ಕೆರೆಗಳ ಒಡಲು ತುಂಬುತ್ತಿದೆ ಕೃಷ್ಣೆ
•ಬತ್ತಿದ ಕೊಳವೆ ಬಾವಿಗಳಿಗೆ ಮರುಜೀವ •ಕೆರೆಗಳ ಸುತ್ತಲೂ ನೆಲೆಗೊಳ್ಳುತ್ತಿರುವ ಪಶು-ಪಕ್ಷಿಗಳು
Team Udayavani, Jun 4, 2019, 10:41 AM IST
ವಿಜಯಪುರ: ಮಳೆ ಇಲ್ಲದೇ ಭೀಕರ ಬರದಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಆರಂಭಕ್ಕೆ ಮೊದಲೇ ಜಿಲ್ಲೆಯ ಕೆರೆಗಳು ತುಂಬಲಾರಂಭಿಸಿವೆ.
ಕೃಷ್ಣಾ ನದಿಯಿಂದ ಜಿಲ್ಲೆಯ ಕೆರೆಗಳನ್ನು ತುಂಬಿಸಲು ಮುಂದಾಗಿರುವ ಕಾರಣ ಭೀಕರ ಬರದಿಂದ ಬತ್ತಿ ಬರಿದಾಗಿದ್ದ ಕೆರೆಗಳು ಮೈದುಂಬಿಕೊಳ್ಳುತ್ತಿವೆ. ಇದರಿಂದ ಜನ-ಜಾನುವಾರುಗಳು, ಪಶು-ಪಕ್ಷಿಗಳು ಕೆರೆಗಳಿಗೆ ಧಾವಿಸಿ ಬರುತ್ತಿವೆ.
ಕಳೆದ 10 ದಿನಗಳಿಂದ ವಿಜಯಪುರ ಮುಖ್ಯ ಕಾಲುವೆಯಲ್ಲಿ ವಾರಾಬಂದಿ ಪದ್ಧತಿಯಲ್ಲಿ ನೀರು ಹರಿಸುವ ಕಾರ್ಯ ನಡೆದಿದೆ. ಇದರಿಂದ ನಾಗಠಾಣ ಕೆರೆ ಶೇ.40, ದೇವೂರ ಕೆರೆ ಶೇ.20, ನಾಗವಾಡ ಕೆರೆ ಶೇ.70, ಮಣ್ಣೂರ ಕೆರೆ ಶೇ.50, ಮೂಕರ್ತಿಹಾಳ ಕೆರೆ ಶೇ.30, ಕೂಡಗಿ ಕೆರೆ ಶೇ.25, ಮುತ್ತಗಿ ಕೆರೆ ಶೇ.100, ಕೀರಶ್ಯಾಳ ಕೆರೆ ಶೇ.40, ಅಲಕೊಪ್ಪರ ಕೆರೆ ಶೇ.70, ರೂಡಗಿ ಕೆರೆ ಶೇ.30, ಮಣ್ಣೂರ ಕೆರೆ ಶೇ. 100, ಮಣ್ಣೂರ1 ಕೆರೆ ಶೇ.30, ಮಣ್ಣೂರ2 ಕೆರೆ ಶೇ.100, ದೇವೂರ ಕೆರೆ ಶೇ.90, ಬೊಮ್ಮನಜೋಗಿ ಕೆರೆ ಶೇ.10, ಜಾಲವಾದ ಕೆರೆ ಶೇ.10 ತುಂಬುತ್ತಿದ್ದು, ಇನ್ನೂ 5-6 ದಿನ ನೀರು ಹರಿಯುವ ನಿರೀಕ್ಷೆ ಇದೆ.
ಹಾಲಿ ಗೃಹಮಂತ್ರಿ ಎಂ.ಬಿ.ಪಾಟೀಲ ಸಿದ್ದರಾಮಯ್ಯ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಕೃಷ್ಣಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿಗೆ ಚಾಲನೆ ನೀಡಿದ್ದರು. ಕಳೆದ ವರ್ಷ ಜಿಲ್ಲೆಯ ಕೆಲವು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ ಬಳಿಕ ಇದೀಗ ಜಿಲ್ಲೆಯ ಇತರೆ ಕೆರೆಗಳಿಗೆ ಮತ್ತೆ ಜೀವಜಲ ತುಂಬಿಸುವ ಕಾರ್ಯ ಭರದಿಂದ ಸಾಗಿದೆ.
ಸುಪ್ರಿಂಕೋರ್ಟ್‌ನಲ್ಲಿ ಕೃಷ್ಣಾ ನ್ಯಾಯಾಧಿಕರಣದ ಅಂತಿಮ ತೀರ್ಪಿನ ಕುರಿತು ವ್ಯಾಜ್ಯ ಇದ್ದರೂ ತಮ್ಮ ರಾಜಕೀಯ ಇಚ್ಛಾಶಕ್ತಿ ತೋರಿದ ಎಂ.ಬಿ. ಪಾಟೀಲ, ಮುಳವಾಡ, ಚಿಮ್ಮಲಗಿ ಸೇರಿದಂತೆ ವಿವಿಧ ಏತ ನೀರಾವರಿ ಯೋಜನೆಗಳ ಜಾಕ್‌ವೆಲ್, ಪಂಪ್‌ಹೌಸ್, ಕಾಲುವೆ ಜಾಲ ನಿರ್ಮಾಣ ಆರಂಭಿಸಿದ್ದರು. ಏಷ್ಯಾದ ಅತೀ ದೊಡ್ಡ ಏತ ನೀರಾವರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮುಳವಾಡ ಏತ ನೀರಾವರಿಯ ಹಣಮಾಪುರ, ಮಸೂತಿ ಜಾಕ್‌ವೆಲ್ಗಳಿಂದ ಕಾಲುವೆಗಳಿಗೆ ನೀರು ಹರಿಸಿ ಕೆರೆಗಳನ್ನು ತುಂಬಿಸುವ ಕೆಲಸ ನಡೆದಿದೆ. ಕಾಲುವೆ ಜಾಲ ನಿರ್ಮಿಸಿ, ಮುಖ್ಯ ಕಾಲುವೆಗಳಿಂದ ಜಿಲ್ಲೆಯ 230 ಕೆರೆಗಳಿಗೆ ನೀರು ತುಂಬಿಸಲು ಮುಖ್ಯ ಕಾಲುವೆ ಹಾಗೂ ಉಪ ಕಾಲುವೆ ಹಾಗೂ ಹೊಲಗಾಲುವೆಗಳಿಗೆ ಸಂಪರ್ಕ ಕಲ್ಪಿಸುವ ಶಾಖಾ ಕಾಲುವೆಗಳನ್ನು ನಿರ್ಮಿಸಿದರು.
ಜಾಕ್‌ವೆಲ್, ಪಂಪ್‌ಹೌಸ್‌ಗಳು ಪೂರ್ಣಗೊಳ್ಳುತ್ತಲೇ, ನಾಲೆಗಳಿಗೆ ನೀರು ಹರಿಸಿ, ಜಿಲ್ಲೆಯ ಎಲ್ಲ ಭಾಗಗಳಲ್ಲಿ ಕೆರೆ ತುಂಬಿಸುವ ಯೋಜನೆ ಜಾರಿಗೆ ತಂದಿದ್ದರು. ಹೀಗಾಗಿ ಪ್ರಸಕ್ತ ವರ್ಷ ಭೀಕರ ಬರ ಸಂದರ್ಭದಲ್ಲೂ ಜಿಲ್ಲೆಯಲ್ಲಿ ಡಿಸೆಂಬರ್ ಹಾಗೂ ಮೇ ತಿಂಗಳಲ್ಲಿ ಕೆರೆಗಳಿಗೆ ನೀರು ಹರಿಸಿ ಕೆರೆ ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಕೆರೆಗಳಿರುವ ಪ್ರದೇಶದ ಸುತ್ತಲೂ ಅಂತರ್ಜಲ ಹೆಚ್ಚಾಗಿ, ಬತ್ತಿ ಹೋಗಿದ್ದ ಕೊಳವೆ ಬಾವಿಗಳು ಮರುಜೀವ ಪಡೆದು, ಕೆರೆಗಳ ಸುತ್ತಲಿನ ರೈತರು ಉತ್ತಮ ಬೆಳೆ ಪಡೆಯಲು ಸಾಧ್ಯವಾಯಿತು. ಆಲಮಟ್ಟಿ ಆಣೆಕಟ್ಟು ಎತ್ತರಿಸದೇ ಕಾಲುವೆಗೆ ನೀರು ಹರಿಯಲು ಸಾಧ್ಯವಿಲ್ಲವೆಂದು ವಾದಿಸುವವರಿಗೆ ಬದ್ಧ್ದತೆ-ಇಚ್ಚಾಶಕ್ತಿ ಇದ್ದರೆ ಅಸಾಧ್ಯವಾದುದು ಯಾವುದೂ ಇಲ್ಲವೆಂಬುದನ್ನು ಇದೀಗ ಸಚಿವ ಎಂ.ಬಿ.ಪಾಟೀಲರು ಸಾಬೀತು ಪಡಿಸಿದ್ದಾರೆ.
ತೀವ್ರ ಬರಗಾಲದಲ್ಲೇ ಕೃಷ್ಣಾನದಿಯಿಂದ ನೀರೆತ್ತುವ ಬಳೂತಿ ಮುಖ್ಯ ಸ್ಥಾವರ ಶಾರ್ಟ್ ಸರ್ಕ್ಯೂಟ್ನಿಂದ ಸುಟ್ಟಾಗ ಯಾವ ಜನಪ್ರತಿನಿಧಿಗಳು, ಸಚಿವರು ಹತ್ತಿರ ಸುಳಿಯಲಿಲ್ಲ. ಸಚಿವ ಸ್ಥಾನ ಸಿಗದ ಕಾರಣ ದೂರ ಉಳಿದಿದ್ದ ಎಂ.ಬಿ.ಪಾಟೀಲರು ಗೃಹ ಸಚಿವರಾಗುತ್ತಿದ್ದಂತೆಯೇ ತಮ್ಮ ಭಗೀರಥ ಯತ್ನ ಮಾಡಿ, ಬಳೂತಿ ಜಾಕವೆಲ್ ಅನ್ನು ಆರಂಭಿಸಲಾಗಿದೆ. ಇದಲ್ಲದೇ ಕೂಡಗಿ ರೈಲ್ವೆ ಪಾಸಿಂಗ್ ಕಾಮಗಾರಿ ಅಸಾಧ್ಯವಾದರೂ ತಾತ್ಕಾಲಿಕ ಪೈಪ್ ಅಳವಡಿಸಿ ನೀರು ಹರಿಸಲಾಗುತ್ತಿದೆ.
ಜಿಲ್ಲೆಯ ಜೀವನಾಡಿ ಎಂದೇ ಮುಂದಿನ ದಿನಗಳಲ್ಲಿ ಪ್ರಖ್ಯಾತಿಗೊಳ್ಳಲಿರುವ 220 ಕಿ.ಮೀ. ಉದ್ದ ಇರುವ ವಿಜಯಪುರ ಮುಖ್ಯ ಕಾಲುವೆ ಕಾಮಗಾರಿ ಸಂಪೂರ್ಣಗೊಂಡಿದ್ದರೂ 130 ಕಿ.ಮೀ.ವರೆಗೆ ನೀರು ಹರಿಸಲು ಯಾವುದೇ ಆತಂಕವಿಲ್ಲ. ಇದಲ್ಲದೇ ಹೂವಿನ ಹಿಪ್ಪರಗಿ, ಬಸವನ ಬಾಗೇವಾಡಿ, ನಾಗಠಾಣ ಶಾಖಾ ಕಾಲುವೆಗಳಿಗೂ ಇದೇ ಮುಖ್ಯ ಕಾಲುವೆಯಿಂದ ನೀರು ಹರಿಸಲು ಸಹಕಾರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Vijayapura: ವಕ್ಫ್ ವಿರುದ್ಧ ಹಲವು ಮಠಾಧೀಶರ ನೇತೃತ್ವದಲ್ಲಿ ಹೋರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.