ಮದ್ಯದಂಗಡಿ ತೆರೆಯದಂತೆ ಸಾಲೋಟಗಿ ಮಹಿಳೆಯರ ಆಗ್ರಹ
Team Udayavani, Mar 29, 2022, 2:54 PM IST
ವಿಜಯಪುರ: ನಮ್ಮೂರಿಗೆ ಸರ್ಕಾರಿ ಶಾಲೆ, ಅಂಗನವಾಡಿ ಶಾಲೆ ಕೊಡಿ, ಮನೆ ಇಲ್ಲದ ಬಡವರಿಗೆ ಸೂರು ಕಟ್ಟಿಸಿಕೊಡಿ ಎಂದು ಬೇಡುತ್ತಿದ್ದೇವೆ. ಆದರೆ ಸರ್ಕಾರದ ಮಾತ್ರ ನಮಗೆ ಮೂಲಭೂತ ಸೌಲಭ್ಯ ನೀಡದೇ ನಮ್ಮ ವಿರೋಧದ ಮಧ್ಯೆಯೂ ಸಾರಾಯಿ ಅಂಗಡಿ ತೆರೆಯಲು ಮುಂದಾಗಿದೆ. ಕೂಡಲೇ ಎಂಎಸ್‌ಐಎಲ್ ಅಂಗಡಿ ತೆರೆಲು ಅನುಮತಿ ಹಿಂಪಡೆಯುವಂತೆ ಮಹಿಳೆಯರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಸೋಮವಾರ ಇಂಡಿ ತಾಲೂಕಿನ ಸಾಲೋಟಗಿ ಗ್ರಾಪಂ ಸದಸ್ಯ ನೇತೃತ್ವದಲ್ಲಿ ವಿಜಯಪುರ ನಗರಕ್ಕೆ ಆಗಮಿಸಿದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಮಹಿಳಾ ಸಂಘಟನೆಗಳ ಕಾರ್ಯಕರ್ತರು, ಸ್ಥಳೀಯ ಮಹಿಳೆಯರು, ಕುಟುಂಬಗಳನ್ನು ಸರ್ವನಾಶ ಮಾಡಲಿರುವ ಸರ್ಕಾರಿಗೆ ಮದ್ಯದ ಅಂಗಡಿ ತೆರೆಯಲು ನಮ್ಮೂರಲ್ಲಿ ಅವಕಾಶ ಕಲ್ಪಿಸುವುದು ಬೇಡ ಎಂದು ಘೋಷಣೆ ಕೂಗಿದರು.
ಸ್ಥಳೀಯರ ವಿರೋಧ ಮಧ್ಯೆಯೂ ಎಂಎಸ್‌ಐಎಲ್ ಮದ್ಯದ ಅಂಗಡಿ ತೆರೆಯಲು ಅವಕಾಶ ನೀಡಲಾಗುತ್ತಿದೆ ಎಂದು ಮಹಿಳೆಯರು ದೂರಿದರು.
ನಮ್ಮ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲು ಶಾಲೆ-ಕಾಲೇಜುಗಳನ್ನು ತೆರೆಯಿರಿ, ಶಿಕ್ಷಕ-ಉಪನ್ಯಾಸಕರನ್ನು ನೀಡಿ. ಹಳ್ಳಿಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಂಗನವಾಡಿ ಕೇಂದ್ರಗಳನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಎಂದಿಗೂ ನಮ್ಮ ಭಾಗದಲ್ಲಿ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಮದ್ಯದ ಅಂಗಡಿ ಬೇಡ ಎಂದು ಗ್ರಾಪಂ ಅಂಗೀಕರಿಸಿದ ನಿರ್ಣಯಕ್ಕೆ ವಿರುದ್ಧವಾಗಿ ಮದ್ಯದ ಅಂಗಡಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದು ಗ್ರಾಮೀಣ ಭಾಗದಲ್ಲಿನ ಯುವಕರನ್ನು ವ್ಯಸನಿಗಳನ್ನಾಗಿಸುವ ಹಾಗೂ ಕುಟುಂಬಗಳನ್ನು ಆರ್ಥಿಕವಾಗಿ ದುಸ್ಥಿತಿಗೆ ತಳ್ಳುವ ಹುನ್ನಾರ ಎಂದು ದೂರಿದರು.
ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷೆ ಅಂಬವ್ವ ಖೈರಾವಕರ ಮಾತನಾಡಿ, ಸ್ಥಳೀಯ ರಾಜಕೀಯ ಕಾರಣಕ್ಕೆ ಮದ್ಯದ ಅಂಗಡಿ ತರೆಯುವ ಜನವಿರೋಧಿ ನೀತಿ ಅನುಸರಿ ಸುತ್ತಿದ್ದಾರೆ. ಶಾಲೆ, ಅಂಗನವಾಡಿ ಸ್ಥಾಪಿಸಲು ಮುತುವರ್ಜಿ ತೋರದೆ ಎಂಎಸ್ ಐಎಲ್ ಮಳಿಗೆ ಸ್ಥಾಪಿಸಿ ಗ್ರಾಮೀಣ ಬಡ ಜನರನ್ನು ಹಾಳು ಮಾಡುತ್ತಿದ್ದಾರೆಂದು ಆರೋಪಿಸಿದರು.
ಗ್ರಾಪಂ ಅಧ್ಯಕ್ಷೆ ಸುಬಂದ ಕಲ್ಲಯ್ಯ ಹಿರೇಮಠ ಮಾತನಾಡಿ, ಕೂಡಲೇ ಎಂಎಸ್ ಐಎಲ್ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸಿದ್ದರಾಯ ಅರಳಗುಂಡಗಿ, ಶೋಭಾ ಶಹಾಪುರ, ಶಾಂತಾ ದರೆಣ್ಣವರ, ಸುರೇಖಾ, ಗೌರಾಬಾಯಿ ಹೀಗೆ ಹಲವು ಮುಖಂಡರು ಶಾಸಕರ ವಿರುದ್ದ ಆಕ್ರೋಶ ಹೊರಹಾಕುತ್ತ, ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲದೇ ಜನ ಪರಿತಪಿಸುತ್ತಿದ್ದಾರೆ. ಇಂಥದ ರಲ್ಲಿ ಸಾರಾಯಿ ಕುಡಿಸಲು ಹೊರಟಿದೆ ಎಂದು ಹರಿಹಾಯ್ದರು. ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.