ವಾರಾಬಂಧಿ ಪದ್ಧತಿ ಅನುಸರಿಸಲು ನಿರ್ಧಾರ
Team Udayavani, Jul 26, 2017, 12:36 PM IST
ಆಲಮಟ್ಟಿ: 2017-18ನೇ ಸಾಲಿನ ಮುಂಗಾರು ಹಂಗಾಮಿಗೆ ಜು. 24ರಿಂದ ನ. 24ರವರೆಗೆ ವಾರಾಬಂಧಿ ಪದ್ಧತಿ ಅನುಸರಿಸಿ ಕಾಲುವೆಗಳಿಗೆ ನೀರು ಹರಿಸಲು ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಂಗಳವಾರ ಸ್ಥಳೀಯ ಕೃಷ್ಣಾಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸಭಾಭವನದಲ್ಲಿ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ ನಡೆಯಿತು. ಬಿತ್ತನೆ ಮಾಡಿದ ಹಾಗೂ ಮಾಡುವ ರೈತರ ಹಿತಕಾಪಾಡಲು ಜು. 24ರಿಂದ ನಿರಂತರವಾಗಿ 20 ದಿನ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ನಂತರ 12 ದಿನ ಸ್ಥಗಿತ ಮತ್ತೆ 14 ದಿನ ನೀರು ಹರಿಸುವ
ಪದ್ಧತಿ ಹೀಗೆ ವಾರಾಬಂಧಿ ಪದ್ಧತಿ ಅನುಸರಿಸಿ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ಕಾಲುವೆ ಜಾಲದ ಕೊನೆಯಂಚಿನ ರೈತರಿಗೂ ನೀರು ತಲುಪುವಂತೆ ವಿಶೇಷ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ತಾಂತ್ರಿಕ ಅಧ್ಯಯನ ಸಮಿತಿ: ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಹಲವಾರು ಕಾಲುವೆಗಳ ಜಾಲದ ಕೊನೆಯಂಚಿನ ರೈತರಿಗೆ ನೀರು ತಲುಪದೇ ಇರುವುದರಿಂದ ಹತ್ತಿರದಲ್ಲಿಯೇ ಬೃಹತ್ ಜಲಾಶಯ ಇದ್ದರೂ ಕೂಡ ರೈತರಿಗೆ ಒಣ ಬೇಸಾಯದಲ್ಲಿಯೇ ಬೆಳೆ ಬೆಳೆಯಬೇಕಾದ ಪರಿಸ್ಥಿತಿಯಿದೆ. ಕೆಲವು ಕಡೆಗಳಲ್ಲಿ ಕಾಲುವೆ ಜಾಲದ ಹೊಂದಿಕೊಂಡಿರುವ ಜಮೀನುಗಳು ನೀರಿನಾಂಶ ಹೆಚ್ಚಾಗಿ ಸವುಳು-ಜವುಳಾಗುತ್ತಿದ್ದರೆ ಕಾಲುವೆ ಕೊನೆಯಂಚಿನ ರೈತರಿಗೆ ನೀರಿಲ್ಲದೇ ಬೆಳೆ ಬರುತ್ತಿಲ್ಲ ಇದೆಲ್ಲಕ್ಕೂ ಕಾರಣವೇನು? ಎನ್ನುವ ಬಗ್ಗೆ ತಾಂತ್ರಿಕ ತಜ್ಞ ಪಂಚಗಟ್ಟಿಯವರ ನೇತೃತ್ವದಲ್ಲಿ ಸಮಿತಿ ರಚಿಸಿ ಅಧ್ಯಯನ ಮಾಡಿ ವರದಿ ಸಲ್ಲಿಸಲು ಸರ್ಕಾರಕ್ಕೆ ಶಿಫಾರಸು ಮಾಡಲು ಸಭೆಯಲ್ಲಿ ಚರ್ಚಿಸಲಾಯಿತು.
ಚರ್ಚೆಗೆ ಗ್ರಾಸವಾದ 3 ಟಿಎಂಸಿ ನೀರು: ಕಳೆದ ವರ್ಷ ಅಕ್ಟೋಬರ್ 28ರಂದು ನಡೆದ ಹಿಂಗಾರು ಹಂಗಾಮು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಯುಕೆಪಿಯ ಎಲ್ಲ ಕಾಲುವೆಗಳಿಗೆ ನೀರು ಹರಿಸಲಾಗಿತ್ತಾದರೂ ನಂತರದ ದಿನಗಳಲ್ಲಿ ಆಲಮಟ್ಟಿ ಜಲಾಶಯದಿಂದ 3 ಟಿಎಂಸಿ ನೀರನ್ನು ನದಿ ಪಾತ್ರಕ್ಕೆ ಬಿಡಲು ಅಧಿಕಾರಿಗಳಿಗೆ ಯಾರು ಆದೇಶ ಮಾಡಿದ್ದರು. ಈ ಕುರಿತು ಸಲಹಾ ಸಮಿತಿ ಸಭೆ ಗಮನಕ್ಕೆ ತಾರದೇ ನೀರು ಬಿಟ್ಟಿದ್ದೇಕೆ? ಇದರಿಂದ ಜಲಾಶಯದಲ್ಲಿ ನೀರಿಲ್ಲದೇ ಇರುವುದರಿಂದ ಜಲಚರಗಳು
ಸಾವಿಗೀಡಾಗಿದ್ದರೆ ಜನ ಜಾನುವಾರುಗಳು ನೀರಿಗಾಗಿ ಪರದಾಡುವಂತಾಗಿದ್ದರಿಂದ ಕೆಲ ವ್ಯಕ್ತಿಗಳು ನಮ್ಮನ್ನು ಗುರಿಯಾಗಿಸಿಕೊಂಡು ಅತಿ ಕೀಳಾಗಿ ಟೀಕೆ ಮಾಡುವಂತಾಯಿತು ಎಂದು ಸಲಹಾ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಶಾಸಕ ಎಚ್.ವೈ. ಮೇಟಿ ಹಾಗೂ ಶಾಸಕ ಜೆ.ಟಿ. ಪಾಟೀಲ ಅಧಿಕಾರಿಗಳ ಛಳಿ ಬಿಡಿಸಿದರು.
ಕೆರೆ ತುಂಬುವಲ್ಲಿ ರಾಜಕೀಯ: ಕಾಂಗ್ರೆಸ್ ಶಾಸಕ ಹಾಗೂ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ಶಿವಾನಂದ ಪಾಟೀಲ ಮಾತನಾಡಿ, ಜಲ ಸಂಪನ್ಮೂಲ ಸಚಿವರು ರಾಜ್ಯಕ್ಕೆ ಸಚಿವರೋ ಅಥವಾ ತಮ್ಮ ಮತಕ್ಷೇತ್ರಕ್ಕೆ ಸಚಿವರೋ? ಕೃಷ್ಣಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಯ ಇತರ ಮತಕ್ಷೇತ್ರಗಳಲ್ಲಿ ಬರುವ ಯಾವ ಕೆರೆಗಳನ್ನು ತುಂಬದೇ ಕೇವಲ ತಮ್ಮ ಮತಕ್ಷೇತ್ರಗಳಲ್ಲಿರುವ ಕೆರೆಗಳನ್ನು ತುಂಬಲು ಮುಂದಾಗಿದ್ದಾರೆ. ಇದರಿಂದ ಇನ್ನುಳಿದ ಮತಕ್ಷೇತ್ರಗಳಲ್ಲಿರುವ ಕೆರೆಗಳಿಗೆ ಒಣಗಿ ಹಾಗೆಯೇ ಉಳಿದಿವೆ ಎಂದು ಆರೋಪಿಸಿದರು.
ಅಧ್ಯಕ್ಷರ ಆದೇಶದ ಮೇರೆಗೆ ಯಾವ ಯಾವ ಮತಕ್ಷೇತ್ರಗಳಲ್ಲಿರುವ ಕೆರೆಗಳನ್ನು ತುಂಬಲಾಗುತ್ತದೆ ಎನ್ನುವ ಮಾಹಿತಿಯನ್ನು ಅಣೆಕಟ್ಟು ವೃತ್ತ ಅಧೀಕ್ಷಕ ಅಭಿಯಂತರ ಎಸ್.ಎಚ್. ಮಂಜಪ್ಪ ಮಾಹಿತಿ ನೀಡಲು ಮುಂದಾದಾಗ ಅರ್ಧಕ್ಕೆ ಮೊಟಕುಗೊಳಿಸಿ
ಮಧ್ಯಪ್ರವೇಶಿಸಿದ ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರು, ಜಲ ಸಂಪನ್ಮೂಲ ಸಚಿವರು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಾಕುತ್ತಿರುವುದು ಎಷ್ಟು ಸರಿ? ಕಳೆದ ಬಾರಿಯ ಸಲಹಾ ಸಮಿತಿ ಸಭೆಯಲ್ಲಿ ದೇವದುರ್ಗ ಮತಕ್ಷೇತ್ರದ ಒಂದಾದರೂ ಕೆರೆ ತುಂಬುವಂತೆ ನಿರ್ಣಯಿಸಲಾಗಿತ್ತು. ಆದರೆ ಅದನ್ನು ತಾಂತ್ರಿಕ ಅಸಹಾಯಕತೆ ಹೇಳಿ ಕೈ ಬಿಟ್ಟರು. ಇದರಿಂದ ನಾವು
ಸಭೆಗೆ ಆಗಮಿಸುವುದು ಕೇವಲ ಹಾಜರಾತಿಗಾಗಿ ಎನ್ನುವಂತಾಗಿದೆ ಎಂದು ಆರೋಪಿಸಿದರು. ಇದಕ್ಕೆ ಸಮರ್ಥಿಸಲು ಮುಂದಾದ ದೆಹಲಿಯ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಸಿ.ಎಸ್. ನಾಡಗೌಡ ಅವರು, ಈಗಾಗಲೇ ವ್ಯಾಪ್ತಿಯ ಎಲ್ಲ ಕೆರೆಗಳನ್ನು ತುಂಬುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅದರಂತೆ ಯೋಜನೆ ವ್ಯಾಪ್ತಿಯ ಎಲ್ಲ ಮತಕ್ಷೆತ್ರಗಳನ್ನು ಪರಿಗಣಿಸಲು ತಿಳಿಸಲಾಗಿದೆಯಲ್ಲದೇ ಮುದ್ದೇಬಿಹಾಳ ಕ್ಷೇತ್ರವೂ ಸೇರಿದಂತೆ ಅವಳಿ ಜಿಲ್ಲೆಯ ಬಹುತೇಕ ಕೆರೆಗಳಿಗೆ ಭೂಮಟ್ಟದಿಂದ ಕೆರೆಗಳು ತುಂಬುವುದು ವಿರಳ. ಇವುಗಳಿಗೆ ಏತ ನೀರಾವರಿ ಮೂಲಕವೇ ತುಂಬಬೇಕಾದ ಅನಿವಾರ್ಯತೆಯಿದೆ. ಆದರೆ ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳು ರೈತರು ತಮ್ಮ ಜಮೀನುಗಳಿಗೆ ನೀರುಣಿಸಿ ಉಳಿದ ಹೆಚ್ಚುವರಿ ನೀರೂ ಕೂಡ ಕೆರೆಗಳಿಗೆ ಹೋಗುತ್ತವೆ. ಇದರಿಂದ ಅಲ್ಪವಾದರೂ ಆ ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. ಜಲಾಶಯ ನಿರ್ಮಾಣಕ್ಕಾಗಿ ಫಲವತ್ತಾದ ಭೂಮಿ, ಮನೆ, ಮಠಗಳನ್ನು ಕಳೆದುಕೊಂಡವರ ಸ್ಥಿತಿ ಇನ್ನೂವರೆಗೆ ಸುಧಾರಣೆಯಾಗಿಲ್ಲ. ಈಗಲಾದರೂ ಅವಳಿ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬುವುದರೊಂದಿಗೆ ಕಾಲುವೆ ವ್ಯಾಪ್ತಿಯ ಎಲ್ಲ ಕಾಲುವೆಯ ಕೊನೆಯಂಚಿನ ರೈತರಿಗೂ ನೀರು ಸಿಗುವಂತಾಗಬೇಕು ಎಂದರು.
ಅಧಿಕಾರಿಗಳ ತರಾಟೆ: ಕೃ.ಮೇ.ಯೋಜನೆಯ ಮಹತ್ವಾಕಾಂಕ್ಷಿ ಸಭೆಯಾದ ನೀರಾವರಿ ಸಲಹಾಸಮಿತಿ ಸಭೆಗೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಕೃಷಿ ಇಲಾಖೆ ಅಧಿಕಾರಿಗಳು ಅನಧಿ ಕೃತವಾಗಿ ಗೈರಾಗಿದ್ದರಿಂದ ಅವರಿಗೆ ದೂರವಾಣಿ ಕರೆ ಮಾಡಿ ಸಭೆಗೆ ಕರೆಸಿಕೊಂಡ ಸಚಿವೆ ಉಮಾಶ್ರೀಯವರು ಸಭೆಯಲ್ಲಿ ಹಾಜರಿದ್ದ ಶಾಸಕರು ಕೇಳಿದ ಕೃಷಿ ಇಲಾಖೆಯ ಪ್ರಶ್ನೆಗಳಿಗೆ ಉತ್ತರಿಸುವಂತೆ ಸೂಚಿಸಿದರು.
ಶಾಸಕರು ಕೇಳಿದ ಯಾವ ಪ್ರಶ್ನೆಗಳಿಗೂ ಇಬ್ಬರೂ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬಾರದೇ ಇದ್ದರಿಂದ ಮತ್ತು ಸಭೆಗೆ ಅನ ಧಿಕೃತ ಗೈರಾಗಿದ್ದರಿಂದ ಇಬ್ಬರೂ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡು ನಿಮಗೆ ಸಭೆಯ ಬಗ್ಗೆ ಮಾಹಿತಿಯಿರಲಿಲ್ಲವೇ ಎಂದು ಕೆಳಿದಾಗ, ಮಾಹಿತಿಯಿತ್ತು ಎಂದಾಗ ಮತ್ತಷ್ಟು ರೊಚ್ಚಿಗೆದ್ದ ಸಚಿವೆ ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸಿದರೆ ನಿಮ್ಮ ಮೇಲೇಕೆ ಕ್ರಮ ಕೈಗೊಳ್ಳಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನುಳಿದಂತೆ ಅಧಿನ ಕೃತವಾಗಿ ಗೈರಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು ಎಂದು ಸಭೆಯಲ್ಲಿ ಹಾಜರಿದ್ದ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. 123.081 ಟಿಎಂಸಿ ಅಡಿ ಸಾಮರ್ಥ್ಯದ ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತ್ರೀ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ಬೇಕಾಗುವ ನೀರಿನ ಪ್ರಮಾಣ ಆಲಮಟ್ಟಿ ಎಡದಂಡೆ ಕಾಲುವೆಗೆ 2.85 ಟಿಎಂಸಿ, ಬಲದಂಡೆ-2.30 ಟಿಎಂಸಿ, ಮುಳವಾಡ ಏತನೀರಾವರಿ-2.95 ಟಿಎಂಸಿ, ಸೊನ್ನ, ರೊಳ್ಳಿ-ಮನ್ನಿಕೇರಿ ಮತ್ತು ತೆಗ್ಗಿ ಸಿದ್ದಾಪುರ ಏತ ನೀರಾವರಿಗೆ-0.65 ಟಿಎಂಸಿ ಮತ್ತು ವಿಜಯಪುರ ಜಿಲ್ಲೆಯ 16 ಕೆರೆ, 5 ಬಾಂದಾರ್ ಮತ್ತು ಬಾಗಲಕೋಟೆ ಜಿಲ್ಲೆಯ 7 ಕೆರೆಗಳನ್ನು ತುಂಬಲು ಮತ್ತು ಮಮದಾಪುರ, ಸಾರವಾಡ, ಬಬಲೇಶ್ವರ ಬೇಗಂ ತಲಾಬ, ಭೂತನಾಳ, ತಿಡಗುಂದಿ ಹಾಗೂ ತಿಕೋಟಾ ಸೇರಿ ಇತರೆ 10 ಕೆರೆಗಳನ್ನು ತುಂಬಿಸಲು-1.15 ಟಿಎಂಸಿ, ಕುಡಿಯುವ ನೀರಿಗಾಗಿ 1.50 ಟಿಎಂಸಿ, ಕೂಡಗಿ ಎನ್ ಟಿಪಿಸಿಗಾಗಿ-2.5 ಟಿಎಂಸಿ ಭಾಷ್ಪೀಕರಣ-4 ಟಿಎಂಸಿ ಸೇರಿ ಒಟ್ಟು ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ 17.90 ಟಿಎಂಸಿ ಅವಶ್ಯಕತೆಯಿದೆ.
33.313 ಟಿಎಂಸಿ ಸಾಮರ್ಥ್ಯದ ನಾರಾಯಣಪುರದ ಬಸವಸಾಗರ ಜಲಾಶಯ ವ್ಯಾಪ್ತಿಯಲ್ಲಿರುವ ಎನ್‌ಎಲ್‌ಬಿಸಿ, ಎಸ್‌ಬಿಸಿ, ಜೆಬಿಸಿ, ಐಬಿಸಿ ಮತ್ತು ಐಎಲ್‌ಸಿ ಸೇರಿ 62 ಟಿಎಂಸಿ, ನಾರಾಯಣಪುರ ಬಲದಂಡೆ-16 ಟಿಎಂಸಿ, ರಾಂಪುರ ಏತ ನೀರಾವರಿ-2.30 ಟಿಎಂಸಿ, ರಾಮಥಾಳ ಏತ ನೀರಾವರಿ-2.95 ಟಿಎಂಸಿ, ಕುಡಿಯುವ ನೀರಿಗಾಗಿ 1 ಟಿಎಂಸಿ, ಕೈಗಾರಿಕೆ-0.80 ಟಿಎಂಸಿ, ಭಾಷ್ಪೀಕರಣ-2
ಟಿಎಂಸಿ ಸೇರಿ ಬಸವಸಾಗರ ಜಲಾಶಯದಿಂದ 87.85 ಟಿಎಂಸಿ ನೀರಿನ ಬೇಡಿಕೆಯಿದೆ ಎಂದು ಕೃಷ್ಣಾಭಾಗ್ಯಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂಪರ್ವೇಜ್ ಸಭೆಗೆ ವಿವರಿಸಿದರು.
ಒಟ್ಟಾರೆ ಆಲಮಟ್ಟಿ ಜಲಾಶಯವನ್ನು 506.87ಮೀ. ಹಾಗೂ ನಾರಾಯಣಪುರ ಜಲಾಶಯವನ್ನು 487.10 ಮೀ. ನೀರು ಯಾವುದೇ ಸ್ಥಿತಿ ಬಂದರೂ ಬಳಸಕೂಡದು. ಒಂದು ವೇಳೆ ಇನ್ನೂ ಹೆಚ್ಚು ನೀರು ಬಳಸಿಕೊಳ್ಳುವ ಅನಿವಾರ್ಯತೆ ಬಂದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂಬ ನಿರ್ಣಯದೊಂದಿಗೆ ಸಭೆ ಮುಕ್ತಾಯವಾಯಿತು. ಸಭೆಯಲ್ಲಿ ಶಾಸಕರುಗಳಾದ ಎಚ್.ವೈ. ಮೇಟಿ, ಸಿ.ಎಸ್. ನಾಡಗೌಡ, ಶಿವನಗೌಡ ನಾಯಕ, ಶಿವಾನಂದ ಪಾಟೀಲ, ರಾಜಾವೆಂಕಟಪ್ಪ ನಾಯಕ, ರಮೆಶ ಭೂಸನೂರ, ಯಶವಂತರಾಯಗೌಡ ಪಾಟೀಲ, ಜೆ.ಟಿ. ಪಾಟೀಲ, ಎಚ್.ಆರ್. ನಿರಾಣಿ, ಗುರುಪಾಟೀಲ ಶಿರವಾಳ ಹಾಗೂ ಅಧಿಕಾರಿಗಳಾದ ವಿ.ಕೆ. ಪೋತದಾರ, ಎಸ್.ಎಚ್. ಮಂಜಪ್ಪ, ಭರತ ಕಾಂಬಳೆ, ಎಲ್.ಟಿ. ಖೊಂಬೆ, ಎಸ್. ಎಚ್. ನಾಯೊಡಿ, ಶಶಿಕಾಂತ ಹೊನವಾಡಕರ ಮೊದಲಾದವರಿದ್ದರು.
ಅಭಿವೃದ್ಧಿಯಲ್ಲಿ ರಾಜಕೀಯ ಬೇಡ
ಆಲಮಟ್ಟಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ದೇವದುರ್ಗ ಶಾಸಕ ಶಿವನಗೌಡ ನಾಯಕ ಆರೋಪಿಸಿದರು. ಮಂಗಳವಾರ ಕೃಷ್ಣಾಭಾಗ್ಯಜಲನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ನಡೆದ ಸಲಹಾಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಚಿವರುಗಳೆಂದರೆ ಕೇವಲ ತಮ್ಮ ಮತಕ್ಷೇತ್ರಗಳ ಸಚಿವರು ಎನ್ನುವಂತಾಗಿದ್ದಾರೆ. ಇವರಿಗೆ ರಾಜ್ಯದ ಅಭಿವೃದ್ಧಿ ಬೇಕಾಗಿಲ್ಲ. ತಮ್ಮ ಕ್ಷೇತ್ರಗಳ ಅಭಿವೃದ್ಧಿಯಾದರೆ ಸಾಕು ಎನ್ನುವಂತಾಗಿದೆ ಎಂದರು.
ಕಳೆದ ಬಾರಿ ನಡೆದ ನೀರಾವರಿ ಸಲಹಾಸಮಿತಿ ಸಭೆಯಲ್ಲಿ ರಾಯಚೂರು ಜಿಲ್ಲೆಯಲ್ಲಿರುವ ಕೆರೆಗಳನ್ನು ತುಂಬಿಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ರಾಜ್ಯದ ಉಳಿದ ಯಾವುದೇ ಕೆರೆಗಳನ್ನು ತುಂಬದೇ ಕೇವಲ ಬಬಲೇಶ್ವರ ಮತಕ್ಷೇತ್ರದ ಕೆರೆಗಳನ್ನು ಮಾತ್ರ ತುಂಬುತ್ತಿದ್ದಾರೆ ಎಂದು ಆಪಾದಿಸಿದರು. ಇನ್ನು ಮೇಲಾದರು ಮತಕ್ಷೇತ್ರದ ಸಚಿವರಾಗದೇ ರಾಜ್ಯದ ಸಚಿವರಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.