಿ ಯೋಜನೆ ರೂಪಿಸಿದ್ದು, ಅದು ನನ್ನದೇ ಕನಸಿನ ಕೂಸು ಎಂದು ಮತ್ತೆ ಮತ್ತೆ ಹೇಳುತ್ತೇನೆ. ಇಂಡಿ ಶಾಸಕರು ಹೊಟ್ಟೆ ಉರಿಯಿಂದ ಮಾತನಾಡಿದರೆ ಅವರ ಹೊಟ್ಟೆ ಉರಿಗೆ ಮದ್ದಿಲ್ಲ ಛೇಡಿಸಿದರು.
ಬಿಎಲ್ ಡಿಇ ಸಂಸ್ಥೆಗೆ ನನ್ನ ತಂದೆ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ ಅಲ್ಲಿನ ನೌಕರರಿಗೆ ಸಂಬಳ ನೀಡದ ದುಸ್ಥಿತಿಯಲ್ಲಿತ್ತು. ನನ್ನ ತಂದೆ ಬಿ.ಎಂ.ಪಾಟೀಲರು ಬೆಳೆ ಹಾಗೂ ಜಮೀನು ಮಾರಿ ಸಂಸ್ಥೆಯ ನೌಕರರ ಸಂಬಳ ನೀಡಿದ್ದಾರೆ. 1980ರಲ್ಲಿ ಮಹಾರಾಷ್ಟ್ರ ರಾಹ್ಯದ ಸಾಂಗ್ಲಿ ಬ್ಯಾಂಕ್ ನಲ್ಲಿ ಸಾಲ ಪಡೆಯುವಾಗ ವೈಯಕ್ತಿಕ ಗ್ಯಾರಂಟಿ ಕೊಟ್ಟರು, ಭೂಮಿ ಖರೀದಿಗೆ ಹಣ ಇರದ ಸ್ಥಿತಿಯಲ್ಲಿ ಕಾಲೇಜು ಆರಂಭಿಸಿದರು. 1986 ರಲ್ಲಿ ವೈದ್ಯಕೀಯ ಕಾಲೇಜಿಗೆ ವೈಶ್ಯ ಬ್ಯಾಂಕ್ ನಲ್ಲಿ 5 ಕೋಟಿ ಸಾಲ ಪಡೆದು ನಮ್ಮ ತಂದೆಯವರೇ ವೈಯಕ್ತಿಕ ಗ್ಯಾರಂಟಿ ನೀಡಿದ್ದು. ನಮ್ಮ ತಂದೆಯವರ ಪರಿಶ್ರಮದಿಂದ ಬಿಎಲ್ ಡಿಇ ಸಂಸ್ಥೆ ರಾಷ್ಟ್ರೀಯ ರ್ಯಾಂಕಿಗ್ ಪಡೆಯಲು ಸಾಧ್ಯವಾಯಿತು. ವಿಶ್ವವಿದ್ಯಾಲಯವಾಗಿ ಬೆಳೆದು ನಿಲ್ಲಲು ಅವರ ಪರಿಶ್ರಮವೇ ಕಾರಣ ಎಂದು ವಿವರಿಸಿದರು.
ಇದೀಗ ಬಂಥನಾಳ ಶ್ರೀಗಳ ಬಗ್ಗೆ ಮಾತನಾಡಲಾಗುತ್ತಿದೆ. ಶ್ರೀಗಳ ಪುಣೆ ಹಡಪ್ಸರ್ ಆಸ್ತಿ ಯಾರು ಗಡಪ್ ಮಾಡಿದರು ಎಂಬುದು ಮುಂದೆ ಗೊತ್ತಾಗಲಿದೆ ಕಾಯಿರಿ ಎಂದರು.
ಇನ್ನು ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಬಗ್ಗೆ ಮಾತನಾಡಲು ನನಗೂ ಬರುತ್ತದೆ. ಭೀಮಾ ನದಿಯಲ್ಲಿ ಉಸುಕಿನ ವ್ಯವಹಾರ ಹೇಗೆ ನಡೆದಿದೆ ನನಗೆ ಗೊತ್ತಿದೆ ಎಂದು ಸ್ವಪಕ್ಷೀಯ ಶಾಸಕ ಯಶವಂತರಾಯಗೌಡ ಅವರಿಗೆ ತಿರುಗೇಟು ನೀಡಿದ ಎಂ.ಬಿ. ಪಾಟೀಲ, ಇವರು ಮಾಡಿದ ಕೆಲಗಳೇನು ಎಂದು ನನಗೂ ಗೊತ್ತಿದೆ ಎಂದರು.
ಜಗದ್ಗುರುಗಳ ಮೇಲೆ ಎಫ್ ಐಆರ್ ಹಾಕಿದ್ದಾಗಿ ಆರೋಪಿಸಿದ್ದಾರೆ. ವಾಸ್ತವ ಅರಿತು ಮಾತನಾಡಬೇಕು. ಕಾಖಂಡಕಿ ಗ್ರಾಮದಲ್ಲಿ ಧ್ವನಿವರ್ಧಕ ಬಳಸಿದ್ದಕ್ಕೆ ಚುನಾವಣೆ ಆಯೋಗ ಕೆಲವು ಸ್ವಾಮಿಗಳ ವಿರುದ್ದ ದೂರು ದಾಖಲಿಸಿತ್ತು. ಅದು ಜಗದ್ಗುರುಗಳ ಮೇಲೆ ಅಲ್ಲ. ಈ ಬಗ್ಗೆ ನಂತರದ ದಿನಗಳಲ್ಲಿ ನೋಟಿಸ್ ಬಂದ ಮೇಲೆ ಸ್ವಾಮೀಜಿಗಳು ನಮ್ಮ ಮನೆಗೆ ಬಂದಾಗ, ನಾನೇ ನ್ಯಾಯಾಲಯದಲ್ಲಿ ಅವರ ಪರವಾಗಿ ವಕೀಲರನ್ನು ನೇಮಿಸಿದ್ದೇನೆ ಎಂದರು.
ಜೋರಾಗಿ, ಆವೇಶದಿಂದ ಮಾತನಾಡಿದ ಮಾತ್ರಕ್ಕೆ ಯಾರೂ ನಾಯಕ ಆಗಲ್ಲ. ದಸರಾ ಮೆರವಣಿಗೆಯಲ್ಲಿ ಶ್ವಾನಗಳು ಬೊಗಳುತ್ತವೆ. ಪೊಲೀಸರು ಓಡಿಸುತ್ತಾರೆ. ಹೀಗಾಗಿ ನಾನು ಇಂಥವರ ಬಗ್ಗೆ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದರು. ನನ್ನನ್ನು ರಾಜಕೀಯ ತಾರ್ಕಿಕ ಅಂತ್ಯಕ್ಕೆ ಹಚ್ಚುತ್ತೇನೆ ಎಂದಿದ್ದಾರೆ. ಯಾವ ಪಾರ್ಟಿಯಿಂದ ಎಂದು ತಿಳಿಸಲಿ, ಕಾಂಗ್ರೆಸ್, ಬಿಜೆಪಿ ಯಾವ ಪಕ್ಷ ಎಂದು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಬಸವಣ್ಣ ನನ್ನೇ ಬಿಟ್ಟಿಲ್ಲ ನಮ್ಮಂಥವರು ಯಾವ ಲೆಕ್ಕ ಎಂದಿದ್ದನ್ನು ಬಸವಣ್ಣನವರಿಗೆ ಹೋಲಿಕೆ ಮಾಡಿಕೊಂಡಿದ್ದಾಗಿ ಬಿಂಬಿಸಲಾಗುತ್ತಿದೆ. ನನ್ನನ್ನು ಬಸವಣ್ಣನವರಿಗೆ ಹೋಲಿಕೆ ಮಾಡಿಕೊಂಡಿಲ್ಲ. ಆ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದರು.
ನೀರಾವರಿ ಖಾತೆ ವಿರೋಧ ಮಾಡಿದವರು ಇವರು. ಇವರಿಂದ ನಾನು ಮಂತ್ರಿ ಆದದ್ದಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಂದ ನಾನು ನೀರಾವರಿ ಖಾತೆ ತಂದಿದ್ದೆ. ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಕೊಡದಂತೆ ಇವರು ತಂತ್ರ ರೂಪಿಸಿದರೂ ನಂತರ ನನಗೆ ಗೃಹ ಖಾತೆ ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು ಎಂದು ಎಂ.ಬಿ.ಪಾಟೀಲ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.