ಗುರುವಿನ ಕೃಪೆಯಿದ್ದರೆ ಬದುಕು ಸಾರ್ಥಕ: ಸವದಿ
Team Udayavani, Feb 10, 2022, 5:55 PM IST
ಚಡಚಣ: ಜನ್ಮಗಳಲ್ಲಿ ಮಾನವ ಜನ್ಮ ಶ್ರೇಷ್ಠ. ಆದ್ದರಿಂದ ಇರುವಷ್ಟು ದಿನ ಒಳ್ಳೆ ಕಾರ್ಯಗಳನ್ನು ಮಾಡಬೇಕು ಎಂದು ಮಾಜಿ ಡಿಸಿಎಂ ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.
ಇಂಚಗೇರಿ ಮಠದಲ್ಲಿ ನಡೆದ ಸದ್ಗುರು ಸಮರ್ಥ ಭಾವುಸಾಹೇಬ, ಗಿರಿಮಲ್ಲೇಶ್ವರ, ಐನಾಥ ಪ್ರಭು, ಗುರು ಪುತ್ರೇಶ್ವರ ಹಾಗೂ ಜಗನ್ನಾಥ ಮಹಾರಾಜರ ಗುರು ಶಿಷ್ಯರ ಪುಣ್ಯಸ್ಮರಣೆ ಮಾಘ ಸಪ್ತಾಹದ ಮೂರನೇ ದಿನದ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನೇಕ ಜೀವರಾಶಿಗಳನ್ನು ದಾಟಿ ಮನುಷ್ಯ ಜನ್ಮ ಪಡೆದು ಹುಟ್ಟಿದ್ದೇವೆ. ಹುಟ್ಟು ಸಾವು ಮಧ್ಯದಲ್ಲಿ ನಮ್ಮ ಬದುಕು ಸುಂದರವಾಗಿಬೇಕು. ನಾವು ಇರುವಷ್ಟು ದಿನ ಸಾಧ್ಯವಾದಷ್ಟು ಪರೋಪಕಾರ ಮಾಡಬೇಕು. ಅದರೆ ಕೆಟ್ಟದ್ದನ್ನು ಮಾಡಬಾರದು ಎಂದ ಅವರು, ನಾವು ಎಷ್ಟೆ ಜಾಣರಿದ್ದರೂ ಗುರುವಿನ ಮಾರ್ಗದರ್ಶನ ಬೇಕೆ ಬೇಕು. ಇದರಿಂದ ಕಷ್ಟಗಳು ದೂರವಾಗಿ ಸನ್ಮಾರ್ಗದ ಬದುಕು ಕಂಡುಕೊಳ್ಳಲು ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಇಂಚಗೇರಿ ಮಠದ ಪೀಠಾಧ್ಯಕ್ಷ ರೇವಣ ಸಿದ್ದೇಶ್ವರ ಮಹಾರಾಜರು ಆಶೀರ್ವಚನ ನೀಡಿ, ಮನುಷ್ಯ ಪ್ರಾಪಂಚಿಕ ಜಂಜಡದಲ್ಲಿ ತೊಳಲಾಡುತ್ತಿದ್ದು, ಅದರಿಂದ ಗುರುಗಳ ಉಪದೇಶದೊಂದಿಗೆ ನಿತ್ಯ ಸಾಧ್ಯವಾದಷ್ಟು ಸಮಯವನ್ನು ಸತ್ಸಂಗ, ಉಪಾಸನೆ, ಧ್ಯಾನ, ಅಧ್ಯಾತ್ಮಿಕ ಚಿಂತನ-ಮಂಥನದಲ್ಲಿ ಕಳೆಯಬೇಕು. ಶುದ್ಧ ಮನಸ್ಸಿನಿಂದ ದೇವರ ದರ್ಶನ ಪಡೆದರೆ ಶಾಂತಿ-ಸಮಾಧಾನಕ್ಕೆ ದೊರೆಯಲಿದ್ದು ಮಾನವ ಜನ್ಮ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯ ಎಂದರು. ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ತುಳಸಿಮಾಲಾ ಮಾತನಾಡಿ, ಗುರುವಿನ ಪಾತ್ರ ಮಹತ್ವವಿದೆ. ಆದ್ದರಿಂದ ಗುರು ಮಾರ್ಗರ್ಶನ ಮತ್ತು ಸಾನ್ನಿಧ್ಯದ ಮೂಲಕ ಸಾಗಿದರೆ ನಾವು ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದರು.
ನ್ಯಾಯವಾದಿ ಮುಕುಂದ ಬೆಳಗಲಿ ಪ್ರಸ್ತಾವಿಕ ಮಾತನಾಡಿ, ಮಾನವ ಜನ್ಮ ದೊಡ್ಡದು. ಆದ್ದರಿಂದ ಮನುಷ್ಯ ಜನ್ಮ ಪಡೆದು ಬಂದ ನಾವು ಸಾಧ್ಯವಾದಷ್ಟು ಇತರರಿಗೆ ಒಳ್ಳೆಯದನ್ನು ಮಾಡಬೇಕು. ಇಂಚಗೇರಿ ಸಂಪ್ರದಾಯ ಮಠವು ಗುರು ಉಪದೇಶದಿಂದ ನಾಮಸ್ಮರಣೆ ಮಾಡಿದರೆ ಪ್ರತಿಯೊಬ್ಬ ಮಾನವ ಮಹಾದೇವನಾಗಬಲ್ಲ ಎಂಬುದನ್ನು ಸಾರಿ ಹೇಳಿದ ಮಠವಾಗಿದೆ ಎಂದರು.
ನಾಮದೇವ ಮಹಾರಾಜ, ಗಿರಮಲ್ಲ ಮಹಾರಾಜ, ಶಂಕ್ರಪ್ಪ ಕೌಜಲಗಿ ಮಹಾರಾಜ, ನಾಗಪ್ಪ ಜತ್ತಿ, ಭೀಮಣ್ಣ ಮಹಾರಾಜ, ದತ್ತಾ ಹಾಸೀಲ್ಕರ್, ವಿವೇಕಾನಂದ ಅರಳಿ, ವಿವೇಕಾನಂದ ಹಳಿಂಗಳಿ, ಸುರೇಶ ಹಾಸೀಲ್ಕರ್ ಹಾಗೂ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರರು ಭಕ್ತರು ಇದ್ದರು. ಪ್ರಭುದೇವ ಗೋಕಾಕ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.