ಕಲಬುರ್ಗಿ ದಿನಮಾನದ ಯುಗಪುರುಷ
Team Udayavani, Sep 12, 2017, 2:29 PM IST
ಸಿಂದಗಿ: ಡಾ| ಎಂ.ಎಂ. ಕಲಬುರ್ಗಿ ಅವರು ನಮ್ಮ ದಿನಮಾನದ ಯುಗಪುರುಷ ಎಂದು ಗದುಗಿನ ಜಗದ್ಗುರು ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಸೋಮವಾರ ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನೆಲೆ ಪ್ರಕಾಶನ ಸಿಂದಗಿ, ಡಾ|ಕಲಬುರ್ಗಿ ಸಂಶೋಧಕರ ಸಂಕುಳ ಧಾರವಾಡ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ| ಎಂ.ಎಂ.ಕಲಬುರ್ಗಿ ಅವರ ಎರಡನೇಯ ಪುಣ್ಯಸ್ಮರಣೆ ಹಾಗೂ ಗ್ರಂಥ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಗದುಗಿನ ತೋಂಟದಾರ್ಯಮಠದಲ್ಲಿ ಲಿಂಗಾಯತ ವಿದ್ಯಾ ಸಂಸ್ಥೆಯನ್ನು ತೆರೆದು ಇಡಿ ರಾಜ್ಯದಲ್ಲಿ ಹೆಸರು ಮಾಡಿದ್ದು ಡಾ| ಎಂ.ಎಂ. ಕಲಬುರ್ಗಿ. ಸರ್ಕಾರದ ಇಚ್ಛಾಶಕ್ತಿ ಇಲ್ಲದಿರುವುದರಿಂದ ಅವರ ಕುರಿತಾಗಿ ವಾಗ್ಧಾನ ಮಾಡಿದ ಅನುದಾನಗಳು ಇನ್ನುವರೆಗೂ ಬಿಡುಗಡೆಯಾಗಿಲ್ಲ. ಅವರ ಸೇವೆ ಚಿರಸ್ಮರಣಿಯಾಗಿ ಉಳಿಯಲು ಡಾ| ಎಂ.ಎಂ.ಕಲಬುರ್ಗಿಯವರ ಸವಿನೆನಪಿಗಾಗಿ ಲಿಂಗಾಯತ ವಿದ್ಯಾಸಂಸ್ಥೆಯನ್ನು ಬದಲಿಸಿ ಡಾ| ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ ಎಂದು ಹೆಸರು ಇಡಲಾಗಿದೆ ಎಂದರು.
ತಾಲೂಕಿನ ಹಂದಿಗನೂರ ಗ್ರಾಮದ ರಂಗಕಲಾವಿದ ಹಂದಿಗನೂರ ಸಿದ್ರಾಮಪ್ಪ ಅವರು ಡಾ| ರಾಜಕುಮಾರ ಅವರ ಮೀರಿಸುವ ಮೇರುನಟರಾಗಿದ್ದರು. ಡಾ| ಎಂ.ಎಂ. ಕಲಬುರ್ಗಿ ಅವರು ಸಿಂದಗಿ ಪಟ್ಟಣದಲ್ಲಿ ಹಂದಿಗನೂರ ಸಿದ್ರಾಮಪ್ಪ ಬಯಲು ರಂಗಮಂದಿರ ನಿರ್ಮಿಸಲು ಸರಕಾರದಿಂದ ಸ್ಥಳ ಹಾಗೂ ಹಣ ಮಂಜೂರು ಮಾಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ಹಾಗೇ ಉಳಿದಿದೆ. ಕಲಬುರ್ಗಿಯವರ ಕನಸು ನನಸಾಗಬೇಕಾದರೆ ಅವರ ಅಭಿಮಾನಿಗಳು ರಂಗಭೂಮಿ ನಿರ್ಮಿಸಿ ಆ ವೇದಿಕೆ ಹೆಸರನ್ನು ಡಾ| ಎಂ.ಎಂ. ಕಲಬುರ್ಗಿ ಇಡಬೇಕು ಎಂದು ಹೇಳಿದರು.
ಗ್ರಂಥ ಲೋಕಾರ್ಪಣೆ ಮಾಡಿದ ಮಾಜಿ ಸಚಿವ ಎಂ.ಸಿ. ಮನಗೂಳಿ ಮಾತನಾಡಿ, ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಇವೆರಡರ ಮಧ್ಯೆ ಮಾಡಿದ ಸಾಧನೆಗಳು ಅಜರಾಮರ. ಇಂಥ ಸಾಹಿತಿ ಡಾ| ಎಂ.ಎಂ.ಕಲಬುರ್ಗಿ ಅವರನ್ನು ಗುಂಡೇಟಿನಿಂದ ಹತ್ಯೆ ಮಾಡಿರುವುದು ವಿಷಾದನೀಯ. ಅವರ ಸ್ಮರಣಾರ್ಥ 1 ಲಕ್ಷ ರೂ. ಠೇವಣಿ ಇಟ್ಟು ಪ್ರತಿ ವರ್ಷ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುವುದು ಎಂದರು.
ವಿಜಯಪುರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೊತ್ತರ ಕೇಂದ್ರ ಡಾ| ಅಮರೇಶ ಯತಗಲ್, ಸವದತ್ತಿ ಸಾಹಿತಿ ಡಾ| ವೈ.ಎಂ. ಯಾಕೊಳ್ಳಿ ಗ್ರಂಥ ಪರಿಚಯಿಸಿದರು.
ಉಮಾದೇವಿ ಕಲಬುರ್ಗಿ, ಧಾರವಾಡದ ಸಂಶೋಧಕ ಡಾ| ವೀರಣ್ಣ ರಾಜೂರ, ಡಾ| ಪಂಡಿತ ರಾಠೊಡ ಸಂಘರ್ಷದ ನೆಲೆಗಳ ಬಗ್ಗೆ ಸಂಪಾದಿಸಿದ ಕುರಿತು ಮಾತನಾಡಿದರು.
ಡಾ| ಬಿ.ಆರ್. ನಾಡಗೌಡ, ಅಶೋಕ ವಾರದ, ಚಂದ್ರಶೇಖರ ನಾಗೂರ, ಶಿವಯೋಗಿ ಕಲಬುರ್ಗಿ, ಶಿರುಗೌಡ ದೇವರಮನಿ, ಮಹಾದೇವಪ್ಪ ಮುಂಡೆವಾಡಗಿ, ಬಸವರಾಜ ರೋಡಗಿ, ಬಿ.ಎಂ. ಬಿರಾದಾರ, ಮಲಕಾಜಯ್ಯ ಹಿರೇಮಠ, ರಾ.ಸಿ.
ವಾಡೇದ, ಎ.ಐ. ಮುಲ್ಲಾ, ಪಿ.ಎಂ. ಮಡಿವಾಳರ, ಎಂ.ಎಸ್. ಹೈಯಾಳಕರ, ವಿ.ಡಿ. ವಸ್ತ್ರದ, ಮಹಾದೇವಿ ಬಮ್ಮಣ್ಣಿ ಸೇರಿದಂತೆ ಇತರರು ಇದ್ದರು.
ಸಂಶೋಧಕ ಡಾ| ಎಂ.ಎಂ. ಪಡಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಆಶ್ವಿನಿ ಗೋಣಿ ವಚನ ಗಾಯನ ಮಾಡಿದರು. ಪೂಜಾ ಹಿರೇಮಠ ಶರಣರ ಗೀತೆ ಹಾಡಿದರು. ಸಿದ್ದಬಸವ ಕುಂಬಾರ ನಿರೂಪಿಸಿದರು. ಕವಿ ಡಾ| ಚನ್ನಪ್ಪ ಕಟ್ಟಿ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.