ಬೆಳೆಗಳಿಗೆ ತುರ್ತಾಗಿ ಬೇಕಿದೆ ನೀರು
Team Udayavani, Mar 10, 2022, 5:24 PM IST
ಆಲಮಟ್ಟಿ: ಹಿಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಸಮರ್ಪಕವಾಗಿ ಮಳೆ ಆಗದಿರುವುದರಿಂದ ಕಾಲುವೆ ನೀರನ್ನು ನಂಬಿ ಬಿತ್ತನೆ ಮಾಡಿದ ರೈತರಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯ ಕಣ್ಣಾ ಮುಚ್ಚಾಲೆಯಾಟದಿಂದ ರೈತರು ಪ್ರಾಣ ಸಂಕಟಕ್ಕೀಡಾಗಿದೆ.
ಕೃಷ್ಣಾ ನದಿಯ ಉಗಮ ಸ್ಥಾನದಲ್ಲಿ ಪ್ರತಿ ಬಾರಿಗಿಂತಲೂ ಮುಂಚಿತವಾಗಿ ಮಳೆ ಆಗಿರುದ್ದರಿಂದ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ನೀರು ಹರಿದು ಬಂದು ವಾಡಿಕೆಗಿಂತಲೂ ಮುಂಚಿತವಾಗಿಯೇ ಭರ್ತಿಯಾಗಿತ್ತು. ಮುಂಚಿತವಾಗಿ ಜಲಾಶಯ ಭರ್ತಿಯಾಗಿದ್ದರಿಂದ ಕೃಷ್ಣೆಯ ನೀರನ್ನು ಅವಲಂಬಿತರ ಮೊಗದಲ್ಲಿ ಮಂದಹಾಸ ಮೂಡುವಂತಾಗಿತ್ತು.
ಇದರಿಂದ ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ರೈತರ ಬೆಳೆಗಳಿಗೆ ನೀರು ಮತ್ತು ನಗರ, ಪಟ್ಟಣ ಹಾಗೂ ಬಹುಹಳ್ಳಿ ಕುಡಿಯುವ ನೀರು ಸೇರಿದಂತೆ ಅಗತ್ಯ ನೀರು ಸಂಗ್ರಹಿಸಿಕೊಂಡು ಕಾಲುವೆಗಳಿಗೆ ನೀರು ಹರಿಸಲಾಗಿತ್ತು. ಹಿಂಗಾರು ಹಂಗಾಮಿಗೆ ರೈತರ ಜಮೀನಿಗೆ ನೀರು ಹರಿಸಲು ನಡೆಯಬೇಕಾಗಿದ್ದ ಕೃಷ್ಣಾ ಮೇಲ್ದಂಡೆ ನೀರಾವರಿ ಸಲಹಾ ಸಮಿತಿ ಸಭೆ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಜಲ ಸಂಪನ್ಮೂಲ ಇಲಾಖೆಯ ಆಪರ್ ಕಾರ್ಯದರ್ಶಿ ರಾಕೇಶಸಿಂಗ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಅವಳಿ ಜಲಾಶಯಗಳ ನೀರಿನ ಲಭ್ಯತೆಯನ್ನು ಆಧರಿಸಿ 14ದಿನ ಚಾಲು 10ದಿನ ಬಂದ್ ಪದ್ದತಿ ಅನುಸರಿಸಿ ಮಾರ್ಚ್ 17ರವರೆಗೆ ಕಾಲುವೆಗಳ ಮೂಲಕ ನೀರು ಹರಿಸಲು ತೀರ್ಮಾನಿಸಲಾಯಿತು.
ನೀರಾವರಿ ಸಲಹಾ ಸಮಿತಿ ಸಭೆ ನಡೆದ ಕೆಲವು ದಿನಗಳ ನಂತರ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗಿದ್ದರಿಂದ ಮತ್ತೆ ಜಲಾಶಯವು ಭರ್ತಿಯತ್ತ ಸಾಗಿತು. 519.60 ಮೀ. ಗರಿಷ್ಠ ಎತ್ತರದದಲ್ಲಿ 123.081 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಆಳಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ಬುಧವಾರ ಮಾ. 9ರಂದು 515.50 ಮೀ. ಎತ್ತರದಲ್ಲಿ 67.859 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ 513 ಮೀ. ಎತ್ತರದಲ್ಲಿ 47.456 ಟಿಎಂಸಿ ನೀರು ಸಂಗ್ರಹವಿತ್ತು. ಕಳೆದ ಬಾರಿಗಿಂತಲೂ ಈ ಸಲ ಸುಮಾರು 20 ಟಿಎಂಸಿ ಅಡಿ ನೀರು ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಿದೆ.
ನೀರು ಹೆಚ್ಚು ಸಂಗ್ರಹವಿರುವುದನ್ನು ಕೂಡ ಜಲ ಸಂಪನ್ಮೂಲ ಸಚಿವರ ಗಮನಕ್ಕಾಗಲಿ ಇಲ್ಲವೇ ಕೃ.ಮೇ.ಯೋ.ನೀ. ಸಲಹಾ ಸಮಿತಿ ಸಭೆ ಗಮನಕ್ಕೆ ತಂದು ಸಭೆ ನಡೆಸಿಯಾದರೂ ರೈತರ ಜಮೀನಿಗೆ ನೀರು ಹರಿಸುವ ದಿನವನ್ನು ಮತ್ತೊಮ್ಮೆ ತೀರ್ಮಾನ ಕೈಗೊಳ್ಳಬಹುದಾಗಿತ್ತು. ಆದರೆ ಸಂಬಂಧಿಸಿದ ಅಧಿಕಾರಿಗಳು ರೈತರ ಮನವಿಗೆ ಮತ್ತೊಮ್ಮೆ ಸಭೆ ನಡೆಯುತ್ತದೆ. ಅಲ್ಲಿಯ ನಿರ್ಧಾರವೇ ಅಂತಿಮ ಎಂದು ಹೇಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಕೈಗೊಂಡ ಸಭೆಯ ತೀರ್ಮಾನದಂತೆ ಕೊನೆಯ ದಿನವು ಇನ್ನು ಕೇವಲ 9 ದಿನಗಳು ಬಾಕಿ ಉಳಿದಿದ್ದು ಮಾರ್ಚ್ 3ರಂದು ನಿಯಮಾನುಸಾರ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಮತ್ತೆ ಮಾ. 14ರಂದು ಆರಂಭಗೊಂಡು ಮಾ.17ಕ್ಕೆ ಕಾಲುವೆಗಳಿಗೆ ನೀರು ಹರಿಸುವುದನ್ನು ಬಂದ್ ಮಾಡಲಾಗುತ್ತಿದೆ. ಇದರಿಂದ ಕಾಲುವೆಯ ನೀರನ್ನು ನಂಬಿ ತಡವಾಗಿ ಬಿತ್ತನೆ ಮಾಡಿದ ಕಡಲೆ, ಮೆಕ್ಕೆಜೋಳ, ಅಲಸಂದಿ, ಗೋಧಿ, ಉಳ್ಳಾಗಡ್ಡಿ ಬೆಳೆಗಳ ಫಸಲು ರೈತರಿಗೆ ದೊರೆಯಬೇಕಾದರೆ ಏಪ್ರಿಲ್ ಕೊನೆ ವಾರದವರೆಗೂ ನೀರುಣಿಸಬೇಕಾಗುತ್ತದೆ. ನೀರು ಬರದಿದ್ದರೆ ನಮ್ಮ ಬೆಳೆಗಳು ಹಾಳಾಗುತ್ತವೆ ಎನ್ನುತ್ತಾರೆ ರೈತ ಬಸಲಿಂಗಪ್ಪ.
ಹಿಂಗಾರು ಹಂಗಾಮಿನ ಸಭೆ ನಂತರ ಜಲಾಶಯಕ್ಕೆ ಸಾಕಷ್ಟು ನೀರು ಬಂದಿದೆ. ಏಪ್ರಿಲ್ ಕೊನೆ ವಾರದವರೆಗೂ ರೈತರ ಜಮೀನಿಗೆ ನೀರು ಹರಿಸಲು ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಮಾ. 17ರೊಳಗಾಗಿ ತೀರ್ಮಾನ ಕೈಗೊಂಡು ಏಪ್ರಿಲ್ ಕೊನೆ ವಾರದವರೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಮುಖ್ಯ ಅಭಿಯಂತರರ ಕಚೇರಿ ಮುಂದೆ ಆಮರಣ ಧರಣಿ ಸತ್ಯಾಗ್ರಹ ನಡೆಸಲಾಗುವದು. -ಅರವಿಂದ ಕುಲಕರ್ಣಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರೈತ ಸಂಘ
ಕಾಲುವೆಗಳಿಗೆ ನೀರು ಹರಿಸಬೇಕು ಎಂದು ರೈತರ ಬೇಡಿಕೆಯಿದೆ. ಅತಿ ಶೀಘ್ರದಲ್ಲಿ ಐಸಿಸಿ ಸಭೆ ನಡೆಯಲಿದೆ. ನೀರು ಹರಿಸುವ ಕುರಿತು ಸಭೆಯಲ್ಲಿ ತೀರ್ಮಾಣವಾಗಲಿದ್ದು ಅದರಂತೆ ಕ್ರಮ ಕೈಗೊಳ್ಳಲಾಗುವದು. -ಎಚ್.ಸುರೇಶ, ಮುಖ್ಯ ಅಭಿಯಂತರ
-ಶಂಕರ ಜಲ್ಲಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.