ಗುಮ್ಮಟನಗರಿ ಕೈ ವಶಕ್ಕೆ ಕಮಲ ಪಡೆ ಯತ್ನ
Team Udayavani, Apr 3, 2018, 1:05 PM IST
ವಿಜಯಪುರ: ವಿಜಯಪುರ ನಗರ ಕ್ಷೇತ್ರ ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ಆದಿಲ್‌ಶಾಹಿ ಅರಸರ ರಾಜಧಾನಿ. ವಿಶ್ವಖ್ಯಾತಿಯ ಐತಿಹಾಸಿಕ ಬೃಹತ್ ಸ್ಮಾರಕ ಗೋಲಗುಮ್ಮಟ, ಬಿಳಿತಾಜ್ ನಿರ್ಮಾಣಕ್ಕೆ ಪ್ರೇರಣೆ ನೀಡಿದ ಕರಿತಾಜ್ ಎಂದೇ ಕರೆಸಿಕೊಳ್ಳುವ ಇಬ್ರಾಹೀಂರೋಜಾ, ಬಾರಾಕಮಾನ್ ಸೇರಿದಂತೆ ಅದ್ಭುತವಾದ ನೂರಾರು ಸ್ಮಾರಕಗಳನ್ನು ಒಡಲಲ್ಲಿ ಇರಿಸಿಕೊಂಡಿರುವ ಪ್ರವಾಸೋದ್ಯಮ ನಗರವೂ ಹೌದು. ಇಂಥ ವಿಶೇಷತೆಗಳುಳ್ಳ ವಿಜಯಪುರ ನಗರ ವಶಕ್ಕೆ ಪಡೆಯಲು ಪ್ರತಿ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿರುವುದು ಸಾಮಾನ್ಯವಾಗಿದೆ.
ಈ ಬಾರಿ ವಿಧಾನಸಭೆ ಚುನಾವಣೆ ಕಳೆದ ಎಲ್ಲ ಚುನಾವಣೆಗಳಿಗಿಂತ ಭಿನ್ನವಾಗಿದೆ. ಕಾಂಗ್ರೆಸ್ ಶಾಸಕ ಎಂ.ಎಸ್. ಬಾಗವಾನಗೆ ಸ್ವಪಕ್ಷದವರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. 2004 ಮತ್ತು 2008ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯ ಅಪ್ಪು ಪಟ್ಟಣಶೆಟ್ಟಿ ಬಿಜೆಪಿ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದು, ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಸಹ ಬಿಜೆಪಿ ಟಿಕೆಟ್‌ಗೆ ಪ್ರಯತ್ನಿಸುತ್ತಿರುವುದು
ಕದನ ಕುತೂಹಲಕ್ಕೆ ಕಾರಣವಾಗಿದೆ.
ರಾಜಕೀಯಕ್ಕೆ ಹೊಸಬರಾದರೂ ವಿಜಯಪುರ ನಗರ ಕ್ಷೇತ್ರದಲ್ಲಿ ಹತ್ತಾರು ಪ್ರಬಲರ ಟಿಕೆಟ್ ಪೈಪೋಟಿ ಮಧ್ಯೆಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಯೇ ಗೆಲುವು ಸಾಧಿಸಿದವರು ಡಾ| ಎಂ.ಎಸ್. ಬಾಗವಾನ. ಅಸಮಾಧಾನಗಳನ್ನೆಲ್ಲ ಶಮನ ಮಾಡಿ ಗೆದ್ದ ಅದೃಷ್ಟವಂತ ಶಾಸಕರೂ ಹೌದು. ಮೊದಲ ಅವ ಧಿಯಲ್ಲೇ ನಗರಾಭಿವೃದ್ಧಿ ಇಲಾಖೆ ಸಂಸದೀಯ ಕಾರ್ಯದರ್ಶಿ ಹುದ್ದೆಯ ಭಾಗ್ಯ ಪಡೆದ ನಾಯಕ ಎಂದೂ ಕೆಲವರು ಕರೆದರು. ಆದರೆ ಕ್ಷೇತ್ರಕ್ಕೆ ಮಾತ್ರ ಅಭಿವೃದ್ಧಿಯ ಅದೃಷ್ಟದ ಭಾಗ್ಯ ದೊರೆತಿಲ್ಲ ಎಂಬ ಕೊರಗಿದೆ.
ವಿಜಯಪುರ ನಗರ ಕ್ಷೇತ್ರ ಕಾಂಗ್ರೆಸ್ ಮಟ್ಟಿಗೆ ಮುಸ್ಲಿಂ ಸಮುದಾಯಕ್ಕೆ ಇಲ್ಲಿ ಟಿಕೆಟ್ ಖಾತ್ರಿ ಮಾಡಿರುವ ಕ್ಷೇತ್ರ. ಇಸ್ಲಾಂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಕಳೆದ ನಾಲ್ಕಾರು ದಶಕಗಳಿಂದ ಕಾಂಗ್ರೆಸ್ ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದೆ.
ವಿಜಯಪುರ ನಗರ ಕ್ಷೇತ್ರ ನಿರೀಕ್ಷೆಗಳು ಕೂಡ ಗೋಲಗುಮ್ಮಟದಂತೆ ದೊಡrದಾಗಿಯೇ ಇದ್ದವು. ಆದರೆ ಶಾಸಕ ಬಾಗವಾನ ನಿರೀಕ್ಷೆಗೆ ತಕ್ಕಂತೆ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ. ಶಾಸಕ ಸ್ಥಾನದ ಜವಾಬ್ದಾರಿ ಏನೆಂಬುವುದನ್ನೇ ಹಾಲಿ ಶಾಸಕರು ಅರಿಯಲಿಲ್ಲ ಎಂಬ ಆರೋಪದ ಮಧ್ಯೆಯೇ ಮತ್ತೂಂದು ಚುನಾವಣೆ ಎದುರಾಗಿದೆ.
ಪಕ್ಷ ಕಟ್ಟಿದವರ ದೂರ ಮಾಡಿಕೊಂಡ ಕಾರಣ ಎರಡನೇ ಅವಧಿಗೆ ಅವರ ಸ್ಪರ್ಧೆ ಹಾಗೂ ಗೆಲುವು ದೂರ ಕೊಂಡೊಯ್ಯುತ್ತಿದೆ. ಗೆಲುವಿನ ಮಾತಿರಲಿ ಪಕ್ಷದ ಟಿಕೆಟ್ ಕೈ ತಪ್ಪಿಸುವ ಮಟ್ಟಿಗೆ ಸ್ವಪಕ್ಷೀಯರ ಆಂತರಿಕ ವಿರೋಧ ಎದುರಿಸುವ ಮಟ್ಟಕ್ಕೆ ಬಂದಿದೆ.ಆದರೆ ಹಾಲಿ ಶಾಸಕರಿಗೆ ಟಿಕೆಟ್ ಖಾತ್ರಿ ಇರುವ ಕಾರಣ ನಾನೇ ಕಾಂಗ್ರೆಸ್ ಅಭ್ಯರ್ಥಿ ಎಂಬ ಅದಮ್ಯ ವಿಶ್ವಾಸ ಡಾ| ಬಾಗವಾನ ಅವರದು.
ಇತ್ತ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ರೈಲ್ವೆ ಹಾಗೂ ಜವಳಿ ಸಚಿವರಾಗಿದ್ದ ಬಸನಗೌಡ ಪಾಟೀಲ ಯತ್ನಾಳ ನಗರ ಕ್ಷೇತ್ರದಲ್ಲಿ ಪ್ರಭಾವಿ ಅಭ್ಯರ್ಥಿಯೂ ಹೌದು. ಸಿಎಂ ಆಗಿದ್ದ ಯಡಿಯೂರಪ್ಪ ಅವರ ವಿರುದ್ಧ ಮಾತನಾಡಿ ಬಿಜೆಪಿಯಿಂದ ಉಚ್ಛಾಟನೆಗೊಂಡು ಬದಲಾದ ಕಾಲಘಟ್ಟದಲ್ಲಿ ಜೆಡಿಎಸ್ ಸೇರಿದ್ದರು.
ಕಳೆದ ಚುನಾವಣೆಯಲ್ಲಿ ತಮ್ಮ ಪ್ರಭಾವ ಒರೆಗೆ ಹಚ್ಚಲು ಸಾಧ್ಯವಾಗದೇ ಸೋತಿದ್ದ ಯತ್ನಾಳ ಬಳಿಕ ಬಿಜೆಪಿಗೆ ಮರಳಿದ್ದರು. ಸ್ಥಳೀಯ ಸಂಸ್ಥೆ ಮೇಲ್ಮನೆ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದರೂ ಬಿಜೆಪಿ ಅವರನ್ನು ಉಚ್ಛಾಟಿಸಿದೆ. ಇದೀಗ ಮತ್ತೆ ಬಿಜೆಪಿ ಸೇರಲು ಮುಂದಾಗಿರುವ ಯತ್ನಾಳ ಟಿಕೆಟ್ ನನಗೆ ಖಾತ್ರಿ ಎಂಬ ವಿಶ್ವಾಸವೂ ಇದೆ ಎನ್ನುತ್ತಾರೆ. ಟಿಕೆಟ್ ಸಿಗದಿದ್ದರೂ ಪಕ್ಷೇತರರಾಗಿ ಸ್ಪರ್ಧೆ ಖಚಿತ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಇತ್ತ ಬಿಜೆಪಿ ಅಭ್ಯರ್ಥಿಯಾಗಲು ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾದ ನನ್ನನ್ನು ಪರಿಗಣಿಸುತ್ತದೆ. ಬಿಜೆಪಿ ಪಕ್ಷ ಕಟ್ಟುವಲ್ಲಿ ಅದರಲ್ಲೂ ತಮ್ಮನ್ನು ತಾವು ಪ್ರಭಾವಿ ಎಂದೇ ಕರೆದುಕೊಳ್ಳುವ ಯತ್ನಾಳ ಅವರು ಇಲ್ಲದೇ ಇದ್ದರೂ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸಾಮರ್ಥ್ಯ ತೋರಿಸಿದ್ದೇವೆ. ಹೀಗಾಗಿ ಬಸನಗೌಡ ಪಾಟೀಲ ಯತ್ನಾಳ ಅವರು ಪಕ್ಷಕ್ಕೆ ಮರು ಸೇರ್ಪಡೆ ಅಗತ್ಯವಿಲ್ಲ ಎಂದು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇತ್ತ ಜೆಡಿಎಸ್ ಪಕ್ಷ ಕೂಡ ಮುಸ್ಲಿಂ ಸಮುದಾಯಕ್ಕೆ ಮಣೆ ಹಾಕಲು ಮುಂದಾಗಿದ್ದು, ದಿಲಾವರ ಖಾಜಿ, ಮಾಜಿ ಸಚಿವ ಎಂ.ಎಲ್. ಉಸ್ತಾದ್ ಅವರ ಸಹೋದರ ಎಲ್.ಎಲ್. ಉಸ್ತಾದ್ ಟಿಕೆಟ್ ಪಡೆಯಲು ಪೈಪೋಟಿಗೆ ಬಿದ್ದಿದ್ದಾರೆ. ಒಂದೊಮ್ಮೆ ಯತ್ನಾಳ ಅವರು ಬಿಜೆಪಿ ಸೇರಿ ಟಿಕೆಟ್ ತಂದರೆ ಅಪ್ಪು ಪಟ್ಟಣಶೆಟ್ಟಿ ಜೆಡಿಎಸ್ ಟಿಕೆಟ್ ತರುವ ಸಾಧ್ಯತೆ ಇದೆ ಎನ್ನಲಾಗಿದೆ. ಡಾ| ಎಂ.ಎಸ್. ಬಾಗವಾನ ಸೇರಿ ಮುಸ್ಲಿಂ ಸಮುದಾಯದ ಪ್ರಬಲರು ಇಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ಕಣಕ್ಕಿಳಿದರೆ ಬಿಜೆಪಿ ಗೆಲುವು ಖಚಿತ. ಇಬ್ಬರು ಹಿಂದೂಗಳು ಅದರಲ್ಲೂ ಯತ್ನಾಳ, ಅಪ್ಪು ಪಟ್ಟಣಶೆಟ್ಟಿ ಸೇರಿ ಇತರರು ಕಣಕ್ಕಿಳಿದರೆ ಕಾಂಗ್ರೆಸ್ ಗೆಲುವು ಖಚಿತ ಎಂಬುದು ಈ ಕ್ಷೇತ್ರದ ಜನತೆಯ ಮಾತು.
ಕ್ಷೇತ್ರದ ಬೆಸ್ಟ್ ಏನು?
ವಿಜಯಪುರ ನಗರಸಭೆ ವ್ಯಾಪ್ತಿಯಿಂದ ಮಹಾನಗರ ಪಾಲಿಕೆ ಮೇಲ್ದರ್ಜೆಗೆ ಏರಿಕೆ. ಶಿವಾಜಿ ವೃತ್ತದಿಂದ ಡಾ| ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದವರೆಗೆ ಮಾಸ್ಟರ್ ಪ್ಲಾನ್ ಅನುಷ್ಠಾನ. ನಗರದಲ್ಲಿ ಸಂಚಾರ ದಟ್ಟಣೆ ನೀಗಲು ನವಬಾಗ, ಇಂಡಿ ರಸ್ತೆ-ಬಿಎಲ್‌ಡಿಇ, ಜಿಪಂ ಹಿಂಭಾಗದಿಂದ ಜುಮ್ಮಾ ಮಜೀದ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳ ನಿರ್ಮಾಣ. ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಗಲ್ಲಿ ರಸ್ತೆಗಳ ಸಿಸಿ ಹಾಗೂ ಡಾಂಬರೀಕರಣ. ನಗರದ 21 ವಾರ್ಡ್‌ಗಳಿಗೆ 24×7 ಕುಡಿಯುವ ನೀರಿನ ವ್ಯವಸ್ಥೆ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಚಾಲನೆ, ಅಮೃತ ಯೋಜನೆ ಅನುಷ್ಠಾನದಲ್ಲಿ 231 ಕೋಟಿ ರೂ. ಅನುದಾನ, ಮದರ್ ಹೆಲ್ತ್ ಕೇರ್ ಕೇಂದ್ರ ಅನುಷ್ಠಾನ. ಒಳಚರಂಡಿ ವ್ಯವಸ್ಥೆ. ಬೇಗಂತಾಲಾಬ್, ಭೂತನಾಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ.
ಕ್ಷೇತ್ರದ ದೊಡ್ಡ ಸಮಸ್ಯೆ?
ವಿಶ್ವ ಖ್ಯಾತಿಯ ಗೋಲಗುಮ್ಮಟ ಪಾರಂಪರಿಕ ಪಟ್ಟಿಗೆ ಸೇರಿಸುವ ಕನಸು ನನಸಾಗಲಿಲ್ಲ. ಪ್ರವಾಸೋದ್ಯಮಕ್ಕೆ ಒತ್ತು ನೀಡುವ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ರೆಕ್ಕೆ ಬಿಚ್ಚಲಿಲ್ಲ. ಅಕ್ಕಮಹಾದೇವಿ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ವಿಫಲ. ಸೈಕ್ಲಿಸ್ಟ್‌ಗಳ ಅನುಕೂಲಕ್ಕಾಗಿ ವೆಲೋಡ್ರೋಂ ಕಾಮಗಾರಿ ನನೆಗುದಿಗೆ. ಮಂಜೂರಾಗಿದ್ದ ನಾಲ್ಕಾರು ಈಜುಗೊಳಗಳು ಆರಂಭಗೊಳ್ಳಲೇ ಇಲ್ಲ. ಉದ್ಯೋಗಸ್ಥ ಮಹಿಳೆಯರ ವಸತಿ ಕೇಂದ್ರ ಸ್ಥಾಪನೆ ಆಗಲಿಲ್ಲ. ವಿದ್ಯಾರ್ಥಿಗಳ ಅನುದಾನಕ್ಕೆ ತಕ್ಕಂತೆ ಹಾಸ್ಟೆಲ್ ಬರಲಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ನಗರದ ಎಲ್ಲೆಡೆ ತೋಡಿರುವ ರಸ್ತೆಗಳು ಸುಧಾರಿಸಲೇ ಇಲ್ಲ. ಪ್ರತಿ ವರ್ಷ ನವರಸಪುರ ಉತ್ಸವ ಆಚರಣೆ ಜಾರಿಗೆ ಬರಲಿಲ್ಲ.
ಕ್ಷೇತ್ರ ಮಹಿಮೆ
1957ರಲ್ಲಿ ಮೊದಲ ಚುನಾವಣೆಯಿಂದ ಚುನಾವಣೆ ಎದುರಾದಾಗ ಸ್ಪರ್ಧೆಯಲ್ಲಿದ್ದ ಮೊದಲ ಅವಧಿಯಲ್ಲೇ ಕಾಂಗ್ರೆಸ್ ಅಭ್ಯರ್ಥಿ ಮಹಾಲದಾರ ಗೌಸ್ ಮೊಹಿದ್ದೀನ್ ಅವರನ್ನು ಸೋಲಿಸಿ ಐಎನ್‌ಡಿ ಪಕ್ಷದ ಡಾ| ಸರದಾರ ಬಸವರಾಜ ನಾಗೂರ ಗೆದ್ದರೂ ನಗರದ ಕ್ಷೇತ್ರ ಕಾಂಗ್ರೆಸ್ ಭದ್ರ ಕೋಟೆ ಎನಿಸಿತ್ತು. ನಂತರ ನಡೆದ ಮೂರು ಚುನಾವಣೆಗಳಲ್ಲಿ 1972ರವರೆಗೆ ಕಾಂಗ್ರೆಸ್‌ನ ರೇವಣಸಿದ್ದಪ್ಪ ನಾವದಗಿ, ಪಿ.ಬಿ. ಮಲ್ಲನಗೌಡ, ಕೆ.ಟಿ. ರಾಠೊಡ ಗೆದ್ದಿದ್ದರು. 1978ರಲ್ಲಿ ಜೆಎನ್‌ಪಿ ಪಕ್ಷದ ಸೈಯದ್ ಹಬೀಬುದ್ದೀನ್ ಭಕ್ಷಿ ಆಯ್ಕೆ ಆಗುವ ಮೂಲಕ ಕ್ಷೇತ್ರದಲ್ಲಿ ಆಯ್ಕೆಯಾದ ಮೊದಲ ಮುಸ್ಲಿಂ ಶಾಸಕ ಎನಿಸಿದರು. 1983ರಲ್ಲಿ ಜನತಾ ಪಕ್ಷದ ಚಂದ್ರಶೇಖರ ಗಚ್ಚಿನಮಠ ಗೆದ್ದರೆ, 1985ರಲ್ಲಿ ಗೆದ್ದಿದ್ದ ಕಾಂಗ್ರೆಸ್‌ನ ಉಸ್ತಾದ ಮಹಬೂಬ ಪಟೇಲ್ 1989ರಲ್ಲೂ ಆಯ್ಕೆಯಾಗಿದ್ದರು.1994ರಲ್ಲಿ ಬಸನಗೌಡ ಪಾಟೀಲ ಯತ್ನಾಳ ಮೂಲಕ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದರೆ, 1999ರಲ್ಲಿ ಯತ್ನಾಳ ಅವರನ್ನು ಸೋಲಿಸಿ ಉಸ್ತಾದ್ ಅವರು ಸೇಡು ತೀರಿಸಿಕೊಂಡರು. 2004 ಹಾಗೂ 2008ರಲ್ಲಿ ಅಪ್ಪು ಪಟ್ಟಣಶೆಟ್ಟಿ ಸತತ ಎರಡು ಬಾರಿ ಗೆದ್ದು ಬಿಗಿದ್ದರು. ಕಳೆದ ಬಾರಿ ಕಾಂಗ್ರೆಸ್‌ನ ಡಾ| ಎಂ.ಎಸ್. ಬಾಗವಾನ ಗೆದ್ದು ಹ್ಯಾಟ್ರಿಕ್ ಸಾಧಿ ಸುವ ಬಿಜೆಪಿ ಕನಸಿನ ರೆಕ್ಕೆ ಕತ್ತರಿಸಿದ್ದರು.
ನಗರದಲ್ಲಿ ಸಾರಿಗೆ ವ್ಯವಸ್ಥೆ ಸರಿಯಾಗಿ ಕಲ್ಪಿಸಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಗರದಲ್ಲಿ ಹೆಚ್ಚುತ್ತಿರುವ ಕಳ್ಳರ ಹಾವಳಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಗಮನ ಹರಿಸಲೇ ಇಲ್ಲ.
ಸ್ವಪ್ನಾ ದಳವಿ, ಕಸ್ತೂರಿ ಕಾಲೋನಿ, ವಿಜಯಪುರ
ಕುಡಿಯುವ ನೀರಿನ ಸಮಸ್ಯೆ, ಹದಗೆಟ್ಟ ರಸ್ತೆಗಳ ದುರಸ್ತಿಗೆ ಗಮನ ಹರಿಸಲಿಲ್ಲ. ಕನಿಷ್ಠ ಗಲ್ಲಿಗಳಲ್ಲಿ ತುಂಬಿಕೊಂಡ ಕಸದ ತೊಟ್ಟಿಗಳ ನಿಯಮಿತ ವಿಲೇವಾರಿಗೂ ಕ್ರಮವಾಗಲಿಲ್ಲ. ಪರಿಣಾಮ ವಿಜಯಪುರ ನರಕದ ನಗರ ಎಂಬ ಕುಖ್ಯಾತಿ ಪಡೆಯುವಂತಾಗಿದೆ.
ಸುನಂದಾ ಪಾಟೀಲ, ಸುಭಾಷ್ ಕಾಲೋನಿ, ವಿಜಯಪುರ
ರಸ್ತೆಗಳಿಲ್ಲದ ಊರು ಎಂದರೆ ಅದು ವಿಜಯಪುರ ನಗರ ಮಾತ್ರ. ಕುಡಿಯುವ ನೀರು 24×7 ಎಂದಿದ್ದರೂ ಏಳು ದಿನ ಕಳೆದರೂ ನೀರು ಬರಲ್ಲ. ಖಾಸಗಿಯವರಿಂದ ಶುದ್ಧೀಕರಣ ನೀರು ತಂದು ಕುಡಿಯುವ ದುಸ್ಥಿತಿಗೆ ನಗರ ಶಾಸಕರೇ ಕಾರಣ.
ಲತಾ ಚವ್ಹಾಣ, ಕಿತ್ತೂರ ಚನ್ನಮ್ಮ ನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.