ನೌಕರರ ನೇಮಕಾತಿ ರದ್ದತಿಗೆ ಆಗ್ರಹ
Team Udayavani, Oct 14, 2018, 2:54 PM IST
ಮುದ್ದೇಬಿಹಾಳ: ಸ್ಥಳೀಯ ಸಹಕಾರಿ ಬ್ಯಾಂಕ್ ಹಿರಿಯ ನಿರ್ದೇಶಕರೇ ಬ್ಯಾಂಕ್ ನೌಕರರ ನೇಮಕಾತಿ ಸಮಿತಿ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಇಲ್ಲಿನ ಬಸ್ ನಿಲ್ದಾಣ ಎದುರು ಇರುವ ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ಮುಂದೆ ಶನಿವಾರ ನಡೆದಿದೆ.
ಹಿರಿಯ ನಿರ್ದೇಶಕ ಹಾಗೂ ಪುರಸಭೆ ನೂತನ ಸದಸ್ಯ ಚನ್ನಪ್ಪ ಕಂಠಿ ಪ್ರತಿಭಟನೆ ನಡೆಸಿದವರಾಗಿದ್ದು ಸದ್ಯ ನಡೆಯುತ್ತಿರುವ ನೌಕರರ ನೇಮಕಾತಿ ರದ್ದುಪಡಿಸುವಂತೆ ಒತ್ತಾಯಿಸಿ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ
ಹಮ್ಮಿಕೊಂಡಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮಾರ್ಚ್‌ನಲ್ಲಿ ಬ್ಯಾಂಕಿನಲ್ಲಿ ಖಾಲಿ ಇರುವ 10 ಹುದ್ದೆಗಳಿಗೆ ನೌಕರರನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿತ್ತು. ಅರ್ಜಿ ಕರೆದ 6 ತಿಂಗಳಲ್ಲೇ ಆಯ್ಕೆ ಪ್ರಕ್ರಿಯೆ ಮುಗಿಸಬೇಕು ಎನ್ನುವ ನಿಯಮ ಮೀರಿ 8 ತಿಂಗಳಾದರೂ ಪ್ರಕ್ರಿಯೆ ಮುಗಿಸಿರಲಿಲ್ಲ. ನೌಕರರ ನೇಮಕಾತಿಗಾಗಿ ರಚಿಸಿದ್ದ ಸಮಿತಿಯಲ್ಲಿದ್ದ ಸದಸ್ಯ ವಿಜಯಪುರ ಡಿಸಿಸಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಸಿದ್ದಣ್ಣ ಬಿರಾದಾರ ಅವರ ಮಗ ಅರ್ಜಿ ಸಲ್ಲಿಸಿ ನಿಯಮ ಉಲ್ಲಂಘನೆ ಆಗಿದ್ದರೂ ಆಯ್ಕೆ ಸಮಿತಿ ಪರಿಗಣಿಸಿರಲಿಲ್ಲ. ಈ ಬಗ್ಗೆ ವಿಷಯ ಬಹಿರಂಗಗೊಂಡ ಮೇಲೆ ಸದಸ್ಯಸ್ಥಾನದಿಂದ ಸಿದ್ದಣ್ಣ ಅವರನ್ನು ಕಡಿಮೆ ಮಾಡಿದ ಕುರಿತು ಬ್ಯಾಂಕಿನ ನಿರ್ದೇಶಕರಿಗೆ ಮಾಹಿತಿಯನ್ನೂ ನೀಡಿರಲಿಲ್ಲ.
ಮೇಲಾಗಿ ಈ ಕುರಿತು ತಾವು ಸಲ್ಲಿಸಿದ್ದ ಲಿಖೀತ ಪತ್ರಕ್ಕೂ ನೇಮಕಾತಿ ಸಮಿತಿ ಕಾರ್ಯದರ್ಶಿ ಉತ್ತರ ನೀಡದೆ ಬೇಜವಾಬ್ದಾರಿತನ ಪ್ರದರ್ಶಿಸಿದ್ದರು ಎಂದು ಚನ್ನಪ್ಪ ಕಂಠಿ ತಿಳಿಸಿದರು.
ನೌಕರರ ನೇಮಕಾತಿ ಪ್ರಕ್ರಿಯೆ ರದ್ದುಪಡಿಸುವ ಕುರಿತು ಸಹಕಾರ ಇಲಾಖೆ ನಿಬಂಧಕರು, ಉಪ ನಿಬಂಧಕರು, ಸಹಾಯಕ ನಿಬಂಧಕರು ಮತ್ತು ನೇಮಕಾತಿ ಸಮಿತಿ ಸದಸ್ಯ ಸಹಕಾರ ಸಂಘಗಳ ಉಪ ನಿಬಂಧಕ ಪಿ.ಬಿ. ಕಾಳಗಿ ಮತ್ತಿತರರಿಗೆ 1-10-2018ರಂದು ಲಿಖೀತ ಮನವಿ ಸಲ್ಲಿಸಿದ್ದೆ.
ಈವರೆಗೂ ಉತ್ತರ ನೀಡದ ಕಾರಣ ಅ. 13ರಂದು ಬ್ಯಾಂಕಿನ ಸಭಾ ಭವನದಲ್ಲಿ ನಡೆಯುವ ಸಂದರ್ಶನ ವೇಳೆ ಪ್ರತಿಭಟನೆ ನಡೆಸುವುದಾಗಿ ಅ. 12ರಂದೇ ನೇಮಕಾತಿ ಸಮಿತಿ ಕಾರ್ಯದರ್ಶಿಗೆ ಲಿಖೀತ ಮಾಹಿತಿ ನೀಡಿದ್ದೆ. ಅದರಂತೆ ಪ್ರತಿಭಟನೆ ಹಮ್ಮಿಕೊಂಡಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ನೇಮಕಾತಿ ಪ್ರಕ್ರಿಯೆಗಾಗಿ ನಡೆದ ಲಿಖೀತ ಪರೀಕ್ಷೆಯಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಹೆಚ್ಚು ಅಂಕ ಹಾಕಿಸಲಾಗಿದೆ. ಇಂಥವರಿಂದ 25-30 ಲಕ್ಷ ರೂ. ಹಣ ಪಡೆಯಲಾಗಿದೆ ಎಂದು ಪಟ್ಟಣದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಮೊದಲು ಇಲ್ಲಿ ನೇಮಕಾತಿ ಆಮಿಷ ತೋರಿಸಿ ತಾತ್ಕಾಲಿಕವಾಗಿ ಕೆಲಸಕ್ಕಿಟ್ಟುಕೊಂಡಿದ್ದ ನೌಕರರನ್ನು ಕೈಬಿಡಲಾಗಿದೆ. ಇದರಿಂದ ಬ್ಯಾಂಕಿನ ನಿರ್ದೇಶಕರ ಮಾನ ಸಾರ್ವಜನಿಕವಾಗಿ ಹರಾಜಾದಂತಾಗಿದೆ. ಹೀಗಾಗಿ ನಿರ್ದೇಶಕರ ಮಾನ ಕಾಪಾಡಬೇಕು ಎನ್ನುವ ಕಳಕಳಿಯಿಂದ ಈ ಪ್ರತಿಭಟನೆ ನಡೆಸಬೇಕಾಯಿತು ಎಂದು ತಿಳಿಸಿದರು.
ಬ್ಯಾಂಕ್ ಎದುರು ನಡೆದ ಈ ಘಟನೆ ಹೆಚ್ಚಿನ ಜನರು ಸೇರುವಂತೆ ಮಾಡಿ ಸಂದರ್ಶನ ಪ್ರಕ್ರಿಯೆಗೆ ತೊಡಕಾಗುವ ಲಕ್ಷಣ ಕಂಡು ಬಂತು. ಕೂಡಲೇ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಜನರನ್ನು ನಿಯಂತ್ರಿಸಲಾಯಿತು. ವಿಷಯ ತಿಳಿದು ಸ್ಥಳಕ್ಕೆ
ಆಗಮಿಸಿದ ಮಾಧ್ಯಮದವರನ್ನು ಬ್ಯಾಂಕಿನ ಒಳಗೆ ಬಿಡಲಿಲ್ಲ. ಈ ಬಗ್ಗೆ ಮಾಧ್ಯಮದವರು ಆಕ್ರೋಶ ವ್ಯಕ್ತಪಡಿಸಿದಾಗ ಮಣಿದ ಬ್ಯಾಂಕಿನ ಅಧ್ಯಕ್ಷ ಸತೀಶ ಓಸ್ವಾಲ್ ಅವರು ಈಗ ಸಂದರ್ಶನ ನಡೆಯುತ್ತಿದ್ದು ಅದು ಮುಗಿದ ಮೇಲೆ ನಾವೇ ಮಾಧ್ಯಮದವರನ್ನು ಕರೆಸಿ ಎಲ್ಲ ಮಾಹಿತಿ ನೀಡುತ್ತೇವೆ ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.