ಎಸ್ಎಸ್ಎಲ್ ಸಿ ಸಾಧಕ: ಅಮಿತ ಸವಾಲುಗಳನ್ನು ಸೋಲಿಸಿ ಸಾಧನೆಗೈದ ವಿಜಯಪುರದ ಅಮಿತ್
Team Udayavani, May 19, 2022, 3:40 PM IST
ವಿಜಯಪುರ: ತಾನು ಹುಟ್ಟಿದ ಒಂದು ವರ್ಷಕ್ಕೆ ತಂದೆಯನ್ನು ಕಳೆದುಕೊಂಡ ಈ ಬಾಲಕನಿಗೆ ಕೂಲಿ ಮಾಡುವ ತಾಯಿಯೇ ಆಸರೆ. ಕಿತ್ತು ತಿನ್ನುವ ಬಡತನ ಹೀಗೆ ಸಾಲು ಸಾಲು ಸವಾಲು ಸಮಸ್ಯೆಗಳು. ಇಂಥ ಅಮಿತ ಸವಾಲುಗಳನ್ನೆಲ್ಲ ಮೆಟ್ಟಿ ನಿಂತು ಸರ್ಕಾರಿ ಶಾಲೆಯಲ್ಲಿ ಓದಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿ ವಿಶಿಷ್ಟ ಸಾಧಕನಾಗಿ ಹೊರಹೊಮ್ಮಿದ್ದಾನೆ ಅಮಿತ್.
ವಿಜಯಪುರ ನಗರಕ್ಕೆ ಅನತಿ ದೂರದಲ್ಲಿರುವ ಜುಮನಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದಿರುವ ಅಮಿತ್ ಮಾದರ ಸವಾಲುಗಳನ್ನೇ ಸೋಲಿಸಿದ ಸಾಧಕ ಬಾಲಕ.
ಪ್ರತಿಭಾವಂತಿಕೆ ಇದ್ದರೂ ಸರ್ಕಾರಿ ಶಾಲೆಗೆ ಸೇರಲು ಬಡತನ ಅಡ್ಡಿಯಾಗಿತ್ತು. ಹೀಗಾಗಿ ಹುಟ್ಟಿದ ಊರಲ್ಲೇ ಇರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದಿದ್ದ.
ಅಮಿತ್ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುವ ಹಂತದಲ್ಲೇ ತಂದೆ ನಿಧನರಾಗಿದ್ದರು. ಕೂಲಿ ಮಾಡುವ ತಾಯಿಗೆ ಅಮಿತ್ ಜೊತೆ ಇನ್ನಿಬ್ಬರು ಮಕ್ಕಳನ್ನು ಸಾಕುವ ಹೊಣೆ. ಇಂಥ ಕಷ್ಟಗಳ ಮಧ್ಯೆ ಮಕ್ಕಳ ಭವಿಷ್ಯ ಕಟ್ಡಿಕೊಡಲು ಶ್ರಮಿಸಿದ ತಾಯಿಯ ಪರಿಶ್ರಮಕ್ಕೆ ಮಗ ಅಮಿತ್ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆಯುವ ಮೂಲಕ ಮೊದಲಿಗನಾಗಿ ವಿಶಿಷ್ಟ ಉಡುಗೊರೆ ನೀಡಿದ್ದಾನೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಭೌತಿಕ ತರಗತಿ ನಡೆಯದೆ ಶೈಕ್ಷಣಿಕ ಹಿನ್ನಡೆಯಾಗಿತ್ತು. ಶಿಕ್ಷಕರು ಆನ್ ಲೈನ್ ಮೂಲಕ ಮಾಡುವ ಪಾಠ ಕೇಳಲೂ ಆತನಲ್ಲಿ ಸ್ಮಾರ್ಟ್- ಆಂಡ್ರೈಡ್ ಮೊಬೈಲ್ ಇರಲಿಲ್ಲ. ಪಕ್ಕದ ಮನೆಯ ಹತ್ತಿರ ಬಂಧುವಿನ ಮೊಬೈಲ್ ಪಡೆದು ಆನ್ ಲೈನ್ ಪಾಠ ಆಲಿಸುವ ದುಸ್ಥಿತಿ ಇತ್ತು.
ಸಮಸ್ಯೆ ನೂರಿದ್ದರೂ ಸಾಧಿಸುವ ಛಲಗಾರಿಕೆ ಇತ್ತು. ಇದಕ್ಕಾಗಿ ನಿತ್ಯವೂ 7-8 ಗಂಟೆ ಓದುತ್ತಿದ್ದೆ. ಟಾಪರ್ ಆಗುವ ನನ್ನ ಕನಸು ನನಸಾಗಿಸಲು ಶಾಲೆಯ ಎಲ್ಲ ಶಿಕ್ಷಕರು ಎಲ್ಲ ರೀತಿಯಿಂದಲೂ ಸಹಕಾರ ನೀಡಿದರು. ಮನೆಯಲ್ಲಿ, ತಾಯಿ, ಅಕ್ಕ, ಅಣ್ಣ ಒತ್ತಾಸೆಯಾಗಿ ನಿಂತರು. ಅಂತಿಮವಾಗಿ ನಾನು ಟಾಪರ್ ಆಗಲು ಕಾರಣವಾಯ್ತು ಎನ್ನುತ್ತಾನೆ ಅಮಿತ್.
ಇಂಥ ಎಲ್ಲ ಸಮಸ್ಯೆ, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಇದೀಗ ಅಮಿತ್ ಸಾಧಕನಾಗಿ ಮೆರೆದಿದ್ದು, ಹೆತ್ತಮ್ಮನ ಕಣ್ಣಲ್ಲಿ ಆನಂದ ಭಾಷ್ಪ ಸೃಷ್ಟಿಸಿದ್ದಾನೆ.
ಇದನ್ನೂ ಓದಿ:ಉಡುಪಿ: ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗೆ 625 ಅಂಕ
ಎಂಬಿಬಿಎಸ್ ಶೈಕ್ಷಣಿಕ ಪದವಿಯ ಕನಸು ಕಂಡಿರುವ ಸಾಧಕ ಅಮಿತ್ ಗೆ ಭಾರತೀಯ ಆಡಳಿತ ಸೇವೆ (ಐಎಎಸ್) ಗೆ ಸೇರುವ ಗುರಿ ಇದೆ. ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲಿಗನಾಗಬೇಕು ಎಂಬ ಛಲಗಾರಿಕೆಯ ನನ್ನಲ್ಲಿದ್ದ ಓದಿಗೆ ಸರ್ಕಾರಿ ಪ್ರೌಢ ಶಾಲೆಯ ಎಲ್ಲ ಶಿಕ್ಷಕರು ಸ್ಫೂರ್ತಿ ನೀಡಿ, ಪ್ರೋತ್ಸಾಹಿಸಿದರು ಎಂದು ಸ್ಮರಿಸುತ್ತಾನೆ ಅಮಿತ್.
ತಾನು ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಟಾಪರ್ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಘೋಷಿಸುತ್ತಲೇ ಅಮಿತ್ ಮಾದರ ಹೆತ್ತತಾಯಿ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಹಾಕಿ ಆಶೀರ್ವಾದ ಪಡೆದ. ಇದರಿಂದ ಆನಂದಿತಳಾದ ತಾಯಿ ಮಗನ ಬಾಯಿಗೆ ಸಕ್ಕರೆ ಹಾಕಿ ಸಾಧಕ ಮಗನನ್ನು ಅಪ್ಪಿ ಮುದ್ದಾಡಿದರು.
ಇಂಥ ಛಲಗಾರನಿಗೆ ಮುಂದಿನ ಓದಿಗೆ ಬಡತನ ಅಡ್ಡಿಯಾಗದಂತೆ ಶಿಕ್ಷಣ ಪ್ರೇಮಿಗಳು, ದಾನಿಗಳು ಆಸರೆಯಾಗಿ ನಿಲ್ಲಬೇಕಿದೆ.
ಜಿ.ಎಸ್.ಕಮತರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.