Vijayapura; ಸಿದ್ದರಾಮಯ್ಯ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ: ಯತ್ನಾಳ್
Team Udayavani, Jun 22, 2024, 5:26 PM IST
ವಿಜಯಪುರ: ರಾಜ್ಯದಲ್ಲಿ ಸಿದ್ಧರಾಮಯ್ಯ ಸರ್ಕಾರ ಬ್ರಿಟೀಷ್ ಮಾದರಿಯಲ್ಲಿ ತೆರಿಗೆ ಹೇರುತ್ತಿದೆ. ಬ್ರಿಟೀಷರು ಉಪ್ಪಿನ ಮೇಲೆ ತರಿಗೆ ಹೇರಿದಂತೆ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ತೆರಿಗೆ ವಿಧಿಸುತ್ತಿದೆ. ಆಡಳಿತ ವೈಪಲ್ಯದ ಕಾರಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿದ್ಧರಾಮಯ್ಯ ಚುನಾವಣೆ ಎದುರಿಸಬೇಕು ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
ಶನಿವಾರ ರಾಜ್ಯ ಸರ್ಕಾರದ ಇಂಧನ ದರ ಏರಿಕೆ ವಿರೋಧಿಸಿ ಬಿಜೆಪಿ ನಗರದ ಹೊರ ವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನಗಳನ್ನು ವಾಸ್ತವವಾಗಿ ಅನುಷ್ಠಾನ ಮಾಡುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.
ಸರ್ಕಾರದ ಖಜಾನೆ ಖಾಲಿಯಾಗಿದ್ದರೂ ಈಗ ಗ್ಯಾರಂಟಿ ಬಂದ್ ಮಾಡಿದರೆ ಅಪಾಯ ಎಂದು ಮುಂದುವರೆಸಿದ್ದಾರೆ ಎಂದು ಕುಟುಕಿದ ಯತ್ನಾಳ, ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ಲಾಭ ಎಂದು ಸಾರಿಗೆ ಸಂಸ್ಥೆಗಳ ಅಧಿಕಾರಿಗಳು ಹೇಳಿದ್ದಾರೆ. ಹಾಗಾದರೆ ಕೇವಲ ಮಹಿಳೆಯರಿಗೆ ಮಾತ್ರ ಗ್ಯಾರಂಟಿ ನೀಡಿದರೆ ಸಾಲದು. ಬಿಪಿಎಲ್ ಕಾರ್ಡ್ ಹೊಂದಿರುವ ಪುರುಷರಿಗೂ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಲಿ ಎಂದು ಆಗ್ರಹಿಸಿದರು.
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿ ತಿಂಗಳು ನಿಮ್ಮ ಅಕೌಂಟ್‍ಗೆ ಕಟಾ ಕಟಾ 8500 ರೂ. ಜಮೆ ಮಾಡುವುದಾಗಿ ಭರವಸೆ ನೀಡಿದ್ದರು. ಈಗ ಕಟಾ ಕಟಾ ಕೊಡ್ತಿರೋ ಇಲ್ಲಾ ಪಟಾ ಪಟ್ ಕೊಡಬೇಕೋ ಎಂದು ಮಹಿಳೆಯರು ರಾಹುಲ್ ಗಾಂಧಿಯನ್ನು ಕೇಳಬೇಕು ಎಂದು ಯತ್ನಾಳ ಹೇಳಿದರು.
ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಗ್ಯಾರಂಟಿ ಯೋಜನೆಗಳ ವಿಷಯದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಅಭಿವೃದ್ಧಿಗೆ ಹಣ ನೀಡಲಾಗದೆ ಆಡಳಿತ ಮಾಡಲಾಗಿದ್ದರೆ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮತ್ತೊಂದೆಡೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಗಲು ದರೋಡೆಗೆ ಇಳಿದಿದೆ. ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಕಂದಾಯ ಸಚಿವರ ಕ್ಷೇತ್ರದಲ್ಲೇ ಕೋಟ್ಯಂತರ ರೂ. ಮೌಲ್ಯದ ಜಮೀನುಗಳನ್ನು ಅಕ್ರಮ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಾರೆ. ಇದರಲ್ಲಿ ಇಬ್ಬರು ಸಚಿವರೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಹಿಂದೂಗಳ ಹತ್ಯೆ ನಡೆಯುತ್ತಿದ್ದರೂ ಸಿದ್ಧರಾಮಯ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಕರ್ನಾಟಕದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲವಾಗಿದೆ ಎಂದು ಹರಿಹಾಯ್ದರು.
ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಗಜಕೇಸರಿ ಯೋಗ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮೂಲಕ ವ್ಯಾಪಾರಸ್ಥರಿಂದ ಹಣ ವಸೂಲಿ ಮಾಡಿದ್ದಾರೆ. ಈ ಅಕ್ರಮದ ತನಿಖೆ ನಡೆಸುವಂತೆ ನಾನು ಈಗಾಗಲೇ ಲೋಕಾಯುಕ್ತಕ್ಕೆ ಪತ್ರ ಬರೆದಿದ್ದೇನೆ. ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಸುವ ಜಾಲವನ್ನು ಸರ್ಕಾರ ಮಟ್ಟ ಹಾಕಬೇಕು. ಇಡೀ ಪ್ರಕರಣದ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ನಿಗಮದಲ್ಲಿ ದಲಿತರಿಗೆ ಸೇರಬೇಕಿದ್ದ ಅನುದಾನದಲ್ಲಿ 187 ಕೋಟಿ ರೂ. ವಂಚಿಸಿ, ಹಗರಣ ಮಾಡಿದ್ದಾರೆ. ರಾಜ್ಯದ ಎಸ್ಪಿ ಜನರ ಅಭಿವೃದ್ಧಿಗೆ ಸೇರಬೇಕಿದ್ದ ಹಣ ಆಂಧ್ರದ ಬ್ಯಾಂಕ್‍ಗಳಲ್ಲಿ 18 ನಕಲಿ ಖಾತೆಗಳಿಗೆ ಜಮೆಯಾಗಿದೆ. ಚಿನ್ನ, ಪೆಟ್ರೋಲ್, ಪೆಟ್ರೋಲ್ ಬಂಕ್ ಮಾಲೀಕರ ಖಾತೆಗಳಿಗೆ ಹೋಗಿದೆ ಎಂದು ದೂರಿದರು.
ಪ್ರಧಾನಿಯಾಗಿದ್ದ ನೆಹರು ಅವರು 12 ಲಕ್ಷ ಎಕರೆ ಜಮೀನನನ್ನು ವಕ್ಫ್ ಗೆ ಆಸ್ತಿ ಮಾಡಿದ್ದು, ನ್ಯಾಯಾಲಯಕ್ಕೆ ಹೋದರೂ ನ್ಯಾಯ ಸಿಗುವ ವಿಶ್ವಾಸವಿಲ್ಲ. ಹೀಗಾಗಿ ನಮಗೆ ನೆಹರು ಮಾದರಿ ಬೇಕಿಲ್ಲ, ಪ್ರಧಾನಿ ನರೇಂದ್ರ ಮೋದಿ ಯೋಜನೆ ಬೇಕು ಎಂದರು.
ವಿಜಯಪುರದಲ್ಲಿ ವಕ್ಫ್ ಆಸ್ತಿ ಕುರಿತು ಹೈಕೋರ್ಟ್ ಮೊರೆ ಹೋಗುತ್ತೇನೆ ಎಂದ ಯತ್ನಾಳ, ದೇಶದ ವಕ್ಫ್ ಹೆಸರಿನಲ್ಲಿರುವ ಆಸ್ತಿಯನ್ನು ಸರ್ಕಾರ ಬಡವರಿಗೆ ಹಂಚಬೇಕು. ಬಡವರಿಗೆ ನಿವೇಶನ ಮಾಡಿ ಹಂಚಬೇಕು, ಮನೆ ನಿರ್ಮಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಸಂವಿಧಾನ ಬದಲಾವಣೆ ಇಲ್ಲ: ಬಿಜೆಪಿ ಸರ್ಕಾರ ಎಂದಿಗೂ ಸಂವಿಧಾನ ಬದಲಾವಣೆ ಮಾಡುವುದಿಲ್ಲ. ಸೂರ್ಯ-ಚಂದ್ರ ಇರುವವರೆಗೂ ಸಂವಿಧಾನ ಬದಲಾವಣೆ ಮಾಡದೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾರ್ಗದಲ್ಲೇ ನಡೆಯುತ್ತೇವೆ ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.