ಕಾಂಗ್ರೆಸ್ ಬಾಗಿಲು ಬಡಿದ ರವಿಕಾಂತ ಪಾಟೀಲ
1999ರಲ್ಲಿ ಜನತಾದಳ ಪಕ್ಷದಿಂದ ವಿಜಯಪುರ ಲೋಕಸಭೆಗೂ ಸ್ಪರ್ಧಿಸಿ ಸೋಲುಂಡಿದ್ದರು.
Team Udayavani, Mar 1, 2021, 6:30 PM IST
ವಿಜಯಪುರ: ಇಂಡಿ ಕ್ಷೇತ್ರದ ಮಾಜಿ ಶಾಸಕ ರವಿಕಾಂತ ಪಾಟೀಲ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿದ್ದು, ಕಾಂಗ್ರೆಸ್ ಸೇರ್ಪಡೆ ಆಸಕ್ತಿ ತೋರಿದ್ದಾರೆ. ಮಾಜಿ ಸಚಿವ ಹಾಗೂ ಹಾಲಿ ಜೆಡಿಎಸ್ ಶಾಸಕರಾಗಿದ್ದ ಎಂ.ಸಿ. ಮನಗೂಳಿ ನಿಧನದಿಂದ ತೆರವಾಗಿರುವ ಸಿಂದಗಿ ಕ್ಷೇತ್ರದ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ಕೈ ಹಿಡಿಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ರಾಜ್ಯ ರಾಜಕೀಯ ಇತಿಹಾಸದಲ್ಲೇ ಒಂದೇ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷೇತರನಾಗಿ ಹ್ಯಾಟ್ರಿಕ್ ವಿಜಯ ಸಾಧಿಸಿದ್ದ ರವಿಕಾಂತ ಪಾಟೀಲ ವಿಧಾನಸಭೆ ಪ್ರವೇಶಿಸಿದ ನಾಯಕ ಎಂಬ ಖ್ಯಾತಿ ಹೊಂದಿದ್ದರು. ಆದರೆ ನಂತರದ ರಾಜಕೀಯ ಬೆಳವಣಿಗೆಯಲ್ಲಿ ನಿರಂತರ ಮೂರು ಸೋಲು ಕಂಡು ಒಂದೂವರೆ ದಶಕದಿಂದ ರಾಜಕೀಯ ಅತಂತ್ರದಲ್ಲಿದ್ದಾರೆ.
ಹೀಗಾಗಿ ಮತ್ತೆ ರಾಜಕೀಯ ಅಧಿಕಾರದ ಶಕ್ತಿ ಪಡೆಯಲು ಹವಣಿಸುತ್ತಿದ್ದು, ಜಿಲ್ಲೆಯಲ್ಲಿ ಸದ್ಯದಲ್ಲೇ ಎದುರಾಗಲಿರುವ ಸಿಂದಗಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಚಿಂತನೆ ನಡೆಸಿದ್ದಾರೆ.
ಅವಿಭಜಿತ ಇಂಡಿ ತಾಲೂಕಿನ ಸಾತಲಗಾಂವ ಪಿ.ಬಿ. ಮೂಲದ ರವಿಕಾಂತ ಹುಟ್ಟಿ ಬೆಳೆದುದೆಲ್ಲ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ. ವರ್ಣರಂಜಿತ ವ್ಯಕ್ತಿತ್ವದಿಂದ ಹೆಸರು ಮಾಡಿದ್ದ ಯುವಕ ರವಿಕಾಂತ ತವರು ನೆಲಕ್ಕೆ ಮರಳಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು.
1994ರಲ್ಲಿ ನೋಡ ನೋಡುತ್ತಿದ್ದಂತೆ ಇಂಡಿ ವಿಧಾನಸಭೆ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿ ವಿಜಯ ಸಾಧಿಸಿದ್ದರು. ಬಳಿಕ 1999, 2004ರಲ್ಲಿ ಪಕ್ಷೇತರರಾಗಿ ಇಂಡಿ ಕ್ಷೇತ್ರದಲ್ಲಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಇದರಲ್ಲಿ ಒಂದು ಬಾರಿ ಜೈಲಿನಲ್ಲಿದ್ದರೂ ಸ್ಪ ರ್ಧಿಸಿ ವಿಜಯ ಸಾಧಿಸಿದ್ದು ವಿಶೇಷ.
ಇದಲ್ಲದೇ ಪಕ್ಷೇತರ ಶಾಸಕರಾಗಿದ್ದರೂ 1999ರಲ್ಲಿ ಜನತಾದಳ ಪಕ್ಷದಿಂದ ವಿಜಯಪುರ ಲೋಕಸಭೆಗೂ ಸ್ಪರ್ಧಿಸಿ ಸೋಲುಂಡಿದ್ದರು.
ಬಳಿಕ 2008ರಲ್ಲಿ ಮತ್ತೆ ಪಕ್ಷೇತರರಾಗಿ ಸ್ಪರ್ಧಿಸಿದರೂ ಬಿಜೆಪಿ ಅಭ್ಯರ್ಥಿ ಡಾ| ಸೌರ್ವಭೌಮ ಬಗಲಿ ವಿರುದ್ಧ ಸೋಲು ಅನುಭವಿಸಬೇಕಾಯಿತು. 2013ರಲ್ಲಿ ಕೆಜೆಪಿ, 2018ರಲ್ಲಿ ಬಿಜೆಪಿ ಟಿಕೆಟ್ ನಿರೀಕ್ಷೆ ಹುಸಿಯಾಗಿ ಮತ್ತೆ ಪಕ್ಷೇತರರಾಗಿ ಸ್ಪ ರ್ಧಿಸಿ ಯಶವಂತರಾಯಗೌಡ ಪಾಟೀಲ ವಿರುದ್ಧ ಎರಡು ಬಾರಿ ಪರಾಭವಗೊಂಡಿದ್ದರು.ಈ ಮಧ್ಯೆ 2017ರಲ್ಲಿ ಮಹಾರಾಷ್ಟ್ರದ ಸೊಲ್ಲಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ವಿಜಯ ಸಾಧಿಸಲು ಸಾಧ್ಯವಾಗಿರಲಿಲ್ಲ.
ಮಗನ ಬಲದ ಮೇಲೆ ಆಸರೆ: ಹೀಗೆ ಸತತ ಸೋಲುಗಳಿಂದಾಗಿ ಕಳೆದ ಒಂದೂವರೆ ದಶಕದಿಂದ ಹಿನ್ನಡೆ ಅನುಭವಿಸುತ್ತಿರುವ ರವಿಕಾಂತ ಜಿಲ್ಲೆಯ ರಾಜಕೀಯ
ಇತಿಹಾಸದಲ್ಲಿ ಮತ್ತೆ ತಮ್ಮ ಛಾಪು ಮೂಡಿಸಲು ಹೆಣಗುತ್ತಿದ್ದಾರೆ. ಇದೀಗ ಸಿಂದಗಿ ಉಪ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಪಂಚಮಸಾಲಿ ಸಮುದಾಯದ 2ಎ ಮೀಸಲು ಹೋರಾಟದ ಕಿಚ್ಚು ಹೆಚ್ಚಿದೆ.
ರವಿಕಾಂತ ಪುತ್ರ ವಿರಾಜ್ ಪಾಟೀಲ ಕೂಡಲಸಂಗಮದಿಂದ ಬೆಂಗಳೂರುವರೆಗೆ ಪಾದಯಾತ್ರೆ ಮುಂಚೂಣಿಯಲ್ಲೇ ಇದ್ದಾರೆ. ತಮ್ಮ ಸಮುದಾಯದ ಮತಗಳು ಹೆಚ್ಚಿರುವ ಕಾರಣ ಸಿಂದಗಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಇದು ನೆರವಿಗೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಹೀಗಾಗಿಯೇ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಕಾಂಗ್ರೆಸ್ ಸೇರ್ಪಡೆ ಕುರಿತು ಮಾತುಕತೆ ನಡೆಸಿದ್ದಾರೆ.
ಬೇಷರತ್ತಾಗಿ ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ ತೋರಿದ್ದರೂ ಡಿ.ಕೆ. ಶಿವಕುಮಾರ ಯಾವ ಭರವಸೆಯನ್ನೂ ನೀಡಿಲ್ಲ. ಸಿಂದಗಿ ಉಪ ಚುನಾವಣೆಯಲ್ಲಿ ಎಂ.ಸಿ. ಮನಗೂಳಿ ಪುತ್ರರಲ್ಲಿ ಒಬ್ಬರ “ಕೈ’ ಹಿಡಿದು ಸ್ಪರ್ಧೆಗೆ ಇಳಿಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪತಾಕೆ ಹಾರಿಸಲು ಪಕ್ಷದ ಹಿರಿತಲೆಗಳ ಒಂದು ಗುಂಪು ಕೂಡ ಚಿಂತನೆ ನಡೆಸಿದೆ. ಅದಕ್ಕೂ ಮೊದಲೇ ರವಿಕಾಂತ ಪಾಟೀಲ ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ ತೋರಿ ಕೆಪಿಸಿಸಿ ಅಧ್ಯಕ್ಷರ ಡಿ.ಕೆ. ಶಿವಕುಮಾರ ಅವರನ್ನು ಭೇಟಿ
ಮಾಡಿರುವುದು ಕುತೂಹಲ ಮೂಡಿಸಿದೆ.
ಬಿಜೆಪಿ ಸಹವಾಸ ಮಾಡಿ ಹಾಳಾಗಿರುವ ನಾನು ಯಡಿಯೂರಪ್ಪ ಅವರನ್ನು ನಂಬಿ ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ. ನನ್ನ ಪಾಡಿಗೆ ನಾನು ರಾಜಕೀಯ ಮಾಡಿಕೊಂಡಿದ್ದರೆ ಮತ್ತೆ ಮೂರು ಬಾರಿ ಶಾಸಕನಾಗಿರುತ್ತಿದ್ದೆ. ಆಗಿರುವ ಲೋಪ ಸರಿಪಡಿಸಿಕೊಳ್ಳಲು ಬೇಷರತ್ತಾಗಿ ಕಾಂಗ್ರೆಸ್ ಸೇರ್ಪಡೆಗೆ ಡಿಕೆಶಿ ಭೇಟಿ ಮಾಡಿ ಮನವಿ ಮಾಡಿದ್ದೇನೆ. ಯಾವ ಕ್ಷೇತ್ರಕ್ಕೂ ನಾನು ಟಿಕೆಟ್ ಕೇಳಿಲ್ಲ. ಕಾಂಗ್ರೆಸ್ ಸೇರ್ಪಡೆ ಖಚಿತವಾದರೂ ಯಾವ ದಿನ ಎಂಬುದು ಸ್ಪಷ್ಟವಾಗಿಲ್ಲ.
ರವಿಕಾಂತ ಪಾಟೀಲ, ಮಾಜಿ ಶಾಸಕ, ಇಂಡಿ
ಜಿ.ಎಸ್.ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.